ಬುಧವಾರ, ಆಗಸ್ಟ್ 21, 2019
22 °C
ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆ

`ಕ್ಷೀರಭಾಗ್ಯ'ಕ್ಕೆ ಮತ್ತೊಂದು ಸವಾಲು

Published:
Updated:

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಹಾಲು ಪೂರೈಸುವ ರಾಜ್ಯದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ `ಕ್ಷೀರಭಾಗ್ಯ'ಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಶಾಲೆಗಳಲ್ಲಿನ ಮೂಲಸೌಕರ್ಯದ ಕೊರತೆ ಈ ಯೋಜನೆಯ ಸಮಗ್ರ ಅನುಷ್ಠಾನಕ್ಕೆ ದೊಡ್ಡ ತೊಡಕು ಎಂದು ಸ್ವಯಂಸೇವಾ ಸಂಘಟನೆಗಳು ರಾಜ್ಯ ಸರ್ಕಾರ ಗಮನ ಸೆಳೆದಿವೆ.`ರಾಜ್ಯ ಸರ್ಕಾರ ಕಿರು ಅವಧಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಆದರೆ, ಅದಕ್ಕೆ ಬೇಕಾದ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ಒಂದು ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ ಹಾಲು ವಿತರಿಸಬೇಕಿದೆ. ಇದಕ್ಕೆ ಸೂಕ್ತ ಪೂರ್ವ ತಯಾರಿಯ ಅಗತ್ಯ ಇತ್ತು. ಹೆಚ್ಚಿನ ಶಾಲೆಗಳಲ್ಲಿ ಅಡುಗೆಮನೆಯ ಕೊರತೆ ಇದೆ' ಎಂದು ಬಿಸಿಯೂಟ ಪೂರೈಕೆ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಗಳು ತಿಳಿಸಿವೆ.ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಇಸ್ಕಾನ್, ಅದಮ್ಯ ಚೇತನ, ಐಪಿಡಿಪಿ ಸೇರಿದಂತೆ ಕೆಲವು ಸಂಘಟನೆಗಳು ಪೂರೈಸುವ ಹೊಣೆಯನ್ನು ಹೊತ್ತುಕೊಂಡಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಈ ಸಂಸ್ಥೆಗಳ ಮೂಲಕವೇ ಬಿಸಿಯೂಟ ನೀಡಲಾಗುತ್ತಿದೆ.ಬೆಂಗಳೂರಿನಲ್ಲಿ 15 ಸೇರಿದಂತೆ ರಾಜ್ಯದಾದ್ಯಂತ 100ಕ್ಕೂ ಅಧಿಕ ಸಂಘಟನೆಗಳು ಬಿಸಿಯೂಟ ವಿತರಣೆಯ ಚಟುವಟಿಕೆಯಲ್ಲಿ ಭಾಗಿಯಾಗಿವೆ. ಈ ಸಂಘಟನೆಗಳು 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬಿಸಿಯೂಟ ಪೂರೈಕೆಯ ಜವಾಬ್ದಾರಿಯನ್ನು ಹೊತ್ತಿವೆ.ಈಗಿನ ಯೋಜನೆಯ ಪ್ರಕಾರ ಕರ್ನಾಟಕ ಹಾಲು ಮಹಾಮಂಡಲವು ಸ್ವಯಂಸೇವಾ ಸಂಸ್ಥೆಗಳಿಗೆ ಹಾಲಿನ ಪೌಡರ್ ಪೂರೈಕೆ ಮಾಡಲಿದೆ. ಬಳಿಕ ಹಾಲು ಕುದಿಸಿ ವಿತರಿಸುವ ಜವಾಬ್ದಾರಿ ಈ ಸಂಘಟನೆಗಳದ್ದು. ಬೆಂಗಳೂರು ಉತ್ತರ 1 ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲಕೃಷ್ಣ ಮಾತನಾಡಿ, `ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಎರಡು ಶಾಲೆಗಳಲ್ಲಿ ಮಾತ್ರ ಅಡುಗೆಮನೆ ಇದೆ. ಉಳಿದ ಶಾಲೆಗಳಿಗೆ ಹೊರಗುತ್ತಿಗೆ ಮೂಲಕ ಅಡುಗೆಮನೆಯ ಸೌಲಭ್ಯ ಒದಗಿಸಲಾಗುತ್ತಿದೆ' ಎಂದರು.`ದೊಡ್ಡ ಪ್ರಮಾಣದ ಹಾಲು ವಿತರಣೆಯ ಬೇಡಿಕೆಯನ್ನು ಪೂರೈಸುವಂತಹ ಮೂಲಸೌಕರ್ಯವನ್ನು ಯಾವುದೇ ಸಂಸ್ಥೆಗಳು ಹೊಂದಿಲ್ಲ. ಹೊಸ ಬಾಯ್ಲರ್‌ಗಳನ್ನು ನಾವು ಖರೀದಿ ಮಾಡಬೇಕಿದೆ. ಶಾಲೆಗಳಿಗೆ ವಿತರಿಸಲು ಸುಲಭವಾಗುವಂತೆ ಸಮೀಪದಲ್ಲೇ ಬಾಯ್ಲರ್‌ಗಳನ್ನು ಅಳವಡಿಸಬೇಕಿದೆ.ಇಸ್ಕಾನ್ ಸಂಸ್ಥೆಯು ಬೆಂಗಳೂರಿನಲ್ಲಿ 1.6 ಲಕ್ಷ ಹಾಗೂ ರಾಜ್ಯದಾದ್ಯಂತ 4.5 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ಪೂರೈಕೆ ಮಾಡುತ್ತಿದೆ. ಸಮಸ್ಯೆಯನ್ನು ನಿವಾರಿಸಿ ವ್ಯವಸ್ಥೆಯನ್ನು ಸರಳೀಕರಣ ಮಾಡುವ ಸಂಬಂಧ ರಾಜ್ಯ ಸರ್ಕಾರದ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ' ಎಂದು ಇಸ್ಕಾನ್ ಪ್ರಧಾನ ವ್ಯವಸ್ಥಾಪಕ ವಿನಯ್ ಕುಮಾರ್ ತಿಳಿಸಿದರು.`ಮೂಲಸೌಕರ್ಯದ ಸಮಸ್ಯೆಯ ಜೊತೆಗೆ ಇನ್ನೊಂದು ಸಮಸ್ಯೆಯೂ ಎದುರಾಗಿದೆ. ಸರ್ಕಾರದ ಸೂಚನೆಯಂತೆ ಬೆಳಿಗ್ಗೆ 8.30ರೊಳಗೆ ಶಾಲೆಗಳಿಗೆ ಹಾಲು ಪೂರೈಕೆ ಮಾಡುವುದು ಕಷ್ಟ. ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ನಿಗದಿತ ಸಮಯಕ್ಕೆ ಶಾಲೆಯನ್ನು ತಲುಪುವುದು ಅಸಾಧ್ಯದ ಕೆಲಸ' ಎಂದು ಸಂಘಟನೆಗಳು ಪ್ರತಿಪಾದಿಸಿವೆ.`ಬೆಂಗಳೂರು ಉತ್ತರ ವಲಯ 1 ರಲ್ಲಿ ಸಂಘಟನೆಯು 2,789 ವಿದ್ಯಾರ್ಥಿಗಳಿಗೆ ಬಿಸಿಯೂಟ ಪೂರೈಕೆ ಮಾಡುತ್ತಿದೆ. ಸದ್ಯ ಸಂಘಟನೆಯ ಬಳಿ ಮೂರು ವಾಹನಗಳಿವೆ. ಹಾಲು ವಿತರಿಸಲು ಇನ್ನಷ್ಟು ವಾಹನಗಳನ್ನು ಬಾಡಿಗೆಗೆ ಪಡೆಯಲು ತೀರ್ಮಾನಿಸಲಾಗಿದೆ.ಬೆಳಿಗ್ಗೆ 8.30ಕ್ಕೆ ಹಾಲು ಪೂರೈಕೆ ಮಾಡುವುದು ಸಾಧ್ಯವಿಲ್ಲದ ಕೆಲಸ. ಬೆಂಗಳೂರಿನಲ್ಲಿ ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ತೆರಳಲು ಸಾಕಷ್ಟು ಸಮಯ ಬೇಕಾಗುತ್ತದೆ' ಎಂದು ಐಪಿಡಿಪಿಯ ಕೆ. ಭೀಮಾ ಅಸಹಾಯಕತೆ ವ್ಯಕ್ತಪಡಿಸಿದರು.

Post Comments (+)