ಕ್ರೀಯಾಶೀಲತೆಗೆ ಒಲಿದ ರಾಷ್ಟ್ರಪ್ರಶಸ್ತಿ

7

ಕ್ರೀಯಾಶೀಲತೆಗೆ ಒಲಿದ ರಾಷ್ಟ್ರಪ್ರಶಸ್ತಿ

Published:
Updated:

ಅರಕಲಗೂಡು: ಶಿಕ್ಷಕಿಯೊಬ್ಬರು ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಪ್ರಸಕ್ತ ಸಾಲಿನ ಅತ್ಯುತ್ತಮ ಶಿಕ್ಷಕಿ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿರುವ ಶಿಕ್ಷಕಿ ಕೆ.ಆರ್. ಪ್ರೇಮಾ ಉತ್ತಮ ಉದಾಹರಣೆ.ತಾಲ್ಲೂಕಿನ ಕೊಣನೂರು ಹೋಬಳಿ ಗೊಬ್ಬಳಿಕಾವಲ್ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಾ ಗ್ರಾಮದ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಿರುವ ಪರಿ ಎಂತಹವರಲ್ಲೂ ಬೆರಗು ಮೂಡಿಸುತ್ತದೆ.ಹೇಮಾವತಿ ಪುನರ್ವಸತಿ ಗ್ರಾಮ ಗೊಬ್ಬಳಿಕಾವಲ್ ಗ್ರಾಮದ ಶಾಲೆಗೆ ಇವರು ವರ್ಗಾವಣೆಗೊಂಡು ಬಂದಾಗ ಶಾಲೆಯ ಪರಿಸ್ಥಿತಿ ಉತ್ತಮವೇನೂ ಆಗಿರಲಿಲ್ಲ. ಮಕ್ಕಳ ಹಾಜರಾತಿ ಕಡಿಮೆ ಇತ್ತು. ಬಹಳಷ್ಟು ಮನೆಗಳವರು ಮಕ್ಕಳನ್ನು ಶಾಲೆಗೆ ಕಳಿಸದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.ಪ್ರೇಮಾ ಅವರು ಮನೆಮನೆಗೆ ಭೇಟಿ ನೀಡಿ ಮಕ್ಕಳ ಶಿಕ್ಷಣದ ಕುರಿತು ಪೋಷಕರಲ್ಲಿ ಅರಿವು ಮೂಡಿಸಿ ಗ್ರಾಮದ ಎಲ್ಲ ಮಕ್ಕಳು ಶಾಲೆಯ ಮೆಟ್ಟಿಲು ಹತ್ತುವಂತೆ ಮಾಡಿದರು. ಶಾಲೆಯ ಸುತ್ತ ಇದ್ದ ಜಾಗಕ್ಕೆ ಸಾಮಾಜಿಕ ಅರಣ್ಯ ಇಲಾಖೆ ಸಹಕಾರದಿಂದ ತಂತಿ ಬೇಲಿ ಹಾಕಿಸಿ ಒಳಗೆ ಉದ್ಯಾನ ನಿರ್ಮಿಸಲು ಮುಂದಾದಾಗ ಕಾಡಿದ್ದು ನೀರಿನ ಸಮಸ್ಯೆ.ಶಾಲೆ ಮಾತ್ರವಲ್ಲ, ಗೊಬ್ಬಳಿ ಕಾವಲ್ ಗ್ರಾಮವೆ ಕುಡಿಯುವ ನೀರಿಗಾಗಿ ಹಪಹಪಿಸುತ್ತಿತ್ತು. ಕೊಳವೆ ಬಾವಿ ಕೊರೆದರೂ ನೀರು ಸಿಗದೆ ಸುಮಾರು 1.5 ಕಿ.ಮೀ. ದೂರದ ಮಾದಾಪುರ ಗ್ರಾಮದಿಂದ ನೀರನ್ನು ಹೊತ್ತು ತರುವ ದಯನೀಯ ಸ್ಥಿತಿ ಇತ್ತು. ಇದಕ್ಕೆ ಪರಿಹಾರ ಕಂಡು ಹಿಡಿಯುವ ಕುರಿತು ಚಿಂತಿಸಿದ ಪ್ರೇಮಾ ಅಂದಿನ ಶಾಸಕ ಎ.ಟಿ.ರಾಮಸ್ವಾಮಿ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿದರು.ಶಿಕ್ಷಕಿಯ ಕಾಳಜಿಗೆ ಸ್ಪಂದಿಸಿದ ರಾಮಸ್ವಾಮಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಮಾದಾಪುರದಿಂದ ಪೈಪ್‌ಲೈನ್ ಅಳವಡಿಸಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ  ಅಧಿಕಾರಿಗಳಿಗೆ ಸೂಚಿಸಿದ್ದರು.  ನೀರಿನ ಸಮಸ್ಯೆ ನೀಗಿದ ಬಳಿಕ ಉದ್ಯಾನ ನಳನಳಿಸಿತು.ಶಾಲಾ ಆವರಣದಲ್ಲಿ ಬೆಳೆಸಿರುವ ತೇಗ, ಸಿಲ್ವರ್ ಮುಂತಾದ 500ಕ್ಕೂ ಹೆಚ್ಚು ಗಿಡಗಳು ಇಂದು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತವೆ. ಶಾಲಾ ಆವರಣದಲ್ಲಿ ತಾಜಾ ತರಕಾರಿ ಬೆಳೆದು ಮಕ್ಕಳ ಬಿಸಿಯೂಟಕ್ಕೆ ಉಪಯೋಗಿಸಲಾಗುತ್ತಿದೆ. ಶಾಲೆಗೆ ಅಗತ್ಯವಿರುವ ಹೆಚ್ಚುವರಿ ಕೊಠಡಿ, ಅಕ್ಷರ ದಾಸೋಹದ ಅಡುಗೆ ಮನೆ ನಿರ್ಮಿಸಲಾಗಿದೆ.ಗ್ರಾಮಸ್ಥರು ಹಾಗೂ ಅನಿವಾಸಿ ಗ್ರಾಮಸ್ಥರಿಗೆ ಶಾಲೆಯ ಕುರಿತು ವಿವರಿಸಿ ಲಕ್ಷಾಂತರ ರೂ ಬೆಲೆಯ ಪೀಠೋಪಕರಣಗಳನ್ನು ಕೊಡುಗೆಯಾಗಿ ಪಡೆದಿದ್ದಾರೆ. ಶಾಲೆಯ ಸಾಧನೆ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಗಮನಿಸಿದ ಬೆಂಗಳೂರಿನ ಸಿ.ಎನ್.ಡಿ. ಕಂಪನಿ ಒಂದು ಲಕ್ಷ ರೂಪಾಯಿಯ ವಸ್ತುಗಳನ್ನು ಕೊಡುಗೆಯಾಗಿ ನೀಡಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಗ್ರಾಮದ ಸಿ.ಕೆ.ಮೂರ್ತಿ ವಿದ್ಯಾರ್ಥಿಗಳಿಗೆ ಪ್ರತಿವರ್ಷ 25 ಸಾವಿರ ರೂಪಾಯಿ ಬೆಲೆಯ ಪಾಠೋಪಕರಣ ನೀಡುತ್ತಾ ಬಂದಿದ್ದಾರೆ. ಇದಕ್ಕೆಲ್ಲಾ ಪ್ರೇಮಾ ಅವರ ಕ್ರೀಯಾಶೀಲತೆ ಮುಖ್ಯ ಕಾರಣವಾಗಿದೆ.ಶಿಕ್ಷಕಿಯಾಗಷ್ಟೆ ಅಲ್ಲದೆ, ಸಾಕ್ಷರತಾ ಕಾರ್ಯಕರ್ತೆಯಾಗಿ, ಗ್ರಾಮಾಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯ ನಿರ್ವಹಿಸಿರುವ ಇವರು ಉತ್ತಮ ಗಾಯಕಿಯೂ ಹೌದು. ಇವರ ಕ್ರೀಯಾಶೀಲತೆ, ಕರ್ತವ್ಯನಿಷ್ಠಗೆ ಹಲವಾರು ಪ್ರಶಸ್ತಿಗಳು ದೊರೆತಿದೆ.ತಾಲ್ಲೂಕು, ಜಿಲ್ಲೆ, ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದ ಇವರಿಗೆ ಇದೀಗ ಪ್ರಸಕ್ತ ಸಾಲಿನ ಅತ್ಯುತ್ತಮ ಶಿಕ್ಷಕಿ ರಾಷ್ಟ್ರ ಪ್ರಶಸ್ತಿ ದೊರೆತಿದೆ. ತಮ್ಮ ಎಲ್ಲ ಸಾಧನೆಗೆ ಗ್ರಾಮಸ್ಥರು, ಸಹಶಿಕ್ಷಕರು ಹಾಗೂ ಶಾಲಾಭಿವೃದ್ದಿ ಸಮಿತಿ ನೀಡಿದ ಸಹಕಾರ ಸ್ಫೂರ್ತಿಯೇ ಕಾರಣ ಎಂದು ವಿನಯದಿಂದ  ನುಡಿಯುವ ಇವರು ಗುರುವಾರ (ಸೆ.5) ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುವರು.

ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಇಂದು

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ 2013-14 ನೇ ಸಾಲಿಗಾಗಿ ನೀಡಲಾಗುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಗುರುವಾರ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಪ್ರಶಸ್ತಿಗೆ ಪಾತ್ರರಾದ ಶಿಕ್ಷಕರ ವಿವರ ಇಂತಿದೆ.

ಪ್ರಾಥಮಿಕ ಶಾಲಾ ವಿಭಾಗ

ದಾಕ್ಷಾಯಿಣಿ ಎಚ್.ಡಿ (ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆಲೂರು), ಪಾಂಡುರಂಗಸ್ವಾಮಿ, (ಮುಖ್ಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಲಿಕರ್ಪೂರವಳ್ಳಿ ಅರಕಲಗೂಡು), ಅಡವಿಸ್ವಾಮಿ (ಮುಖ್ಯಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಸನ ರಸ್ತೆ ಅರಸೀಕೆರೆ), ರೆಹಮತ್ ಉಲ್ಲಾಮುಶಿ (ಸಹ ಶಿಕ್ಷಕ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಸಾದಿಹಳ್ಳಿ ಬೇಲೂರು) ಎಚ್.ಪಿ. ಕುಮಾರಸ್ವಾಮಿ, (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಣತಿ ಚನ್ನರಾಯಪಟ್ಟಣ), ಡಿ. ರಮೇಶ, (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆಳಗೋಡು ಹಾಸನ) ಚಂದ್ರಶೇಖರ ಎಚ್.ವಿ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಾಕನಹಳ್ಳಿ ಹೊಳೆನರಸೀಪುರ) ಹಾಗೂ ಗೊ. ರಾ ಬಾಗೀರಥಿ, (ಸರ್ಕಾರಿ ಹಿ. ಪ್ರಾಥಮಿಕ ಶಾಲೆ, ವಣಗೂರು ಸಕಲೇಶಪುರ)ಪ್ರೌಢ ಶಾಲಾ ವಿಭಾಗ

ಎಂ.ಜಿ ಮಂಜುನಾಥ (ಸಹಶಿಕ್ಷಕ  ಮರುಳ ಸಿದ್ದೆೀಶ್ವರ ಸ್ಮಾರಕ ನಾಗಸಮುದ್ರ ಶಿಖರಣ್ಣ ಪ್ರೌಢಶಾಲೆ ಬೆಂಡೇಕೆರೆ ಅರಸೀಕೆರೆ), ಶಿವನಗೌಡ ಪಾಟೀಲ, (ಸರ್ಕಾರಿ ಪ್ರೌಢಶಾಲೆ ಸಂತೆಮೈದಾನ, ಚನ್ನರಾಯಪಟ್ಟಣ), ವೆಂಕಟೇಶ ಎಚ್. ಎಸ್(ಸರ್ಕಾರಿ ಪ್ರೌಢಶಾಲೆ ದೊಡ್ಡಕೊಂಡಗುಳ ಹಾಸನ) ಎಸ್.ಎಂ. ದೇವರಾಜೇಗೌಡ, (ವೆಂಕಟೇಶ್ವರ ಪ.ಪೂ.ಕಾ. ಹಾಸನ ಪ್ರೌಢಶಾಲಾ ವಿಭಾಗ), ಚಂದ್ರಶೇಖರ (ಬಾಲಕಿಯರ ಸ.ಪ.ಪೂ. ಕಾಲೇಜು ಹೊಳೆನರಸೀಪುರ)ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರು ಒಂದು ಗಂಟೆ ಮುಂಚಿತವಾಗಿ ಕಾರ್ಯಕ್ರಮದಲ್ಲಿ ಹಾಜರಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಆರ್. ಬಸವರಾಜ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry