ಕ್ಷಮೆ ಕೇಳಿ; ಇಲ್ಲವೇ ರಾಜೀನಾಮೆ ಕೊಡಿ

7

ಕ್ಷಮೆ ಕೇಳಿ; ಇಲ್ಲವೇ ರಾಜೀನಾಮೆ ಕೊಡಿ

Published:
Updated:

ಬೆಂಗಳೂರು: `ಕರ್ನಾಟಕ ವಿಭಜನೆ~ಯ ಮಂತ್ರ ಪಠಿಸುತ್ತಿರುವ ಕೃಷಿ ಸಚಿವ ಉಮೇಶ್ ಕತ್ತಿ ಕೂಡಲೇ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಆಗ್ರಹಿಸಿದ್ದಾರೆ.ಏಕೀಕರಣ ಆಧಾರದ ಮೇಲೆ ಕಟ್ಟಿದ ಕನ್ನಡ ನಾಡನ್ನು ಒಡೆದು ಆಳುವ ಈ ನೀತಿಯನ್ನು ನಾಡದ್ರೋಹ, ಭಾಷಾ ದ್ರೋಹ ಎಂದು ಪರಿಗಣಿಸಬೇಕು. ಅವರ ಮೇಲೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಜವಾಬ್ದಾರಿಯುತ ಸ್ಥಾನದಲ್ಲಿರುವ ಕತ್ತಿ, ಇಂತಹ ಹೇಳಿಕೆ ನೀಡಿ ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಪ್ರಯತ್ನ ಮಾಡಬಾರದು. ಈಗಲಾದರೂ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟಕ್ಕೆ ನಿಲ್ಲಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಇಂತಹ ಮನಸ್ಥಿತಿ ಇರುವ ಯಾವುದೇ ವ್ಯಕ್ತಿಗೆ ಯಾವ ಪಕ್ಷವೂ ಅವಕಾಶ ನೀಡಬಾರದು. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರ ಭಾವನೆಗಳೊಂದಿಗೆ ಆಟ ಆಡುವ ಇಂತಹ ವ್ಯಕ್ತಿಯನ್ನು ಕನ್ನಡ ನಾಡಿನ ಜನ ಧಿಕ್ಕರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.ಉಮೇಶ್ ಕತ್ತಿ ಅವರಿಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿ ಹೇಳಬೇಕು ಅಥವಾ ಅವರಿಂದ ರಾಜೀನಾಮೆ ಪಡೆದು ನಾಡಿನ ಜನತೆಗೆ ಉತ್ತರ ಹೇಳಬೇಕು ಎಂದು ಒತ್ತಾಯಿಸಿದ್ದಾರೆ.`ಹಿಂದುಳಿದ ಭಾಗಗಳಿಗೆ ನ್ಯಾಯ ದೊರಕಿಸಿಕೊಡಲು ನಾವೆಲ್ಲರೂ ಒಂದಾಗಿ ಹೋರಾಡಬೇಕು. ಅವರ ನೋವಿಗೆ ಸ್ಪಂದಿಸುವ ಮೂಲಕ ನೈತಿಕ ಬೆಂಬಲ ನೀಡಬೇಕು. ಆದರೆ ಅವರನ್ನು ಪ್ರತ್ಯೇಕಗೊಳಿಸುವುದರಲ್ಲಿ ಯಾವ ಅರ್ಥವೂ ಇಲ್ಲ~ ಎಂದು ಅವರು ವಿವರಿಸಿದ್ದಾರೆ.`ಪ್ರತ್ಯೇಕ ರಾಜ್ಯ ಆಗಬೇಕು~

`ಅಭಿವೃದ್ಧಿಯ ದೃಷ್ಟಿಯಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು~ ಎಂದು ಕೃಷಿ ಸಚಿವ ಉಮೇಶ್ ಕತ್ತಿ ಹೇಳಿದರು. ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಪ್ರತ್ಯೇಕ ರಾಜ್ಯ ಆಗಬೇಕು ಎಂದು ಬಯಸಿರುವುದು ನಿಜ. ಆದರೆ ಸದ್ಯಕ್ಕೆ ಅದರ ನೇತೃತ್ವವನ್ನು ವಹಿಸಿಕೊಳ್ಳುವುದಿಲ್ಲ. ಅಂತಹ ಸಂದರ್ಭ ಬಂದಾಗ ನೋಡೋಣ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry