ಕ್ರೀಡೆಯಿಂದಲೇ ಬದುಕು ಕಟ್ಟಿಕೊಳ್ಳುವ ತವಕ...!

7

ಕ್ರೀಡೆಯಿಂದಲೇ ಬದುಕು ಕಟ್ಟಿಕೊಳ್ಳುವ ತವಕ...!

Published:
Updated:
ಕ್ರೀಡೆಯಿಂದಲೇ ಬದುಕು ಕಟ್ಟಿಕೊಳ್ಳುವ ತವಕ...!

ಆ ಕಣ್ಣುಗಳಲ್ಲಿ ಸಾವಿರ ಸಾವಿರ ಕನಸು. ಒಮ್ಮೆಯಾದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಹಂಬಲ. ಅದಕ್ಕಾಗಿ ಜೀವನವನ್ನೇ ಮುಡುಪಾಗಿಡಬಲ್ಲೆವು ಎನ್ನುವ ತಹತಹ. ಈ ಎಲ್ಲಾ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ರಾಶಿ ರಾಶಿ ಮುಳ್ಳುಗಳು ಅಡ್ಡಿಯಾದಾವಾ ಎನ್ನುವ ಆತಂಕ. ಆದರೂ ಬಿಡೆವು ಛಲವ, ಹಠವ ಎನ್ನುವ ಗಟ್ಟಿ ನಿರ್ಧಾರ ಅವರ ಕಂಗಳಲ್ಲಿ ಮನೆ ಮಾಡಿತ್ತು. ಅಲ್ಲಿದ್ದವರು ಕೆಲವರು `ಉಳ್ಳವರ~ ಮನೆಯಿಂದ ಬಂದವರು. ಇನ್ನೂ ಕೆಲವರು ಮನೆಯಲ್ಲಿನ ಇಳಿಸಂಜೆಯ ಬಡತನದ ಮಧ್ಯೆಯೂ ಕ್ರೀಡೆಯಿಂದಲೇ ಬದುಕು ಕಟ್ಟಿಕೊಳ್ಳಬೇಕು ಎಂದು ಬಯಸಿದವರು. ಇನ್ನೂ ಕೆಲವರು ಕ್ರೀಡೆಯೇ ಬದುಕು ಎಂದುಕೊಂಡವರು!ಈ ಎಲ್ಲಾ ಸನ್ನಿವೇಶಗಳಿಗೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ವಾರ ನಡೆದ 27ನೇ ರಾಜ್ಯ ಸೀನಿಯರ್ ಹಾಗೂ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಸಾಕ್ಷಿಯಾಯಿತು. ಇಲ್ಲಿ ಸಾಕಷ್ಟು ಪ್ರತಿಭೆಗಳ ಸಾಧನೆ ಅನಾವರಣವಾಯಿತು. ಹೊಸ ದಾಖಲೆಗಳು ನಿರ್ಮಾಣವಾದವು. ಬದುಕಿನ ಇನ್ನಷ್ಟು ಏಳಿಗೆಗೆ ಪ್ರೇರಣೆ ದೊರೆಯಿತು. ಹೈದರಾಬಾದ್‌ನಲ್ಲಿ ಇದೇ ತಿಂಗಳು ನಡೆಯಲಿರುವ ದಕ್ಷಿಣ ವಲಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯಲು ವೇದಿಕೆಯೂ ಆಯಿತು.ಹೀಗೆ ಸಾಕಷ್ಟು ಕನಸುಗಳನ್ನು ಹೊತ್ತು ಅದೇ ಹಾದಿಯನ್ನು ಹಿಂಬಾಲಿಸುತ್ತಿರುವ ಸಾಕಷ್ಟು ಅಥ್ಲೀಟ್‌ಗಳ ಪೈಕಿ ಶಿವಪುರದ ತಿಪ್ಪವ್ವ ಸಣ್ಣಕ್ಕಿ ಕೂಡಾ ಒಬ್ಬರು.

ಇದು ಕ್ರೀಡೆಯಿಂದಲೇ ಬದುಕು ಕಟ್ಟಿಕೊಂಡವರ ಕಥೆಯಿದು. ಮನೆಯಲ್ಲಿನ ಬಡತನ ಯಾವ ಲೆಕ್ಕಕ್ಕೂ ಹತ್ತಲಿಲ್ಲ. ಆದನ್ನು ಮೀರಿ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಿ ಯಶ ಕಾಣಬೇಕೆಂದು ಛಲ ತೊಟ್ಟು ಬಡ ಕುಟುಂಬದಿಂದ ಬೆಳೆದು ಬಂದ ತಿಪ್ಪವ್ವ ಇದುವರೆಗೂ ಸಾಕಷ್ಟು ಪ್ರಶಸ್ತಿ, ಪದಕಗಳನ್ನು ಜಯಿಸಿದ್ದಾರೆ.ಬಾಗಲಕೋಟೆ ಜಿಲ್ಲೆ ಶಿವಪುರ ಸಣ್ಣ ಗ್ರಾಮದ ತಿಪ್ಪವ್ವ ಶಾಲಾ ದಿನಗಳಲ್ಲಿಯೇ  ದೂರ ಅಂತರದ ಓಟದಲ್ಲಿ ಗಮನ ಸೆಳೆದಿದ್ದರು. ಶಾಲೆಯಲ್ಲಿ ದೊರೆತ ಪ್ರೋತ್ಸಾಹದ ಫಲವಾಗಿ 5000 ಮೀಟರ್, 10000 ಮೀಟರ್ ಮತ್ತು ಕ್ರಾಸ್ ಕಂಟ್ರಿ ಓಟಗಳಲ್ಲಿ ಸಾಧನೆ ಆರಂಭವಾಯಿತು. ಕ್ರೀಡೆ ಆಕೆಯ ಬದುಕಿಗೆ ಹೊಸ ತಿರುವು ಕೊಟ್ಟಿತು. ಐದು ವರ್ಷಗಳಿಂದ ಮೈಸೂರಿನ ಯುವಜನ ಸೇವೆ, ಕ್ರೀಡಾ ಇಲಾಖೆ ವಸತಿ ನಿಲಯದಲ್ಲಿದ್ದಾರೆ.ಡೆಕ್ಕನ್ ಅಥ್ಲೆಟಿಕ್ಸ್ ಕ್ಲಬ್ ನಡೆಸುವ ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟದ ಮಹಿಳಾ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದಲೂ ಚಾಂಪಿಯನ್ ಪಟ್ಟವನ್ನು ಇವರು ಯಾರಿಗೂ ಬಿಟ್ಟುಕೊಟ್ಟಿಲ್ಲ. ಇದೇ ವರ್ಷ ಹಾಸನದಲ್ಲಿ ನಡೆದಾಗಲೂ ತಿಪ್ಪವ್ವ ಪ್ರಥಮ ಪ್ರಶಸ್ತಿ ಗಳಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ ಕೂಟದಲ್ಲಿ ಬೆಳ್ಳಿ ಪದಕ ಗಳಿಸಿದರು. ಟೆರೇಷಿಯನ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಎ. ಓದುತ್ತಿರುವ ತಿಪ್ಪವ್ವ, ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಕಳೆದ ಮೂರು ತಿಂಗಳ ಹಿಂದಷ್ಟೇ ಉದ್ಯೋಗ ಪಡೆದುಕೊಂಡಿದ್ದಾರೆ. ಇದಕ್ಕೆಲ್ಲಾ ಕ್ರೀಡೆಯಲ್ಲಿ ಮಾಡಿದ ಸಾಧನೆಯೇ ಕಾರಣ ಎನ್ನುವುದು ಗಮನಾರ್ಹ.ಬೆಂಗಳೂರಿನಲ್ಲಿ ನಡೆದ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿಯೂ 5000 ಹಾಗೂ 10,000ಮೀ ಓಟದ ಸ್ಪರ್ಧೆಯಲ್ಲಿ ಸೌತ್ ವೆಸ್ಟರ್ನ್ ರೈಲ್ವೆಯ ತಿಪ್ಪವ್ವ ಎರಡೂ ಸ್ಪರ್ಧೆಗಳಲ್ಲಿ ದಾಖಲೆ ಸಮೇತ `ಚಿನ್ನ~ದ ಹುಡುಗಿ ಎನಿಸಿಕೊಂಡರು.ಒಟ್ಟು 21 ದಾಖಲೆ: ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಒಟ್ಟು 21 ದಾಖಲೆಗಳು ನಿರ್ಮಾಣವಾದವು.  ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ನ ಎಸ್. ಹರ್ಷಿತ್ ಬಾಲಕರ 18 ವರ್ಷದೊಳಗಿನವರ ವಿಭಾಗದ ಹೈ ಜಂಪ್ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿದರು. ಅವರು ತಮ್ಮ ಹೆಸರಿನಲ್ಲಿಯೇ ಇದ್ದ ದಾಖಲೆಯನ್ನು (2.01ಮೀ.) 2.11 ಮೀ. ಮುರಿದರು. ಲಾಂಗ್‌ಜಂಪ್‌ನಲ್ಲಿ ಐಶ್ವರ್ಯ ಚಿನ್ನ ಗೆದ್ದರು.

ಮೂಡು ಬಿದಿರೆಯ ಆಳ್ವಾಸ್‌ನ ಕೆ. ರಶ್ಮಿ ಬಾಲಕಿಯರ 18 ವರ್ಷದೊಳಗಿನವರ ವಿಭಾಗದ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ದಾಖಲೆ (ದೂರ: 39.20) ನಿರ್ಮಿಸಿದರು.ಡಿವೈಎಸ್‌ಎಸ್ ಬೆಂಗಳೂರಿನ ರೆಬೆಕ್ಕಾ ಜೋಸ್ ಬಾಲಕಿಯರ 20 ವರ್ಷದೊಳಗಿನವರ 100 ಮೀ. ಓಟದ ಸ್ಪರ್ಧೆಯಲ್ಲಿ ದಾಖಲೆ (ಕಾಲ- 11.8ಸೆ.) ಬರೆದರು. ಈ ಮೊದಲು 2003ರಲ್ಲಿ ಬಿಂದು ರಾಣಿ 12.00ಸೆಕೆಂಡ್‌ಗಳಲ್ಲಿ ತಲುಪಿದ್ದ ಗುರಿಯೇ ಶ್ರೇಷ್ಠ ದಾಖಲೆಯಾಗಿತ್ತು. ಇದರಿಂದ ಕೆಲ ಅಥ್ಲೀಟ್‌ಗಳು ದಕ್ಷಿಣ ವಲಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಸ್ಥಾನ ಪಡೆಯಲು ನೆರವಾಯಿತು. ಪುರುಷರ 100ಮೀ. ಓಟದ ಸ್ಪರ್ಧೆಯಲ್ಲಿ 2006ರಲ್ಲಿ ನಿರ್ಮಾಣವಾಗಿದ್ದ ದಾಖಲೆಯೊಂದನ್ನು ಫ್ಯೂಷನ್ ಅಥ್ಲೆಟಿಕ್‌ನ ಬೋಪಣ್ಣ ಐದು ವರ್ಷಗಳ ನಂತರ ಸರಿಗಟ್ಟಿದರು. ಈ ದಾಖಲೆಯನ್ನು 1995ರಲ್ಲಿ ಲೊಯಿನೆಲ್ ಜಾನ್ಸನ್, 2000 ಕ್ಲೋಫಡ್ ಜೋಶವಾ ಹಾಗೂ 2006ರಲ್ಲಿ ವಿಲಾಸ್ ಎನ್. ದಾಖಲೆ (ಕಾಲ-10.4ಸೆ) ನಿರ್ಮಿಸಿದ್ದರು.ಆಳ್ವಾಸ್ ಮಡಿಲಿಗೆ ಹೆಚ್ಚು ಪ್ರಶಸ್ತಿ: ಈ ವರ್ಷವೂ ಮೂಡುಬಿದಿರೆಯ ಆಳ್ವಾಸ್ ತಂಡದವರು ತಮ್ಮ ಪ್ರಾಬಲ್ಯ  ಬಿಟ್ಟುಕೊಡಲಿಲ್ಲ. ಹೆಚ್ಚು ಪ್ರಶಸ್ತಿಗಳನ್ನು ಆಳ್ವಾಸ್ ತಂಡ ಗೆದ್ದುಕೊಂಡಿತು. ಬಾಲಕರ 20, 18 ಹಾಗೂ 16 ವರ್ಷದೊಳಗಿನ ವಿಭಾಗ, ಬಾಲಕಿಯರ 20 ಹಾಗೂ 18 ವರ್ಷದೊಳಗಿನವರು ವಿಭಾಗದಲ್ಲಿಯೂ ಈ ತಂಡ ಪ್ರಶಸ್ತಿ ಜಯಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry