ಭಾನುವಾರ, ಡಿಸೆಂಬರ್ 8, 2019
25 °C

ಖಗ ಸಂಕುಲದ ಕಾಲ-ಮೂಲ

Published:
Updated:
ಖಗ ಸಂಕುಲದ ಕಾಲ-ಮೂಲ

`ಖಗ ವರ್ಗ~- ಗೆಳೆಯರೇ, ನಿಮಗೇ ತಿಳಿದಂತೆ ಧರೆಯ ಜೀವಜಾಲದ ಒಂದು ಪ್ರಧಾನ ಜೀವಿವರ್ಗ ಅದು, ಸಮೀಪ ಹತ್ತು ಸಾವಿರ ಪ್ರಭೇದಗಳಿರುವ ಪಕ್ಷಿ ವರ್ಗ ನೆಲಾವಾರದಲ್ಲಿ ಸರ್ವಾಂತರ್ಯಾಮಿ ಕೂಡ.

 

ವೃಷ್ಟಿವನಗಳಲ್ಲಿ ದಟ್ಟೈಸಿ, ಹುಲ್ಲುಬಯಲುಗಳಲ್ಲಿ ಕಿಕ್ಕಿರಿದು, ಕಡಲ ಮೇಲೂ, ಪರ್ವ ಪ್ರದೇಶಗಳಲ್ಲೂ, ಹಿಮಲೋಕಗಳಲ್ಲೂ ಮರುಭೂಮಿಗಳಲ್ಲೂ ಅವು ನೆಲೆಸಿವೆ. ಕಡೆಗೆ ಮನುಷ್ಯರ `ಕಾಂಕ್ರೀಟ್ ಕಾಡು~ಗಳಲ್ಲೂ ಅಲ್ಲಿನ ಉಸಿರುಗಟ್ಟಿಸುವ ಪರಿಸರಕ್ಕೇ ಹೊಂದಿಕೊಂಡು ಬದುಕುತ್ತಿವೆ. ನಾನಾ ಆಕಾರ ಗಳಿಸಿ, ಮೋಹಕ ಗರಿ-ಪುಕ್ಕ ಅಲಂಕಾರ ಧರಿಸಿ, ವಿಧವಿಧ ಕರೆ-ಗಾನ ಹರಿಸಿ.... ಒಟ್ಟಾರೆ ನಿಸರ್ಗವನ್ನೇ ಸಿಂಗರಿಸಿ ಆಗಸದ ಅರಸರಾಗಿ ಮೆರೆಯುತ್ತಿವೆ.ಖಗವರ್ಗದ ಮತ್ತೊಂದು ಮಹಾನ್ ಅಗ್ಗಳಿಕೆ ಏನೆಂದರೆ ನೆಲವಾಸಿ ಕಶೇರುಕಗಳಲ್ಲೆಲ್ಲ ಪಕ್ಷಿವರ್ಗದಲ್ಲಿ ಇರುವಷ್ಟು ಪ್ರಭೇದ ವೈವಿಧ್ಯ ಬೇರಾವ ವರ್ಗದಲ್ಲೂ ಇಲ್ಲ. ವಾಸ್ತವವಾಗಿ ಇಡೀ ಜೀವೇತಿಹಾಸದಲ್ಲೇ ರೆಕ್ಕೆ ಬಡಿಯುತ್ತ ಮನಸೋ ಇಚ್ಛೆ ಹಾರಬಲ್ಲ ಸಾಮರ್ಥ್ಯ ಪಡೆದ ಕಶೇರುಕ ಗುಂಪುಗಳು ಮೂರೇ ಮೂರು. ಅವುಗಳಲ್ಲಿ ಪ್ರಥಮ ಸ್ಥಾನ ಹಕ್ಕಿಗಳದು.

ಸ್ತನಿವರ್ಗಕ್ಕೆ ಸೇರಿರುವ ಬಾವಲಿಗಳದು ಎರಡನೆಯ ಗುಂಪು. ಮೂರನೆಯದು `ಡೈನೋಸಾರ್~ಗಳ ವರ್ಗದಲ್ಲಿದ್ದ `ಟೆರೋಸಾರ್~ಗಳ ಗುಂಪು (ಚಿತ್ರ 1, 2). ಈಗ ಟೆರೋಸಾರ್‌ಗಳಿರಲಿ ಇಡೀ ಡೈನೋಸಾರ್ ವರ್ಗದ್ದೇ ಒಂದೇ ಒಂದು ಪ್ರಭೇದವೂ ಉಳಿದಿಲ್ಲ. ಈಗ್ಗೆ ಅರವತ್ತೈದು ದಶಲಕ್ಷ ವರ್ಷ ಹಿಂದೆ ಬೃಹತ್ ಕ್ಷುದ್ರಗ್ರಹವೊಂದು ಧರೆಗೆ ಅಪ್ಪಳಿಸಿ ಮೂಡಿಸಿದ ಮಹಾಪ್ರಳಯದಲ್ಲಿ ಅವು ಸಂಪೂರ್ಣ ನಿರ್ನಾಮವಾದವು.ಹಕ್ಕಿಗಳ ಬಗೆಗಿನ ತುಂಬ ಮಹತ್ವದ, ಅಷ್ಟೇ ಕುತೂಹಲದ ಎರಡು ಅಂಶಗಳನ್ನು ಕುರಿತು ಜೀವಶಾಸ್ತ್ರಜ್ಞರೂ, ಪಳೆಯುಳಿಕೆ ಶಾಸ್ತ್ರಜ್ಞರೂ ಶೋಧ ನಡೆಸುತ್ತಲೇ ಇದ್ದಾರೆ: `ಆಧುನಿಕ ಖಗವರ್ಗದ (`ನಿಯೋಆರ್ನಿಥೈನ್ಸ್~ ಕೆಲ ಪ್ರಭೇದಗಳು ಚಿತ್ರ 7 ರಿಂದ 12) ಮೂಲ ಜೀವಿ ಯಾವುದು? ಅದರ ಕಾಲ ಯಾವುದು?~ ಈ ಪ್ರಶ್ನೆಗಳು ತುಂಬ ಮುಖ್ಯ ಏಕೆಂದರೆ ಹಾರಾಟ ಕೌಶಲ್ಯ ಮೈಗೂಡಿದ ಪ್ರಥಮ ಕಶೇರುಕಗಳು ಹಕ್ಕಿಗಳಲ್ಲ. ಪುಕ್ಕ-ಗರಿಗಳು ಪ್ರಥಮವಾಗಿ ಸೃಷ್ಟಿಗೊಂಡದ್ದೂ ಹಕ್ಕಿಗಳಲ್ಲೇ ಏನಲ್ಲ (ಪ್ರಸ್ತುತ ಪುಕ್ಕ-ಗರಿಗಳ ಅಸ್ತಿತ್ವ ಪಕ್ಷಿ ವಿಶಿಷ್ಟ ಲಕ್ಷಣವಾಗಿ ಉಳಿದಿದೆ ಅಷ್ಟೆ).ಅತ್ಯಂತ ಇತ್ತೀಚಿನವರೆಗೆ ಈಗ್ಗೆ 145 ದಶಲಕ್ಷ ವರ್ಷ ಹಿಂದೆ ಬದುಕಿದ್ದ `ಆರ್ಖಿಯಾಪ್ಟೆರಿಕ್ಸ್~ ಧರೆಯ ಪ್ರಪ್ರಥಮ ಹಕ್ಕಿ ಎಂದು ತೀರ್ಮಾನಿಸಲಾಗಿತ್ತು. ಈಗ್ಗೆ 150 ವರ್ಷಗಳ ಹಿಂದೆ ಜರ್ಮನಿಯಲ್ಲಿ ಲಭಿಸಿದ ಅದರ ಪಳೆಯುಳಿಕೆಯಲ್ಲಿ (ಚಿತ್ರ-5) ಪುಕ್ಕಗಳ, ಗರಿಸಹಿತ ರೆಕ್ಕೆಗಳ ಅಸ್ತಿತ್ವ ಸ್ಪಷ್ಟವಾಗಿ ಪತ್ತೆಯಾಗಿತ್ತು. (ಅದರ ಜೀವಂತ ರೂಪ ಚಿತ್ರ-6 ರಲ್ಲಿ ನೋಡಿ). ಅತ್ಯಂತ ಇತ್ತೀಚೆಗೆ ಚೀನಾದಲ್ಲಿ ಲಭಿಸಿದ ಇಂಥವೇ ಲಕ್ಷಣಗಳ ಆದರೆ 155 ದಶಲಕ್ಷ ವರ್ಷ ಹಿಂದಿನ `ಕ್ಸಿಯಾವೋಟಿಂಗಿಯಾ ಜೇಂಗೈ~ ಪಳೆಯುಳಿಕೆ ಪ್ರಾಚೀನತೆಯಲ್ಲಿ `ಆರ್ಖಿಯಾಪ್ಟೆರಿಕ್ಸ್~ ಅನ್ನು ಪ್ರಥಮ ಸ್ಥಾನದಿಂದ ಪದಚ್ಯುತಿಗೊಳಿಸಿದೆ.ಅದೇನೇ ಇದ್ದರೂ ಈ `ಪ್ರಾಚೀನ ಹಕ್ಕಿ~ಗಳು ಹಾಗೂ ಅಂತಹವೇ ಇನ್ನೂ ಹಲವಾರು ಪುರಾತನ ಪ್ರಭೇದಗಳು ಉದಾಹರಣೆಗೆ ಮಡಗಾಡಸ್ಕರ್‌ನ `ರಾಹೋನೇವಿಸ್~, ಚೀನಾದ `ಜೇಹೋಲೋರ್ನಿಸ್ ಇತ್ಯಾದಿ-ಆಧುನಿಕ ಹಕ್ಕಿಗಳಿಗಿಂತ ಹೆಚ್ಚಾಗಿ `ವೆಲಾಸಿರಾಪ್ಟರ್, ಡೈರಾನಿಖಸ್, ಆ್ಯಂಖಿಯೋರ್ನಿಸ್, ಟ್ರೂಡಾನ್~ ಇತ್ಯಾದಿ ಕುಬ್ಜಗಾತ್ರದ ಡೈನೋಸಾರ್‌ಗಳನ್ನೇ ಹೋಲುತ್ತಿದ್ದುವು.ಇಂಥವೆಲ್ಲ ಪ್ರಾಚೀನ ಹಕ್ಕಿಗಳು `ಮೂಳೆಸಹಿತ ಉದ್ದನ್ನ ಬಾಲ, ಬಾಯ್ತುಂಬ ದಂತ ಪಂಕ್ತಿ~ ಮುಂತಾದ ಲಕ್ಷಣಗಳನ್ನು ಪಡೆದಿದ್ದುವು. ತದ್ವಿರುದ್ಧವಾಗಿ ಆಧುನಿಕ ಹಕ್ಕಿಗಳದು ಬಾಲ ರಾಹಿತ್ಯ, ಹಲ್ಲುಗಳಿಲ್ಲದ ಕೊಕ್ಕು, ಟೊಳ್ಳು ಮೂಳೆಗಳ ಅಸ್ಥಿಪಂಜರ, ಬೆಸೆಗೊಂಡ ಕಾಲ್ಬೆರಳುಗಳು, ಬೇಕಿದ್ದಂತೆಲ್ಲ ಬಾಗುವ-ತಿರುಗುವ ಮಣಿಕಟ್ಟು.... ಒಟ್ಟಿನಲ್ಲಿ ಹಗುರವಾಗಿ, ಶ್ರೇಷ್ಠ ಹಾರಾಟ ಕೌಶಲ್ಯಗಳಿಗೆಂದೇ ಸೃಷ್ಟಿಗೊಂಡ ಜೀವಿಗಳು ಅವು. ಇಂಥ ಪರಿಪೂರ್ಣ ಹಕ್ಕಿಗಳು ವಿಕಸನಗೊಂಡದ್ದು ಎಂದು? ಅದಿನ್ನೂ ಸ್ಪಷ್ಟವಾಗಿಲ್ಲ. ಅಂಥ ನಿರ್ಣಾಯಕ ಪಳೆಯುಳಿಕೆ ಒಂದೂ ಇನ್ನೂ ಸಿಕ್ಕಿಲ್ಲ.ಆದರೆ ಮತ್ತೊಂದು ಮಹತ್ವದ ಅಂಶ ಸುಸ್ಪಷ್ಟ: `ಹಕ್ಕಿ ವರ್ಗ ವಿಕಸನಗೊಂಡದ್ದು ಡೈನೋಸಾರ್‌ಗಳಿಂದಲೇ! ಕಳೆದ ವರ್ಷ ಚೈನಾದಲ್ಲಿ ಪತ್ತೆಯಾದ `ಹಾಪ್ಲೊಚೈರಸ್ ಸೋಲ್ಲೆರ್ಸ್~ ಪ್ರಭೇದದ ಈಗ್ಗೆ 160 ದಶಲಕ್ಷ ವರ್ಷ ಹಿಂದಿನ ಡೈನೋಸಾರ್ ಪಳೆಯುಳಿಕೆ ಇದನ್ನು ನಿಚ್ಚಳಗೊಳಿಸಿದೆ. ಅದೇ ಅಲ್ಲದೆ ಆಧುನಿಕ ಖಗ ಲಕ್ಷಣಗಳ ಹೊಸ ಹೊಸ ಹಂತಗಳನ್ನು ತಲುಪಿದ್ದ ವಿಧವಿಧ ಡೈನೋಸಾರ್ ಪ್ರಭೇದಗಳನ್ನೂ ಪಳೆಯುಳಿಕೆ ತಜ್ಞರು ಪತ್ತೆಮಾಡಿದ್ದಾರೆ. ಆ ಸರಣಿಯನ್ನು ಚಿತ್ರ 3, 4ರಲ್ಲಿ ನೋಡಿ.ಮೊದಲಿಗೆ `ಸೈನೋಸಾರಾಪ್ಟೆರಿಕ್ಸ್~ (ಚಿತ್ರ 3-ಎ) ಎಂಬ ನೆಲವಾಸಿ ಡೈನೋಸಾರ್‌ನಲ್ಲಿ ತೋಳುಗಳು ಕುಳ್ಳಾಗಿ ತಲಾ ಮೂರು ಬೆರಳುಗಳ ಹಸ್ತಗಳಿದ್ದವು. ಬೇಟೆಗಾರನಾಗಿದ್ದ `ವೆಲಾಸಿರಾಪ್ಟರ್~ (ಚಿತ್ರ 3-ಬಿ) ಭಾರೀ ಹೊಂದಾಣಿಕೆಯ, ಹೇಗೆ ಬೇಕಾದರೂ ಚಲಿಸಬಲ್ಲ ಮಣಿಕಟ್ಟು ಹೊಂದಿತ್ತು. `ಅನ್‌ಎನ್‌ಲಾಜಿಯಾ~ (ಚಿತ್ರ 3-ಸಿ) ಪ್ರಭೇದ ತೋಳುಗಳನ್ನು ರೆಕ್ಕೆಗಳಂತೆ ಮೇಲೆ-ಕೆಳಗೆ ಎತ್ತುವ ಇಳಿಸುವ ಸಾಮರ್ಥ್ಯ ಪಡೆದಿತ್ತು. `ಕೌಡಿಪ್ಟೆರಿಕ್ಸ್~ನಲ್ಲಿ ಪುಕ್ಕ-ಗರಿಗಳು (ಚಿತ್ರ 3-ಡಿ) ಪೂರ್ಣ ರೂಪ ತಾಳತೊಡಗಿದ್ದುವು.`ಪೋಟಾರ್ಖಿಯಾಪ್ಟೆರಿಕ್ಸ್~ (ಚಿತ್ರ 3-ಇ) `ಆರ್ಖಿಯಾಪ್ಟೆರಿಕ್ಸ್~ (ಚಿತ್ರ 3-ಎಫ್) ಅನ್ನೇ ಹೋಲುವಂತಿದ್ದರೂ ಅದಕ್ಕೆ ಹಾರಾಟ ಸಾಮರ್ಥ್ಯ ಮೈಗೂಡಿರಲಿಲ್ಲ.ಆರ್ಖಿಯಾಪ್ಟೆರಿಕ್ಸ್‌ಗಿದ್ದದ್ದು ಅಲ್ಪ ಸ್ವಲ್ಪದ ಅದೂ ಭಾರೀ ಶ್ರಮದ ಹಾರಾಟ ಶಕ್ತಿ. `ಇವೋಅಲ್ಯೂಲಾವಿಸ್~ (3-ಜಿ) ನೆಲದ ಸನಿಹದಲ್ಲೇ ಹಾರಬಲ್ಲದಾಗಿತ್ತು. ಹಾರಾಟ ಕೌಶಲ್ಯ ಪರಿಪೂರ್ಣಗೊಂಡದ್ದು `ಆಧುನಿಕ ಹಕ್ಕಿ~ಗಳಲ್ಲೇ (3-ಎಚ್).ಹಕ್ಕಿ ಮೂಲದ, ಹಕ್ಕಿ ವಿಕಸನದ ಪಳೆಯುಳಿಕೆಗಳು ಅದೆಷ್ಟೇ ಲಭ್ಯವಾಗಿದ್ದರೂ ಖಗವರ್ಗದ ನಿಖರ ಕಾಲ-ಮೂಲ ಕುರಿತ ನಿರ್ಣಾಯಕ ಪಳೆಯುಳಿಕೆ ಸಾಕ್ಷ್ಯ ಸಿಕ್ಕಿಲ್ಲ. ಅಷ್ಟೇ ಅಲ್ಲ, ಡೈನೋಸಾರ್‌ಗಳಿಂದಲೇ ವಿಕಸನಗೊಂಡು ಅವುಗಳ ಜೊತೆ ಜೊತೆಗೇ ಬದುಕಿದ್ದ ಖಗವರ್ಗ ಡೈನೋಸಾರ್‌ಗಳನ್ನು ನಿರ್ನಾಮ ಮಾಡಿದ ಮಹಾಲಯವನ್ನು ಎದುರಿಸಿಯೂ ಅಳಿಯದೆ ಉಳಿದದ್ದು ಹೇಗೆ? ಪಕ್ಷಿಗಳ ಬಗೆಗಿನ ಮತ್ತೊಂದು ನಿಗೂಢ ಪ್ರಶ್ನೆ ಅದು. ಎಂಥ ಸೋಜಿಗ ಅಲ್ಲವೇ?

ಪ್ರತಿಕ್ರಿಯಿಸಿ (+)