ಭಾನುವಾರ, ಜೂನ್ 20, 2021
28 °C

ಖಂಡನಾ ನಿರ್ಣಯಕ್ಕೆ ಶ್ರೀಲಂಕಾ ಎಚ್ಚರಿಕೆ:ಕಾಶ್ಮೀರ ವಿವಾದದ ಮೇಲೂ ಪರಿಣಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಐಎಎನ್‌ಎಎಸ್/ಪಿಟಿಐ):  ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ತನ್ನ ವಿರುದ್ಧ ತೆಗೆದುಕೊಂಡ ಖಂಡನಾ ನಿರ್ಣಯದ ಪರಿಣಾಮ `ಕಾಶ್ಮೀರ ವಿಷಯ~ದಲ್ಲೂ ಮರುಕಳಿಸಬಹುದು ಎಂದು ಶ್ರೀಲಂಕಾ ಶನಿವಾರ ಭಾರತವನ್ನು ಎಚ್ಚರಿಸಿದೆ.ಲಂಕಾ ವಿರುದ್ಧ ಬಳಸಿದ ಖಂಡನಾ ನಿರ್ಣಯದ ಅಸ್ತ್ರವನ್ನೇ ಕೆಲವು ರಾಷ್ಟ್ರಗಳು ಕಾಶ್ಮೀರ ಸಮಸ್ಯೆ ವಿಷಯದಲ್ಲೂ ಭಾರತದ ವಿರುದ್ಧ ಬಳಸುವ ಸಾಧ್ಯತೆಗಳಿವೆ ಎಂದು ಸರ್ಕಾರದ ವಕ್ತಾರ ಲಕ್ಷ್ಮಣ ಯಾಪಾ ಅಬೆವರ್ಧನೆ ಅವರು ಅಭಿಪ್ರಾಯಪಟ್ಟಿದ್ದಾರೆ.ಮತ್ತೊಂದು ಬೆಳವಣಿಗೆಯಲ್ಲಿ ಭಾರತದೊಂದಿಗಿನ ಆರ್ಥಿಕ ಒಪ್ಪಂದಗಳ ಕುರಿತು ಮರು ಪರಿಶೀಲನೆ ನಡೆಸುವಂತೆ ಶ್ರೀಲಂಕಾ ಸರ್ಕಾರದ ಮೈತ್ರಿ ಪಕ್ಷ ಜಥಿಕಾ ಹೆಲಾ ಉರುಮಾಯಾ (ಜೆಎಚ್‌ಯು) ಸಲಹೆ ಮಾಡಿದೆ.ಅಮೆರಿಕ ಪ್ರಾಯೋಜಿತ ಖಂಡನಾ ನಿರ್ಣಯದ ಪರ ವಿಶ್ವಸಂಸ್ಥೆಯಲ್ಲಿ ಭಾರತ ಗುರುವಾರ ಮತ ಚಲಾಯಿಸದ ನಂತರ ಈ ಬೆಳವಣಿಗೆಗಳು ನಡೆದಿವೆ. ಭೌಗೋಳಿಕವಾಗಿ ನೆರೆಯ ರಾಷ್ಟ್ರ ಎಂಬ ಒಂದೇ ಕಾರಣಕ್ಕೆ ಭಾರತವನ್ನು ಪರಮಾಪ್ತ ರಾಷ್ಟ್ರ ಎಂದು ಪರಿಗಣಿಸಬೇಕಿಲ್ಲ ಎಂದು ಜೆಎಚ್‌ಯು ವಕ್ತಾರ ಉದಯ್ ಗಮ್ಮನ್‌ಪಿಲಾ ಅವರು ಕಿಡಿ ಕಾರಿದ್ದಾರೆ.`ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಲಂಕಾ ಸರ್ಕಾರ ಭಾರತದ ಮೇಲಾಗುವ ಸಾಧಕ, ಬಾಧಕಗಳ ಬಗ್ಗೆ ಯೋಚಿಸಿಸುತ್ತದೆ. ಆದರೆ, ಭಾರತ ಈಗ ಅಮೆರಿಕ ಪರ ನಿಲ್ಲುವ ಮೂಲಕ ಅದು ನಮ್ಮ ಪಾಲಿಗೆ ಏಷ್ಯಾದ ಒಂದು ರಾಷ್ಟ್ರವಾಗಿ ಮಾತ್ರ ಉಳಿದಿದೆ~ ಎಂದು ಟೀಕಿಸಿದ್ದಾರೆ.ದ್ವಂದ್ವ ನಿಲುವು: ಖಂಡನಾ ನಿರ್ಣಯವನ್ನು ಬೆಂಬಲಿಸಿದ ಭಾರತದ ಕ್ರಮದ ಕುರಿತು ಸಂದಿಗ್ಧತೆಗೆ ಸಿಲುಕಿರುವ ಶ್ರೀಲಂಕಾ ಸ್ಪಷ್ಟ ನಿರ್ಧಾರ ತಾಳುವಲ್ಲಿ ವಿಫಲವಾಗಿದೆ. ಲಂಕಾ ಸರ್ಕಾರವು, ಭಾರತದ ಪರ ಮತ್ತು ವಿರೋಧವಾಗಿ ದ್ವಂದ್ವ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಖಂಡನಾ ನಿರ್ಣಯದ ಪರ ಮತ ಚಲಾಯಿಸಿದ ರಾಷ್ಟ್ರಗಳ ಬಗ್ಗೆ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಕಿಡಿ ಕಾರಿದರೆ, ಸಚಿವರಿಬ್ಬರು ಭಾರತದ ಕ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ನಿರ್ಣಯ ಬೆಂಬಲಿಸಿರುವ ರಾಷ್ಟ್ರಗಳ ಮೇಲೆ ವಾಗ್ದಾಳಿ ನಡೆಸಿರುವ ರಾಜಪಕ್ಸೆ, ನಿರ್ಣಯ ಬೆಂಬಲಿಸಿರುವ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಭಯೋತ್ಪಾದನೆಯ ನೇರ ಪರಿಣಾಮ ಎದುರಿಸಬೇಕಾದೀತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರಾಷ್ಟ್ರಗಳು ತಮ್ಮ ನಿರ್ಧಾರದ ಕುರಿತು ವ್ಯಥೆ ಪಡುವ ಕಾಲ ದೂರವಿಲ್ಲ ಎಂದು ಅವರು ಟೀಕಿಸಿದ್ದಾರೆ.ಆದರೆ, ಖಂಡನಾ ನಿರ್ಣಯದ ಪರಿಣಾಮಗಳನ್ನು ದುರ್ಬಲಗೊಳಿಸಿದ ಭಾರತದ ನಿಲುವಿನ ಬಗ್ಗೆ ಲಂಕಾ ಸಚಿವ ಮೈತ್ರಿಪಾಲ ಸಿರಿಸೇನಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಂಕಾ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಿದ ಭಾರತವು, ಖಂಡನಾ ನಿರ್ಣಯದಲ್ಲಿ ಸಾಕಷ್ಟು ತಿದ್ದುಪಡಿ ತಂದಿದೆ ಎಂದು ಅವರು ಶ್ಲಾಘಿಸಿದ್ದಾರೆ.ಖಂಡನಾ ನಿರ್ಣಯಕ್ಕೆ ಬೆಂಬಲಿಸಿದ ಮಾತ್ರಕ್ಕೆ ಭಾರತವನ್ನು ದ್ವೇಷಿಸುವ ಅಗತ್ಯವಿಲ್ಲ ಎಂದು ಮತ್ತೊಬ್ಬ ಸಚಿವ ದುಲ್ಲಾಸ್ ಅಲಪ್ಪೆರುಮಾ ಅವರು ಸಿಂಹಳೀಯರಿಗೆ ಮನವಿ ಮಾಡಿದ್ದಾರೆ.ಮತ್ತೊಂಡೆದೆ, ಪಾಶ್ಚಿಮಾತ್ಯ ರಾಷ್ಟ್ರಗಳ ಗುಪ್ತಕಾರ್ಯಸೂಚಿ ಜಾರಿಯನ್ನು ತಡೆಯುವಂತೆ ಶ್ರೀಲಂಕಾದ ಪ್ರಮುಖ ದಿನಪತ್ರಿಕೆಗಳು ಭಾರತವನ್ನು ಆಗ್ರಹಿಸಿವೆ.ಸಂಭಾವ್ಯ ದಾಳಿ ಎಚ್ಚರಿಕೆಲಂಡನ್ (ಐಎಎನ್‌ಎಸ್):
ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಖಂಡನಾ ನಿರ್ಣಯಕ್ಕೆ ಪ್ರತೀಕಾರವಾಗಿ ಶ್ರೀಲಂಕಾದ ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುವ ಸಾಧ್ಯತೆಗಳಿವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ.ಮಾನವ ಹಕ್ಕು ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮಾನವ ಹಕ್ಕುಗಳ ಹೈಕಮಿಷನರ್ ನವಿ ಪಿಳ್ಳೆ ಲಂಕಾ ಸರ್ಕಾರಕ್ಕೆ ಅವರು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.