ಕ್ವಾರ್ಟರ್ ಫೈನಲ್‌ಗೆ ಸ್ಪೇನ್

7

ಕ್ವಾರ್ಟರ್ ಫೈನಲ್‌ಗೆ ಸ್ಪೇನ್

Published:
Updated:
ಕ್ವಾರ್ಟರ್ ಫೈನಲ್‌ಗೆ ಸ್ಪೇನ್

ಗಡಾನ್‌ಸ್ಕ್ (ರಾಯಿಟರ್ಸ್): ಪಂದ್ಯ ಕೊನೆಗೊಳ್ಳಲು ಕೇವಲ ಎರಡು ನಿಮಿಷಗಳಿರುವಾಗ ಜೀಸಸ್ ನವಾಸ್ ತಂದಿತ್ತ ಗೋಲಿನ ನೆರವಿನಿಂದ ಕ್ರೊವೇಷಿಯ ತಂಡವನ್ನು 1-0 ರಲ್ಲಿ ಮಣಿಸಿದ ಸ್ಪೇನ್ `ಯೂರೊ -2012~ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.ಸ್ಪೇನ್ ತಂಡ ಒಟ್ಟು ಏಳು ಪಾಯಿಂಟ್‌ಗಳೊಂದಿಗೆ `ಸಿ~ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಐದು ಪಾಯಿಂಟ್ ಪಡೆದ ಇಟಲಿ `ಸಿ~ ಗುಂಪಿನ ಎರಡನೇ ತಂಡವಾಗಿ ಎಂಟರಘಟ್ಟಕ್ಕೆ ಲಗ್ಗೆಯಿಟ್ಟಿತು. ಪೊಜ್ನಾನ್‌ನಲ್ಲಿ ನಡೆದ ಪಂದ್ಯದಲ್ಲಿ ಇಟಲಿ 2-0 ಗೋಲುಗಳಿಂದ ಐರ್ಲೆಂಡ್ ವಿರುದ್ಧ ಜಯ ಪಡೆಯಿತು.ಗಡಾನ್‌ಸ್ಕ್‌ನ ಪಿಜಿಎ ಅರೆನಾ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಸ್ಪೇನ್ ಮತ್ತು ಕ್ರೊಯೇಷಿಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿತ್ತು. ಜಿದ್ದಾಜಿದ್ದಿನ ಪೈಪೋಟಿಯ ಕೊನೆಯಲ್ಲಿ ಹಾಲಿ ಚಾಂಪಿಯನ್ ಸ್ಪೇನ್ ಗೆಲುವಿನ ನಗು ಬೀರಿತು.ಸ್ಪೇನ್ ತಂಡಕ್ಕೆ ಕ್ರೊವೇಷಿಯ ರಕ್ಷಣಾ ವಿಭಾಗದಲ್ಲಿ ಬಿರುಕು ಉಂಟುಮಾಡಲು 88ನೇ ನಿಮಿಷದವರೆಗೆ ಕಾಯಬೇಕಾಗಿ ಬಂತು. ಸೆಸ್ ಫ್ಯಾಬ್ರೆಗಸ್ ಅವರು ಗೆಲುವಿನ ಗೋಲಿಗೆ ಹಾದಿಯೊದಗಿಸಿದರು. ಫ್ಯಾಬ್ರೆಗಸ್ ಅವರು ಚೆಂಡನ್ನು ಎದುರಾಳಿ ತಂಡದ ರಕ್ಷಣಾ ಆಟಗಾರರ ತಲೆ ಮೇಲಿಂದ ಆ್ಯಂಡ್ರೀಸ್ ಇನೀಸ್ತಗೆ ಪಾಸ್ ನೀಡಿದರು. ಕ್ರೊವೇಷಿಯ ಗೋಲ್‌ಕೀಪರ್ ಸ್ಟಿಪ್ ಪ್ಲೆಟಿಕೋಸಾ ಚೆಂಡನ್ನು ತಡೆಯಲು ಇನೀಸ್ತ ಅವರತ್ತ ಮುನ್ನುಗ್ಗಿದರು. ಆದರೆ ತಮ್ಮ ಕಾಲ್ಚಳಕ ತೋರಿದ ಇನೀಸ್ತ ಅವರು ನವಾಸ್‌ಗೆ ನಿಖರ ಪಾಸ್ ನೀಡಿದರು. ಚೆಂಡನ್ನು ನೆಟ್‌ನೊಳಕ್ಕೆ ತಳ್ಳುವಲ್ಲಿ ನವಾಸ್ ಯಾವುದೇ ತಪ್ಪು ಮಾಡಲಿಲ್ಲ.ವಿಶ್ವಚಾಂಪಿಯನ್ ಸ್ಪೇನ್ ತಂಡಕ್ಕೆ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಲು ಆಗಲಿಲ್ಲ. ಆದರೂ ಕೊನೆಯಲ್ಲಿ ಪೂರ್ಣ ಮೂರು ಪಾಯಿಂಟ್ ಗಿಟ್ಟಿಸಿಕೊಂಡು, ಎದುರಾಳಿಯ ಕ್ವಾರ್ಟರ್ ಫೈನಲ್ ಪ್ರವೇಶದ ಕನಸನ್ನು ನುಚ್ಚುನೂರು ಮಾಡಿತು.ಕ್ರೊವೇಷಿಯ ತಂಡ ಸ್ಟ್ರೈಕರ್ ಮಾರಿಯೊ ಮಾಂಡ್‌ಜುಕಿಕ್ ನೆರವಿನಿಂದ ಆಗಿಂದಾಗ್ಗೆ ಗೋಲು ಗಳಿಸುವ ಪ್ರಯತ್ನ ನಡೆಸುತ್ತಲೇ ಇತ್ತು. ಆದರೆ ಸ್ಪೇನ್ ತಂಡದ ರಕ್ಷಣಾ ಆಟಗಾರರು ಮತ್ತು ಗೋಲ್‌ಕೀಪರ್ ಇಕರ್ ಕ್ಯಾಸಿಲ್ಲಾಸ್ ಎಲ್ಲ ಪ್ರಯತ್ನಗಳನ್ನು ಯಶಸ್ವಿಯಾಗಿ ತಡೆದರು.59ನೇ ನಿಮಿಷದಲ್ಲಿ ಇವಾನ್ ರ‌್ಯಾಕ್ಟಿಕ್ ಅವರು ನೆಟ್‌ನ ತೀರಾ ಸನಿಹದಲ್ಲಿ ಹೆಡ್ ಮಾಡಿದ ಚೆಂಡನ್ನು ಕ್ಯಾಸಿಲ್ಲಾಸ್ ಅದ್ಭುತ ರೀತಿಯಲ್ಲಿ ತಡೆದರು. ಈ ಪಂದ್ಯದಲ್ಲಿ ಸೋಲು ಎದುರಾಗಿದ್ದಲ್ಲಿ, ಸ್ಪೇನ್ ಟೂರ್ನಿಯಿಂದ ಹೊರಬೀಳುತ್ತಿತ್ತು.`ನಮ್ಮ ಒಟ್ಟಾರೆ ಪ್ರದರ್ಶನ ತೃಪ್ತಿಕರವಾಗಿರಲಿಲ್ಲ. ಆದರೆ ನಾವು ಪಂದ್ಯದಲ್ಲಿ ಪ್ರಭುತ್ವ ಸಾಧಿಸಿದೆವು~ ಎಂದು ಸ್ಪೇನ್ ಕೋಚ್ ವಿನ್ಸೆಂಟ್ ಡೆಲ್ ಬಾಸ್ಕ್ ಪ್ರತಿಕ್ರಿಯಿಸಿದ್ದಾರೆ.ಇಟಲಿಗೆ ಜಯ: ಪೊಜ್ನಾನ್‌ನ ಸಿಟಿ ಕ್ರೀಡಾಂಗಣದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಟಲಿ ಪೂರ್ಣ ಪ್ರಭುತ್ವ ಮೆರೆಯಿತು. ಆ್ಯಂಟೋನಿಯೊ ಕ್ಯಾಸಾನೊ (35ನೇ ನಿಮಿಷ) ಮತ್ತು ಮಾರಿಯೊ ಬಲೊಟೆಲಿ (90) ಅವರು ಗೋಲು ಗಳಿಸಿ ಇಟಲಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.ಈ ಪಂದ್ಯಕ್ಕೆ ಮುನ್ನ ಕೇವಲ ಎರಡು ಪಾಯಿಂಟ್ ಹೊಂದಿದ್ದ ಇಟಲಿ ಅತಿಯಾದ ಒತ್ತಡದೊಂದಿಗೆ ಕಣಕ್ಕಿಳಿದಿತ್ತು. ಮೊದಲ 30 ನಿಮಿಷಗಳಲ್ಲಿ ಎರಡೂ ತಂಡಗಳಿಂದ ಗೋಲು ಗಳಿಸುವ ಯಾವುದೇ ಅತ್ಯುತ್ತಮ ಪ್ರಯತ್ನ ಮೂಡಿಬರಲಿಲ್ಲ.ಆದರೂ ಕ್ಯಾಸಾನೊ ತಂದಿತ್ತ ಗೋಲಿನ ನೆರವಿನಿಂದ ವಿರಾಮದ ವೇಳೆಗೆ ಇಟಲಿ 1-0 ರಲ್ಲಿ ಮುನ್ನಡೆ ಪಡೆಯಿತು. ಎರಡನೇ ಅವಧಿಯಲ್ಲೂ ಇಟಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 90ನೇ ನಿಮಿಷದಲ್ಲಿ ಬಲೊಟೆಲಿ ತಂಡದ ಮುನ್ನಡೆಯನ್ನು 2-0 ಗೆ ಹೆಚ್ಚಿಸಿದರಲ್ಲದೆ, ಗೆಲುವನ್ನು ಖಚಿತಪಡಿಸಿಕೊಂಡರು.ಇಟಲಿ ತಂಡದ ಗೋಲ್‌ಕೀಪರ್ ಗಿಯಾನ್‌ಲುಗಿ ಬಫೊನ್ ಎದುರಾಳಿ ತಂಡದ ಗೋಲು ಗಳಿಸುವ ಪ್ರಯತ್ನಕ್ಕೆ `ತಡೆಗೋಡೆ~ಯಾಗಿ ನಿಂತರು. ಐರ್ಲೆಂಡ್ ತಂಡದ ಕೀತ್ ಆ್ಯಂಡ್ರೀವ್ಸ್ 89ನೇ ನಿಮಿಷದಲ್ಲಿ ಕೆಂಪು ಕಾರ್ಡ್ (ಎರಡು ಹಳದಿ ಕಾರ್ಡ್) ಪಡೆದು ಹೊರನಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry