`ಕ್ಷೇತ್ರದ ಅಭಿವೃದ್ಧಿ: ಕೈಪಿಡಿ ಅಗತ್ಯ'

7

`ಕ್ಷೇತ್ರದ ಅಭಿವೃದ್ಧಿ: ಕೈಪಿಡಿ ಅಗತ್ಯ'

Published:
Updated:

ಬೆಂಗಳೂರು: `ಕ್ಷೇತ್ರದ ಅಭಿವೃದ್ಧಿಗೆ ಏನೆಲ್ಲ ಕೆಲಸಗಳನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ಜನರಿಗೆ ಒದಗಿಸಲು ಶಾಸಕರು ಕೈಪಿಡಿ ಹೊರತರುವ ಅಗತ್ಯವಿದೆ' ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ'ದಲ್ಲಿ ಸಚಿವ ಅರವಿಂದ ಲಿಂಬಾವಳಿ ಅವರು ಹೊರತಂದಿರುವ `ಮಹದೇವಪುರ ಜನಹಿತ' ಕೈಪಿಡಿಯನ್ನು ಈಚೆಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.`ಲಿಂಬಾವಳಿ ಅವರು ಶಾಸಕ ಮತ್ತು ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕ್ಷೇತ್ರವಾದ ಮಹದೇವಪುರದ ಅಭಿವೃದ್ಧಿಗಾಗಿ ನಾಲ್ಕೂವರೆ ವರ್ಷಗಳಲ್ಲಿ ಕೈಗೊಂಡಿರುವ ಸಂಪೂರ್ಣ ಕಾಮಗಾರಿಗಳ ವಿವರ ಈ ಕೈಪಿಡಿಯಲ್ಲಿದೆ. ಇದೇ ರೀತಿ ಪ್ರತಿಯೊಬ್ಬ ಶಾಸಕರು ಅವರ ಕ್ಷೇತ್ರಗಳ ಅಭಿವೃದ್ಧಿಯ ಬಗ್ಗೆ ಜನರಿಗೆ ತಿಳಿಸಿದರೆ ಉತ್ತಮ' ಎಂದು ಅವರು ಹೇಳಿದರು.ಸಚಿವ ಲಿಂಬಾವಳಿ ಮಾತನಾಡಿ, `ನನ್ನ ನಾಲ್ಕೂವರೆ ವರ್ಷದ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿ ಇದಾಗಿದೆ. ಇದರಲ್ಲಿ ಬಹುತೇಕ ಕಾರ್ಯಗಳು ಮುಗಿದಿದ್ದು, ಇನ್ನು ಕೆಲವು ಪ್ರಗತಿಯಲ್ಲಿವೆ' ಎಂದರು. `ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಒಟ್ಟಾರೆ ರೂ 1,248 ಕೋಟಿ ರೂಪಾಯಿ ತಂದಿದ್ದೇನೆ' ಎಂದು ಹೇಳಿದರು.`ಪ್ರತಿಯೊಬ್ಬ ಪ್ರಜೆಗೂ ಮಾಹಿತಿ ಒದಗಿಸುವ ದೃಷ್ಟಿಯಿಂದ ಈ ಕೈಪಿಡಿ ಅಂತರ್ಜಾಲದಲ್ಲೂ ಸಿಗುವಂತೆ ವ್ಯವಸ್ಥೆ ಮಾಡಿದ್ದೇನೆ. ವೆಬ್‌ಸೈಟ್:  http://arvindlimbavali.com   ಮೂಲಕವೂ ಮಾಹಿತಿ ಪಡೆಯಬಹುದು. ಅದರಲ್ಲಿರುವ ವಿವರಗಳ ಕುರಿತ ಅಭಿಪ್ರಾಯಗಳನ್ನು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಹಂಚಿಕೊಳ್ಳಬಹುದು' ಎಂದು ತಿಳಿಸಿದರು.`ಕ್ಷೇತ್ರದಲ್ಲಿ ನಡೆದಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ಪಾರದರ್ಶಕವಾಗಿದ್ದು, ಯಾರೇ ಹೆಚ್ಚಿನ ಮಾಹಿತಿ ಬಯಸಿದಲ್ಲಿ ನನ್ನ ಸ್ಥಳೀಯ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು' ಎಂದು ಹೇಳಿದರು. `ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆಂದೂ ಕಂಡರಿಯದಷ್ಟು ಅಭಿವೃದ್ದಿ ಕಾರ್ಯಗಳಾಗಿವೆ' ಎಂದ ಅವರು, `ರಾಜ್ಯದಲ್ಲಿ ಯಾವ ಶಾಸಕರೂ ಈವರೆಗೆ ಅಭಿವೃದ್ದಿ ಕಾರ್ಯಗಳ ಪಟ್ಟಿ ಮಾಡಿಲ್ಲ' ಎಂದರು. ಮಹದೇವಪುರ ಬಿಜೆಪಿ ಘಟಕದ ಅಧ್ಯಕ್ಷ ಜಯಚಂದ್ರ ರೆಡ್ಡಿ, ಬಿಬಿಎಂಪಿ ಸದಸ್ಯ ಎನ್.ಆರ್. ಶ್ರಿಧರ್ ರೆಡ್ಡಿ, ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಪಾಪಣ್ಣ ಮತ್ತಿತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry