ಕ್ಷೇತ್ರ ಅಭಿವೃದ್ಧಿಗೆ ಜನರ ಅಭಿಪ್ರಾಯ ಅಗತ್ಯ: ಹೆಬ್ಬಾರ್

ಸೋಮವಾರ, ಜೂಲೈ 22, 2019
23 °C

ಕ್ಷೇತ್ರ ಅಭಿವೃದ್ಧಿಗೆ ಜನರ ಅಭಿಪ್ರಾಯ ಅಗತ್ಯ: ಹೆಬ್ಬಾರ್

Published:
Updated:

ಯಲ್ಲಾಪುರ: `ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಜನರ ಅಭಿಪ್ರಾಯ ಪಡೆಯುತ್ತಿದ್ದೇನೆ' ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ತಾಲ್ಲೂಕಿನ ಆನಗೋಡ ಮತ್ತು ದೇಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.ಗ್ರಾ.ಪಂ. ವತಿಯಿಂದ ನಡೆಸಲಾಗಿರುವ ಸ್ಥಳೀಯ ರಸ್ತೆ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಬಳಗಾರ ರಸ್ತೆಯನ್ನು ನವೀಕರಣ ಮಾಡಿ ಮೂರು ತಿಂಗಳೂ ಕಳೆದಿಲ್ಲ. ಈಗಲೇ ರಸ್ತೆ ಕಿತ್ತು ಹೋಗಿದೆ ಎಂದು ಗ್ರಾಮಸ್ಥರು ದೂರಿದರು. ಕೆಲಸ ಸರಿಯಾಗಿ ನಡೆಯದಿದ್ದರೆ ಗುತ್ತಿಗೆದಾರರಿಗೆ ಹಣ ಪಾವತಿಸದಂತೆ ಶಾಸಕರು, ಜಿ.ಪಂ. ಅಧಿಕಾರಿಗಳಿಗೆ ಸೂಚಿಸಿದರು.`ಸಾವುಗದ್ದೆ ಭಾಗದಲ್ಲಿ 12-15 ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿದ್ದಾರೆ. ಆದ್ದರಿಂದ ಮಕ್ಕಳ ಸಂಖ್ಯೆ ಕಡಿಮೆ ಎನ್ನುವ ಕಾರಣಕ್ಕಾಗಿ ಮುಚ್ಚಿದ ಸಾವಗದ್ದೆ ಶಾಲೆಯನ್ನು ಪುನರಾರಂಭಿಸಬೇಕು ಎಂಬ  ಆಗ್ರಹ ಕೇಳಿ ಬಂತು. ಅಭಿವೃದ್ಧಿಗಾಗಿ ಕಾಮಗಾರಿಗಳಲ್ಲಿ ಮಾಡಿದ ಮಾರ್ಪಾಡುಗಳ ಕುರಿತು ಜನ ಸಾಮಾನ್ಯರಿಗೆ ಮಾಹಿತಿ ದೊರೆಯುತ್ತಿಲ್ಲ' ಎಂದು ಡಾ.ರವಿ ಭಟ್ಟ ಆರೋಪಿಸಿದರು.ಕುಡಿಯುವ ನೀರಿಗಾಗಿ ಜಿ.ಪಂನಿಂದ ನಡೆಸಿದ ಕಾಮಗಾರಿಗಳ ಕುರಿತು ತನಿಖೆಯಾಗಬೇಕು. ಇಲ್ಲವಾದರೆ ಲೋಕಾಯುಕ್ತದ ಮೊರೆ ಹೋಗುತ್ತೇವೆ ಎಂದು ಎನ್.ಕೆ.ಭಟ್ಟ ಮೆಣಸುಪಾಲ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿಗಳ ತನಿಖೆ ನಡೆಸುವ ಕುರಿತು ಚಿಂತನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೆಬ್ಬಾರ್ ಭರವಸೆ ನೀಡಿದರು.ಉದ್ಯೋಗ ಖಾತರಿ ಸೇರಿದಂತೆ ಗ್ರಾ.ಪಂ.ನಿಂದ ನಡೆಸಲಾದ ಹಲವು ಕಾಮಗಾರಿಗಳ ಕುರಿತು ಹಾಗೂ ಗ್ರಾ.ಪಂ. ಸದಸ್ಯರ ಕಾರ್ಯವೈಖರಿಯ ಕುರಿತು ಆರ್.ಜಿ.ಭಟ್ಟ ಮೇಗಿನಮನೆ ಸೇರಿದಂತೆ ಹಲವು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.ದೇಹಳ್ಳಿಯಲ್ಲೂ ಬಳಗಾರ ರಸ್ತೆ ಕಾಮಗಾರಿಯ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಯಿತು. 24 ಕ್ಕೂ ಹೆಚ್ಚು ಮನೆಗಳಿರುವ ಬಳಗಾರ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲವೆಂದು ಸ್ಥಳೀಯರು ವಿವರಿಸಿದರು. ಕೆಲವೆಡೆ ಮನೆಗಳ ಮೇಲೆ ವಿದ್ಯುತ್ ತಂತಿ ಹಾಯ್ದು ಹೋಗಿದ್ದು, ಅದನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಮನವಿ ಮಾಡಿದರು. ಪ್ರವಾಸೋದ್ಯಮ ಇಲಾಖೆಯಿಂದ ಸಾತೊಡ್ಡಿ ಫಾಲ್ಸ್ ಕುರಿತು ಯೋಜನೆಗಳನ್ನು ರೂಪಿಸಲು ಅರಣ್ಯ ಇಲಾಖೆಗೆ ಪ್ರತಿವರ್ಷ ಅನುದಾನ ಬರುತ್ತಿದ್ದು, ಅವು ಬಳಕೆಯಾಗದೇ ವಾಪಸ್ ಹೋಗುತ್ತಿವೆ ಎಂದು ವಿಶ್ವೇಶ್ವರ ಜಡ್ಡಿಪಾಲ ಆರೋಪಿಸಿದರು.ದೇಹಳ್ಳಿ ಗ್ರಾ.ಪಂ ಅಧ್ಯಕ್ಷ ವಿಶ್ವನಾಥ ಹಳೆಮನೆ, ಆನಗೋಡ ಗ್ರಾ.ಪಂ. ಅಧ್ಯಕ್ಷ ಲಕ್ಷ್ಮಣ ಮಳಿಕ, ಜಿ.ಪಂ. ಸದಸ್ಯ ಅನಂತ ನಾಗರಜಡ್ಡಿ, ತಾ.ಪಂ. ಅಧ್ಯಕ್ಷೆ ಲಕ್ಷ್ಮಿ ನಾಯ್ಕ, ಗ್ರಾ.ಪಂ. ಸದಸ್ಯ ಕೆ.ಟಿ.ಹೆಗಡೆ, ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಮುದ್ದೆಪಾಲ ಮೊದಲಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry