ಕ್ಷೇತ್ರಾಧಿಕಾರಿಗೆ ಸಹೋದ್ಯೋಗಿಗಳ ಸನ್ಮಾನ

7

ಕ್ಷೇತ್ರಾಧಿಕಾರಿಗೆ ಸಹೋದ್ಯೋಗಿಗಳ ಸನ್ಮಾನ

Published:
Updated:

ಹುಬ್ಬಳ್ಳಿ:ಅಂಚೆ ಇಲಾಖೆಯ ಜೀವ ವಿಮಾ ಯೋಜನೆಯಡಿ ಅತ್ಯಧಿಕ ಮೊತ್ತದ ಪಾಲಿಸಿಯನ್ನು ಸಂಗ್ರಹಿಸಿದ ನಗರದ ಕ್ಷೇತ್ರ ಅಧಿಕಾರಿ ನಾಗರಾಜ ಜಿ. ರೋಖಡೆ ಅವರನ್ನು ಅವರ ಸಹೋದ್ಯೋಗಿಗಳ ಪರವಾಗಿ ಹಿರಿಯ ಅಧಿಕಾರಿಗಳು ಸೋಮವಾರ ಸನ್ಮಾನಿಸಿದರು.ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಸಂಜೆ ನಡೆದ ರಾಷ್ಟ್ರೀಯ ಅಂಚೆ ಸಪ್ತಾಹ ಕಾರ್ಯಕ್ರಮದಲ್ಲಿ ಧಾರವಾಡದ ಹಿರಿಯ ಅಂಚೆ ಅಧೀಕ್ಷಕ ನಾಗೇಶ ಮಾನ್ವಿ, ಪ್ರಮಾಣಪತ್ರವನ್ನು ನೀಡಿ ಹಾರ ಹಾಕಿ ರೋಖಡೆ ಅವರನ್ನು ಸನ್ಮಾನಿಸಿದರು.ನಂತರ ಮಾತನಾಡಿದ ಮಾನ್ವಿ, ಅಂಚೆ ಜೀವ ವಿಮೆಯ ಬಗ್ಗೆ ಸಮಾಜಕ್ಕೆ ಮಾಹಿತಿ ನೀಡುವ ಅಗತ್ಯವಿದ್ದು ರೋಖಡೆ ಅವರಂಥ ವ್ಯಕ್ತಿಗಳಿಂದ ಈ ಕೆಲಸ ಸಮರ್ಪಕವಾಗಿ ನಡೆಯಲು ಸಾಧ್ಯ ಎಂದು ಹೇಳಿದರು.`ರೋಖಡೆ ಅವರು ಕಳೆದ ಆರ್ಥಿಕ ವರ್ಷದಲ್ಲಿ 11.48 ಕೋಟಿ ರೂಪಾಯಿ ಪಾಲಿಸಿ ಸಂಗ್ರಹ ಮಾಡಿದ್ದು,ರಾಜ್ಯಕ್ಕೆ ಮೊದಲನೆಯವರಾಗಿ ಹೊರ ಹೊಮ್ಮಿದ್ದಾರೆ. ಆ ಮೂಲಕ ಜಿಲ್ಲೆಗೆ ಗೌರವ ತಂದಿದ್ದಾರೆ~ ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಅಂಚೆ ಕಚೇರಿಯ ಹಿರಿಯ ಅಂಚೆ ಅಧಿಕಾರಿ ಎಚ್.ಎಸ್. ಹುನಗುಂದ, ಅಂಚೆ ಜೀವ ವಿಮೆಯಷ್ಟು ಸುರಕ್ಷಿತ ವಿಮೆ ದೇಶದಲ್ಲಿ ಬೇರೊಂದಿಲ್ಲ ಎಂದು ಹೇಳಿದರು.ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಅಂಚೆ ಜೀವ ವಿಮೆ ಮಾಡಿಸಲು ಮುಂದಾಗಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಎಂದು ಹೇಳಿದ ಅವರು, ಮಧ್ಯಮ ವರ್ಗದ ನೌಕರರಿಗೆ ಈ ವಿಮೆಯಿಂದ ಸಾಕಷ್ಟು ಪ್ರಯೋಜನಗಳಿವೆ ಎಂದರು.`ಇಂದಿನ ಪರಿಸ್ಥಿತಿಯಲ್ಲಿ ಯಾರ ಜೀವನವೂ ಸುರಕ್ಷಿತವಲ್ಲ. ಯಾವುದೇ ಸಂದರ್ಭದಲ್ಲಿ ಏನೂ ಸಂಭವಿಸಬಲ್ಲ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಕಡಿಮೆ ಪ್ರೀಮಿಯಂಗಳಲ್ಲಿ ಹೆಚ್ಚು ಬೋನಸ್ ತಂದು ಕೊಡುವ ಈ ವಿಮೆ ನೆರವಿಗೆ ಬರಲಿದೆ~ ಎಂದು ಅವರು ಹೇಳಿದರು.ಅಂಚೆ ಜೀವ ವಿಮೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಈ ಕಾರ್ಯವನ್ನು ಪ್ರತಿನಿಧಿಗಳು ಮಾಡ ಬೇಕು. ಪ್ರತಿನಿಧಿಗಳು ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು~ ಎಂದು ಅವರು ಹೇಳಿದರು. ಶಾಖಾ ಅಂಚೆ ವ್ಯವಸ್ಥಾಪಕ ಎಸ್.ಆರ್.ಬಳ್ಳಕ್ಕನವರ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry