ಶನಿವಾರ, ಮೇ 28, 2022
30 °C

ಕ್ಷಮೆ ಕೇಳಲು ಆಚಾರ್ಯಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕುಲಪತಿ ಡಾ.ಎನ್.ಪ್ರಭುದೇವ್ ಮತ್ತು ಸದಸ್ಯ ಡಾ.ಕೆ.ವಿ.ಆಚಾರ್ಯ ಅವರ ಮಧ್ಯೆ ಬುಧವಾರ ನಡೆದ ಮಾತಿನ ಚಕಮಕಿಯು ಇದೀಗ ಗಂಭೀರ ಸ್ವರೂಪ ಪಡೆದಿದ್ದು, ಕುಲಪತಿಗಳಿಗೆ ಆಚಾರ್ಯ ಅಸಂಸದೀಯ ಭಾಷೆ ಬಳಸಿದ್ದಾರೆಂದು ಆರೋಪಿಸಿ, ‘ನಾಲ್ಕು ದಿನಗಳೊಳಗಾಗಿ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ಬರುವ ಸಿಂಡಿಕೇಟ್ ಸಭೆಗೆ ಆಹ್ವಾನ ನೀಡಲಾಗುವುದಿಲ್ಲ’ ಎಂದು ಗುರುವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.ಡಾ.ಆಚಾರ್ಯ ಅವರು ಕುಲಪತಿಗಳಲ್ಲದೇ ಸಿಂಡಿಕೇಟ್ ಸದಸ್ಯ ಪ್ರೊ.ಕೆ.ಪುಟ್ಟರಾಜು ಅವರ ಜಾತಿಯನ್ನು ಬಳಸಿ ಕೆಲ ಮಾತುಗಳನ್ನಾಡಿದ್ದಾರೆ. ಆದ್ದರಿಂದ ಈ ನಡೆಗಾಗಿ ಅವರು ಸಭೆಯ ಕ್ಷಮೆ ಕೇಳಬೇಕು ಎಂದು ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಮುಂದಿನ ಕ್ರಮಕ್ಕೆ ಆಗ್ರಹಿಸಿ ಕುಲಾಧಿಪತಿಗಳೂ ಆದ ರಾಜ್ಯಪಾಲರಿಗೆ ತಿಳಿಸಲಾಗುವುದು ಎಂದು ವಿವಿ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಂಪೂರ್ಣ ಬಹುಮತವೇ?: ಡಾ.ಆಚಾರ್ಯ ಕ್ಷಮಾಪಣೆ ಕೇಳುವುದಕ್ಕೆ ಸಂಬಂಧಿಸಿದಂತೆ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾಪವೇ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. ವಿವಿ ಪತ್ರಿಕೆಗಳಿಗೆ ತಲುಪಿಸಿದ ಪ್ರಕಟಣೆಯಲ್ಲಿ ಸಿಂಡಿಕೇಟ್ ಸಭೆ ‘ಸಂಪೂರ್ಣ ಬಹುಮತದೊಂದಿಗೆ’ ಈ ನಿರ್ಣಯವನ್ನು ಅಂಗೀಕರಿಸಿದೆ ಎಂದು ಹೇಳಲಾಗಿದೆ. ಆದರೆ ಈ ವಿಷಯ ಅಲ್ಲಿ ಪ್ರಸ್ತಾಪಕ್ಕೇ ಬರಲಿಲ್ಲ. ಬಂದಿದ್ದರೆ ನಾವೇ ವಿರೋಧಿಸುತ್ತಿದ್ದೆವು ಎಂದು ಸಿಂಡಿಕೇಟ್ ಸದಸ್ಯರೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.