ಗುರುವಾರ , ಆಗಸ್ಟ್ 22, 2019
21 °C
10 ದಿನದೊಳಗೆ ಮಾರ್ಗಸೂಚಿ ಪ್ರಕಟ: ಸಚಿವ ಜಾರ್ಜ್

ಕ್ಲಬ್, ವಿಡಿಯೊ ಪಾರ್ಲರ್‌ಗೆ ಲಗಾಮು

Published:
Updated:

ಬೆಂಗಳೂರು: ರಿಕ್ರಿಯೇಷನ್ ಕ್ಲಬ್‌ಗಳು ಮತ್ತು ವಿಡಿಯೊ ಪಾರ್ಲರುಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುವುದನ್ನು ತಡೆಯಲು ಕಟ್ಟುನಿಟ್ಟಿನ ಮಾರ್ಗಸೂಚಿ ರೂಪಿಸುತ್ತಿದ್ದು, ಹತ್ತು ದಿನಗಳೊಳಗೆ ಪ್ರಕಟಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ತಿಳಿಸಿದರು.ವಿಧಾನಸೌಧದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಡಿಸ್ಕೋಥೆಕ್‌ಗಳು ಮತ್ತು ಕ್ಲಬ್‌ಹೌಸ್‌ಗಳ ನಿಯಂತ್ರಣಕ್ಕೆ ಈಗಾಗಲೇ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಇದೂ ಸಹ ಅದೇ ಮಾದರಿಯಲ್ಲಿ ಇರುತ್ತದೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಮತ್ತು ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದು ಹೇಳಿದರು.ರಿಕ್ರಿಯೇಷನ್ ಕ್ಲಬ್‌ಗಳು ಮತ್ತು ವಿಡಿಯೊ ಪಾರ್ಲರುಗಳಲ್ಲಿ ಕೌಶಲ ಆಧಾರಿತ ಕ್ರೀಡೆಗಳಿಗೆ (ಸ್ಕಿಲ್ ಗೇಮ್) ಮಾತ್ರ ಅವಕಾಶವಿದೆ. ಆದರೆ, ಹಲವು ಕಡೆಗಳಲ್ಲಿ ಜೂಜು ನಡೆಯುತ್ತಿದೆ ಎಂಬ ದೂರುಗಳು ಬಂದಿವೆ.ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳು ಜಾರಿಯಲ್ಲಿಲ್ಲ. ಆದ್ದರಿಂದ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ `ಸ್ಕಿಲ್ ಗೇ'   ಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಮಾರ್ಗಸೂಚಿ ಉಲ್ಲಂಘನೆಗೆ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.`ಸ್ಕಿಲ್ ಗೇಮ್' ಕೇಂದ್ರಗಳ ನೋಂದಣಿ ಕಡ್ಡಾಯಗೊಳಿಸುವುದು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ಕಣ್ಗಾವಲು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ.ರಾಜ್ಯದ ಎಲ್ಲಾ ಕಡೆಗಳಿಗೂ ಅನ್ವಯವಾಗುವಂತೆ ನಿಯಮ ರೂಪಿಸಲಾಗುವುದು. ಶಾಲಾ-ಕಾಲೇಜು ವಿದ್ಯಾರ್ಥಿಗಳು `ಸ್ಕಿಲ್ ಗೇಮ್' ಹೆಸರಿನಲ್ಲಿ ಜೂಜಾಟದಲ್ಲಿ ತೊಡಗುವುದನ್ನೂ ನಿಯಂತ್ರಿಸಲಾಗುವುದು ಎಂದು ತಿಳಿಸಿದರು.ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ದೂರುಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, `ರಾಜಧಾನಿಯ ವ್ಯಾಪ್ತಿಯಲ್ಲಿ ಜನಸಂಖ್ಯೆ ಅತ್ಯಂತ ವೇಗದಲ್ಲಿ ಬೆಳೆಯುತ್ತಿದೆ. ನಗರಕ್ಕೆ ಬಂದು ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಈ ಕಾರಣದಿಂದ ಅಪರಾಧಗಳ ಸಂಖ್ಯೆಯಲ್ಲೂ ಏರಿಕೆ ಆಗುತ್ತಿದೆ.ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ದಕ್ಷ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಪರಾಧ ಹತ್ತಿಕ್ಕಲು ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ' ಎಂದರು.ವರ್ಗಾವಣೆ ಇಲ್ಲ

ಲೋಕಸಭಾ ಉಪ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಬೆಂಗಳೂರು ನಗರದ ವ್ಯಾಪ್ತಿಯಲ್ಲೂ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡುವಂತಿಲ್ಲ. ಚುನಾವಣೆ ಬಳಿಕ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ನಡೆಯಲಿದ್ದು, ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಪ್ರದೇಶಗಳಿಗೆ ದಕ್ಷ ಅಧಿಕಾರಿಗಳನ್ನು ನಿಯೋಜಿಸಲಾಗುವುದು.ನಗರದ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಆರು ತಿಂಗಳೊಳಗೆ 800 ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೇವೆಗೆ ಲಭ್ಯವಾಗಲಿದ್ದಾರೆ ಎಂದು ಹೇಳಿದರು. ಪೊಲೀಸ್ ಸಿಬ್ಬಂದಿ ಕೊರತೆ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಗೃಹರಕ್ಷಕರನ್ನು ಬಳಸಿಕೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.ಅವರಿಗೆ ನೀಡುತ್ತಿದ್ದ ಗೌರವಧನದ ಮೊತ್ತವನ್ನು ಪ್ರತಿ ದಿನಕ್ಕೆ ರೂ 250 ಗಳಿಂದ ರೂ 300ಗೆ ಹೆಚ್ಚಳ ಮಾಡಲಾಗಿದೆ ಎಂದರು.

Post Comments (+)