`ಕ್ರೀಡೆಯಿಂದ ಆತ್ಮಸ್ಥೈರ್ಯ ವೃದ್ಧಿ'

7

`ಕ್ರೀಡೆಯಿಂದ ಆತ್ಮಸ್ಥೈರ್ಯ ವೃದ್ಧಿ'

Published:
Updated:

ಕೊಪ್ಪಳ: ಸದಾ ಒತ್ತಡದ ನಡುವೆ ಕಾರ್ಯ ನಿರ್ವಹಿಸುವವರಿಗೆ ಕ್ರೀಡಾಕೂಟಗಳು ಆತ್ಮಸ್ಥೈರ್ಯ ವೃದ್ಧಿಸಲು ಸಹಕಾರಿಯಾಗಿವೆ ಎಂದು ಗವಿಸಿದ್ಧೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಎಸ್.ಸವಡಿ ಹೇಳಿದರು.ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪೊಲೀಸರು ಹಾಗೂ ವೈದ್ಯರು ಸದಾ ಒತ್ತಡದ ನಡುವೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಲ್ಲದೇ, ದಿನದ 24 ಗಂಟೆಗಳೂ ಅವರು ಸಾರ್ವಜನಿಕರ ಸೇವೆಗೆ ಸನ್ನದ್ಧರಾಗಿರಬೇಕಾಗುತ್ತದೆ. ಈ ರೀತಿಯ ಮಾನಸಿಕ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವವರಿಗೆ ಇಂತಹ ಕ್ರೀಡಾಕೂಟಗಳು ಮನಸ್ಸನ್ನು ಉಲ್ಲಸಿತಗೊಳಿಸುವುದರ ಜೊತೆಗೆ, ಆತ್ಮಸ್ಥೈರ್ಯ ವೃದ್ಧಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ಹೇಳಿದರು.ಪೊಲೀಸರು ಮಾನಸಿಕ ಆರೋಗ್ಯದ ಜೊತೆ ಜೊತೆಗೆ ದೈಹಿಕ ಸದೃಢತೆಯನ್ನು ಕಾಯ್ದುಕೊಂಡು ಬರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಹ ಕ್ರೀಡೆಗಳು ದೇಹಕ್ಕೆ ಶಕ್ತಿ ಹಾಗೂ ಸ್ಫೂರ್ತಿ ನೀಡುತ್ತವೆ. ಕ್ರೀಡಾಕೂಟದಲ್ಲಿ ಸೋಲು- ಗೆಲುವಿನ ಬಗ್ಗೆ ಗಮನ ಕೊಡದೇ ಕ್ರೀಡಾಮನೋಭಾವದಿಂದ ಭಾಗವಹಿಸುವಿಕೆಗೆ ಮಹತ್ವ ನೀಡಬೇಕು ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ್ ಮಾತನಾಡಿ, ಪೊಲೀಸರ ಮಾನಸಿಕ ಒತ್ತಡ ನಿವಾರಣೆಗೆ, ದೈಹಿಕ ಕ್ಷಮತೆಯ ಸಾಬೀತಿಗೆ ಇಲಾಖೆಯು ಕ್ರೀಡಾಕೂಟಗಳನ್ನು ಆಯೋಜಿಸುತ್ತಿದೆ ಎಂದರು.ಕುಷ್ಟಗಿ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ವಿರೂಪಾಕ್ಷಪ್ಪ ಅವರು ಕ್ರೀಡಾಜ್ಯೋತಿಯನ್ನು ಉದ್ಘಾಟಕರಿಗೆ ಹಸ್ತಾಂತರಿಸಿದರು. ಪರೇಡ್ ಕಮಾಂಡರ್ ಅವರು ಕ್ರೀಡಾಳುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಶಿವಮೊಗ್ಗದಲ್ಲಿ ಕಳೆದ ವರ್ಷ ಕರ್ತವ್ಯ ನಿರತರಾಗಿರುವಾಗ ಮರಣ ಹೊಂದಿದ ಕೊಪ್ಪಳ ನಗರ ಠಾಣೆಯ ಪೊಲೀಸ್ ಪೇದೆ ರಂಗನಾಥ ಅವರ ಪಾಲಕರಿಗೆ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ವತಿಯಿಂದ ರೂ. 60 ಸಾವಿರ ಸಹಾಯಧನವನ್ನು ವಿತರಣೆ ಮಾಡಲಾಯಿತು. ಡಿಎಸ್‌ಪಿ ಸುರೇಶ್ ಮಸೂತಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry