ಕ್ಷಮಿಸಿ, ನೀವೇನಾ ಪ್ರಧಾನಿ?

7

ಕ್ಷಮಿಸಿ, ನೀವೇನಾ ಪ್ರಧಾನಿ?

Published:
Updated:

ಲಂಡನ್ (ಐಎಎನ್‌ಎಸ್/ಪಿಟಿಐ): ಕ್ಷಮಿಸಿ, ನೀವೇನಾ ಪ್ರಧಾನಿ?ಮೆಟ್ರೊ ರೈಲಿನಲ್ಲಿ ತಮ್ಮಂದಿಗೆ ಪ್ರಯಾಣ ಮಾಡುತ್ತಿದ್ದ ಇಂಗ್ಲೆಂಡಿನ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರೊಂದಿಗೆ 27 ವರ್ಷದ ಭಾರತೀಯ ಮಹಿಳೆ ಸಂಯೋಗಿತಾ ಮೈಯರ್ ಈ ಮಾತನ್ನು ದೃಢಪಡಿಸಿಕೊಳ್ಳುವಾಗ ನಿಜವಾಗಿಯೂ ಆಕೆ ಅವರನ್ನು ಪ್ರಧಾನಿ ಎಂದು ಭಾವಿಸಿರಲೇ ಇಲ್ಲ.ಡೇವಿಡ್ ಕ್ಯಾಮರಾನ್ ತಮ್ಮ ಅಂಗರಕ್ಷಕನೊಂದಿಗೆ ವೆಸ್ಟ್ ಮಿನಿಸ್ಟರ್ ನಿಲ್ದಾಣದಲ್ಲಿ ಮೆಟ್ರೊ ರೈಲನ್ನು ಏರಿದರು. ಬೋಗಿಯಲ್ಲಿ ತಮ್ಮ ಬಳಿ ನಿಂತಿದ್ದ ಸಂಯೋಗಿತಾ ಮೈಯರ್ ಅವರ 3 ತಿಂಗಳ ಪುಟ್ಟ ಕೂಸನ್ನು ನೋಡಿದ ಕ್ಯಾಮರಾನ್ `ಇದು ನಿಮ್ಮ ಮಗುವೇ~ ಎಂದು ಪ್ರಶ್ನಿಸಿದರು.ಹೌದು, ಈಕೆ ಸಂಯಮ ಎಂದರು ಸಂಯೋಗಿತಾ. `ನಿಜವಾಗಿಯೂ ತುಂಬಾ ಚೆನ್ನಾಗಿದ್ದಾಳೆ~ ಎಂದು ಪ್ರಧಾನಿ ಮೆಚ್ಚುಗೆ ಸೂಚಿಸಿದರು. ಸಂಯೋಗಿತಾ ಕೊಂಚ ತಬ್ಬಿಬ್ಬಾಗಿ, `ಯಾರೀತ ನನ್ನ ಮಗಳ ಬಗ್ಗೆ ಹೀಗೆ ಮೆಚ್ಚುಗೆ ಸೂಚಿಸುತ್ತಿದ್ದಾರಲ್ಲಾ~ ಎಂದು ತನ್ನ ಗಂಡನತ್ತ ನೋಟ ಹರಿಸಿದರು.ಆಕೆಯ ಪತಿ ಮುಗುಳ್ನಗುತ್ತಾ `ಇವರು ಪ್ರಧಾನಿ ಡೇವಿಡ್ ಕ್ಯಾಮರಾನ್~ ಎಂದಾಗ ಸಂಯೋಗಿತಾ ಇದನ್ನು ನಂಬಲೇ ಇಲ್ಲ. `ನೀವು ಜೋಕ್ ಮಾಡುತ್ತಿದ್ದೀರಾ~ ಎಂದು ಮೂಗು ಮುರಿದಳು. ನಂತರ ಅವರು ನಿಜವಾಗಿಯೂ ಪ್ರಧಾನಿ ಎಂಬುದು ಖಚಿತವಾದ ಕೂಡಲೇ ಕ್ಯಾಮರಾನ್ ಅವರತ್ತ ಮುಖ ಮಾಡಿದ ಸಂಯೋಗಿತಾ `ಕ್ಷಮಿಸಿ. ನೀವೇನಾ ಪ್ರಧಾನಿ~ ಎಂದು ಅಚ್ಚರಿ, ಕುತೂಹಲ, ಸಂಭ್ರಮದಿಂದ ಕೇಳಿದರು.ಅದಕ್ಕೆ ಕ್ಯಾಮರಾನ್ `ಹೌದಮ್ಮಾ, ನಾನು ಪ್ರಧಾನಿ~ ಎಂದರು. ಆಗ ಸಂಯೋಗಿತಾ `ಭಾರತದಲ್ಲಿ ರಾಜಕಾರಣಿಗಳು ಹೀಗೆ ಸಾರ್ವಜನಿಕರ ಜೊತೆ ಪ್ರಯಾಣಿಸುವುದಿಲ್ಲ. ನನಗೆ ಇದು ನಿಜಕ್ಕೂ ಅಚ್ಚರಿ. ನನ್ನ ಕಲ್ಪನೆಗೂ ನಿಲುಕದ್ದು. ಹೀಗಾಗಿ ತಕ್ಷಣಕ್ಕೇ ನಿಮ್ಮನ್ನು ಗುರುತಿಸಲಾಗಲಿಲ್ಲ~ ಎಂದು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದರು.ತುರ್ತು ಕೆಲಸಕ್ಕೆ ತೆರಳಬೇಕಾಗಿದ್ದರಿಂದ ಮೆಟ್ರೊ ರೈಲು ಏರಿದ್ದಾಗಿ ಸಂಯೋಗಿತಾ ಅವರಿಗೆ ವಿವರಿಸಿದ ಕ್ಯಾಮರಾನ್, ತಮ್ಮ ಇತ್ತೀಚಿನ ಭಾರತದ ಪ್ರವಾಸವನ್ನೂ ಅವರೊಂದಿಗೆ ಹಂಚಿಕೊಂಡರು ಎಂದು `ಡೈಲಿ ಮೇಲ್~ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry