ಗುರುವಾರ , ನವೆಂಬರ್ 21, 2019
25 °C

`ಕ್ಷೇತ್ರದ ಅಭಿವೃದ್ಧಿಗಾಗಿ ಮತ ಚಲಾಯಿಸಿ'

Published:
Updated:
`ಕ್ಷೇತ್ರದ ಅಭಿವೃದ್ಧಿಗಾಗಿ ಮತ ಚಲಾಯಿಸಿ'

ಯಾದಗಿರಿ: ಮತಕ್ಷೇತ್ರದ ಅಭಿವೃದ್ಧಿಗೆ ಕೆಜೆಪಿಗೆ ಮತ ನೀಡುವಂತೆ ಮತಕ್ಷೇತ್ರದ ಅಭ್ಯರ್ಥಿ ಡಾ.ವೀರಬಸವಂತರಡ್ಡಿ ಮುದ್ನಾಳ ಮನವಿ ಮಾಡಿದರು.

ಮತಕ್ಷೇತ್ರದ ಪಗಲಾಪೂರ ಹಾಗೂ ಮುಷ್ಟೂರ ಗ್ರಾಮಗಳಲ್ಲಿ ಗುರುವಾರ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕ್ಷೇತ್ರದ ಅಭಿವೃದ್ಧಿಗೆ ಈಗ ಕಾಲ ಬಂದಾಗಿದೆ. ಮತದಾರರು ಮತ್ತೊಮ್ಮೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ವಿಫಲರಾದರೆ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಹೇಳಿದರು.ಯಾದಗಿರಿ ಮತಕ್ಷೇತ್ರದಲ್ಲಿ 20 ವರ್ಷ ಆಡಳಿತ ನಡೆಸಿದ ಶಾಸಕ ಡಾ. ಮಾಲಕರಡ್ಡಿಯವರ ಸಾಧನೆ ಏನೆಂಬುದು ಜನರಿಗೆ ಈಗ ಗೊತ್ತಾಗಿದೆ. ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಕ್ಷೇತ್ರದ ಜನತೆಗೆ ದ್ರೋಹ ಬಗೆದಿದ್ದಾರೆ. ಮತಕ್ಷೇತ್ರದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದು, ಇನ್ನಾದರೂ ಮತದಾರರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡು ಅಭಿವೃದ್ಧಿಗಾಗಿ ನಿಂತ ಕೆಜೆಪಿಯನ್ನು ಬೆಂಬಲಿಸಿ ಎಂದರು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಭಿವೃದ್ದಿಪರ ಯೋಜನೆಗಳನ್ನು ಜಾರಿಗೆ ತರುವುದಲ್ಲದೆ ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ಯಾದಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವ ಮೂಲಕ ಈ ಭಾಗದ ಜನತೆಯ ದಶಕಗಳ ಕನಸನ್ನು ನನಸು ಮಾಡಿದ್ದಾರೆ. ಅವರ ಅಭಿವೃದ್ಧಿ ಯೋಜನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಜೆಪಿ ಪಕ್ಷಕ್ಕೆ ಮತ ನೀಡಿ ಎಂದರು.ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದಿಂದ ಜನರು ಭ್ರಮನಿರಸನಗೊಂಡಿದ್ದು, ಈ ಬಾರಿ ರಾಜ್ಯದ ಮತದಾರರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈ ಹಿಡಿಯಲಿದ್ದಾರೆ ಎಂದು ಹೇಳಿದರು.ಡಾ.ಶರಣರಡ್ಡಿ ಕೋಡ್ಲಾ, ರುದ್ರಗೌಡ ಪಾಟೀಲ, ಮೋಹನರಡ್ಡಿ, ಚೆನ್ನಾರಡ್ಡಿ, ಶರಣಗೌಡ ಮುಷ್ಟೂರ, ಬಸಣ್ಣಗೌಡ, ಮಹಾದೇವಪ್ಪ, ಹಣಮಂತ್ರಾಯ, ಸಿದ್ದಯ್ಯ ಇದ್ದರು.

ಪ್ರತಿಕ್ರಿಯಿಸಿ (+)