ಶನಿವಾರ, ಜೂಲೈ 4, 2020
28 °C

ಕ್ರೀಡೆ-ಶಿಕ್ಷಣ ಕಡೆಗಣಿಸಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರೀಡೆ-ಶಿಕ್ಷಣ ಕಡೆಗಣಿಸಬೇಡಿ

ರಾಯಚೂರು: ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಯುವ ಜನತೆ ಶ್ರದ್ದೆಯಿಂದ ಪ್ರಯತ್ನಿಸಿದರೆ ಯಶಸ್ಸು ಖಂಡಿತ. ಜೊತೆಗೆ ಉತ್ತಮ ಶಿಕ್ಷಣವನ್ನೂ ಪಡೆಯುವ ಆಸಕ್ತಿ ಮತ್ತು ಹೆಚ್ಚಿನ ಆದ್ಯತೆ ಕೊಡುವುದು ಅವಶ್ಯವಾಗಿದೆ. ಕ್ರೀಡೆ ಮತ್ತು ಶಿಕ್ಷಣ ಇವೆರಡನ್ನೂ ನಿರ್ಲಕ್ಷಿಸಬೇಡಿ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮುರಾದಾಬಾದ್ ಕ್ಷೇತ್ರದ  ಸಂಸದ ಮಹಮ್ಮದ್ ಅಜರುದ್ದೀನ್ ಹೇಳಿದರು.ಇಲ್ಲಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲು ಭಾನುವಾರ ಎನ್.ಎಸ್ ಬೋಸರಾಜ ಪ್ರತಿಷ್ಠಾನವು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ ವಿಜೇತ ತಂಡ ‘ಈಗಲ್-11’ ತಂಡಕ್ಕೆ ಟ್ರೋಫಿ, 25 ಸಾವಿರ ನಗದು ಬಹುಮಾನ ವಿತರಿಸಿ ಮಾತನಾಡಿದರು.ಕ್ರೀಡೆ ಅದರಲ್ಲೂ ಕ್ರಿಕೆಟ್ ಬಗ್ಗೆ ಇಷ್ಟೊಂದು ಆಸಕ್ತಿ ಈ ನಗರದ ಯುವ ಸಮೂಹ ಹೊಂದಿರುವುದು ಸಂತಸ ತಂದಿದೆ. ಆದರೆ, ಈ ನಿಮ್ಮ ಆಸಕ್ತಿ ಶ್ರದ್ದೆಯಿಂದ ಕೂಡಿರಲಿ. ಪ್ರಾಮಾಣಿಕ ಪ್ರಯತ್ನ ಇರಬೇಕು. ಈ ರೀತಿ ಯುವ ಆಟಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎನ್.ಎಸ್ ಬೋಸರಾಜು ಪ್ರತಿಷ್ಠಾನ ಪಂದ್ಯಾವಳಿ ಆಯೋಜಿಸಿರುವುದು ಪ್ರಂಸನೀಯ. ಪ್ರತಿ ವರ್ಷ ರೀತಿ ಪಂದ್ಯಾವಳಿ ನಡೆಯಬೇಕು ಎಂದು ಅಶಯ ವ್ಯಕ್ತಪಡಿಸಿದರು.ರಾಯಚೂರು ನಗರಕ್ಕೆ ಇದೇ ಪ್ರಪ್ರಥಮ ಬಾರಿಗೆ ಭೇಟಿ ನೀಡಿದ್ದು, ಸುಂದರ ನಗರವಾಗಿದೆ. ಈ ನಗರದ ಕ್ರೀಡಾಂಗಣದಲ್ಲಿ  ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್ ಅವರಂಥ ಶ್ರೇಷ್ಠ ಆಟಗಾರರು ಆಟವಾಡಿದ್ದಾರೆ ಎಂಬುದು ಖುಷಿ ತರುವ ಸಂಗತಿ ಎಂದು ನುಡಿದರು.ರಾಜಕೀಯ ಪ್ರವೇಶಿಸಿ: ಪ್ರಾಮಾಣಿಕವಾಗಿ ಜನರ ಸೇವೆ, ಸಮಾಜ ಸೇವೆ ಮಾಡುವ ಆಸಕ್ತಿ ಹೊಂದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಿ. ಈ ರೀತಿ ಆಸಕ್ತಿ ಹೊಂದಿರುವ ಯುವ ಜನತೆಗೆ ಪಕ್ಷ ಸೂಕ್ತ ಪ್ರೋತ್ಸಾಹ ನೀಡುತ್ತಿದೆ. ಪಕ್ಷದ ರಾಷ್ಟ್ರೀಯ ಯುವ ನಾಯಕ ರಾಹುಲ್ ಗಾಂಧಿ ಅವರು ಈ ದಿಶೆಯಲ್ಲಿ ಗಮನಹರಿಸಿದ್ದಾರೆ ಎಂದು ತಿಳಿಸಿದರು.ಮುಖ್ಯಅತಿಥಿಯಾಗಿ ಆಗಮಿಸಿದ್ದ ಶಾಸಕ ಸಯ್ಯದ್ ಯಾಸಿನ್ ಅವರು ಅಜರುದ್ದೀನ್ ಅವರ ಸಾಧನೆ, ದಾಖಲೆಗಳ ಬಗ್ಗೆ ವಿವರಿಸಿದರು. ಪ್ರತಿಷ್ಠಾನದ ಕಾರ್ಯ ಪ್ರಶಂಸಿಸಿದರು.ಮಾಜಿ ಶಾಸಕ ಎನ್.ಎಸ್ ಬೋಸರಾಜ, ಹಿರಿಯ ನ್ಯಾಯವಾದಿ ಎಂ ನಾಗಪ್ಪ, ಶಾಸಕ ರಾಜಾ ರಾಯಪ್ಪ ನಾಯಕ, ಮಾಜಿ ಸಂಸದರಾದ ವೆಂಕಟೇಶ ನಾಯಕ, ಸಮದ್ ಸಿದ್ದಿಕಿ, ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ, ಕಾಂಗ್ರೆಸ್ ಪಕ್ಷದ ಯುವ ನಾಯಕ ಹಾಗೂ ಪ್ರತಿಷ್ಠಾನದ ಕಾರ್ಯದರ್ಶಿ ರವಿ ಬೋಸರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ ವಸಂತಕುಮಾರ, ನಗರಸಭೆ ಸದಸ್ಯ ಜಯಣ್ಣ, ಜಿ ಶಿವಮೂರ್ತಿ, ಪಕ್ಷದ ನಗರ ಘಟಕದ ಅಧ್ಯಕ್ಷ ಜಿ ಬಸವರಾಜರೆಡ್ಡಿ, ಕಾಂಗ್ರೆಸ್ ಪಕ್ಷದ ಮುಖಂಡ ರುದ್ರಪ್ಪ ಅಂಗಡಿ, ರವೀಂದ್ರ ಜಾಲ್ದಾರ, ತಾಪಂ ಅಧ್ಯಕ್ಷ ಚಂದ್ರಶೇಖರ, ಪಕ್ಷದ ಮುಖಂಡ ಅಶೋಕ ಪಾಟೀಲ್, ಜಿಪಂ ಸದಸ್ಯ ಕೆ ಶರಣಪ್ಪ, ಅಸ್ಲಂ ಪಾಷಾ, ಜಿಪಂ ಸಿಇಒ ವಿಜಯಕುಮಾರ, ಉದ್ಯಮಿ ರಾಮಚಂದ್ರ ಪ್ರಭು ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿದ್ದರು.ಸತ್ಕಾರ: ಪ್ರತಿಷ್ಠಾನದವತಿಯಿಂದ ಅಜರುದ್ದೀನ್ ಅವರಿಗೆ ರುಮಾಲು ಸುತ್ತಿ ಖಡ್ಗ ನೀಡಿ ಸತ್ಕರಿಸಲಾಯಿತು. ಎನ್.ಎಸ್ ಬೋಸರಾಜು ಪ್ರತಿಷ್ಠಾನದ ಅಧ್ಯಕ್ಷ ಬಿ.ವಿ ನಾಯಕ ಅವರು ಸ್ವಾಗತಿಸಿದರು. ಕಮಲ್‌ಕುಮಾರ ಅವರು ಕಾರ್ಯಕ್ರಮ ನಿರೂಪಿಸಿದರು.ಕ್ರಿಕೆಟ್ ತಾರೆ ಅಜರುದ್ದೀನ್ ಅವರನ್ನು ನೋಡಲು, ಹಸ್ತಾಕ್ಷರ ಪಡೆಯಲು ಭಾರಿ ನೂಕುನುಗ್ಗಲು ಉಂಟಾಯಿತು. ಸಂಘಟಕರು ಮತ್ತು ಪೊಲೀಸರು ಸಾಕಷ್ಟು ಪ್ರಯಾಸಪಡಬೇಕಾಯಿತು. ಸಮಾರಂಭಕ್ಕೂ ಮುನ್ನ ನಡೆದ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಪ್ರಕಾಶ ಕ್ರಿಕೆಟ್ ಆಕಡೆಮಿ ತಂಡ ಹಾಗೂ ಈಗಲ್-11 ತಂಡಗಳು ಕಪ್‌ಗಾಗಿ ಹಣಾಹಣಿ ನಡೆಸಿದವು.ಆಕರ್ಷಕ ಅಂತಿಮ ಪಂದ್ಯ: 25 ಸಾವಿರ ನಗದು, ಟ್ರೋಫಿ ಹೊಂದಿರುವ ಪಂದ್ಯಾವಳಿಯ ಗೆಲ್ಲಲು ಎರಡು ತಂಡದ ಆಟಗಾರರು ಸಾಕಷ್ಟು ಬೆವರು ಹರಿಸಿದರು. ಎರಡೂ ಕಡೆಯ ಆಟಗಾರರು ಬ್ಯಾಟಿಂಗ್, ಕ್ಷೇತ್ರ ರಕ್ಷಣೆ ಮತ್ತು ಬೌಲಿಂಗ್ ವಿಭಾಗದಲ್ಲಿ ತೋರಿದ ಪ್ರದರ್ಶನ  ಪ್ರೇಕ್ಷಕರ ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ಈಗಲ್-11 ಗೆಲುವು ಸಾಧಿಸಿ ಕಪ್ ಗಿಟ್ಟಿಸಿದರೆ, ಪ್ರಕಾಶ ಕ್ರಿಕೆಟ್ ಆಕಡೆಮಿ ತಂಡ ರನ್ನರ್ಸ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.