ಗುರುವಾರ , ಜನವರಿ 23, 2020
28 °C

ಕ್ಷೀರಕ್ರಾಂತಿ: ಗುಜರಾತ್ ಮೀರಿಸುವ ಹುಮ್ಮಸ್ಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಹಾಲು ಉತ್ಪಾದಕರ ಅನುಕೂಲಕ್ಕಾಗಿ ಹಾಲಿನ ದರ ಹೆಚ್ಚಳ ಮಾಡುವ ಸಂಬಂಧ ಚಿಂತನೆ ನಡೆಸಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರೆ, ಇದಕ್ಕೆ ತದ್ವಿರುದ್ದ ಹೇಳಿಕೆಯನ್ನು ಕೆಎಂಎಫ್ ಅಧ್ಯಕ್ಷರಾದ ಶಾಸಕ ಜಿ.ಸೋಮಶೇಖರರೆಡ್ಡಿ ನೀಡಿದರು.ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ನಗರದ ಕೋರಮಂಗಲದಲ್ಲಿರುವ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೈನುಗಾರಿಕೆಯ ಪಿತಾಮಹ ಡಾ.ವಿ.ಕುರಿಯನ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.`ಹಾಲು ಉತ್ಪಾದಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಅರಿವಿದೆ. ಆ ಹಿನ್ನೆಲೆಯಲ್ಲಿ ಹಾಲಿನ ದರ ಏರಿಕೆ ಬಗ್ಗೆ ಚಿಂತನೆ ನಡೆದಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು~ ಎಂದ ಅವರು, ದರ ಏರಿಕೆ ಬಗ್ಗೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.`ಒಬ್ಬ ವ್ಯಕ್ತಿ ದೇಶಕ್ಕೆ ಅಪಾರ ಕೊಡುಗೆ ನೀಡಬಲ್ಲರು ಎಂಬುದಕ್ಕೆ ಕುರಿಯನ್ ಅವರಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ದೇಶದಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಗೌರವ ತಂದುಕೊಟ್ಟಿದ್ದಾರೆ. ಅವರಿಂದಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಗ್ರಾಮೀಣ ಮಹಿಳೆಯರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಕುರಿಯನ್ ಅವರ ಪಾದಸ್ಪರ್ಶದಿಂದ ಕೆಎಂಎಫ್‌ನಲ್ಲಿ ಹೊಸ ಅಧ್ಯಾಯ ಆರಂಭವಾಗಲಿ~ ಎಂದು ಆಶಿಸಿದರು.`ರಾಜ್ಯದಲ್ಲಿರುವ 22 ಲಕ್ಷ ಮಂದಿ ಹಾಲು ಉತ್ಪಾದಕರಿಗೆ ಸಹಕಾರ ಸಂಘಗಳ ಮೂಲಕ ನಿತ್ಯ 7.50 ಕೋಟಿ ರೂ ಪಾವತಿಯಾಗುತ್ತಿದೆ. ಸರ್ಕಾರದ ವತಿಯಿಂದ ನಿತ್ಯ 85 ಲಕ್ಷ ರೂಪಾಯಿಯನ್ನು ಪ್ರೋತ್ಸಾಹ ಧನ ರೂಪದಲ್ಲಿ ನೀಡಲಾಗುತ್ತಿದೆ. ಹೈನುಗಾರಿಕೆಯಲ್ಲಿ ಕರ್ನಾಟಕವು ಗುಜರಾತಿಗೆ ಸಮಾನವಾಗಿ ಅಭಿವೃದ್ಧಿ ಸಾಧಿಸಲು ಎಲ್ಲ ಪ್ರಯತ್ನ ನಡೆಸಲಾಗುವುದು~ ಎಂದು ಸದಾನಂದಗೌಡ ಹೇಳಿದರು.ಕೆಎಂಎಫ್ ಅಧ್ಯಕ್ಷರಾದ ಶಾಸಕ ಜಿ.ಸೋಮಶೇಖರರೆಡ್ಡಿ, `ಕೆಎಂಎಫ್‌ನಲ್ಲಿ ಸಂಪೂರ್ಣ ಗಣಕೀಕೃತ ವ್ಯವಸ್ಥೆ ಜಾರಿಗೊಳಿಸಿ, ಸರ್ಕಾರದ ಸಹಾಯಧನವನ್ನು ಆಯಾ ತಿಂಗಳು ಹಾಲು ಉತ್ಪಾದಕರಿಗೆ ತಲುಪುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು~ ಎಂದರು.`ಹಾಲು ಉತ್ಪಾದನೆಗೆ ಪೂರಕವಾಗಿ ಪ್ರತಿ ತಿಂಗಳು 31,746 ಟನ್ ಪಶು ಆಹಾರ ಸರಬರಾಜು ಮಾಡಲಾಗುತ್ತಿದೆ. ಆದರೆ ಮಾಸಿಕ 45 ಸಾವಿರ ಮೆಟ್ರಿಕ್ ಟನ್ ಪಶು ಆಹಾರಕ್ಕೆ ಬೇಡಿಕೆಯಿದ್ದು, ಇದನ್ನು ಪೂರೈಸಲು ಯತ್ನಿಸಲಾಗುವುದು~ ಎಂದು ತಿಳಿಸಿದರು.ಕೆಎಂಎಫ್ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಸದ್ಯ ಸುಮಾರು 6,000 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಇನ್ನೆರಡು ವರ್ಷಗಳಲ್ಲಿ 8,000 ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಇದೆ~ ಎಂದು ಹೇಳಿದರು.ಬೆಲೆ ಏರಿಕೆ ಇಲ್ಲ: `ಹಾಲಿನ ಬೆಲೆಯನ್ನು ಐದು ರೂಪಾಯಿ ಏರಿಕೆ ಮಾಡುವಂತೆ ಈ ಹಿಂದೆ ಕೋರಲಾಗಿತ್ತು. ಅದರಂತೆ ಸರ್ಕಾರ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ 3 ರೂಪಾಯಿ ಹೆಚ್ಚಳ ಮಾಡಿದೆ. ಗ್ರಾಹಕರಿಗೆ ಹೊರೆಯಾಗುವುದರಿಂದ ಹಾಲಿನ ದರವನ್ನು ಮತ್ತೆ ಏರಿಕೆ ಮಾಡುವುದಿಲ್ಲ~ ಎಂದು ಸ್ಪಷ್ಟಪಡಿಸಿದರು.ಹೊಸ ಉತ್ಪನ್ನಗಳು: ಇದೇ ಸಂದರ್ಭದಲ್ಲಿ ವಿ. ಕುರಿಯನ್ ಅವರು ನಂದಿನಿ ನೂತನ ಉತ್ಪನ್ನಗಳಾದ ಶಾವಿಗೆ ಪಾಯಸ ಇನ್‌ಸ್ಟಂಟ್ ಮಿಕ್ಸ್,ಪ್ರೊಸೆಸ್ಡ್ ಚೀಸ್ ಸ್ಪ್ರೆಡ್ (ಪ್ಲೈನ್, ಪೆಪ್ಪರ್ ಮತ್ತು ಕ್ಯಾಪ್ಸಿಕಂ), ಮಟ್ಕಾ ಕುಲ್ಫಿ ಐಸ್‌ಕ್ರೀಮ್, ಕಸಟ್ಟಾ ಐಸ್‌ಕ್ರೀಮ್, ಚಾಕೊಲೆಟ್ ಬರ್ಫಿ, ಕೋಕನಟ್ ಬರ್ಫಿ, ಡೈಸ್ಡ್ ಪನೀರ್ ತಿನಿಸುಗಳನ್ನು ಬಿಡುಗಡೆ ಮಾಡಿದರು.ನಂತರ `ಪ್ರತಿಭಾನ್ವೇಷಣೆ~ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುರಿಯನ್ ಪತ್ನಿ ಮೊಲಿ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಎನ್. ವೆಂಕಟರಾಮು  ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)