ಕ್ಷಮೆ ಕೇಳಲು ಗಡುವು ಸಿದ್ಧಾರ್ಥ್‌ಗೆ ನೋಟಿಸ್

7

ಕ್ಷಮೆ ಕೇಳಲು ಗಡುವು ಸಿದ್ಧಾರ್ಥ್‌ಗೆ ನೋಟಿಸ್

Published:
Updated:
ಕ್ಷಮೆ ಕೇಳಲು ಗಡುವು ಸಿದ್ಧಾರ್ಥ್‌ಗೆ ನೋಟಿಸ್

ನವದೆಹಲಿ (ಪಿಟಿಐ): ಅಮೆರಿಕದ ಜೊಹಾಲ್ ಹಮೀದ್ ಎಂಬಾಕೆಯ ಮಾನಭಂಗಕ್ಕೆ ಯತ್ನಿಸಿದ ಆರೋಪ ಹೊತ್ತಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಲೂಕ್ ಪಾಮರ್ಸ್‌ಬ್ಯಾಚ್ ತಮಗೆ ಜಾಮೀನು ಸಿಕ್ಕಿರುವುದಕ್ಕೆ ಸಂತಸಗೊಂಡಿದ್ದರೆ, ಇನ್ನೊಂದೆಡೆ ಆರ್‌ಸಿಬಿ ತಂಡದ ನಿರ್ದೇಶಕ ಸಿದ್ಧಾರ್ಥ್ ಮಲ್ಯ 48 ಗಂಟೆಗಳಲ್ಲಿ ಈ ಮಹಿಳೆಯ ಕ್ಷಮೆ ಕೇಳಬೇಕೆನ್ನುವ ಸಂಕಷ್ಟದಲ್ಲಿ ಸಿಲುಕಿದ್ದಾರೆ.ಆರೋಪಿ ಲೂಕ್ ಇಲ್ಲಿನ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನಿಗೆ ಒಪ್ಪಿದ ನ್ಯಾಯಾಲಯವು ರೂ. 30,000 ಮೊತ್ತದ ಎರಡು ಭದ್ರತಾ ಬಾಂಡ್ ನೀಡಲು ಸೂಚಿಸಿತು. ಅಷ್ಟೇ ಅಲ್ಲ ಪಾರ್ಸ್‌ಪೋರ್ಟ್‌ನ್ನು ತನ್ನ ವಶಕ್ಕೆ ನೀಡುವಂತೆಯೂ ಹೇಳಿತು.ಈ ನಡುವೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಸಂದೇಶ ಹರಿಬಿಟ್ಟ ಸಿದ್ಧಾರ್ಥ್ ತನ್ನ ತೇಜೋವಧೆ ಮಾಡಿದ್ದು, ಅದಕ್ಕಾಗಿ ಕ್ಷಮೆ ಕೇಳಲೇಬೇಕು ಎಂದು ದೂರು ನೀಡಿರುವ ಅಮೆರಿಕ ಮಹಿಳೆಯು ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ.`ಸಿದ್ಧಾರ್ಥ್ ನನ್ನ ಚಾರಿತ್ರ್ಯ ಹಾನಿ ಮಾಡಿದ್ದಾರೆ. ಆದ್ದರಿಂದ 48 ಗಂಟೆಯೊಳಗೆ ಅವರು ಕ್ಷಮೆ ಕೋರಬೇಕು~ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬೇಕೆಂದು ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯೂ)ಕ್ಕೆ  ದೂರು ಕೊಟ್ಟಿದ್ದಾರೆ.`ಸೋಮವಾರ ಪರಿಶೀಲಿಸಿ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ~ ಎಂದು ಡಿಸಿಡಬ್ಲ್ಯೂ ಅಧ್ಯಕ್ಷೆ ಬರ್ಖಾ ಸಿಂಗ್ ಭರವಸೆ ನೀಡಿದ್ದಾರೆ.ಭಾರತದ ಕಾನೂನು ಮೇಲೆ ನಂಬಿಕೆ: ಶನಿವಾರ ನ್ಯಾಯಾಲಯಕ್ಕೆ ಹಾಜರಾಗಿದ್ದ ಲೂಕ್ ಪಾಮರ್ಸ್‌ಬ್ಯಾಚ್ ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ `ಭಾರತದ ಕಾನೂನು ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದೆ~ ಎಂದರು.`ಜಾಮೀನು ಸಿಕ್ಕಿರುವುದು ನನಗೆ ಭಾರತದ ನ್ಯಾಯಾಂಗದಲ್ಲಿ ಹೆಚ್ಚು ವಿಶ್ವಾಸ ಹೊಂದುವಂತೆ ಮಾಡಿದೆ. ನನ್ನ ಅರ್ಜಿಯನ್ನು ನ್ಯಾಯಾಧೀಶರು ಪರಿಗಣಿಸಿದ್ದರಿಂದ ನಾನು ಸಮಾಧಾನದಿಂದ ಇರಲು ಸಾಧ್ಯವಾಗಿದೆ~ ಎಂದ ಅವರು `ಆಸ್ಟ್ರೇಲಿಯಾದಲ್ಲಿರುವ ನನ್ನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತೆಯಿಂದ ಇಂಥ ಪರಿಸ್ಥಿತಿಯಲ್ಲಿ ಸಿಕ್ಕಿರುವ ಬೆಂಬಲ ಅಪಾರ. ಅಷ್ಟೇ ಅಲ್ಲ ಆರ್‌ಸಿಬಿ ತಂಡದ ಆಡಳಿತ ಕೂಡ ನೆರವಿಗೆ ನಿಂತಿದೆ~ ಎಂದರು.`ಪ್ರಕರಣದ ತನಿಖೆಯ ಪರಿಣಾಮವನ್ನು ಎದುರು ನೋಡುತ್ತಿದ್ದೇನೆ. ನನ್ನ ವಿರುದ್ಧ ಮಾಡಲಾಗಿರುವ ಆರೋಪಗಳಿಂದ ಬೇಸರವಾಗಿದೆ. ಮುಂಬರುವ ದಿನಗಳಲ್ಲಿ ತನಿಖೆ ಎತ್ತ ಸಾಗುತ್ತದೆಂದು ಕಾಯ್ದು ನೋಡಬೇಕು~ ಎಂದು ನುಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry