ಕ್ಷುದ್ರಗ್ರಹ ಸೆರೆಗೆ ನಾಸಾ ಯೋಜನೆ

7

ಕ್ಷುದ್ರಗ್ರಹ ಸೆರೆಗೆ ನಾಸಾ ಯೋಜನೆ

Published:
Updated:

ಲಂಡನ್ (ಪಿಟಿಐ): ನಾಸಾ ವಿಜ್ಞಾನಿಗಳು ಅತ್ಯಂತ ಸವಾಲಿನ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ.

ಐದು ಲಕ್ಷ ಕೆಜಿ ತೂಕದ ಕ್ಷುದ್ರಗ್ರಹವನ್ನು ಸೆರೆ ಹಿಡಿದು ಅದರ ಪಥವನ್ನು ಬದಲಿಸಿ, ಅದನ್ನು ಬಾಹ್ಯಾಕಾಶ ನಿಲ್ದಾಣವನ್ನಾಗಿ ಪರಿವರ್ತಿಸಿ ಮಂಗಳಯಾನ ಸೇರಿದಂತೆ ಭವಿಷ್ಯದ ಯೋಜನೆಗಳಿಗೆ ಅದನ್ನು ನೆಲೆಯಾಗಿ ಪರಿವರ್ತಿಸುವ ಯೋಚನೆಯಲ್ಲಿದ್ದಾರೆ ಖಗೋಳ ವಿಜ್ಞಾನಿಗಳು.ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ, ಆಕಾಶಕಾಯವೊಂದನ್ನು ಮನುಷ್ಯರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುತ್ತಿರುವುದು ಮೊದಲ ಬಾರಿಯಾಗಲಿದೆ.ನಾಸಾವು ಈಗಾಗಲೇ ಈ ಯೋಜನೆಯ ರೂಪುರೇಷೆ ಸಿದ್ಧಪಡಿಸಿದ್ದು, 260 ಕೋಟಿ ಡಾಲರ್ (ಸುಮಾರು 14,300 ಕೋಟಿ ರೂಪಾಯಿ) ನೆರವು ನೀಡುವಂತೆ ಅಮೆರಿಕದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಮನವಿ ಮಾಡಿದೆ.ತನ್ನ ಮುಂದಿನ ದಶಕದ ಅಂತರಿಕ್ಷ ಯೋಜನೆಗಳನ್ನು ಘೋಷಿಸಲು ಸಿದ್ಧತೆ ನಡೆಸುತ್ತಿರುವ ಇಲಾಖೆಯು ನಾಸಾ ಮುಂದಿಟ್ಟಿರುವ ಬೇಡಿಕೆ ಪರಿಗಣಿಸಲಿದೆ.ಕ್ಷುದ್ರಗ್ರಹವನ್ನು ಹಿಡಿಯುವುದು ಹೇಗೆ ಎಂಬ ಬಗ್ಗೆ ನಾಸಾ ಮತ್ತು ಕ್ಯಾಲಿಫೋರ್ನಿಯಾದ ತಂತ್ರಜ್ಞಾನ ಸಂಸ್ಥೆ ಜಂಟಿಯಾಗಿ ವರದಿಯೊಂದನ್ನು ಸಿದ್ಧಪಡಿಸಿವೆ.`ಕ್ಷುದ್ರಗ್ರಹವನ್ನು ಹಿಡಿಯಬಲ್ಲ ಕೋಶ'ವನ್ನು ಹಳೆಯ ಅಟ್ಲಾಸ್-5 ರಾಕೆಟ್‌ಗೆ ಅಳವಡಿಸಿ, ಭೂಮಿ ಮತ್ತು ಚಂದ್ರನ ನಡುವೆ ಇರುವ ಕ್ಷುದ್ರಗ್ರಹದತ್ತ ಹಾರಿ ಬಿಡುವ ಯೋಜನೆಯನ್ನು ವಿಜ್ಞಾನಿಗಳು ಹಾಕಿಕೊಂಡಿದ್ದಾರೆ.ರಾಕೆಟ್ ಕ್ಷುದ್ರಗ್ರಹದ ಸಮೀಪ ತಲುಪುತ್ತಿದ್ದಂತೆಯೇ `ಕ್ಷುದ್ರಗ್ರಹ ಕೋಶ'ವು 50 ಅಡಿ ವ್ಯಾಸದ ಚೀಲವೊಂದನ್ನು ಆಕಾಶಕಾಯದತ್ತ ಇಳಿಸಲಿದೆ. ಈ ಚೀಲವು ತಿರುಗುತ್ತಿರುವ ಕ್ಷುದ್ರಗ್ರಹವನ್ನು ಸಂಪೂರ್ಣವಾಗಿ ಆವರಿಸಿದ ಬಳಿಕ ಎಳೆದಾರದ ಮೂಲಕ ಚೀಲದ ಬಾಯಿಯನ್ನು ಮುಚ್ಚಲಿದೆ ಎಂದು `ದ ಡೈಲಿ ಮೇಲ್' ವರದಿ ಮಾಡಿದೆ.ನಂತರ ಬಾಹ್ಯಾಕಾಶ ನೌಕೆಯು ಕ್ಷುದ್ರಗ್ರಹದ ಚಲನೆಯನ್ನು ನಿಲ್ಲಿಸಿ, ಅದರ ಪಥವನ್ನು ಬದಲಿಸಿ ಗುರುತ್ವಾಕರ್ಷಣೆ ತಟಸ್ಥವಾಗಿರುವ ಪ್ರದೇಶಕ್ಕೆ ಅದನ್ನು ಕೊಂಡೊಯ್ಯಲಿದೆ.ಆದರೆ ಈ ಯೋಜನೆ ಬಗ್ಗೆ ನಾಸಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ಶ್ವೇತಭವನದೊಂದಿಗೆ ಮಾತುಕತೆ ನಡೆಸಲಾಗುತ್ತದೆ ಎಂದಷ್ಟೇ  ಹೇಳಿದೆ. ಆದರೆ, ಈಗಿರುವ ತಂತ್ರಜ್ಞಾನವನ್ನು ಬಳಸಿ ಮುಂದಿನ 10-12 ವರ್ಷಗಳ ಅವಧಿಯಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಬಹುದು ಎಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry