ಗುರುವಾರ , ಅಕ್ಟೋಬರ್ 17, 2019
22 °C

ಕ್ರೀಡೆಗಳ ತವರೂರು ಕೊಡಗು ಜಿಲ್ಲೆ

Published:
Updated:

ಮಡಿಕೇರಿ: ವಿಧಾನಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ 46ನೇ ಗುಡ್ಡಗಾಡು ಓಟದ ಸ್ಪರ್ಧೆಗೆ ಚಾಲನೆ ನೀಡಿದರು.ಕೊಡಗು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ನಡೆಯುತ್ತಿರುವ ಗುಡ್ಡಗಾಡು   ಓಟದ ಸ್ಪರ್ಧೆಗೆ ಚಾಲನೆ ನೀಡಿ  ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಕೊಡಗು ಜಿಲ್ಲೆ ಕ್ರೀಡೆಯ ತವರೂರು, ಸರ್ಕಾರ ಕ್ರೀಡಾ ಚಟುವಟಿಕೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಹೆಚ್ಚಿನ     ಅನುದಾನ ಬಿಡುಗಡೆ ಮಾಡುತ್ತಿದೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸಕಾರ್ಯಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗಾಗಿ 128 ಲಕ್ಷ      ರೂಪಾಯಿ ಅನುದಾನ ನೀಡಿದೆ. ಆದರೆ ಈ ಅನುದಾನ   ಸಮರ್ಪಕವಾಗಿ ಬಳಕೆಯಾಗಿಲ್ಲ. ಕಾಮಗಾರಿ ವಹಿಸಿಕೊಂಡ ಭೂ ಸೇನಾ ನಿಗಮದ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಹಾಕಿ ಮತ್ತಿತರ ಕ್ರೀಡೆಗೆ ಉತ್ತೇಜನ ನೀಡಲಾಗುತ್ತಿದೆ. ಇದಕ್ಕೆ ಬೇಕಾದ ಸೌಲಭ್ಯಗಳನ್ನು ಕ್ರೀಡಾಪಟುಗಳು ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಅಂತರರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ ಮಾತನಾಡಿ,  ಇದೇ ಪ್ರಥಮ ಬಾರಿಗೆ ಕೊಡಗು ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ ನಡೆಯುತ್ತಿದೆ. ಈ ಕ್ರೀಡೆಯಲ್ಲಿ  ಹೆಚ್ಚಿನ ಸ್ಪರ್ಧಾ ಪಟುಗಳು ಭಾಗವಹಿಸಿ ಇದೇ 22ರಂದು ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ಗುಡ್ಡಗಾಡು ಓಟಕ್ಕೆ ಆಯ್ಕೆಯಾಗಿ ಎಂದು ಹಾರೈಸಿದರು.ರಾಜ್ಯದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಜಯಗಳಿಸಬೇಕು. ಕ್ರೀಡಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಳ್ಳಬೇಕು  ಎಂದು ಅಶ್ವಿನಿ ನಾಚಪ್ಪ ಕರೆ ನೀಡಿದರು.ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣ ಅವರು ಮಾತನಾಡಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ಯತೇಚ್ಛವಾಗಿ ನೀಡುವಲ್ಲಿ ಕೊಡಗು ಜಿಲ್ಲೆಯ ಕೊಡುಗೆ ಅಪಾರ ಎಂದರು.ಡಿವೈಎಸ್ಪಿ ಜೆ.ಡಿ.ಪ್ರಕಾಶ್, ಕೊಡಗು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಎಂ.ವಿ.ಲೋಕೇಶ್, ಮಾಜಿ ಕ್ರೀಡಾಪಟು ಕಾಳಚಂಡ ರವಿ ತಮ್ಮಯ್ಯ,  ಸುಂಟಿಕೊಪ್ಪ ಕಾಫಿ ಬೆಳೆಗಾರ ವಿನೋದ್ ಶಿವಪ್ಪ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ, ಬಾಬು ಶೆಟ್ಟಿ ನಗರಸಭೆ ಸದಸ್ಯರಾದ ರಮೇಶ್, ಸುನಿಲ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು. ಶಿಕ್ಷಕರಾದ ಪ್ರಶಾಂತ್ ಸ್ವಾಗತಿಸಿದರು, ಪ್ರಜ್ಞಾ ಮತ್ತು ವಚನ ಪ್ರಾರ್ಥಿಸಿದರು.

8 ವಿಭಾಗಗಳಲ್ಲಿ ಓಟ

ಬುಧವಾರ (ಜ.11) ಬೆಳಿಗ್ಗೆ 7.30 ಗಂಟೆಗೆ ಪುರುಷರು, ಮಹಿಳೆಯರು ಮತ್ತು ಬಾಲಕರು-ಬಾಲಕಿಯರಿಗಾಗಿ 8 ವಿಭಾಗಗಳಲ್ಲಿ 12,8,6,4,3 ಕಿ.ಮೀಗಳ ಪ್ರತ್ಯೇಕ ಸ್ಪರ್ಧೆಗಳು  ನಡೆಯಲಿವೆ.ಈ ಸ್ಪರ್ಧೆಯಲ್ಲಿ ರಾಜ್ಯದ ಖ್ಯಾತ ತಂಡಗಳಾದ ರೈಲ್ವೇಸ್, ರಾಜ್ಯ ಪೊಲೀಸ್, ಎಂ.ಇ.ಜಿ., ಎ.ಎಸ್.ಇ., ಸಾಯಿ ಧಾರವಾಡ, ಡಿ.ವೈ.ಎಸ್.ಎಸ್. ಬೆಂಗಳೂರು, ಮೈಸೂರು ಅಲ್ಲದೆ ರಾಜ್ಯದ ಇತರ ಜಿಲ್ಲೆಗಳಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ.ಖ್ಯಾತ ಕ್ರೀಡಾಪಟುಗಳಾದ ತಿಪ್ಪವ್ವ ಸಣ್ಣಕ್ಕಿ, ಮೃದುಲಾ ಅಗಲೇಕರ್, ಇತರರು ಭಾಗವಹಿಸುವರು ಎಂದು ಕೊಡಗು ಅ್ಲೇಟಿಕ್ ಅಸೋಸಿಯೇಶನ್‌ನ ಖಜಾಂಚಿ ಅಂತೋನಿ ಡಿಸೋಜಾ ತಿಳಿಸಿದರು. 

ರಾಷ್ಟ್ರೀಯ ಕ್ರೀಡಾ ನೀತಿ ಜಾರಿಗೆ ಒತ್ತಾಯ

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ರಾಷ್ಟ್ರೀಯ ಕ್ರೀಡಾ ನೀತಿ ಜಾರಿಗೊಳಿಸಬೇಕು ಎಂದು ಅಂತರರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ ಒತ್ತಾಯಿಸಿದರು.ಗುಡ್ಡಗಾಡು ಓಟದ ಸ್ಪರ್ಧೆಗೆ ಚಾಲನೆ ನೀಡುವುದಕ್ಕೆ ಮುಂಚೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶಕ್ಕೆ ಕೀರ್ತಿ ತರುವ ಕ್ರೀಡಾಪಟುಗಳ ಭವಿಷ್ಯವನ್ನು ಉತ್ತಮಪಡಿಸಬೇಕು. ಸರ್ಕಾರಿ ನೌಕರಿ ನೀಡುವುದು ಹಾಗೂ ಪಿಂಚಣಿ ನೀಡಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಕೊಡಗಿನಲ್ಲಿ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಆಯೋಜಿಸುವುದು ಸಂತೋಷ ತಂದಿದೆ. ಈ ಅವಕಾಶವನ್ನು ಸ್ಥಳೀಯ ಕ್ರೀಡಾಪಟುಗಳು ಬಳಸಿಕೊಂಡು, ಉತ್ತಮ ಸಾಧನೆ ತೋರಬೇಕು ಎಂದು ಹಾರೈಸಿದರು.

ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಓಟ

ಕೊಡಗು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಯೋಜಿಸಿರುವ ರಾಜ್ಯ ಮಟ್ಟದ 46ನೇ ಗುಡ್ಡಗಾಡು ಓಟದ ಸ್ಪರ್ಧೆಯ ಅಂಗವಾಗಿ ಮಂಗಳವಾರ ಸ್ಥಳೀಯ ಕ್ರೀಡಾಪಟುಗಳಿಗೆ (14 ವರ್ಷ ವಯಸ್ಸಿನೊಳಗಿನ) ಏರ್ಪಡಿಸಲಾಗಿದ್ದ ಓಟದ ಸ್ಪರ್ಧೆಯಲ್ಲಿ ಮಡಿಕೇರಿಯ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿ ಮುತಾದಿಕ್ (ಬಾಲಕರ ವಿಭಾಗ) ಹಾಗೂ ಪೊನ್ನಂಪೇಟೆಯ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿ ಚೆಲುವಾಂಬಾ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು.ಸ್ಪರ್ಧೆಯಲ್ಲಿ ವಿಜೇತರಾದವರು ಇಂತಿದ್ದಾರೆ- ಬಾಲಕರ ವಿಭಾಗದಲ್ಲಿ ಕಲಾವಿದ (ದ್ವಿತೀಯ) ಹಾಗೂ ಶೋಯೆಬ್ (ತೃತೀಯ) ಸ್ಥಾನ ಪಡೆದುಕೊಂಡರು. ಇವರಿಬ್ಬರು ಮಡಿಕೇರಿಯ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಗಳು. ಬಾಲಕಿಯರ ವಿಭಾಗದಲ್ಲಿ ಮಡಿಕೇರಿಯ ರಾಜರಾಜೇಶ್ವರಿ ಶಾಲೆಯ ಲೀಲಾವತಿ (ದ್ವಿತೀಯ) ಹಾಗೂ ಮಡಿಕೇರಿಯ ಜ್ಯೂನಿಯರ್ ಕಾಲೇಜಿನ ಪ್ರಿಯಾ (ತೃತೀಯ) ಸ್ಥಾನ ಗಳಿಸಿದರು. 

 

Post Comments (+)