ಕ್ಷಮೆಯಾಚಿಸಿದ ಮಾ. ಹಿರಣ್ಣಯ್ಯ

ಮೈಸೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವಹೇಳನಕಾರಿ ಭಾಷಣ ಮಾಡಿದ್ದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಸಭಾಂಗಣದ ವೇದಿಕೆ, ಕುರ್ಚಿಗಳನ್ನು ಧ್ವಂಸ ಮಾಡಿ, ಬ್ಯಾನರ್ ಹರಿದು ದಾಂದಲೆ ನಡೆಸಿದ ಘಟನೆ ಭಾನುವಾರ ಇಲ್ಲಿ ನಡೆಯಿತು.
ನಗರದ ನಾಗನವ ಕಲಾ ಸಾಹಿತ್ಯ ವೇದಿಕೆಯು ನಾದಬ್ರಹ್ಮ ಸಂಗೀತ ಸಭಾದಲ್ಲಿ ಏರ್ಪಡಿಸಿದ್ದ ‘ನಾಗಾಸ್ ನವಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಣ್ಣಯ್ಯ ಮಾತನಾಡಿ, ‘ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಗೆಲ್ಲುವವರೆಗೆ ವಿನಯದಿಂದ ನಡೆದುಕೊಳ್ಳುತ್ತಿದ್ದರು. ಈಗ ಗೆದ್ದು ಬೆಲೆ ಏರಿಕೆ ಮಾಡಿ ತಮ್ಮ ನಡವಳಿಕೆ ಬದಲಾಯಿಸಿಕೊಂಡಿದ್ದಾರೆ’ ಎಂದು ಹೇಳುವಾಗ ಅವಾಚ್ಯ ಶಬ್ದಗಳನ್ನು ಬಳಸಿದರು. ಇದಕ್ಕೆ ಸಭಿಕರು ಚಪ್ಪಾಳೆ ತಟ್ಟುತ್ತಿದ್ದಂತೆ ಹಿರಣ್ಣಯ್ಯ ಭಾಷಣ ಮುಂದುವರಿಸಿದರು.
ಮುಖ್ಯಮಂತ್ರಿ ವಿರುದ್ಧ ಮಾ.ಹಿರಣ್ಣಯ್ಯ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಂ.ಕೆ. ಸೋಮಶೇಖರ್ ಅಭಿಮಾನಿ ಬಳಗದವರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮಧ್ಯಾಹ್ನ ಬಂದರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ವೇದಿಕೆ ಏರಿದ ಕಾರ್ಯಕರ್ತರು, ಆಯೋಜಕರು ಮತ್ತು ಅತಿಥಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಮಾ. ಹಿರಣ್ಣಯ್ಯ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಬಹುದೆ? ಅವರು ಎಲ್ಲಿದ್ದಾರೆ?’ ಎಂದು ವೇದಿಕೆಯಲ್ಲಿ ಕುಳಿತಿದ್ದವರನ್ನು ಪ್ರಶ್ನಿಸಿದರು. ‘ಹಿರಣ್ಣಯ್ಯ ಭಾಷಣ ಮಾಡಿ ಬೆಳಿಗ್ಗೆಯೇ ಹೋಗಿದ್ದಾರೆ. ಅದು ಅವರ ವೈಯಕ್ತಿಕ ಹೇಳಿಕೆ’ ಎಂದು ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಆಯೋಜಕರು ಯತ್ನಿಸಿದರು.
ನೋಡನೋಡುತ್ತಿದ್ದಂತೆ ಪ್ರತಿಭಟನಾಕಾರರು ಕೈಗೆ ಸಿಕ್ಕಿದ್ದನ್ನು ಧ್ವಂಸ ಮಾಡಿದರು. ಇದರಿಂದ ವೇದಿಕೆಯಲ್ಲಿದ್ದವರು ಗಾಬರಿಗೊಂಡರು. ಸಭಿಕರು ಸಹ ಗಾಬರಿಗೊಂಡು ಹೊರನಡೆದರು. ಆಯೋಜಕರು ಮತ್ತು ಹಿರಣ್ಣಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಾರ್ಯಕರ್ತರು ಹೊರನಡೆದರು.
ಸಿ.ಎಂ ಎದುರು ಹಿರಣ್ಣಯ್ಯ ಕ್ಷಮೆ: ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂಬ ಸುದ್ದಿ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಂಜೆ ಮಾ. ಹಿರಣ್ಣಯ್ಯ ಶಾರದಾದೇವಿನಗರದಲ್ಲಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಖುದ್ದು ತೆರಳಿ ಕ್ಷಮೆ ಯಾಚಿಸಿದರು.
‘ಸಿದ್ದರಾಮಯ್ಯ, ನಾನು ಉತ್ತಮ ಸ್ನೇಹಿತರು. ನನ್ನ ವಯೋಮಾನದ ಸಮಸ್ಯೆಯಿಂದ ಈ ರೀತಿಯ ಮಾತು ಬಂದಿರಬಹುದು. ಆದರೆ, ಉದ್ದೇಶಪೂರ್ವಕವಾಗಿ ಆಡಿಲ್ಲ. ವ್ಯವಸ್ಥೆ ವಿರುದ್ಧ ನಾನು ನೂರಾರು ಭಾಷಣಗಳಲ್ಲಿ ಮಾತನಾಡಿದ್ದೇನೆ. ಆದ್ದರಿಂದ ಕಾಂಗ್ರೆಸ್್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ವಿಷಯವನ್ನು ದೊಡ್ಡದು ಮಾಡಬಾರದು. ಕೂಡಲೇ ನಾನು ನಾಡಿನ ಜನತೆಯ ಕ್ಷಮೆ ಯಾಚಿಸುತ್ತೇನೆ’ ಎಂದರು.
ಈ ವೇಳೆ ಮುಖ್ಯಮಂತ್ರಿ ಮನೆ ಹೊರಗೆ ಪ್ರತಿಭಟನೆ ಜೋರಾಗಿ ನಡೆಯುತ್ತಿತ್ತು. ಪ್ರತಿಭಟನಾಕಾರರ ಪೈಕಿ ಒಂದಿಬ್ಬರು ಮುಖಂಡರನ್ನು ಕರೆಯಿಸಿ ಎಂದು ಸಿದ್ದರಾಮಯ್ಯ ಆಪ್ತರಿಗೆ ಸೂಚಿಸಿದರು.
ಕೃಷ್ಣರಾಜ ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಲೋಕೇಶ್ ಪೀಯಾ ಬರುತ್ತಿದ್ದಂತೆ ‘ಮುಖ್ಯಮಂತ್ರಿ ವಿರುದ್ಧ ಮಾತನಾಡುವ ಹಕ್ಕು ಹಿರಣ್ಣಯ್ಯ ಅವರಿಗೆ ಇಲ್ಲ’ ಎಂದು ಹಿರಣ್ಣಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸಿದ್ದರಾಮಯ್ಯ ಲೋಕೇಶ್ ಪೀಯಾ ಮತ್ತು ಇತರರನ್ನು ಸಮಾಧಾನ ಮಾಡಿ ಹೊರಕಳುಹಿಸಿದರು.
‘ಸಾರ್ವಜನಿಕವಾಗಿ ಭಾಷಣ ಮಾಡಲ್ಲ’
‘ಮೈಸೂರಿನಲ್ಲಿ ಸಭೆ–ಸಮಾರಂಭಗಳಲ್ಲಿ ಕಾಣಿಸಿಕೊಂಡು ಹೆಚ್ಚು ಭಾಷಣ ಮಾಡುತ್ತಿದ್ದೆ. ಇದೀಗ ಮೈಸೂರಿನಲ್ಲಿಯೇ ಭಾಷಣ ಅಂತ್ಯ ಮಾಡುತ್ತಿದ್ದೇನೆ. ಇನ್ನು ಮುಂದೆ ಸಾರ್ವಜನಿಕವಾಗಿ ಸಭೆ–ಸಮಾರಂಭಗಳಲ್ಲಿ ಕಾಣಿಸಿಕೊಂಡು ಭಾಷಣ ಮಾಡುವುದಿಲ್ಲ’ ಎಂದು ಮಾ.ಹಿರಣ್ಣಯ್ಯ ಮಾಧ್ಯಮದ ಎದುರು ಹೇಳಿದರು.
ಕ್ಷಮೆ ಯಾಚಿಸಿದ್ದು ದೊಡ್ಡ ಗುಣ: ಸಿ.ಎಂ
‘ಹಿರಣ್ಣಯ್ಯ ರಂಗಭೂಮಿಯ ಹಿರಿಯ ಕಲಾವಿದರು. ಯಾವ ಪದ ಬಳಕೆ ಮಾಡಿ ನಿಂದಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಉದ್ದೇಶಪೂರ್ವಕವಾಗಿ ಹೇಳಿಲ್ಲ, ಬಾಯಿ ತಪ್ಪಿ ಮಾತನಾಡಿದ್ದೇನೆ ಎಂದು ಕ್ಷಮೆ ಯಾಚಿಸಿದ್ದಾರೆ. ಕ್ಷಮೆಗಿಂತ ದೊಡ್ಡ ಶಿಕ್ಷೆ ಬೇರೊಂದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪ್ರತಿಭಟನೆಯನ್ನು ಇಲ್ಲಿಗೆ ಕೈಬಿಡಬೇಕು, ಮುಂದುವರಿಸಬಾರದು’ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
ಭಾವುಕರಾದ ಮಾ.ಹಿರಣ್ಣಯ್ಯ: ಮುಖ್ಯಮಂತ್ರಿ ಮನೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳ ಪ್ರತಿಭಟನೆ ಜೋರಾಗಿ ನಡೆಯುತ್ತಿತ್ತು. ಇದನ್ನು ಅರಿತ ಹಿರಣ್ಣಯ್ಯ ಮನೆಯಿಂದ ಹೊರಡಲು ಹಿಂದೇಟು ಹಾಕಿದರು. ಸಿದ್ದರಾಮಯ್ಯ ಖುದ್ದು ಮಾ.ಹಿರಣ್ಣಯ್ಯ ಮತ್ತು ಕುಟುಂಬದವರನ್ನು ಮನೆಯಿಂದ ಹೊರಗಡೆ ಕರೆತಂದು ಪೊಲೀಸ್ ಬಂದೋಬಸ್ತ್ನಲ್ಲಿ ಕಾರು ಹತ್ತಿಸಿದರು. ಕಾರು ಮೈಸೂರು ಗಡಿ ದಾಟುವವರೆಗೂ ರಕ್ಷಣೆ ನೀಡಬೇಕು ಎಂದು ಡಿಸಿಪಿ (ಅಪರಾಧ–ಸಂಚಾರ) ಕಲಾ ಕೃಷ್ಣಸ್ವಾಮಿ ಅವರಿಗೆ ಸೂಚಿಸಿದರು. ಈ ವೇಳೆ ಭಾವುಕರಾದ ಹಿರಣ್ಣಯ್ಯ ಸಿ.ಎಂಗೆ ಕೈ ಮುಗಿದು ಹೊರಟರು. ಪೊಲೀಸ್ ಬಂದೋಬಸ್ತ್ನಲ್ಲಿ ಹಿರಣ್ಣಯ್ಯ ಬೆಂಗಳೂರಿಗೆ ತೆರಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.