ಕ್ವಿಂಟಲ್‌ ಈರುಳ್ಳಿ ₨ 5,800ಕ್ಕೆ ಮಾರಾಟ

7
ಮಾರುಕಟ್ಟೆಯ 70 ವರ್ಷ ಇತಿಹಾಸದಲ್ಲಿ ದಾಖಲೆ ಬೆಲೆ

ಕ್ವಿಂಟಲ್‌ ಈರುಳ್ಳಿ ₨ 5,800ಕ್ಕೆ ಮಾರಾಟ

Published:
Updated:

ಹುಬ್ಬಳ್ಳಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬುಧವಾರ ಈರುಳ್ಳಿ ಕ್ವಿಂಟಲ್ ಗೆ ₨ 5800 ಕ್ಕೆ ಮಾರಾಟವಾಗುವ ಮೂಲಕ ಮಾರುಕಟ್ಟೆಯ 70 ವರ್ಷಗಳ ಇತಿಹಾಸದಲ್ಲಿ ದಾಖಲೆ ನಿರ್ಮಿಸಿತು.ಮಾರುಕಟ್ಟೆಗೆ ಬಂದ ಉತ್ತಮ ದರ್ಜೆಯ 99 ಕ್ವಿಂಟಲ್‌ ಪುಣೆ ಈರುಳ್ಳಿ ಗರಿಷ್ಠ ₨ 5,800ಕ್ಕೆ ಮಾರಾಟವಾಗಿದೆ. 1943ರಲ್ಲಿ ಇಲ್ಲಿನ ಕೃಷಿ ಮಾರುಕಟ್ಟೆ ಅಸ್ತಿತ್ವಕ್ಕೆ ಬಂದಿದೆ. 2010ರಲ್ಲಿ ಕ್ವಿಂಟಲ್ ಗೆ ₨ 5,500 ಹಾಗೂ ಇದೇ ವರ್ಷ ಆಗಸ್ಟ್ 17ರಂದು ಕ್ವಿಂಟಲ್ ಗೆ ₨ 5,600ಕ್ಕೆ ಮಾರಾಟ ಆಗಿದ್ದುದು ಇದುವರೆಗಿನ ದಾಖಲೆ ಬೆಲೆಯಾಗಿತ್ತು.ಈ ನಡುವೆ ಮಾರುಕಟ್ಟೆಗೆ ಸ್ಥಳೀಯ ಈರುಳ್ಳಿ ಆವಕ ಹೆಚ್ಚಾಗಿದೆ. ಬುಧವಾರ ಒಂದೇ ದಿನ 5409 ಕ್ವಿಂಟಲ್‌ ಸ್ಥಳೀಯ ಈರುಳ್ಳಿ ಆವಕವಾಗಿದೆ. ಉತ್ತಮ ದರ್ಜೆ ಸ್ಥಳೀಯ ಈರುಳ್ಳಿ ಕ್ವಿಂಟಲ್‌ ಗೆ ಗರಿಷ್ಠ ₨ 4,700ಕ್ಕೆ ಮಾರಾಟವಾಯಿತು.ವಿಜಾಪುರ ಜಿಲ್ಲೆಯಲ್ಲಿ ಬೆಳೆಯುವ ತೆಲಗಿ ತಳಿಯ ಈರುಳ್ಳಿ 2,357 ಕ್ವಿಂಟಲ್ ಬಂದಿದ್ದು, ಕ್ವಿಂಟಲ್ ಗೆ ಗರಿಷ್ಠ ₨ 4750ಕ್ಕೆ ಮಾರಾಟವಾಯಿತು.‘ಕಳೆದ ವಾರ 13,576 ಕ್ವಿಂಟಲ್ ಆವಕವಾಗಿತ್ತು. ಬೆಲೆ ಕೂಡ  ಸ್ಥಿರವಾಗಿತ್ತು. ಆದರೆ ಈ ವಾರ ಮೂರು ದಿನಗಳಲ್ಲಿಯೇ 25,557 ಕ್ವಿಂಟಲ್‌ ಬಂದಿದೆ. ಆವಕ ಹೆಚ್ಚಾಗಿದ್ದರೂ ಬೆಲೆ ಏರಿರುವುದು ಅಚ್ಚರಿ ಮೂಡಿಸಿದೆ’ ಎನ್ನುತ್ತಾರೆ ಹುಬ್ಬಳ್ಳಿಯ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಕೆ.ಕೆ.ಎಸ್‌.ವಿ. ಪ್ರಸಾದ್‌. ತಮಿಳುನಾಡಿನಿಂದ ಬೇಡಿಕೆ: ಹೊರ ರಾಜ್ಯಗಳಿಂದ ಖರೀದಿಸಿ ಸಾರ್ವ ಜನಿಕರಿಗೆ ಕಡಿಮೆ ಬೆಲೆಗೆ ಪೂರೈಸಲು ತಮಿಳುನಾಡು ಸರ್ಕಾರ ಮುಂದಾಗಿದ್ದು, ಈರುಳ್ಳಿ ಕಳುಹಿಸು ವಂತೆ ಅಲ್ಲಿನ ಕೃಷಿ ಇಲಾಖೆ ಹುಬ್ಬಳ್ಳಿ ಎಪಿಎಂಸಿಗೆ ಸೋಮವಾರ ಅಧಿಕೃತ ವಾಗಿ ಮನವಿ ಮಾಡಿದೆ.‘ತಮಿಳುನಾಡು ಕೃಷಿ ಉತ್ಪನ್ನ ಮಾರುಕಟ್ಟೆ ಒಕ್ಕೂಟದ ಹಿರಿಯ ಅಧಿಕಾರಿಗಳು ಸಂಪರ್ಕಿಸಿ ಈರುಳ್ಳಿಗೆ ಪೂರೈಕೆಗೆ ಬೇಡಿಕೆ ಇಟ್ಟಿದ್ದು, ನಮ್ಮಲ್ಲೂ ಹಂಗಾಮು ಆರಂಭವಾಗಿರುವುದರಿಂದ ಅವರ ಮನವಿಗೆ ಪೂರಕವಾಗಿ ಪ್ರತಿಕ್ರಿಯಿಸಲಾಗಿದೆ. ಇದರಿಂದ ನಮ್ಮ ಬೆಳೆಗಾರರಿಗೆ ಉತ್ತಮ ಬೆಲೆ ದೊರೆಯಲಿದೆ’ ಎಂದು ಪ್ರಸಾದ್ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry