ಖಂಡೇನಹಳ್ಳಿಯಲ್ಲಿ ಕಾಣದ ಅಭಿವೃದ್ಧಿ

7

ಖಂಡೇನಹಳ್ಳಿಯಲ್ಲಿ ಕಾಣದ ಅಭಿವೃದ್ಧಿ

Published:
Updated:

ಧರ್ಮಪುರದಿಂದ 10 ಕಿ.ಮೀ. ದೂರದಲ್ಲಿ ಇರುವ ಗಡಿ ಖಂಡೇನಹಳ್ಳಿ ಗ್ರಾಮ  ಮೂಲಸೌಲಭ್ಯಗಳಿಂದ ವಂಚಿತವಾಗಿದೆ.

ಪರಿಶಿಷ್ಟ ಜಾತಿ, ಪಂಗಡ, ಕುಂಚಿಟಿಗ, ಕುಂಬಾರ, ಕಮ್ಮಾರ ಮತ್ತು ಮುಸ್ಲಿಂ ಸಮುದಾಯವೇ ಹೆಚ್ಚಾಗಿ ಹೊಂದಿರುವ ಈ ಗ್ರಾಮ ಸುಮಾರು 1,800 ಮನೆಗಳನ್ನು ಹೊಂದಿದೆ. ಈ ಗ್ರಾಮದಲ್ಲಿ 6 ಸಾವಿರ ಜನಸಂಖ್ಯೆ ಹೊಂದಿರುವ ಗಡಿ ಗ್ರಾಮವಾಗಿರುವ ಇಲ್ಲಿಂದ ಆಂಧ್ರದ ಗಡಿ ಕೇವಲ 3 ಕಿ.ಮೀ. 1988ರಿಂದ 2000ದವರೆಗೆ ನಕ್ಸ್‌ಲ್‌ರ ಚಟುವಟಿಕೆಯ  ಗ್ರಾಮವೂ ಆಗಿತ್ತು.ಪಕ್ಕದ ಆಂಧ್ರದ ನಕ್ಸ್‌ಲರು ಖಂಡೇನಹಳ್ಳಿ, ಮದ್ದಿಹಳ್ಳಿ, ಹಲಗಲದ್ದಿ, ಹೊಸಕೆರೆ ಮತ್ತು ಧರ್ಮಪುರವನ್ನು ತಮ್ಮ ವಾಸ್ತವ್ಯವನ್ನಾಗಿ ಮಾಡಿಕೊಂಡಿದ್ದರು. ಅಲ್ಲದೇ, ಸರ್ಕಾರ ಗಡಿ ನಕ್ಸಲ್ ಗ್ರಾಮವಾದ ಖಂಡೇನಹಳ್ಳಿಗೆ ನಕ್ಸಲ್ ಗ್ರಾಮಾಭಿವೃದ್ಧಿ ಯೋಜನೆ ಅಡಿ ರಸ್ತೆ, ಕುಡಿಯುವ ನೀರು, ಶಿಕ್ಷಣ ಮತ್ತು ಆರೋಗ್ಯ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಮಂಜೂರು ಮಾಡಿತ್ತು. ಆದರೆ, ರಾಜಕೀಯ ದೊಂಬರಾಟದಲ್ಲಿ ಅದರ ಸದ್ಬಳಕೆ ಗ್ರಾಮದ ಅಭಿವೃದ್ಧಿಗೆ ಆಗದೇ ಹಣ ಸಂಪೂರ್ಣವಾಗಿ ಪೋಲಾಯಿತು ಎಂದು ಗ್ರಾಮದ ಹಿರಿಯರಾದ ಕೆ.ಎಸ್. ಓಬಳಪ್ಪ ನೊಂದು ನುಡಿಯುತ್ತಾರೆ.  ಗ್ರಾಮದ ಇತಿಹಾಸ: ಈ ಗ್ರಾಮದ ಮೂಲ ಹೆಸರು `ಕರಡಿ ಮೆಳೆ'. ಈ ಹಿಂದೆ ಗ್ರಾಮ ಚಿತ್ರದುರ್ಗ, ನಿಡಗಲ್, ಹರ್ತಿಕೋಟೆ ಮತ್ತು ರತ್ನಗಿರಿ ಪಾಳೇಗಾರರ ಆಡಳಿತಕ್ಕೆ ಒಳಪಟ್ಟಿತ್ತು. ಇಲ್ಲಿ ದಟ್ಟವಾದ ಗಿಡಮರಗಳಿಂದ ಕೂಡಿದ ಕಾಡಿತ್ತು. ಇದರಲ್ಲಿ ಕರಡಿಗಳು ವಾಸವಾಗಿದ್ದವು. ಒಮ್ಮೆ ಒಂದು ಕರಡಿಯ ಉಪಟಳ ಸುತ್ತಮುತ್ತಲಿನ ಗ್ರಾಮದ ನಾಗರಿಕರಿಗೆ ಹೆಚ್ಚಾಯಿತು. ಆಗ ಸುತ್ತಮುತ್ತಲಿನ ನಾಗರಿಕರು ನಿಡಗಲ್ ದೊರೆ ವೀರತಿಮ್ಮಣ್ಣ ನಾಯಕನಿಗೆ ದೂರು ನೀಡಿದರು.ಸುಮಾರು 7 ಸಲ ಇಲ್ಲಿಗೆ ಭೇಟಿ ನೀಡಿದ್ದ ದೊರೆಗಳಿಗೆ ಕಾಡಿನಲ್ಲಿದ್ದ ಕರಡಿಯನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ಇದರಿಂದ ವಾಪಸ್ಸಾದ ರಾಜರು ಕರಡಿಯನ್ನು ಕೊಂದವರಿಗೆ ಅರ್ಧರಾಜ್ಯ ಮತ್ತು ಅರ್ಧಭಂಡಾರವನ್ನು ಕೊಡುವುದಾಗಿ ಡಂಗೂರ ಸಾರಿಸಿದರು. ಆಗ ಈ ಭಾಗದ ಪಾಳೇಗಾರ ಮೂಗಿರಾಜ ಡಂಗೂರದ ಸುದ್ದಿಯನ್ನು ತಿಳಿದು ರಾಜರನ್ನು ಭೇಟಿ ಮಾಡಿ ಅವರ ದಂಡಿನ ಸಹಾಯವನ್ನು ಪಡೆದು ಕರಡಿಯನ್ನು ಕೊಂದನು. ಸಂತೃಪ್ತನಾದ ರಾಜ ಅರ್ಧ ರಾಜ್ಯ ಮತ್ತು ಭಂಡಾರವನ್ನು ಕೊಡಲು ಮುಂದಾದಾಗ ರಾಜ್ಯ ಮತ್ತು ಭಂಡಾರವನ್ನು ಬೇಡದೇ ತಮ್ಮ ಜಾನುವಾರುಗಳ ಮೇವಿಗಾಗಿ  `ಕರಡಿ ಮೆಳೆ'ಯನ್ನು ಜಹಗೀರುದಾರಿಯಾಗಿ ಪಡೆದನು. ಅಲ್ಲಿದ್ದ ಕಾಡನ್ನು ಕಡಿದು ಗೊಲ್ಲರದೊಡ್ಡಿಯ ವೀರಕಾಟಜ್ಜಿಯ ನಿದೇಶನದಂತೆ ಅವಳಿಂದ ಒಂದು ಹಂಡಿಗೆ ಇಕ್ಕೇರಿ ವರವನ್ನು ಪಡೆದು ಗ್ರಾಮವನ್ನು ಕಟ್ಟಿದನು.ಅದೇ ಇಂದು `ಖಂಡೇನಹಳ್ಳಿ' ಎಂದು ಹೆಸರು ಪಡೆದಿದೆ. ಅದಕ್ಕೆ ಸಂಬಂಧಿಸಿದಂತೆ  ನಿಡಗಲ್ ಬೆಟ್ಟದ ಮೇಲೆ ಕಾಳಹಸ್ತೀಶ್ವರ ದೇವಸ್ಥಾನ ಮತ್ತು ರಂಗಸಮುದ್ರ ಕೆರೆಯಲ್ಲಿ ಶಾಸನಗಳಿವೆ ಎಂದು ಎಲ್. ಗಂಗಣ್ಣ ತಿಳಿಸುತ್ತಾರೆ.ಗ್ರಾಮದಲ್ಲಿ ಇರುವ ಸೌಲಭ್ಯಗಳು: ಸುಸಜ್ಜಿತ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಖಾಸಗಿ ಕಾನ್ವೆಂಟ್, ಪ್ರಗತಿ ಗ್ರಾಮೀಣ ಬ್ಯಾಂಕ್, ಶಾಖಾ ಅಂಚೆ ಕಚೇರಿ, ಪಶು ಚಿಕಿತ್ಸಾ ಕೇಂದ್ರ, ಅಂಗನವಾಡಿ ಕೇಂದ್ರಗಳು, ಆರೋಗ್ಯ ಶುಶ್ರೂಷಕರ ಕೊಠಡಿ, ಸರ್ವಧರ್ಮ ಸಮನ್ವಯದ ಎರ‌್ರಿತಾತ ಮಠ, ಬಸವಕೇಂದ್ರ ಮತ್ತು ನಿರ್ಮಾಣ ಹಂತದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ.ಫ್ಲೋರೈಡ್ ನೀರು: ಗ್ರಾಮದಲ್ಲಿ ಸಾಕಷ್ಟು ಜನಸಂಖ್ಯೆ ಇರುವುದರಿಂದ ಅದಕ್ಕೆ ಪೂರಕವಾಗಿ ಸಮರೋಪಾದಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಿಲ್ಲ. ಕೆಲವೊಮ್ಮೆ ತಾತಯ್ಯನ ಮಠದಿಂದ ನೀರು ತಂದು ಕುಡಿಯಬೇಕಾದಂತಹ ಪರಿಸ್ಥಿತಿ ತಲೆದೋರುತ್ತದೆ. ಅದರಲ್ಲೂ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ನಮಗೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ಮುಸ್ಲಿಂ ಕೇರಿಯಲ್ಲಿ ರಸ್ತೆಗಳಿಲ್ಲ ಹಾಗೂ ಚರಂಡಿಗಳಿಲ್ಲದೇ ನೀರು ರಸ್ತೆಯ ಮೇಲೆ ಹರಿದು ಅಲ್ಲಲ್ಲಿ ನೀರು ನಿಂತು ದುರ್ವಾಸನೆ ಬರುತ್ತದೆ ಎಂದು ಸೈಯದ್ ಅಕ್ಬರ್ ಆಡಳಿತ ವ್ಯವಸ್ಥೆಯನ್ನು ದೂರುತ್ತಾರೆ.ಗ್ರಾಮಕ್ಕೆ ನಿರಂತರ ಜ್ಯೋತಿ ವಿದ್ಯುತ್ ಸರಬರಾಜು ಯೋಜನೆಯ ಕೆಲಸ ಮುಗಿದಿದೆ. ಆದರೆ, ಸಂಪರ್ಕ ಕಲ್ಪಿಸುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಆರೋಗ್ಯ ವ್ಯವಸ್ಥೆಗೆ ಸಂಬಂಧಿಸಿದಂತೆ ಕಟ್ಟಡ ಪೂರ್ಣವಾಗಿಲ್ಲ. ಆಸ್ಪತ್ರೆಗೆ ವೈದ್ಯಾಧಿಕಾರಿಗಳ ನೇಮಕ, ಸಿಬ್ಬಂದಿ ನೇಮಕ ತುರ್ತಾಗಿ ಆಗಬೇಕು ಎಂದು ದ್ಯಾಮಣ್ಣ ಆಗ್ರಹಿಸಿದ್ದಾರೆ.ಸರ್ಕಾರಿ ಪ್ರೌಢಶಾಲೆಯ ಆವರಣ ಸಾಕಷ್ಟು ವಿಸ್ತಾರವಾಗಿದೆ. ಇಲ್ಲಿ ಕ್ರೀಡಾಂಗಣ ನಿರ್ಮಿಸಬೇಕು. ಗ್ರಾಮದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೇ ಬಹಿರ್ದೆಸೆಗೆ ಪ್ರಕೃತಿಯೇ ಆಸರೆ.  ಪ್ರತಿ ಕೇರಿಯಲ್ಲಿ ಡಾಂಬರೀಕರಣ ರಸ್ತೆ ನಿರ್ಮಾಣ ಆಗಬೇಕು. ಪ್ರತಿವರ್ಷ ನಕ್ಸಲ್ ಗ್ರಾಮಾಭಿವೃದ್ಧಿ ಯೋಜನೆಯ ಅಡಿ ಅನುದಾನ ಬಿಡುಗಡೆ ಆಗಬೇಕು ಮತ್ತು ಅದು ಸದ್ಬಳಕೆಯಾಗಬೇಕು. ಬಡವರಿಗೆ ಮತ್ತು ಸೂರಿಲ್ಲದವರಿಗೆ  ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಆಡಳಿತ ವ್ಯವಸ್ಥೆ ಮತ್ತು ಅಧಿಕಾರಿಗಳು ಮುಂದಾಗಬೇಕು ಎನ್ನುತ್ತಾರೆ ನಾಗರಿಕರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry