ಕ್ರೀಡಾ ಸಂಜೀವಿನಿ ಯೋಜನೆ ಜಾರಿ

7

ಕ್ರೀಡಾ ಸಂಜೀವಿನಿ ಯೋಜನೆ ಜಾರಿ

Published:
Updated:

ಕೊಪ್ಪಳ: ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಅವಘಡಗಳು ಸಂಭವಿಸಿದಾಗ ಮಕ್ಕಳಿಗೆ ನೆರವು ನೀಡುವ ಉದ್ದೇಶದಿಂದ ಕ್ರೀಡಾ ಸಂಜೀವಿನಿ ಎಂಬ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕ್ರೀಡಾ ಮತ್ತು ಯುವಜನ ಸೇವಾ ಸಚಿವ ಅಪ್ಪಚ್ಚು ರಂಜನ್ ಹೇಳಿದರು.ಅವರು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಯೋಜನೆಯಡಿ ಕ್ರೀಡಾಪಟುಗಳಿಗೆ 3 ಲಕ್ಷ ರೂಪಾಯಿ ವರೆಗೆ ಪರಿಹಾರ ಧನ ವಿತರಣೆ ಮಾಡಲು ಅವಕಾಶವಿದೆ. ಜಿಲ್ಲೆಯೊಂದರ 300 ಮಕ್ಕಳಂತೆ ರಾಜ್ಯದ 10 ಸಾವಿರ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ ಎಂದು ತಿಳಿಸಿದರು.ಯುವಕರಲ್ಲಿ ರಾಷ್ಟ್ರಾಭಿಮಾನ ಮತ್ತು ರಾಷ್ಟ್ರಭಕ್ತಿ ಬೆಳೆಸಬೇಕು. ಅವರು ರಾಷ್ಟ್ರದ ಶಕ್ತಿಯಾಗಬೇಕು ಎಂಬ ಉದ್ದೇಶದಿಂದ ಯುವ ನೀತಿಯೊಂದನ್ನು ರೂಪಿಸಲಾಗಿದೆ. ಅಲ್ಲದೇ, ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ನೆನಪಿಗಾಗಿ `ಸ್ವಾಮಿ ವಿವೇಕಾನಂದ ಸಬಲೀಕರಣ ನಿಗಮ~ವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ನಿಗಮದಡಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಯುವಕ ಸಂಘವನ್ನು ಸ್ಥಾಪಿಸಲಾಗುವುದು ಎಂದು ವಿವರಿಸಿದರು.ರಾಜ್ಯದಲ್ಲಿನ ಕ್ರೀಡಾಶಾಲೆಗಳನ್ನು ಬಲಪಡಿಸುವ ಸಂಬಂಧ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲಾಗುವುದು. ರಾಜ್ಯದ 176 ತಾಲ್ಲೂಕುಗಳಲ್ಲಿ ತರಬೇತುದಾರರು ಇಲ್ಲ. ಹೀಗಾಗಿ ಒಟ್ಟು 290 ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಕ್ರೀಡಾಶಾಲೆಗಳಲ್ಲಿ 8ರಿಂದ 10ನೇ ತರಗತಿ ವರೆಗೆ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದ್ದು, ಇದು ಇನ್ನೆರಡು ತಿಂಗಳಲ್ಲಿ ಜಾರಿಗೆ ಬರಲಿದೆ ಎಂದೂ ಹೇಳಿದರು.ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡಬೇಕು ಎಂಬ ಉದ್ದೇಶದಿಂದ ಶೀಘ್ರವೇ ನೂತನ ಕ್ರೀಡಾ ನೀತಿಯನ್ನು ಜಾರಿಗೆ ತರಲಾಗುವುದು. ಇದಕ್ಕಾಗಿ ವಿವಿಧ ರಾಜ್ಯಗಳ ಕ್ರೀಡಾ ನೀತಿಗಳ ಬಗ್ಗೆ ಮಾಹಿತಿ ತರಿಸಿಕೊಂಡು ರಾಜ್ಯಕ್ಕೆ ಅನ್ವಯವಾಗುವಂತೆ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ಶಾಸಕ ಸಂಗಣ್ಣ ಕರಡಿ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry