ಕ್ಷುಲ್ಲಕ ಕಾರಣಕ್ಕೆ ಶಾಲೆಯೇ ಬಂದ್

7

ಕ್ಷುಲ್ಲಕ ಕಾರಣಕ್ಕೆ ಶಾಲೆಯೇ ಬಂದ್

Published:
Updated:
ಕ್ಷುಲ್ಲಕ ಕಾರಣಕ್ಕೆ ಶಾಲೆಯೇ ಬಂದ್

ಮೈಸೂರು: ಮಧ್ಯಾಹ್ನದ ಬಿಸಿಯೂಟದ ಅಡುಗೆ ಸಹಾಯಕಿಯ ವಿವಾದ ಶಾಲೆಯನ್ನೇ ಮುಚ್ಚಿಸಿರುವ ಆಘಾತಕಾರಿ ವಿಷಯ ಸೋಮವಾರ ಜಿಲ್ಲಾ ಪಂಚಾಯಿತಿಯ ವಿಶೇಷ ಸಭೆಯಲ್ಲಿ ಬೆಳಕಿಗೆ ಬಂದಿತು.ನಂಜನಗೂಡು ತಾಲ್ಲೂಕಿನ ಜಾಲಹಳ್ಳಿ ಸರ್ಕಾರಿ ಶಾಲೆಯ ಅಡುಗೆ ಸಹಾಯಕಿಯ ಪರ, ವಿರೋಧವಾಗಿ ಎರಡು ಗುಂಪುಗಳು ನಿಂತವು. ಇದರಿಂದ ವಿವಾದ ತೀವ್ರವಾಗಿ ಜಟಿಲಗೊಂಡಿತು. ಕೊನೆ ಎರಡೂ ಕಡೆಯವರು ಮಣಿಯದ ಕಾರಣ ಶಾಲೆಯನ್ನೇ ಮುಚ್ಚಲಾಗಿದೆ. ಈಗ ಈ ಗ್ರಾಮದ ಮಕ್ಕಳು ಐದು ಕಿಲೋಮೀಟರ್ ದೂರದಲ್ಲಿರುವ ಮುಳ್ಳೂರಿಗೆ ಹೋಗಬೇಕಾಗಿದೆ. ನೋವಿನ ಸಂಗತಿ ಎಂದರೆ ಜಾಲಹಳ್ಳಿಯಲ್ಲಿ ಶೇಕಡ 99 ರಷ್ಟು ದಲಿತರೇ ಇದ್ದಾರೆ ಎಂದು ಸದಸ್ಯ ಮಾರುತಿ ಇಂತಹ ಸೂಕ್ಷ್ಮ ವಿಷಯವನ್ನು ಸಭೆಯಲ್ಲಿ ಬಹಿರಂಗಗೊಳಿಸಿದರು.ಶಾಲಾ ಮೂಲಸೌಕರ್ಯಗಳ ಬಗ್ಗೆಯೇ ಚರ್ಚಿಸಲು ವಿಶೇಷ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಮಾರುತಿ ಜಾಲಹಳ್ಳಿಯ ವಿಷಯವನ್ನು ಪ್ರಸ್ತಾಪಿಸಿದಾಗ ಅಧ್ಯಕ್ಷೆ ಸುನೀತಾವೀರಪ್ಪಗೌಡ ಆಶ್ಚರ್ಯಪಟ್ಟರು.`ಎರಡು ಗುಂಪುಗಳ ನಡುವೆ ವಿವಾದ ಉಂಟಾಗಿ ಬಿಸಿಯೂಟ ಕಾರ್ಯಕ್ರಮ ನಿಂತಿರುವುದನ್ನು ಕೇಳಿದ್ದೇನೆ. ಆದರೆ ಶಾಲೆಯನ್ನೇ ಮುಚ್ಚಿರುವುದು ನಂಬಲು ಆಗುತ್ತಿಲ್ಲ. ಇದು ನಿಜಕ್ಕೂ ಗಂಭೀರ ವಿಷಯ~ ಎಂದು ಪ್ರತಿಕ್ರಿಯಿಸಿದರು.ಮಾತು ಮುಂದುವರಿಸಿದ ಮಾರುತಿ, `ಅಡುಗೆ ಸಹಾಯಕಿಯ ವಿಚಾರವಾಗಿ ರಾಜಕೀಯವಿದೆ. ಒಂದು ಜಾತಿಯವರು ಆಕೆ ಬೇಕು ಎನ್ನುತ್ತಿದ್ದಾರೆ. ಮತ್ತೊಂದು ಜಾತಿಯವರು ಬೇಡ ಎನ್ನುತ್ತಿದ್ದಾರೆ. ಒಮ್ಮತ ಮೂಡದೇ ಹೋದಾಗ ಶಾಲೆಯನ್ನು ಮುಚ್ಚಲಾಗಿದೆ. ಆದರೆ ಇಲ್ಲಿಯವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐ, ಜಿಲ್ಲಾ ಪಂಚಾಯಿತಿ ಸಿಇಓ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸುವ ಯತ್ನ ಮಾಡಿಯೇ ಇಲ್ಲ~ ಎಂದು ಆರೋಪಿಸಿದರು.ಅಧ್ಯಕ್ಷೆ ಸುನೀತಾವೀರಪ್ಪಗೌಡ, ಉಪಾಧ್ಯಕ್ಷ ಡಾ.ಶಿವರಾಂ, ಸಿಇಓ ಜಿ.ಸತ್ಯವತಿ ಅವರು ಡಿಡಿಪಿಐ ನಾಗೇಂದ್ರಕುಮಾರ್, ಬಿಡಿಓ ಚಂದು ಪಾಟೀಲರನ್ನು ಕರೆದು ಮಾಹಿತಿ ಪಡೆದರು. ನಂತರ ಸುನೀತಾವೀರಪ್ಪಗೌಡ ಮಾತನಾಡಿ `ಇದರಲ್ಲಿ ಸ್ಥಳೀಯ ರಾಜಕೀಯವಿದೆ. ಇಂತಹ ವಿಚಾರವನ್ನು ಆ ಭಾಗದ ಸದಸ್ಯರಾದ ನೀವು, ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಸೇರಿಸಿಕೊಂಡು ಮಾತುಕತೆಯ ಮೂಲಕವೇ ಬಗೆಹರಿಸಬೇಕು. ಅಧಿಕಾರಿ ಗಳು ಹಿಂದೆ ಇರುತ್ತಾರೆ. ನೀವು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿ, ನಂಜನ ಗೂಡು ಶಾಸಕರಾದ ವಿ.ಶ್ರೀನಿವಾಸ್‌ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಬೇಕು~ ಎಂದು ಸೂಚಿಸಿದರು. ಇಲ್ಲಿಗೆ ಜಾಲಹಳ್ಳಿ ಶಾಲೆಗೆ ಸಂಬಂಧಿಸಿದ ಚರ್ಚೆ ಮುಕ್ತಾಯಗೊಂಡಿತು.ಸದಸ್ಯರಿಗೆ ಅಗೌರವ: `ಜಿಲ್ಲೆಯಲ್ಲಿ ಯಾವುದೇ ಶಾಲಾ ಕಟ್ಟಡ ಸೋರುತ್ತಿದ್ದರೆ ಅದು ಆ ಕ್ಷೇತ್ರದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರಿಗೇ ಅಗೌರವ ತರುವಂತಹ ಸಂಗತಿ. ಆದ್ದರಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿರುವ ಶಾಲಾ ಕಟ್ಟಡಗಳು ಸೋರುತ್ತಿದ್ದರೆ ಅವುಗಳನ್ನು ಪಟ್ಟಿ ಮಾಡಿಕೊಡಿ. ಕೂಡಲೇ ಅವುಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು.ಮೂಲ ಸೌಕರ್ಯಗಳ ಬಗ್ಗೆ ಸದಸ್ಯರು ಆಸಕ್ತಿ ವಹಿಸಿ ಪಟ್ಟಿಕೊಡಬೇಕು. ಆನಂತರ ತಮ್ಮ ವ್ಯಾಪ್ತಿಯಲ್ಲಿ ಆಗುವ ಶಾಲಾ ಕಟ್ಟಡಗಳ ಕಾಮಗಾರಿ ಗುಣಮಟ್ಟ ದಿಂದ ಕೂಡಿರುವಂತೆ ನೋಡಿಕೊಳ್ಳಬೇಕು~ ಎಂದು ಅಧ್ಯಕ್ಷೆ ಸುನೀತಾವೀರಪ್ಪಗೌಡ ಹೇಳಿದರು.ವಿರೋಧ ಪಕ್ಷದ ನಾಯಕಿ ಮಂಜುಳಾರಾಜ್ ಮಾತನಾಡಿ, `ಅಧ್ಯಕ್ಷರು ತಮ್ಮ 1 ಕೋಟಿ ಅನುದಾನವನ್ನು ಶಾಲಾ ಮೂಲಸೌಕರ್ಯಕ್ಕೆ  ನೀಡುತ್ತಿ ರುವುದು ಅಭಿನಂದನಾರ್ಹ ಕೆಲಸ. ಎಷ್ಟೋ ಕಡೆ ಶಾಲೆಗಳಲ್ಲಿ ಕುಡಿ ಯುವ ನೀರು, ಶೌಚಾಲಯ, ಕಾಂಪೌಂಡ್, ಕುಳಿತುಕೊಳ್ಳಲು ಬೆಂಚು ಇಲ್ಲ ವಾಗಿವೆ. ಇವುಗಳತ್ತ ಗಮನಹರಿಸಬೇಕು. ಇಷ್ಟೇ ಅಲ್ಲದೆ ಗ್ರಾಮೀಣ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಏಕೆಂದರೆ ಶಿಕ್ಷಣದಷ್ಟೆ ಆರೋಗ್ಯ ವೂ ಮುಖ್ಯ. ಗ್ರಾಮೀಣ ಪ್ರದೇಶಗಳಲ್ಲಿರುವ ಎಷ್ಟೋ ಆಸ್ಪತ್ರೆಗಳಿಗೆ ಕಿಟಕಿ, ಬಾಗಿಲು ಇಲ್ಲವಾಗಿದೆ.

 

ಈ ಬಗ್ಗೆ ವಿಶೇಷ ಸಭೆ ಕರೆಯಬೇಕು~ ಎಂದು ಸಲಹೆ ನೀಡಿದರು. ಶಾಲಾ ಸೌಕರ್ಯಗಳ ವಿಷಯವಾಗಿ ಸದಸ್ಯರಾದ ಚಂದ್ರೇಶ್, ನಂದಿನಿಚಂದ್ರಶೇಖರ್,ಚಿಕ್ಕಣ್ಣೇಗೌಡ ಚರ್ಚೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry