ಶುಕ್ರವಾರ, ನವೆಂಬರ್ 15, 2019
20 °C

ಕ್ರೀಡಾ ಶಾಲೆಯ ಜಿಮ್ನ್ಯಾಸ್ಟಿಕ್ ಪ್ರತಿಭೆ ರಕ್ಷಿತಾ

Published:
Updated:

ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿಯ ಹನುಮಂತಪುರದ ರಂಗಮ್ಮ- ಕಂಠಪ್ಪ ದಂಪತಿ ಪುತ್ರಿ ರಕ್ಷಿತಾ ಅಪ್ಪಟ ಗ್ರಾಮೀಣ ಪ್ರತಿಭೆ. ಈ ಹದಿಮೂರರ ಪೋರಿಗೆ ಮೂರು ವರ್ಷದ ಹಿಂದೆ ಕ್ರೀಡೆಯ ಗಂಧ-ಗಾಳಿಯೂ ಇರಲಿಲ್ಲ. ಇದೀಗ ರಾಜ್ಯದ ಶ್ರೇಷ್ಠ ಜಿಮ್ನ್ಯಾಸ್ಟಿಕ್ ಸ್ಪರ್ಧಿಗಳಲ್ಲಿ ಈಕೆಯೂ ಒಬ್ಬರು.ಮೂರು ವರ್ಷದ ಹಿಂದೆ ಜಿಮ್ಯ್ನಾಸ್ಟಿಕ್ ಕ್ರೀಡೆಗಾಗಿ ತುಮಕೂರು ಜಿಲ್ಲಾ ಕ್ರೀಡಾ ಶಾಲೆ ಶೋಧಿಸಿದ ಪ್ರತಿಭಾನ್ವಿತೆ. ಆರಂಭದಲ್ಲಿ ಹುಟ್ಟಿದೂರು, ತಂದೆ-ತಾಯಿ ತೊರೆದು ಬರಲು ಹಿಂಜರಿದ ಈ ಪುಟ್ಟ ಬಾಲೆಯ ಕಂಗಳಲ್ಲಿ ಇದೀಗ ರಾಷ್ಟ್ರಕ್ಕಾಗಿ ಪದಕ ಗೆಲ್ಲುವ ಕನಸಿದೆ. ಆ ಕನಸನ್ನು ಸಾಕಾರಗೊಳಿಸಿಕೊಳ್ಳುವ ಛಲ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದೆ.ಕ್ರೀಡಾಶಾಲೆಯಲ್ಲಿ ಮೂರು ವರ್ಷದ ತರಬೇತಿ, ಶಿಕ್ಷಣ ಮುಗಿಯುತ್ತಿದ್ದಂತೆ ಊರಿಗೆ ಮರಳದ ರಕ್ಷಿತಾ ನಗರದ ಸೋಮೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಗೆ ಸೇರಿದ್ದಾರೆ. ತನ್ನ ತರಬೇತುದಾರ ಸುಧೀರ್ ದೇವದಾಸ್ ಗರಡಿಯಲ್ಲಿ ಮುಂಜಾನೆ-ಮುಸ್ಸಂಜೆ ಬೆವರಿಳಿಸುತ್ತಿದ್ದು, ಶ್ರೇಷ್ಠ ಸಾಧನೆಯ ಗುರಿಯತ್ತ ಗುರುವಿನ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.ಜಿಮ್ನ್ಯಾಸ್ಟಿಕ್‌ಗಾಗಿ ಕ್ರೀಡಾಶಾಲೆ, ರಾಷ್ಟ್ರೀಯ ಪದಕ ವಿಜೇತ ತರಬೇತುದಾರ, ಅಗತ್ಯ ಸಲಕರಣೆಗಳಿದ್ದರೂ; ಕ್ರೀಡಾಪಟುಗಳಿಗೆ ಚಿಕ್ಕಾಸಿನ ಉಪಯೋಗಕ್ಕೂ ಬರುತ್ತಿಲ್ಲ. ಎಲ್ಲದಕ್ಕೂ ಮುಖ್ಯವಾಗಿ ಈ ಕ್ರೀಡಾಪಟುಗಳು ಅಭ್ಯಾಸ ನಡೆಸಲು ಅತ್ಯಗತ್ಯವಾಗಿ ಬೇಕಿರುವ ಒಳಾಂಗಣ ಕ್ರೀಡಾಂಗಣ ಸಮಯಕ್ಕೆ ಸರಿಯಾಗಿ ದೊರಕುತ್ತಿಲ್ಲ ಎಂಬ ಕೊರಗು ನಿತ್ಯವೂ ಕಾಡುತ್ತಿದೆ. ಹಲ ನ್ಯೂನ್ಯತೆಗಳ ನಡುವೆಯೂ ಇಲ್ಲಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಚಿನ್ನದ ಪದಕಗಳ ಬೇಟೆಯಾಡಿದ್ದಾರೆ. ಇವರಲ್ಲಿ ರಕ್ಷಿತಾ ಸಹ ಒಬ್ಬಾಕೆ.ಬೆಂಗಳೂರು ಕೋರಮಂಗಲದಲ್ಲಿ 2011-12ನೇ ಸಾಲಿನಲ್ಲಿ ನಡೆದ ರಾಜ್ಯ ಮಟ್ಟದ ಅತಿ ಕಿರಿಯರ ಜಿಮ್ನ್ಯಾಸ್ಟಿಕ್ಸ್ ಸ್ಪರ್ಧೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿ ಬ್ಯಾಲೆನ್ಸಿಂಗ್ ಬಾರ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಹಿರಿಮೆ ಈಕೆಯದ್ದು. ತರಬೇತಿ ಆರಂಭಿಸಿದ ವರ್ಷದೊಳಗೆ ಪದಕಗಳನ್ನು ಕೊರಳಿಗೇರಿಸಿಕೊಂಡು ಜಿಲ್ಲೆಯ ಕೀರ್ತಿ ಪತಾಕೆಯಯನ್ನು ಎಲ್ಲೆಡೆ ಹಾರಿಸಿದ ಹೆಮ್ಮೆ ಈಕೆಯದ್ದು.ಧಾರವಾಡದಲ್ಲಿ 2012-13ರಲ್ಲಿ ನಡೆದ ರಾಜ್ಯ ಮಟ್ಟದ ಕಿರಿಯರ ಜಿಮ್ನ್ಯಾಸ್ಟಿಕ್ಸ್ ಸ್ಪರ್ಧೆಯ ಬ್ಯಾಲೆನ್ಸಿಂಗ್ ಭೀಮ್ ಮತ್ತು ಅನ್‌ಇವನ್ ಬಾರ್ಸ್‌ ಎರಡು ವಿಭಾಗದಲ್ಲೂ ಕಂಚಿನ ಪದಕ ಗೆದ್ದು ಗಮನ ಸೆಳೆದಿದ್ದರು. ಮೈಸೂರಿನಲ್ಲಿ 2012ರ ನವೆಂಬರ್‌ನಲ್ಲಿ ನಡೆದ ರಾಜ್ಯ ಮಟ್ಟದ ಕಿರಿಯರ ಜಿಮ್ನ್ಯಾಸ್ಟಿಕ್ಸ್ ಸ್ಪರ್ಧೆಯ ಬ್ಯಾಲೆನ್ಸಿಂಗ್ ಭೀಮ್‌ನಲ್ಲಿ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ಹೆಚ್ಚಿಸಿದರು. ಒಡಿಶಾದಲ್ಲಿ ನಡೆದ ರಾಷ್ಟ್ರಮಟ್ಟದ ಪೈಕಾ ಮಹಿಳಾ ಕ್ರೀಡಾಕೂಟದಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ ಅತಿ ಕಿರಿಯ ಅಥ್ಲೀಟ್ ಹಾಗೂ 2011ರಿಂದ 2013ರ ವರೆಗೆ ರಾಜ್ಯ ಮಟ್ಟದ ದಸರಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಹ್ಯಾಟ್ರಿಕ್ ವಿಜಯದ ನಗೆ ಬೀರಿದರು.ಹರಿಯಾಣದ ಕುರುಕ್ಷೇತ್ರದಲ್ಲಿ ಮಾರ್ಚ್ 2013ರಲ್ಲಿ ಹನ್ನೆರೆಡು ವರ್ಷ ವಯೋಮಿತಿ ಒಳಗಿನ ಬಾಲಕಿಯರ ರಾಷ್ಟ್ರಮಟ್ಟದ ಜಿಮ್ನ್ಯಾಸ್ಟಿಕ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶದ ಭವಿಷ್ಯದ ಕ್ರೀಡಾತಾರೆಯಾಗಿ ವಿಜೃಂಭಿಸಿ ಎಲ್ಲರ ಗಮನ ಸೆಳೆದರು. ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲಲು ವಿಫಲರಾದರೂ ಕಂಚಿಗೆ ತೃಪ್ತಿಪಟ್ಟುಕೊಂಡರೂ; ಭವಿಷ್ಯದಲ್ಲಿ `ಚಿನ್ನದ ಪದಕ'ಗಳ ಬೇಟೆಯಾಡುವ ಗುರಿಯಿದೆ.

ಪ್ರತಿಕ್ರಿಯಿಸಿ (+)