ಶನಿವಾರ, ನವೆಂಬರ್ 23, 2019
18 °C
ರಾಷ್ಟ್ರೀಯ ಹಾಕಿ ಲೀಗ್: ಮಿಂಚಿದ ಲಕ್ವಿಂದರ್

ಕ್ರೀಡಾ ಪ್ರಾಧಿಕಾರಕ್ಕೆ ಗೆಲುವು

Published:
Updated:

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಭಾರತ ಕ್ರೀಡಾ ಪ್ರಾಧಿಕಾರ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯತ್ತಿರುವ `ಓಜೋನ್ ಗ್ರೂಪ್' ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಬುಧವಾರದ ಪಂದ್ಯದಲ್ಲಿ 4-2ಗೋಲುಗಳಿಂದ ನಾಮಧಾರಿ ಎದುರು ಗೆಲುವು ಸಾಧಿಸಿದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎರಡು ಗೋಲುಗಳನ್ನು ಗಳಿಸಿ ದರ್ಶನ್ ಗಮನ ಸೆಳೆದರು. ಈ ಗೋಲುಗಳು 15 ಹಾಗೂ 44ನೇ ನಿಮಿಷದಲ್ಲಿ ಬಂದವು. ಇದಕ್ಕೂ ಮುನ್ನ ಬಿಜ್ಜು ಯರಕಲ್ 14ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಈ ತಂಡದ ಇನ್ನೊಂದು ಗೋಲನ್ನು ನಿಕಿನ್ ತಿಮ್ಮಯ್ಯ 34ನೇ ನಿಮಿಷದಲ್ಲಿ ಗಳಿಸಿದರು.ಕ್ರೀಡಾ ಪ್ರಾಧಿಕಾರ ತಂಡದವರ ಹೋರಾಟಕ್ಕೆ ನಾಮಧಾರಿ ಕೂಡ ಪ್ರಬಲ ಪ್ರತಿರೋಧ ತೋರಿತು. ಈ ತಂಡದ ಲಕ್ವಿಂದರ್ ಸಿಂಗ್ 14 ಹಾಗೂ 17ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಕಲೆ ಹಾಕಿ ಮರು ಹೋರಾಟದ ಸೂಚನೆ ನೀಡಿದರು. ಆದರೆ, ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ಬಿಪಿಸಿಎಲ್‌ಗೆ ನಿರಾಸೆ: ದಿನದ ಇನ್ನೊಂದು ಪಂದ್ಯದಲ್ಲಿ ಭಾರತ್ ಪೆಟ್ರೊಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ತಂಡ 1-2ಗೋಲುಗಳಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎದುರು ನಿರಾಸೆ ಕಂಡಿತು.41ನೇ ನಿಮಿಷದಲ್ಲಿ ಲಕ್ವೀಂದರ್ ಸಿಂಗ್ ಮೊದಲ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರೆ, ಆರು ನಿಮಿಷಗಳ ಅಂತರದಲ್ಲಿ ಇನ್ನೊಂದು ಗೋಲು ತಂದಿತ್ತು ಗೆಲುವಿನ ರೂವಾರಿ ಎನಿಸಿದರು. ಬಿಪಿಸಿಎಲ್ ತಂಡದ ಏಕೈಕ ಗೋಲನ್ನು ಗುರ್‌ಪ್ರೀತ್ ಸಿಂಗ್ 51ನೇ ನಿಮಿಷದಲ್ಲಿ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.

ಗುರುವಾರದ ಪಂದ್ಯಗಳು:       ಎಎಸ್‌ಸಿ-ಫೋರ್ಟಿಸ್ (ಸಂಜೆ 4.30) ಹಾಗೂ ಐಒಸಿಎಲ್-ನಾಮಧಾರಿ (ಸಂಜೆ 6.30) ಪೈಪೋಟಿ ನಡೆಸಲಿವೆ.

ಪ್ರತಿಕ್ರಿಯಿಸಿ (+)