ಖಂಡೇಲ್‌ವಾಲ್ ಸಮಿತಿ ವರದಿಗೆ ತೀವ್ರ ಆಕ್ಷೇಪ

7

ಖಂಡೇಲ್‌ವಾಲ್ ಸಮಿತಿ ವರದಿಗೆ ತೀವ್ರ ಆಕ್ಷೇಪ

Published:
Updated:

ಮಡಿಕೇರಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಉದ್ಯೋಗಿಗಳಿಗೆ ಮಾರಕವಾಗಿರುವ ಖಂಡೇಲ್‌ವಾಲ್ ಸಮಿತಿ ವರದಿಯ ಸಲಹೆಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕು ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ನೌಕರರ ಸಂಘದ ಉಪಾಧ್ಯಕ್ಷ ವಾಲ್ಟರ್ ಲಸ್ರಾಡೋ ಒತ್ತಾಯಿಸಿದರು.ನಗರದ ಕಾರ್ಪೊರೇಷನ್ ಬ್ಯಾಂಕ್‌ನ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಬ್ಯಾಂಕ್ ನೌಕರರನ್ನು ಉದ್ದೇಶಿಸಿ ಅವರು ಮಾತನಾಡಿದರು.ಈ ವರದಿಯಲ್ಲಿ ಮುಖ್ಯವಾಗಿ ಬ್ಯಾಂಕಿಂಗ್ ಕ್ಷೇತ್ರದ ಅಡಿಪಾಯದಂತಿರುವ ಗುಮಾಸ್ತರ  ಹುದ್ದೆಗಳನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸುವಂತೆ ಸಲಹೆ ನೀಡಲಾಗಿದೆ. ಇದು ಇಡೀ ಕ್ಷೇತ್ರಕ್ಕೆ ಮಾರಕವಾಗಲಿದೆ. ಇದನ್ನು ಈ ಕೂಡಲೇ ಎಲ್ಲ ನೌಕರರು ಒಗ್ಗಟ್ಟಾಗಿ ವಿರೋಧಿಸಬೇಕು ಎಂದು ಕರೆ ನೀಡಿದರು.ಬ್ಯಾಂಕಿನ ಮುಖವಾಣಿಯಾಗಿ ಗ್ರಾಹಕರ ಜತೆ ವ್ಯವಹರಿಸುವ ಗುಮಾಸ್ತರ ಹುದ್ದೆಗಳನ್ನು ಕಡಿತಗೊಳಿಸಿದರೆ ಬ್ಯಾಂಕುಗಳ ವಹಿವಾಟು ವೃದ್ಧಿಯಾಗುವುದು ಹೇಗೆ? ಎಂದು ಅವರು ಪ್ರಶ್ನಿಸಿದರು. ಬ್ಯಾಂಕಿಂಗ್ ನೇಮಕಾತಿಗಳನ್ನು ಬ್ಯಾಂಕಿಂಗ್ ಸರ್ವೀಸಸ್ ರಿಕ್ರೂಟ್‌ಮಂಟ್ ಬೋರ್ಡ್ (ಬಿಎಸ್‌ಆರ್‌ಬಿ) ಮೂಲಕವೇ ಮಾಡಬೇಕು. ಈಚೆಗೆ ನೇರವಾಗಿ ಎಂಬಿಎ, ಸಿ.ಎ ಹೀಗೆ ಉನ್ನತ ಶಿಕ್ಷಣ ಪಡೆದವರು ಬರುತ್ತಾರೆ. ಆದರೆ ವರ್ಷ ಕಳೆಯುವುದರೊಳಗೆ ಹುದ್ದೆಗೆ ರಾಜೀನಾಮೆ ನೀಡಿ ಹೊರಟು ಹೋಗುತ್ತಾರೆ. ಇದು ಬ್ಯಾಂಕಿಂಗ್ ಸೇವೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನೇಮಕಾತಿ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಬೇಕಾದ ಅಗತ್ಯತೆ ಇದೆ ಎಂದು ಅವರು ಹೇಳಿದರು.ಎಲ್ಲ ಬ್ಯಾಂಕ್‌ಗಳಲ್ಲೂ ನೌಕರರಿಗೆ ಏಕರೂಪ ವೇತನ ಶ್ರೇಣಿ ನೀಡಬೇಕು. ಇದರ ಜತೆ ಭತ್ಯೆ ಹಾಗೂ ಇತರ ಸೌಲಭ್ಯಗಳನ್ನು ಸಹ ಬ್ಯಾಂಕಿಂಗ್ ಕ್ಷೇತ್ರದಲ್ಲಿರುವಂತೆ ನೀಡಬೇಕು ಹೊರತು ಆಯಾ ಬ್ಯಾಂಕಿನ ಲಾಭ-ನಷ್ಟದ ಮೇಲೆ ಅವಲಂಬಿತ ಆಗಿರಬಾರದು ಎಂದು ಅವರು ಒತ್ತಾಯಿಸಿದರು.ನೌಕರರ ಕ್ಷೇಮಾಭಿವೃದ್ಧಿ ನಿಧಿ ಹೆಚ್ಚಿಸುವುದು, ಬ್ಯಾಂಕಿನ ಲಾಭವನ್ನು ಕೇವಲ ಆಡಳಿತ ಮಂಡಳಿಗೆ ನೀಡದೆ, ಎಲ್ಲ ನೌಕರ ವರ್ಗದವರಿಗೆ ಹಂಚಬೇಕು, ಬ್ಯಾಂಕಿಂಗ್ ಸೇವೆಗಳನ್ನು ಹೊರಗುತ್ತಿಗೆ ನೀಡುವುದನ್ನು ತಡೆಯಬೇಕು, ಅನುಕಂಪ ಆಧಾರದ ನೇಮಕಾತಿಗೆ ಪುನಃ ಚಾಲನೆ ನೀಡುವುದು ಸೇರಿದಂತೆ ಇತರೆ ಹಲವು ಬೇಡಿಕೆಗಳನ್ನು ಅವರು ಮಂಡಿಸಿದರು.2009ರಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಮಾನವ ಸಂಪನ್ಮೂಲ (ಎಚ್‌ಆರ್) ವಿಭಾಗದ ಪ್ರಕರಣಗಳನ್ನು ಅಧ್ಯಯನ ಮಾಡುವಂತೆ ಕೇಂದ್ರ ಸರ್ಕಾರವು ಈ ಸಮಿತಿಯನ್ನು ರಚಿಸಿತ್ತು. ಆದರೆ, ಈ ಸಮಿತಿಯ ಸದಸ್ಯರು ಯಾವುದೇ ನೌಕರರ ಸಂಘದ ಪ್ರತಿನಿಧಿಗಳನ್ನು ಸಂಪರ್ಕಿಸದೆ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು ಎಂದು ಅವರು ನುಡಿದರು.ಬ್ಯಾಂಕ್ ನೌಕರರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರವು ಇದರ ಅನುಷ್ಠಾನವನ್ನು ಏಪ್ರಿಲ್ 30ಕ್ಕೆ ಮುಂದೂಡಿದೆ. ಬ್ಯಾಂಕ್ ನೌಕರರು ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಈ ವರದಿಯ ಅನುಷ್ಠಾನವನ್ನು ತಡೆಯ ಬಹುದಾಗಿದೆ ಎಂದು ಅವರು ಹೇಳಿದರು.ಬ್ಯಾಂಕ್ ಅಧಿಕಾರಿಗಳಾದ ಸುಬ್ಬಣ್ಣ, ಪರಮಶಿವಯ್ಯ, ಕೆ.ಎಸ್. ಜೋಷಿ, ವಿನ್ಸೆಂಟ್ ಡಿಸೋಜಾ ಹಾಗೂ ಟಿ.ಇ. ಮನೋಹರ್, ಇತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry