ಸೋಮವಾರ, ಡಿಸೆಂಬರ್ 16, 2019
17 °C

ಕ್ರೀಡೆಗಿಂತ ಸಮಾರಂಭಗಳೇ ಹೆಚ್ಚು...

ಎಸ್. ಸಂಪತ್ Updated:

ಅಕ್ಷರ ಗಾತ್ರ : | |

ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 2007ರ ಆಗಸ್ಟ್‌ನಲ್ಲಿ ರಾಮನಗರವನ್ನು ಪ್ರದೇಶವನ್ನು ಪ್ರತ್ಯೇಕಿಸಿ ಜಿಲ್ಲೆ ರಚಿಸಲಾಯಿತು.ರಾಮನಗರದಲ್ಲಿ ಇದ್ದ ತಾಲ್ಲೂಕು ಕ್ರೀಡಾಂಗಣವನ್ನೇ ಜಿಲ್ಲಾ ಕ್ರೀಡಾಂಗಣ ಮಟ್ಟಕ್ಕೆ ಏರಿಸಲಾಗಿತ್ತು. ಆದರೆ ಜಿಲ್ಲಾ ಮಟ್ಟದ ಕ್ರೀಡಾಂಗಣದಂತೆ ಇದನ್ನು ಸುಸಜ್ಜಿತಗೊಳಿಸಿ, ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತಾಳಿದೆ. ಹೀಗಾಗಿ ಈ ಜಿಲ್ಲಾ ಕ್ರೀಡಾಂಗಣ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ.ಕ್ರೀಡಾಂಗಣದಲ್ಲಿ ಒಂದು ಕಡೆ ಮಾತ್ರ ಪೆವಿಲಿಯನ್ ಇದ್ದು ಉಳಿದ ಭಾಗವನ್ನು `ಗ್ರಿಲ್'ನಿಂದ ಭದ್ರಗೊಳಿಸಲಾಗಿದೆ. ಕೆಲವೆಡೆ `ಗ್ರಿಲ್' ಕತ್ತರಿಸಿ, ಅಕ್ರಮವಾಗಿ ಕ್ರೀಡಾಂಗಣ ಪ್ರವೇಶಿಸುವ ಮಾರ್ಗವನ್ನೂ ನಿರ್ಮಿಸಲಾಗಿದೆ. ಪೆವಿಲಿಯನ್‌ನಲ್ಲಿ ಗ್ಯಾಲರಿ ಇಲ್ಲದಿರುವುದರಿಂದ ಬಿಸಿಲಿನಲ್ಲಿ ಕುಳಿತುಕೊಳ್ಳುವುದೂ ಕಷ್ಟವಾಗಿದೆ.ಇಲ್ಲಿ ಅಥ್ಲೆಟಿಕ್ಸ್‌ಗೆ ಬೇಕಾದಂತಹ 400 ಮೀಟರ್ `ಟ್ರ್ಯಾಕ್' ಇದೆಯಾದರೂ, ಅದಕ್ಕೆ ಶಾಶ್ವತ `ಮಾರ್ಕಿಂಗ್' ವ್ಯವಸ್ಥೆ ಇಲ್ಲ. ಪ್ರತಿ ಕ್ರೀಡಾಕೂಟ ನಡೆದಾಗ ಅಳತೆ ಮಾಡಿ `ಮಾರ್ಕಿಂಗ್' ಮಾಡಲೇ ಬೇಕಾಗಿದೆ. ಇದಕ್ಕಾಗಿಯೇ ಸಾಕಷ್ಟು ಹಣ ವ್ಯಯಿಸಬೇಕಾದ ಸ್ಥಿತಿ ಇದೆ.ಈ ಕ್ರೀಡಾಂಗಣದಲ್ಲಿ ಲಾಂಗ್‌ಜಂಪ್ ಮತ್ತು  ಹೈಜಂಪ್‌ಗೆ ಶಾಶ್ವತವಾದ `ಪಿಟ್'ಗಳಿಲ್ಲ. ಅದೇ ರೀತಿ ಜಾವಲಿನ್, ಡಿಸ್ಕಸ್ ಥ್ರೋಗಳಿಗೂ ನಿಗದಿತ ಪ್ರದೇಶ  ಗುರುತಿಸಿಲ್ಲ. ಕ್ರೀಡಾಂಗಣದ ಮಧ್ಯದಲ್ಲಿ ಫುಟ್‌ಬಾಲ್ `ಪೋಲ್'ಗಳನ್ನು ನೆಡಲಾಗಿದೆ. ಆದರೆ ಕೊಕ್ಕೊ, ಕಬಡ್ಡಿ ಕ್ರೀಡೆಗಳಿಗೆ ಶಾಶ್ವತ ಅಂಕಣಗಳಿಲ್ಲ. ಇತ್ತೀಚೆಗೆ ವಾಲಿಬಾಲ್ ಅಂಕಣವನ್ನು ನಿರ್ಮಿಸಲಾಗಿದ್ದು, ಬ್ಯಾಸ್ಕೆಟ್‌ಬಾಲ್ ಅಂಕಣದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.ಕ್ರೀಡಾಂಗಣಕ್ಕೆ ಹೊಂದಿಕೊಂಡು ಸರ್ಕಾರಿ ಜೂನಿಯರ್ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದ್ದು ಅಲ್ಲಿನ ಕೆಲ ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವುದರಲ್ಲಿ ತಲ್ಲೆನರಾಗಿರುತ್ತಾರೆ.  ಬೆಳಿಗ್ಗೆ ಮತ್ತು ಸಂಜೆ ಹೊತ್ತು ನಗರದ ಯುವಕರು ಇಲ್ಲಿ ಕ್ರಿಕೆಟ್ ಆಡುತ್ತಾರೆ. ನಗರದ ಕೆಲವರು ನಿತ್ಯ ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ವಾಯ ವಿಹಾರಕ್ಕೆ ಬರುತ್ತಾರೆ.ಮಳೆ ಬಂದರೆ ಕೆಸರು ಮಯ: ಮಳೆ ಬಂದರಂತೂ ಇಡೀ ಕ್ರೀಡಾಂಗಣದಲ್ಲಿ ಕೆಸರು ತುಂಬಿಕೊಳ್ಳುತ್ತದೆ.  ಟ್ರ್ಯಾಕ್ ಬದಿಯಲ್ಲಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೇ ಇಲ್ಲ. ಟ್ರ್ಯಾಕ್‌ನಲ್ಲಿ ನಡೆಯುವುದೂ ಕಷ್ಟವಾಗುತ್ತದೆ.ಜಿಲ್ಲಾ ಮಟ್ಟದ ಕ್ರೀಡಾಂಗಣದಲ್ಲಿ ಬಟ್ಟೆ ಬದಲಾಯಿಸಿಕೊಳ್ಳುವ ಕೊಠಡಿಯೂ ಇಲ್ಲ. ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಇತ್ತೀಚೆಗೆ ಇಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಕ್ರೀಡಾಂಗಣದಲ್ಲಿ ಕ್ರೀಡಾ ಸಲಕರಣೆಗಳನ್ನು ಇಟ್ಟುಕೊಳ್ಳಲು ಸುಸಜ್ಜಿತವಾದ ಕೊಠಡಿ ಇಲ್ಲ. ಎರಡು ಸಣ್ಣ ಕೊಠಡಿಗಳಲ್ಲಿ ಸಲಕರಣೆಗಳನ್ನು ಇಡಲಾಗಿದೆ.ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿ ವರ್ಷ ಚಾಮುಂಡೇಶ್ವರಿ ಕರಗ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಅಲ್ಲದೆ ಸರ್ಕಾರದ ಹತ್ತು ಹಲವು ಕಾರ್ಯಕ್ರಮಗಳು ಇಲ್ಲಿಯೇ ನಡೆಯುತ್ತವೆ. ಕ್ರೀಡಾಂಗಣಕ್ಕೆ ಹೊಂದಿಕೊಂಡು ಜೂನಿಯರ್ ಕಾಲೇಜಿನ ಆಟದ ಮೈದಾನ ಇದ್ದು, ಅಲ್ಲಿ ವಿವಿಧ ರಾಜಕೀಯ ಪಕ್ಷಗಳ ಬೃಹತ್ ಸಮಾವೇಶಗಳು, ವಿವಿಧ ಸಭೆ- ಸಮಾರಂಭಗಳು ನಡೆಯುತ್ತವೆ.ಕ್ರೀಡಾಂಗಣಕ್ಕೆ ಸೂಕ್ತ ಭದ್ರತೆ ಇಲ್ಲದ ಕಾರಣ ಕೆಲ ಕ್ರೀಡೆಗಳಿಗೆ ಶಾಶ್ವತ ಅಂಕಣ ನಿರ್ಮಿಸಿಲ್ಲ ಎಂದು ಕ್ರೀಡಾ ತರಬೇತಿದಾರರೊಬ್ಬರು ಹೇಳುತ್ತಾರೆ.ಇತ್ತೀಚೆಗೆ ರಾಮನಗರಕ್ಕೆ ವರ್ಗವಾಗಿ ಬಂದಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ವಿ.ವೆಂಕಟೇಶ್ ಮತ್ತು ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್ ಅವರು ಕ್ರೀಡಾಂಗಣದ ಸ್ಥಿತಿಗತಿ ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ತಾಲ್ಲೂಕು ಮಟ್ಟದ ಕ್ರೀಡಾಂಗಣದಂತಿರುವ ಈ ಕ್ರೀಡಾಂಗಣವನ್ನು ಜಿಲ್ಲಾ ಮಟ್ಟಕ್ಕೆ ಏರಿಸಿ, ಸುಸಜ್ಜಿತಗೊಳಿುವ ನಿಟ್ಟಿನಲ್ಲಿ ಕೆಲ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಪೆವಿಲಿಯನ್‌ನಲ್ಲಿ ಶೆಲ್ಟರ್ ನಿರ್ಮಾಣ, ಟ್ರ್ಯಾಕ್‌ಗಳನ್ನು ಶಾಶ್ವತವಾಗಿ ಗುರುತಿಸುವಂತೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ನೆರವಿನಿಂದ ಈ ಕಾರ್ಯ ಕೈಗೊಳ್ಳಲು ಕ್ರೀಡಾಂಗಣ ಸಮಿತಿ ಅನುಮತಿ ನೀಡಿದೆ. ಜಿಲ್ಲಾಧಿಕಾರಿ ಮತ್ತು ಸಿಇಒ ಅವರು ಹೆಚ್ಚು ನೆರವು ಒದಗಿಸುವ ಭರವಸೆ ನೀಡಿದ್ದು, ಹಂತ ಹಂತವಾಗಿ ಜಿಲ್ಲಾ ಕ್ರೀಡಾಂಗಣವಾಗಿ ಇದನ್ನು ಮೇಲ್ದರ್ಜೆಗೇರಿಸಲಾಗುವುದು' ಎಂದು ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ನವಜ್ಯೋತಿ ಪ್ರತಿಕ್ರಿಯಿಸಿದರು.ಇನ್ನೂ ಮುಗಿಯದ ಈಜುಕೊಳ ಕಾಮಗಾರಿ:

ರಾಮನಗರದಲ್ಲಿ ಅತ್ಯಾಧುನಿಕ ಈಜುಕೊಳ ನಿರ್ಮಾಣ ಕಾಮಗಾರಿ ಮೂರು ವರ್ಷದಿಂದ ಕುಂಟುತ್ತಾ ಸಾಗಿದೆ. ನಗರದ ರಾಯರದೊಡ್ಡಿ ಬಳಿ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಎಂಟು ಲೇನ್‌ಗಳ ಸುಮಾರು 50 ಮೀಟರ್ ಉದ್ದದ ಈಜು ಕೊಳವನ್ನು ನಿರ್ಮಿಸುವ ಕಾರ್ಯಕ್ಕೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಚಾಲನೆ ನೀಡಿ ಮೂರು ವರ್ಷವೇ ಆಗಿ ಹೋಗಿದೆ.ಪಕ್ಕದ ಬೆಂಗಳೂರು ನಗರ ಮತ್ತು ಮಂಡ್ಯದಲ್ಲಿ ಸುಸಜ್ಜಿತ ಈಜುಕೊಳ ಇದೆ. ಆ ಜಿಲ್ಲೆಗಳ ವಿದ್ಯಾರ್ಥಿಗಳು ಈಜುಕೊಳದಲ್ಲಿ ವ್ಯವಸ್ಥಿತ ತರಬೇತಿ ಪಡೆದು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟ ಈಜು ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಬಹುಮಾನಗಳನ್ನು ಪಡೆಯುತ್ತಿದ್ದಾರೆ.ಆದರೆ ರಾಮನಗರ ಜಿಲ್ಲಾ ಕೇಂದ್ರವಾಗಿ ಐದು ವರ್ಷ ಕಳೆಯುತ್ತಾ ಬಂದರೂ ಈಜುಕೊಳ ನಿರ್ಮಿಸದೆ ಕ್ರೀಡಾಪಟುಗಳಿಗೆ ಮತ್ತು ಜನಸಾಮಾನ್ಯರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

 

ಪ್ರತಿಕ್ರಿಯಿಸಿ (+)