ಭಾನುವಾರ, ಜೂನ್ 13, 2021
29 °C
ಮೈಸೂರು: ಲೋಕಸಭೆ ಚುನಾವಣೆ– 1962

ಕ್ಷೇತ್ರ ವಿಭಜನೆ; ಹೊಸ ಅಭ್ಯರ್ಥಿಗಳ ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೊದಲ ಲೋಕಸಭೆ ಚುನಾವಣೆಯಲ್ಲಿ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಮತ್ತು ಎರಡನೇ ಚುನಾವಣೆ ಸಂದರ್ಭದಲ್ಲಿ ಕನ್ನಡ ರಾಜ್ಯೋದಯದ ಬದಲಾವಣೆಯನ್ನು ಮೈಸೂರು ಮನಃಪೂರ್ವಕ ಸ್ವೀಕರಿಸಿತ್ತು. 1962ರಲ್ಲಿ ಮೂರನೇ ಲೋಕಸಭೆ ಚುನಾವಣೆ ಬಂದಾಗಲೂ ಮೈಸೂರಿನ ಇತಿಹಾಸ ಮತ್ತೊಮ್ಮೆ ಹೊಸತನವೊಂದಕ್ಕೆ ತೆರೆದು ಕೊಂಡಿತು. ಅದು ಕ್ಷೇತ್ರ ವಿಭಜನೆಯ ಕಾಲ. ಮೊದಲ ಎರಡು ಚುನಾವಣೆಗಳಲ್ಲಿ ದ್ವಿಸದಸ್ಯ ಕ್ಷೇತ್ರವಾಗಿದ್ದ ಮೈಸೂರು ಕ್ಷೇತ್ರವನ್ನು ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳಾಗಿ ವಿಂಗಡಣೆಯಾಯಿತು.ಆಗಿನಿಂದ ಮೈಸೂರು ಕ್ಷೇತ್ರವು ಏಕಸದಸ್ಯ ಕ್ಷೇತ್ರ ವಾಯಿತು. ಮೈಸೂರಿನಲ್ಲಿ ಆಗ ಎಂಟು ವಿಧಾನಸಭೆ ಕ್ಷೇತ್ರಗಳಿದ್ದವು. ಈಗಲೂ ಎಂಟು ಕ್ಷೇತ್ರಗಳಿವೆ. ಆಗ ಇದ್ದ ಮೈಸೂರು ತಾಲ್ಲೂಕು ಮಾತ್ರ ಬದಲಾಗಿ ಚಾಮುಂಡೇಶ್ವರಿ ಕ್ಷೇತ್ರವೆಂದು ಮರುನಾಮಕರಣಗೊಂಡಿದೆ.  ಇಬ್ಭಾಗದ ನಂತರ ಮೈಸೂರು ಸಾಮಾನ್ಯ ಅಭ್ಯರ್ಥಿ ಮತ್ತು ಚಾಮರಾಜನಗರ ಮೀಸಲು ಕ್ಷೇತ್ರಗಳಾದವು. ಆದರೆ, ಮೈಸೂರು ಜನರು ಮಾತ್ರ ಕಾಂಗ್ರೆಸ್‌ ಪಕ್ಷದ ಕೈ ಬಿಡಲಿಲ್ಲ.ಶಂಕರಯ್ಯ ಮರುಆಯ್ಕೆ: 1957ರ ಚುನಾವಣೆಯಲ್ಲಿ ದ್ವಿಸದಸ್ಯ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದ ಎಂ. ಶಂಕರಯ್ಯ ಮೈಸೂರಿನಿಂದ ಗೆದ್ದರು. ಚಾಮರಾಜನಗರದಿಂದ ಎಸ್‌.ಎಂ. ಸಿದ್ದಯ್ಯ  ಕೂಡ ವಿಜಯ ಸಾಧಿಸಿದರು.ಮೊದಲ ಎರಡು ಚುನಾವಣೆ ಗಳಲ್ಲಿ ಕೇವಲ ಎರಡು ಪಕ್ಷಗಳ ನಾಲ್ಕು ಜನರು ಮಾತ್ರ ಸ್ಪರ್ಧಿಸಿದ್ದರು. ಆದರೆ, ಮೂರನೇ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಆರು ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೂ, ಶಂಕರಯ್ಯ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಸ್ವತಂತ್ರ ಅಭ್ಯರ್ಥಿ ಎಚ್‌. ರಾಮರಾಜೇ ಅರಸ್ ಅವರನ್ನು 57,906 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದರು.ಕೇಂದ್ರದಲ್ಲಿ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಪಂಚವಾರ್ಷಿಕ ಯೋಜನೆ, ಕೈಗಾರಿಕಾ ಕ್ರಾಂತಿ, ಶಿಕ್ಷಣ, ಕೃಷಿಗಾಗಿ ಅನುಷ್ಠಾನಗೊಳಿಸಿದ್ದ ಪ್ರಗತಿಪರ ಯೋಜನೆಗಳು ಜನಪ್ರಿಯವಾಗಿದ್ದವು. ಇದು ರಾಜ್ಯದ ಎಲ್ಲ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ವರದಾನವಾಗಿತ್ತು.ಜನಸಂಘದ ಪದಾರ್ಪಣೆ: ಹಿಂದುತ್ವವಾದದ ಹಿನ್ನೆಲೆಯ ಭಾರತೀಯ ಜನಸಂಘವು 1962ರ ಚುನಾವಣೆಯಲ್ಲಿ ಮೊದಲ ಬಾರಿಗೆ ಪದಾರ್ಪಣೆ ಮಾಡಿತು. ವಿ. ಶ್ರೀನಿವಾಸ್  ಅಯ್ಯಂಗಾರ್ ಅಭ್ಯರ್ಥಿಯಾಗಿದ್ದರು. ಅವರು 9,524 ಮತಗಳನ್ನೂ ಪಡೆದರು.  ಆ ಹೊತ್ತಿಗೆ ಸೋಷಲಿಸ್ಟ್ ಪಕ್ಷಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುವ ಲಕ್ಷಣವನ್ನೂ ಈ ಚುನಾವಣೆ ಬಹಿರಂಗಗೊಳಿಸಿತು. ಆ ಪಕ್ಷದಿಂದ ಸ್ಪರ್ಧಿಸಿದ್ದ ಎಂ.ಎನ್. ತಿಮ್ಮಯ್ಯ ಅವರು 39,167 ಮತಗಳನ್ನು ಪಡೆದರು. ಉಳಿದಂತೆ ಕಣದಲ್ಲಿದ್ದ ಮೂವರು ಸ್ವತಂತ್ರ ಅಭ್ಯರ್ಥಿಗಳು ತಮ್ಮ ಬಲ ಪ್ರದರ್ಶಿಸಿದರು.ಒಂದೇ ಬಾರಿ ಚುನಾವಣೆ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಂದೇ ಬಾರಿ ನಡೆಯುತ್ತಿದ್ದವು. ಈಗಿನಷ್ಟು ಮಾಧ್ಯಮ ಪ್ರಚಾರ ಇರದ ಕಾರಣ ಲೋಕಸಭೆ ಚುನಾವಣೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರಲಿಲ್ಲ. ಆದರೆ,  ನೆಹರೂ ಅವರ ವರ್ಚಸ್ಸು ಸಾಕಷ್ಟು ಜನಪ್ರಿಯವಾಗಿತ್ತು.‘ಆಗೆಲ್ಲ ಲೋಕಸಭೆ ಚುನಾವಣೆ ಬಗ್ಗೆ ಹೆಚ್ಚು ಗೊತ್ತಿರುತ್ತಿರಲಿಲ್ಲ. ದಿಲ್ಲಿ ಎಲೆಕ್ಷನ್ ಎಂದಷ್ಟೇ ಹೇಳಲಾಗುತ್ತಿತ್ತು. ವಿಧಾನಸಭೆ ಚುನಾವಣೆ ಮಾತ್ರ ಭಾರೀ ಭರಾಟೆಯೊಂದಿಗೆ ನಡೆಯುತ್ತಿತ್ತು. ಮತಪತ್ರದಲ್ಲಿ ವಿಧಾನಸಭೆ ಅಭ್ಯರ್ಥಿಗೆ ಓಟು ಹಾಕುವ ಜೊತೆಗೆ, ಇನ್ನೊಂದು ಮತಪತ್ರದಲ್ಲಿಯೂ ಗುರುತಿಗೆ ಒತ್ತಿ ಹೋಗುವ ರೂಢಿಯಿತ್ತು’ ಎಂದು ಕನ್ನೇಗೌಡರ ಕೊಪ್ಪಲಿನ ಮಹದೇವಯ್ಯ ನೆನಪಿಸಿಕೊಳ್ಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.