ಖಂಡನೀಯ ಮಾಲ್ಡೀವ್ಸ್ ನಿಲುವು

7

ಖಂಡನೀಯ ಮಾಲ್ಡೀವ್ಸ್ ನಿಲುವು

Published:
Updated:

ಮಾಲ್ಡೀವ್ಸ್ ಮತ್ತು ಭಾರತೀಯ ಮೂಲದ ಜಿಎಂಆರ್ ಕಂಪೆನಿ ನಡುವಿನ ವಾಣಿಜ್ಯ ಸಂಬಂಧಿ ಜಗಳ ಎರಡು ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವನ್ನು ಹದಗೆಡಿಸುವ ರೀತಿಯಲ್ಲಿ ಬೆಳೆಯುತ್ತಿದೆ. ಮಾಲ್ಡೀವ್ಸ್‌ನ ಹೊಸ ಅಧ್ಯಕ್ಷ ಮೊಹಮ್ಮದ್ ವಹೀದ್ ಅವರು ಜಿಎಂಆರ್ ಕಂಪೆನಿಗೆ ನೀಡಲಾಗಿದ್ದ 50 ಕೋಟಿ ಡಾಲರ್ ವೆಚ್ಚದ ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಣ ಯೋಜನೆಯ ಒಪ್ಪಂದವನ್ನು ರದ್ದುಗೊಳಿಸಿರುವುದು ಈಗಿನ ವಿವಾದಕ್ಕೆ ಕಾರಣ.ಈಗಾಗಲೇ ಯೋಜನೆಯಲ್ಲಿ ಸುಮಾರು 250 ಕೋಟಿ ಡಾಲರ್‌ನಷ್ಟು ಹಣ ಖರ್ಚು ಮಾಡಿರುವ ಜಿಎಂಆರ್ ಕಂಪೆನಿ ಸಹಜವಾಗಿಯೇ ಆತಂಕಕ್ಕೀಡಾಗಿದೆ. `ಸಂಶಯಾಸ್ಪದ ಪರಿಸ್ಥಿತಿ'ಯಲ್ಲಿ ಈ ಒಪ್ಪಂದಕ್ಕೆ ಸಹಿಹಾಕಿರುವುದರಿಂದ ಅದನ್ನು ನಮ್ಮ ಸರ್ಕಾರ ಒಪ್ಪಿಕೊಳ್ಳಲು ಸಾಧ್ಯ ಇಲ್ಲ ಎಂದು ಮೊಹಮ್ಮದ್ ವಹೀದ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.ಸರ್ಕಾರದ ಆದೇಶಕ್ಕೆ ಮಾಲ್ಡೀವ್ಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಅದನ್ನು ಪಾಲಿಸಲು ಅಲ್ಲಿನ ಸರ್ಕಾರ ಸಿದ್ಧ ಇರಲಿಲ್ಲ. ಈಗ  ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಾಪಸು ಪಡೆಯುವ ಅಧಿಕಾರ ಮಾಲ್ಡೀವ್ಸ್ ಸರ್ಕಾರಕ್ಕೆ ಇದೆ' ಎಂದು ಸಿಂಗಪುರದ ಮೇಲ್ಮನವಿ ನ್ಯಾಯಾಲಯ ತೀರ್ಪು ನೀಡಿರುವುದು ಜೆಎಂಆರ್ ಕಂಪೆನಿಗೆ ಮಾತ್ರ ಅಲ್ಲ ಭಾರತ ಸರ್ಕಾರಕ್ಕೂ ಒಂದು ಹಿನ್ನಡೆ. ಯೋಜನೆಯ ಒಪ್ಪಂದದ ಪ್ರಕಾರ ಭಿನ್ನಾಭಿಪ್ರಾಯ ಉದ್ಭವಿಸಿದ್ದಲ್ಲಿ ಅದನ್ನು ಸಿಂಗಪುರ ಇಲ್ಲವೆ ಬ್ರಿಟನ್ ನ್ಯಾಯಾಲಯಗಳಲ್ಲಿ ಮಾತ್ರ ಪ್ರಶ್ನಿಸಲು ಸಾಧ್ಯ.ಇದರ ಹಿಂದೆ ಹಲವಾರು ಮೂಲಗಳ ಕೈವಾಡಗಳಿರಬಹುದೆಂಬ ಜಿಎಂಆರ್ ಕಂಪೆನಿಯ ಶಂಕೆಯನ್ನು ತಳ್ಳಿಹಾಕಲಾಗದು. ಮೊದಲನೆಯದಾಗಿ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಬೆಂಬಲಿಗರ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ಹೊರಟಿರುವ ನೂತನ ಅಧ್ಯಕ್ಷ ಮೊಹಮ್ಮದ್ ವಹೀದ್ ಸ್ಥಳೀಯವಾಗಿಯೂ ಇಂತಹ ಅನೇಕ ಗುತ್ತಿಗೆಗಳನ್ನು ರದ್ದುಮಾಡಿದ್ದಾರೆ. ಇದರ ಜತೆಗೆ ಬಾಹ್ಯಶಕ್ತಿಗಳ ಕೈವಾಡದ ಬಗ್ಗೆಯೂ ಊಹಾಪೋಹಗಳಿದ್ದು, ಪ್ರಮುಖವಾಗಿ ಚೀನಾ ದೇಶದ ಹೆಸರು ಕೇಳಿಬರುತ್ತಿದೆ.ಈ ಪ್ರಕರಣವನ್ನೇ ಬಳಸಿಕೊಂಡು ಮಾಲ್ಡೀವ್ಸ್ ಸರ್ಕಾರ ಆ ದೇಶದಲ್ಲಿ ಭಾರತ ವಿರೋಧಿ ಭಾವನೆಗಳಿಗೆ ಉತ್ತೇಜನ ನೀಡುವುದು ಸರಿ ಅಲ್ಲ. ಸ್ಥಳೀಯ ರಾಜಕೀಯ ವಿರೋಧಿಗಳನ್ನು ಮಣಿಸುವ ಉದ್ದೇಶದಿಂದ ಮಾಲ್ಡೀವ್ಸ್‌ನ ಈಗಿನ ಅಧ್ಯಕ್ಷರು ಇಂತಹ ನಿರ್ಧಾರ ಕೈಗೊಂಡಿದ್ದರೆ ಅದನ್ನು ಖಂಡಿಸಬೇಕಾಗುತ್ತದೆ. ಸದ್ಯಕ್ಕೆ ಭಾರತ ಜಿಎಂಆರ್ ಕಂಪೆನಿ ಪರವಾಗಿ ನಿಂತಿರುವುದು ಸ್ವಾಗತಾರ್ಹ.ಬೇರೆ ದೇಶಗಳ ಜತೆಗೆ ಭಾರತ ಮಾಡಿಕೊಳ್ಳುವ ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿಯೇ ಇಲ್ಲಿನ ಉದ್ಯಮಿಗಳು ಆ ದೇಶಗಳಲ್ಲಿ ಬಂಡವಾಳ ಹೂಡುವುದರಿಂದ ಅವರಿಗೆ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. `ನ್ಯಾಯಸಮ್ಮತ ರೀತಿಯಲ್ಲಿ ನಡೆದುಕೊಳ್ಳದಿದ್ದರೆ ದ್ವಿಪಕ್ಷೀಯ ಬಾಂಧವ್ಯ ಮತ್ತು ಒಪ್ಪಂದಗಳ ಮೇಲೂ ಇದರ ದುಷ್ಪರಿಣಾಮ ಉಂಟಾಗಬಹುದು. ಸಹಯೋಗದ ಬೇರೆ ಯೋಜನೆಗಳನ್ನು ಹಿಂದಕ್ಕೆಪಡೆಯುವುದು ಸೇರಿದಂತೆ ಇತರ ಆಯ್ಕೆಗಳಿಗೆ ಮೊರೆಹೋಗುವುದು ಅನಿವಾರ್ಯವಾಗಬಹುದು' ಎಂದು ಭಾರತ ಹೇಳಿರುವುದು ಸರಿಯಾಗಿದೆ. ಇಷ್ಟಕ್ಕೆ ಸುಮ್ಮನಾಗದೆ ಮಾಲ್ಡೀವ್ಸ್ ಮೇಲೆ ರಾಜತಾಂತ್ರಿಕ ಒತ್ತಡ ಹೇರಿ ಭಾರತೀಯ ಉದ್ಯಮಿಗೆ ನ್ಯಾಯ ದೊರಕಿಸಿಕೊಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry