ಕ್ರೀಡಾ ಸಾಮಗ್ರಿ ಖರೀದಿ: ಅವ್ಯವಹಾರ

7

ಕ್ರೀಡಾ ಸಾಮಗ್ರಿ ಖರೀದಿ: ಅವ್ಯವಹಾರ

Published:
Updated:

ಕೋಲಾರ: 2012–- -13ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗೆ ಕ್ರೀಡಾ ಸಾಮಗ್ರಿ ಖರೀದಿಸಲು ನಿಗದಿ ಮಾಡಿದ್ದ ಅನು­ದಾನ ದುರ್ಬಳಕೆಯಾಗಿದೆ. ಬಹುತೇಕ ಶಾಲೆಗಳಲ್ಲಿ ಕಡಿಮೆ ಮೊತ್ತದ, ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಖರೀ­ದಿಸಿರುವುದು ಕಂಡು ಬಂದಿದೆ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಮೋಲ್‍ ಅಸಮಾಧಾನ ವ್ಯಕ್ತ­ಪಡಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ­ನಾಡಿದ ಅವರು, ಮಾಲೂರು ಮತ್ತು ಬಂಗಾರಪೇಟೆ ತಾಲ್ಲೂಕಿನ ಬಹುತೇಕ ಶಾಲೆಗಳಿಗೆ ತಾವು ಭೇಟಿ ನೀಡಿದ ಸಂದರ್ಭದಲ್ಲಿ, ಕಳಪೆ ಕ್ರೀಡಾ­ಸಾಮಗ್ರಿಗಳನ್ನು ಖರೀದಿಸಿರುವುದು ಕಂಡು ಬಂದಿದೆ. 4 ಸಾವಿರದ ಬದಲು ಸುಮಾರು ಒಂದೂವರೆ ಸಾವಿರ ರೂಪಾಯಿ ಮೌಲ್ಯದ ಸಾಮಗ್ರಿ­ಗಳನ್ನಷ್ಟೇ ಖರೀದಿಸಲಾಗಿದೆ ಎಂದು ಹೇಳಿ­ದರು.

ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಲು ಮಕ್ಕಳಿಗೆ ಉತ್ತೇಜನ ನೀಡುವ ಸಲು­ವಾಗಿ ಶಿಕ್ಷಣ ಇಲಾಖೆ ನೀಡುವ ಅನು­ದಾನವನ್ನು ಸರಿಯಾದ ರೀತಿ ಬಳಸು­ತ್ತಿದೆ. ಸಾಮಗ್ರಿ ಖರೀದಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋ­ಪಿಸಿದರು.ತಕ್ಷಣವೇ ಎದ್ದು ನಿಂತ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ವಿ.ಪದ್ಮನಾಭ, ಕ್ರೀಡಾಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಡುಬೀಸಾಗಿ ಹೇಳುವ ಬದಲು, ನಿರ್ದಿಷ್ಟ ಶಾಲೆಗಳ ಮಾಹಿತಿ ನೀಡಿದರೆ ಸಂಬಂಧಿಸಿದ ಮುಖ್ಯಶಿಕ್ಷಕರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಲಾಗುವುದು ಎಂದರು.ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸದಸ್ಯೆ ಸಿಮೋಲ್‍, ಒಂದು ಎರಡು ಶಾಲೆಗಳಲ್ಲಿ ಈ ಅಕ್ರಮ ನಡೆದಿಲ್ಲ. ಎರಡೂ ತಾಲ್ಲೂಕುಗಳ ಬಹುತೇಕ ಶಾಲೆಗಳಲ್ಲಿ ಕಳಪೆ ಮತ್ತು ಕಡಿಮೆ ಮೊತ್ತದ ಸಾಮಗ್ರಿಗಳನ್ನು ಖರೀದಿಸ­ಲಾಗಿದೆ. ಅದನ್ನು ನಾನೇ ಖುದ್ದಾಗಿ ಪರಿಶೀಲಿಸಿದ್ದೇನೆ. ಹೀಗಾಗಿ ಎಲ್ಲ ಶಾಲೆ­ಗಳಿಗೂ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.ಅದಕ್ಕೆ ಉತ್ತರಿಸಿದ ಅಧಿಕಾರಿ, ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿ­ಕಾರಿಗಳಿಗೆ ಈ ಬಗ್ಗೆ ಮುಂಚೆಯೇ ಸೂಚನೆ ನೀಡಲಾಗಿದೆ. ಆದರೂ ತನಿಖೆಗೆ ಉಪಸಮಿತಿಯನ್ನು ರಚಿಸಿ ಎಂದು ಹೇಳಿದರು. ಅದನ್ನು ಒಪ್ಪದ ಅಧ್ಯಕ್ಷ ನಾರಾಯಣಸ್ವಾಮಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರೇ ಸ್ವತಃ ಶಾಲೆ­ಗಳಿಗೆ ತೆರಳಿ ತನಿಖೆ ಮಾಡಿರುವುದನ್ನು ಹೇಳುತ್ತಿದ್ದರೆ, ಸಮಿತಿ ರಚಿಸಿ ಎಂದು ಹೇಳುವುದು ಸಮಂಜಸವಲ್ಲ ಎಂದು ಆಕ್ಷೇಪಿಸಿದರು.ತರಾಟೆಗೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ ಕಾರ್ಯವೈಖರಿ ಕುರಿತು ಸದಸ್ಯರಾದ ಸಿಮೋಲ್ ಮತ್ತು ಜಿ.ಕೆ.­ನಾಗ­ರಾಜ್ ತೀವ್ರ ಅಸಮಾಧಾನ ವ್ಯಕ್ತ­ಪಡಿಸಿದ ಘಟನೆಯೂ ನಡೆಯಿತು. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಪೈಕಾ ಯೋಜನೆ ಅಡಿಯಲ್ಲಿ ಕಳೆದ ವರ್ಷ ಎಷ್ಟು ಕೇಂದ್ರಗಳಿಗೆ ಕ್ರೀಡಾ ಸಾಮಗ್ರಿ ನೀಡಲಾಗಿದೆ ಎಂಬ ನಾಗರಾಜ್ ಅವರ ಪ್ರಶ್ನೆಗೆ ಅಧಿಕಾರಿ ರುದ್ರಪ್ಪ ಸ್ಪಷ್ಟವಾಗಿ ಉತ್ತರಿಸದೆ ‘ನೋಡ್ತಿನಿ’

ಎಂದಷ್ಟೇ ಹೇಳಿದರು. ಅದರಿಂದ ಅಸಮಾಧಾನಗೊಂಡ ನಾಗರಾಜ್, ಜಿಲ್ಲಾ ಮಟ್ಟದ ಅಧಿಕಾರಿಯಾಗಿದ್ದು, ಮಾಹಿತಿ ನೀಡದೆ ನೋಡ್ತೀನಿ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ? ಕನಿಷ್ಠ ಒಂದೆರಡು ಶಾಲೆಗಳ ಮಾಹಿ­ತಿಯೂ ಇಲ್ಲವೇ ಎಂದು ಪ್ರಶ್ನಿಸಿದರು.ಇಲಾಖೆ ಕಾರ್ಯಕ್ರಮಗಳ ಕುರಿತು ಮಾಹಿತಿ ಕೇಳಿ ಕೆಲವು ತಿಂಗಳಾದರೂ ಈ ಅಧಿಕಾರಿ ಇನ್ನೂ ಮಾಹಿತಿ ನೀಡಿಲ್ಲ. ಸದಾ ಬೇಜವಾಬ್ದಾರಿಯಿಂದ ಪ್ರತಿ­ಕ್ರಿಯಿ­ಸುತ್ತಾರೆ ಎಂದು ಸದಸ್ಯೆ ಸಿಮೋಲ್‍ ಕೂಡ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅಲವೇಲಮ್ಮ, ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಆನಂದ್ ವೇದಿಕೆ­ಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry