ಕ್ರೌರ್ಯದ ಎದೆಬಿರಿದು...

7

ಕ್ರೌರ್ಯದ ಎದೆಬಿರಿದು...

Published:
Updated:
ಕ್ರೌರ್ಯದ ಎದೆಬಿರಿದು...

1936-39ರ ಅವಧಿಯಲ್ಲಿ ಸ್ಪೇನ್‌ನಲ್ಲಿ ಅಂತರ್‌ಯುದ್ಧ ಘಟಿಸಿತು. ದೇಶದ ಲಕ್ಷಾಂತರ ಜನ ಪ್ರಾಣ ತೆತ್ತರು. `ಗೆರ್ನಿಕಾ~ (Guernica) ಈ ಯುದ್ಧಕ್ಕೆ ಬಲಿಯಾದ ನತದೃಷ್ಟ ನಗರಗಳಲ್ಲಿ ಒಂದು. ಅದು 1937ರ ಏಪ್ರಿಲ್ 26ರ ಆಸುಪಾಸು. ಈ ಚಿಕ್ಕ ನಗರದ ಮೇಲೆ ಹಿಟ್ಲರ್‌ನ ಸಹಾಯ ಪಡೆದು ದಾಳಿ ನಡೆಯಿತು.ಮುನ್ನೂರಕ್ಕೂ ಹೆಚ್ಚು ಬಾಂಬ್‌ಗಳನ್ನು ವಿಮಾನಗಳಿಂದ ಸುರಿಯಲಾಯಿತು. ಓಡಿ ಹೋಗಲು ಯತ್ನಿಸಿದವರನ್ನು ಮೆಷಿನ್‌ಗನ್‌ಗಳು ಹೊಸಕಿ ಹಾಕಿದವು. 1600ಕ್ಕೂ ಹೆಚ್ಚು ಜನ ಹತರಾದರು. ಬದುಕುಳಿದವರ ಕಷ್ಟಗಳಿಗೆ ಅಂತ್ಯವೇ ಇಲ್ಲವಾಯಿತು.ಈ ಅಮಾನವೀಯತೆ ವಿಶ್ವವನ್ನೇ ತಲ್ಲಣಗೊಳಿಸಿತು. ಸಾವಿರಾರು ಬುದ್ಧಿಜೀವಿಗಳು, ಕಲಾವಿದರ ಭಾವನೆಗಳನ್ನು ಬಡಿದೆಬ್ಬಿಸಿತು. ವಿಶ್ವಪ್ರಸಿದ್ಧ ಕಲಾವಿದ ಪಾಬ್ಲೊ ಪಿಕಾಸೊ (1881-1973) ಯುದ್ಧದ ವಿರುದ್ಧ ಸ್ವರ ಎತ್ತಿದ. ತನ್ನ ಸ್ವಂತ ದೇಶವಾದ ಸ್ಪೇನ್‌ನ ಅಂತರ್‌ಯುದ್ಧ ಆತನನ್ನು ಘಾಸಿಗೊಳಿಸಿತು.

 

ಗೆರ್ನಿಕಾ ನಗರದ ಮೇಲೆ ಎಸಗಲಾದ ಈ ಅತ್ಯಾಚಾರವನ್ನು ಪ್ರಪಂಚಕ್ಕೆ ತಿಳಿಸಲೆಂಬಂತೆ, ಯುದ್ಧದ ಘೋರ ಪರಿಣಾಮಗಳ ರೂಪಕದಂತಿರುವ ಕಲಾಕೃತಿ ಒಂದನ್ನು ಆತ ರಚಿಸಿದ. ಅದೇ `ಗೆರ್ನಿಕಾ~. ಅದ್ಭುತ ತುಮುಲವೊಂದನ್ನು ಸೃಷ್ಟಿಸಿದ ಈ ಕಲಾಕೃತಿ ರಚಿಸುವ ಮುನ್ನ ಆತ ಹಲವು ಬಿಡಿಚಿತ್ರಗಳನ್ನು (ಸ್ಕೆಚ್) ತಯಾರಿಸಿಕೊಂಡಿದ್ದ.ಅಂತಿಮವಾಗಿ 11.6 ಅಡಿ ಎತ್ತರ ಹಾಗೂ 25.6 ಅಗಲವಿರುವ ಕ್ಯಾನ್ವಾಸ್ ಮೇಲೆ ಯುದ್ಧದ ಭೀಕರತೆಯನ್ನು ಕಟ್ಟಿಕೊಟ್ಟ. ಕಲಾಕೃತಿಯನ್ನು ಕೆಲವೇ ದಿನಗಳಲ್ಲಿ, ಅಂದರೆ 1937ರ ಮೇ ನಿಂದ ಜೂನ್ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಿದ.ಸ್ಪೇನ್ ಸರ್ಕಾರದ ಕೋರಿಕೆಯಂತೆ ರಚಿಸಲಾದ ಈ ಕಲಾಕೃತಿ ಪ್ಯಾರಿಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮೇಳದಲ್ಲಿ ಪ್ರದರ್ಶನಗೊಂಡು ಅದ್ಭುತ ಪ್ರತಿಕ್ರಿಯೆ ಪಡೆಯಿತು. ಸ್ಪೇನ್‌ನ ಇದೇ ಯುದ್ಧದ ಕುರಿತಂತೆ ಪ್ರಸಿದ್ಧ ಕಲಾವಿದ ಸಾಲ್ವಡರ್ ಡಾಲಿ ಮತ್ತಿತರರು ಕಲಾಕೃತಿಗಳನ್ನು ರಚಿಸಿದ್ದರೂ `ಗೆರ್ನಿಕಾ~ ತನ್ನ ವೈಶಿಷ್ಟ್ಯಗಳಿಂದ ಬಹಳಷ್ಟು ಜನಪ್ರಿಯತೆ ಗಳಿಸಿತು.ಮೊದಲಿನಿಂದಲೂ ಚಿತ್ರ, ಶಿಲ್ಪ, ಕಾವ್ಯಗಳಲ್ಲಿ ಯುದ್ಧದ ವೈಭವ ಹೆಚ್ಚು. ಯಾವುದು ಕ್ರೌರ್ಯದ ಕಾರಣಕ್ಕೆ ತುಚ್ಛ ಆಗಬೇಕಿತ್ತೋ ಅದು ವೀರರಸವಾಗಿ ಮಾರ್ಪಟ್ಟಿತು. ದೇಶಭಕ್ತಿ ಹೆಸರಲ್ಲಿ ಕ್ರೌರ್ಯ ತಾಂಡವವಾಡಿತು. ಸೃಜನಶೀಲ ಮನಸ್ಸುಗಳು ಆಳುವವರ ಅಥವಾ ದೇಶಭಕ್ತಿಯ ಪರವಾಗಿಯೋ ನಿಂತು ಯುದ್ಧಗಳನ್ನು ವಿಜೃಂಭಿಸಿದರು.

 

ಆದರೆ ಯುದ್ಧದ ಭೀಕರತೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಿದವರಲ್ಲಿ ಪಿಕಾಸೊ ಪ್ರಮುಖ. `ಗೆರ್ನಿಕಾ~ ಮೂಲಕ ಆತ ಅನನ್ಯ ರೀತಿಯಲ್ಲಿ ಯುದ್ಧವನ್ನು ಖಂಡಿಸಿದ. ಜನರ ನೋವಿಗೆ ಮಿಡಿದ. ಯುದ್ಧದ ವಿಧ್ವಂಸಕ ಧೋರಣೆ  `ಗೆರ್ನಿಕಾ~ ಕೃತಿಯಲ್ಲಿ ಹೇಗೆ ವ್ಯಕ್ತವಾಗಿದೆ ಎಂಬುದರ ಬಗ್ಗೆ ಜಾನ್ ಬರ್ಜರ್ ಹೀಗೆ ವಿವರಿಸುತ್ತಾನೆ: “...ಪಿಕಾಸೊ ನೈಜ ಘಟನೆಯನ್ನು ಕಲ್ಪಿಸಿಕೊಳ್ಳುವ ಯತ್ನ ಮಾಡಲಿಲ್ಲ, ಅಲ್ಲಿ ನಗರವಿಲ್ಲ, ಏರೋಪ್ಲೇನುಗಳಿಲ್ಲ, ಬಾಂಬಿನ ಸಿಡಿತವೂ ಇಲ್ಲ!

 

ಯುದ್ಧವು ಯಾವಾಗ, ಯಾವ ವರ್ಷ, ಯಾವ ದಿನ ನಡೆಯಿತೆಂಬ ಬಗ್ಗೆ ಅಥವಾ ಅದು ಸ್ಪೇನ್‌ನ ಯಾವ ಭಾಗದಲ್ಲಿ ನಡೆಯಿತೆಂಬುದರ ಬಗ್ಗೆ ಸಹ ಉಲ್ಲೇಖವಿಲ್ಲ. ಅಲ್ಲಿ ಟೀಕಿಸಲು ಶತ್ರುಗಳಿಲ್ಲ, ವೀರರಿಲ್ಲ. ಹಾಗಿದ್ದೂ ಈ ಕೃತಿಯೊಂದು ದೊಡ್ಡ ಪ್ರತಿಭಟನೆ ಎಂಬುದನ್ನು ಯುದ್ಧದ ಇತಿಹಾಸ ಗೊತ್ತಿಲ್ಲದವರೂ ಗುರುತಿಸಬಲ್ಲರು. ಹಾಗಾದರೆ ಇದರ ಪ್ರತಿಭಟನೆ ಎಲ್ಲಿದೆ? ಅದು ಅಲ್ಲಿ ದೇಹದ ಆಕಾರಗಳಿಗೆ, ಪಾದಗಳಿಗೆ, ಕುದುರೆಯ ನಾಲಿಗೆಗೆ, ತಾಯ ಮೊಲೆಗಳಿಗೆ ನಡೆಸಿರುವ ವಿಕಾರದಲ್ಲಿದೆ...”ಪಿಕಾಸೋ ಈ ಕೃತಿಯಲ್ಲಿ ಘಟನೋತ್ತರ ಪರಿಣಾಮಗಳನ್ನೇ ಆಯ್ದುಕೊಂಡು ಚಿತ್ರಿಸಿದ್ದಾನೆ. ಇಲ್ಲಿ ಪುರುಷರಗಿಂತ ಹೆಚ್ಚಾಗಿ ಮುಗ್ಧತೆಯ ಪ್ರತೀಕವಾದ ಅಮಾಯಕ ಹೆಣ್ಣುಗಳ ಆಕಾರಗಳೇ ಕಾಣಿಸುತ್ತವೆ.

 

ಮುಗಿಲತ್ತ ಚಾಚಿದ ಕೈಗಳು, ತೆರೆದ ಬಾಯಿಯಿಂದ ಹೊರಟ ಆಕ್ರಂದನ ಕೇಳಿಸಿಕೊಳ್ಳುವುದಕ್ಕಿಂತಲೂ ಪರಿಣಾಮಕಾರಿ. ಶೋಕವೆಂಬುದು ಹೊಳೆಯಾಗಿ ಹರಿದು ಮನಸ್ಸನ್ನು ತಾಗಿ ಕರುಣ ರಸವನ್ನುಕ್ಕಿಸುತ್ತದೆ. ಕತ್ತರಿಸಲ್ಪಟ್ಟು ಕೆಳಗೆ ಬಿದ್ದ ಯೋಧನ ರುಂಡ, ಕೈಕಾಲುಗಳು, ಕ್ರೌರ್ಯದ ಅಟ್ಟಹಾಸದ ಪರಾಕಾಷ್ಠೆ ತಲುಪಿ ಹೃದಯ ಹಿಂಡಿದ ಅನುಭವ ನೀಡುತ್ತವೆ.ಶೈಲಿಯ ದೃಷ್ಟಿಯಿಂದ ಈ ಕಲಾಕೃತಿ ನವ ಅಭಿವ್ಯಕ್ತಿ ((Neo-Expressionism) ವಿಧಾನಕ್ಕೆ ಸೇರಿದರೂ ಚಿತ್ರಯೋಜನೆಯು (plan) ಯುರೋಪಿನ ಸಾಂಪ್ರದಾಯಿಕ ಶಾಸ್ತ್ರೀಯ ಕ್ರಮದಲ್ಲಿದೆ.ಇಡೀ ಚಿತ್ರದ ವಿಶಾಲ ಕ್ಷೇತ್ರವನ್ನು ಪುನರುಜ್ಜೀವನ ಕಾಲದಲ್ಲಿ ಹೆಚ್ಚು ಪ್ರಚಲಿತವಿದ್ದ ತ್ರಿಚಿತ್ರ (Tryptych) ವಿಧಾನದಲ್ಲಿ ಪಿಕಾಸೊ ರಚಿಸಿದ್ದಾನೆ. ಅಂದರೆ ಮುಖ್ಯ ಸಂಗತಿಯನ್ನು ಮಧ್ಯದಲ್ಲಿರಿಸಿ ಉಳಿದವುಗಳನ್ನು ಅದರ ಎರಡೂ ಬದಿಗಳಲ್ಲಿರಿಸುವ ತಂತ್ರ. ಸ್ಥೂಲ ನೋಟಕ್ಕೆ ಮೂರೂ ಅಂಶಗಳು ಅಖಂಡವಾಗಿ ಕಾಣುವವು.

 

ನೋಡುಗನು ಕೃತಿಗೆ ಅಭಿಮುಖವಾಗಿ ನಿಂತಾಗ ಎಡಬದಿಯ ಗೂಳಿ ಹಾಗೂ ಮಗುವನ್ನೆತ್ತಿಕೊಂಡು ಮುಗಿಲಿಗೆ ಮುಖಮಾಡಿದ ಮಹಿಳೆಯ ಆಕಾರಗಳಿಂದ ದೃಷ್ಟಿಯು ಮೇಲಕ್ಕೆ ತಳ್ಳಲ್ಪಟ್ಟರೆ, ಬಲಬದಿಯಲ್ಲಿ ಕೈಚಾಚಿ ಬೀಳುತ್ತಿರುವ ಸ್ತ್ರೀಯ ಆಕಾರದಿಂದ ಕೆಳಕ್ಕೆ ತಳ್ಳಲ್ಪಡುತ್ತದೆ. ಹೀಗಾಗಿ ಕೃತಿಯ ಗರ್ಭದಲ್ಲಿನ ಆಕಾರಗಳನ್ನು ಸ್ಥಿರವಾಗಿರಿಸಿಕೊಂಡು ಎರಡೂ ಬದಿಯ ಆಕಾರಗಳಿಂದ ದೃಷ್ಟಿಯು ಮೇಲಕ್ಕೆ ಮತ್ತು ಕೆಳಕ್ಕೆ ತಳ್ಳಲ್ಪಡುವುದರ ಮೂಲಕ ನೋಡುಗನ ಕಣ್ಣು ವೃತ್ತಾಕಾರವಾಗಿ ತಿರುಗಿಸಲ್ಪಟ್ಟು;

 

ತನ್ಮೂಲಕ ದೃಶ್ಯ ಕುತೂಹಲ ಉಂಟಾಗುತ್ತದೆ. ಎಡಬದಿ ಬಿದ್ದಿರುವ ಸೈನಿಕ ಹಾಗು ಬಲಬದಿ ಮುನ್ನುಗ್ಗುತ್ತಿರುವ ಮಹಿಳೆಯ ಆಕೃತಿಗಳೆರಡೂ ಸಮತೋಲನವನ್ನುಂಟು ಮಾಡಿದ್ದರಿಂದಾಗಿ ಮಧ್ಯದಲ್ಲಿನ ಆಕಾರಗಳೂ ಸೇರಿದಂತೆ ನೋಡುಗನ ದೃಷ್ಟಿಯು ಚಿತ್ರಕ್ಷೇತ್ರದಿಂದ ಹೊರಹೋಗದಂತೆ ತಡೆದು ನಿಲ್ಲಿಸಿದಂತಾಗುತ್ತದೆ.ಪಿಕಾಸೊ ನೈಜ ಆಕೃತಿಗಳನ್ನು ಮುರಿದು ಕಟ್ಟಿರುವ, ಅತಿಶಯಿಸುವ ಬಗೆ ಕೂಡ ಕುತೂಹಲಕಾರಿ. ಎಲ್ಲೆಡೆಯ ತಿರುವಿನ ರೂಪಾಕಾರಗಳು, ಗಾಯದಿಂದ ನರಳುತ್ತಿರುವ, ರೋದಿಸುತ್ತಿರುವ ಆಕೃತಿಗಳು. ವಿಕಾರವಾಗಿರುವ, ಶೋಕನಿರತ, ತಲ್ಲಣಗೊಂಡಿರುವ ಮುಖಗಳು. ಊದಿಕೊಂಡಂತಿರುವ ಕೈಕಾಲು ಬೆರಳುಗಳು.ಮುಖದಲ್ಲಿ ಪಲ್ಲಟಗೊಂಡಂತಿರುವ ಕಣ್ಣುಗಳು- ಇವೆಲ್ಲ `ಯುದ್ಧದ ಪರಿಣಾಮ ಘನಘೋರ~ ಎನ್ನುವುದನ್ನು ಸಮರ್ಥವಾಗಿ ವ್ಯಕ್ತಮಾಡುವುದರೊಂದಿಗೆ `ವಿಕೃತಿ ಸೌಂದರ್ಯ ಮೀಮಾಂಸೆ~ಗೂ ಉತ್ತಮ ಉದಾಹರಣೆಯಾಗಿದೆ. ಪಿಕಾಸೊ ಬಳಸಿರುವ ಸಂಕೇತಗಳೂ ವಿಶೇಷ ಅರ್ಥಗಳನ್ನೇ ಬಿಂಬಿಸುತ್ತವೆ.

 

ಗ್ರೀಕ್ ಪೌರಾಣಿಕ ಕೃತಿಗಳಲ್ಲಿ ಬರುವ ಗೂಳಿ, ಮಿನೋಟಾರ್ (ಪ್ರಾಣಿಯಂತಹ ವ್ಯಕ್ತಿ), ಕುದುರೆ, ಹೆಣ್ಣುಗಳು ಹಾಗೂ ಸ್ಪೇನ್ ದೇಶದ ಪೌರಾಣಿಕ ಆಚರಣೆಗಳಲ್ಲಿ ಪ್ರಚಲಿತವಿದ್ದ ಹಲವು ಸಂಕೇತಗಳನ್ನು ಬಿಂಬಿಸುವ ಮೂಲಕ ಕೃತಿಯ ಆಳ-ಅರ್ಥಗಳನ್ನು ವಿಸ್ತರಿಸಿದ್ದಾನೆ.

ಸ್ಪೇನ್ ಗೂಳಿಕಾಳಗಕ್ಕೆ ಹೆಸರಾದ ದೇಶ. ಇಲ್ಲಿಯೇ ಹುಟ್ಟಿದ ಪಿಕಾಸೊ ಪ್ರಾಯಶಃ ಸ್ಪೇನ್‌ನ ಫ್ಯಾಸಿಸ್ಟ್ ಆಡಳಿತಗಾರ ಫ್ರಾಂಕೋವಿನ (ಸರ್ವಾಧಿಕಾರಿ) ಸಂಕೇತವಾಗಿ ಮಿನೋಟಾರ್‌ನಂತಹ ಗೂಳಿಯನ್ನು ಚಿತ್ರದಲ್ಲಿ ಪ್ರತಿಮೆಯಾಗಿಸಿರುವನು.

 

ಪಿಕಾಸೊ ಪ್ರಯೋಗಶೀಲ - ಬೌದ್ಧಿಕ ಕಲಾವಿದ ಎಂಬುದನ್ನು ಆತ ಬಳಸಿರುವ ಈ ಸಂಕೇತಗಳಿಂದ ತಿಳಿಯಬಹುದು. ಪ್ರಾಯಶಃ, ಫ್ರಾಂಕೋವಿನ ಸರ್ವಾಧಿಕಾರದ ವಿರುದ್ಧ ಪ್ರತಿಭಟಿಸುವ ದೃಢತೆಯುಳ್ಳ ಜನರ ಸಂಕೇತವಾಗಿ ಕುದುರೆ ನಿಂತಿದೆ. ಕುದುರೆ ಮತ್ತು ಗೂಳಿಗಳ ನಡುವೆ ವಿಹ್ವಲಗೊಂಡಿರುವ ಹಕ್ಕಿಯೊಂದಿದೆ.

 

ಗಾಯಗೊಂಡ ಮಗುವನ್ನು ಹಿಡಿದು ಮೇಲೆ ನೋಡುತ್ತ ಶೋಕಿಸುತ್ತಿರುವ ಯುವತಿಯನ್ನು 14ನೇ ಶತಮಾನದ ಹೆಸರಾಂತ ಶಿಲ್ಪ `ಪಿಯೆಟಾ~ (ಕ್ರಿಸ್ತನ ಕಳೇಬರವನ್ನು ಹೊತ್ತು ದುಃಖಿಸುತ್ತಿರುವವಳು) ಮಾದರಿಯಲ್ಲಿ ಚಿತ್ರಿತವಾಗಿದ್ದರೆ, ಉರಿಯುತ್ತಿರುವ ಲ್ಯಾಂಪ್ ಅನ್ನು ಕೈಚಾಚಿ ಹಿಡಿದಿರುವ ಮಹಿಳೆಯು ಅಮೆರಿಕದ ವಿಶ್ವಪ್ರಸಿದ್ಧ `ಲಿಬರ್ಟಿ~ ಶಿಲ್ಪವನ್ನು ನೆನಪಿಸುವಂತಿದೆ.

 

ಬಿದ್ದಿರುವ ಯೋಧನ ಬಲಗೈ ತುಂಡಾದ ಕತ್ತಿಯನ್ನು ಬಲವಾಗಿ ಹಿಡಿದಿದ್ದು ಅದು ಯುದ್ಧೋನ್ಮಾದದ ಸ್ವಾಭಾವಿಕ ಮನೋಭಾವವನ್ನು ಬಿಂಬಿಸಿದೆ. ಯುದ್ಧದಲ್ಲೂ ಜೀವಿಸಬೇಕೆನ್ನುವ ಬತ್ತದ ಸೆಲೆ ಇರುವುದನ್ನು ಕೈಯಲ್ಲಿ ಹಿಡಿಸಿದ ಸಣ್ಣ ಸಸ್ಯವೊಂದು ಸಂಕೇತಿಸುತ್ತಿದೆ.ಕಲಾಕೃತಿಯಲ್ಲಿ ಚಿತ್ರಿತಗೊಂಡ ಆಕೃತಿಗಳೆಲ್ಲ ಕಾಗದದಲ್ಲಿ ಕತ್ತರಿಸಿ ಅಂಟಿಸಿದಂತೆ ಕಾಣುತ್ತವೆ. ಮತ್ತು ಚಿತ್ರಕ್ಷೇತ್ರದ ಚೌಕಟ್ಟಿನಿಂದ ಮುನ್ನುಗ್ಗಿ ಬರುವಂತೆ ಭಾಸವಾಗುತ್ತವೆ. ಈ ಬಗೆಯ ನಿರ್ವಹಣೆ ಪಿಕಾಸೋನಲ್ಲಿ ಅಪರೂಪದ್ದೇ.ಬಾಂಬ್‌ಗಳನ್ನು ಸುರಿದದ್ದೂ ಹಗಲಲ್ಲಿಯೇ. ಆದರೂ ಅದರ ತೀವ್ರತೆ ಸೂಚಿಸಲು ನೇತ್ಯಾತ್ಮಕ ಅವಕಾಶದಲ್ಲಿ (Negative space) ) ಕತ್ತಲೆಯನ್ನು ನೆಳಲು ಬಣ್ಣಗಳಿಂದ ಸೂಚಿಸಿರುವನು. ಮೇಲೆ ಬಲ್ಬೊಂದನ್ನು ಉರಿಯುತ್ತಿರುವ ಕಣ್ಣಿನಂತಹ ಆಕೃತಿಯೊಳಗೆ ತೋರಿಸಿದ್ದಾನೆ; `ಬೆಳಕನ್ನು ಕತ್ತಲೆಯು ನುಂಗಿದಂತೆ~.

 

ಘಟನೆಯ ದಾರುಣತೆಯನ್ನು ಗಾಢವಾಗಿಸಲು ಚಿತ್ರಕ್ಕೆ ದುಃಖಸೂಚಕ ಬೂದು ಮತ್ತು ಬಿಳಿ ಬಣ್ಣಗಳನ್ನು ಬಹುವಾಗಿ ಬಳಸಿರುವುದು; `ಜನರ ಸುಂದರ ಬದುಕಿನ ಬಣ್ಣಗಳನ್ನೇ ಬೆಂಕಿಯು ಉಂಡು ಉಗುಳಿದಂತಹ ಅನುಭವ~. ಹಾಗಾಗಿ ಬಣ್ಣಗಳಿಗಿಂತ ಆಕೃತಿಗಳ ವಿರೂಪ, ವಿದ್ರಾವಕ ಭಂಗಿಗಳ ಕಡೆಗೇ ಪಿಕಾಸೋನ ಗಮನ ಹರಿದುದರಿಂದ ಕೃತಿ ಸರಳ ಹಾಗೂ ದಿಟ್ಟ ನಿರೂಪಣೆಗೆ ಸಾಕ್ಷಿಯಾಗಿ ಉಳಿದಿದೆ.ಖ್ಯಾತ ಕಲಾವಿಮರ್ಶಕ ಹರ್ಬರ್ಟ್ ರೀಡ್ `ಗೆರ್ನಿಕಾ~ ಬಗ್ಗೆ ಹೇಳಿರುವುದು ಹೀಗೆ- `ನಮ್ಮ ಜೀವಗಳನ್ನು ನಿಯಂತ್ರಿಸಬಯಸುವ ಕೆಡುಕಿನ ಅಪಾರ ಮೂಲಗಳಿಗೆ ಇದೊಂದು ಸ್ಮಾರಕ. ಅತ್ಯಾಚಾರ ಹಾಗು ಕ್ರೌರ‌್ಯಗಳಿಗೆ ಅಸಾಧಾರಣ ಪ್ರತಿಭಾಶಾಲಿಯ ಚೈತನ್ಯದಿಂದ ಧ್ವನಿವರ್ಧಿತಗೊಂಡ ಕೂಗು~.ಹಲವು ವರ್ಷಗಳಿಂದ ನ್ಯೂಯಾರ್ಕಿನ `ಗ್ಯಾಲರಿ ಆಫ್ ಮಾಡರ್ನ್ ಆರ್ಟ್~ನಲ್ಲಿದ್ದ ಈ ಅಮೂಲ್ಯ ಕೃತಿಯನ್ನು ಪಿಕಾಸೋನ ಜನ್ಮ ಶತಮಾನೋತ್ಸವದ ನಿಮಿತ್ತ 1981ರಲ್ಲಿ ಸ್ಪೇನ್ ದೇಶಕ್ಕೆ ತರಲಾಯಿತು. ಜನತಂತ್ರ ಸ್ಥಾಪನೆಯಾದ ಬಳಿಕ ತನ್ನ ಈ ಕೃತಿ ಸ್ಪೇನ್‌ನಲ್ಲಿ ಪ್ರದರ್ಶನಗೊಳ್ಳಬೇಕೆಂಬುದು ಪಿಕಾಸೋನ ಬಯಕೆಯಾಗಿತ್ತು. ಈಗ ಮ್ಯಾಡ್ರಿಡ್‌ನ `ಪ್ರಾಡೊ ಸಂಗ್ರಹಾಲಯ~ದಲ್ಲಿ ಗುಂಡು ನಿರೋಧಕ ಕಂಚಿನ ಕೋಣೆಯೊಳಗೆ `ಗೆರ್ನಿಕಾ~ವನ್ನು ಪ್ರದರ್ಶಿಸಲಾಗಿದೆ.(ಲೇಖಕರು ಹಂಪಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry