ಖದೀಮರು ಬರುವರು!

7

ಖದೀಮರು ಬರುವರು!

Published:
Updated:
ಖದೀಮರು ಬರುವರು!

‘ಖತರ್‌ನಾಕ್’ ಆಗಿ ಕೊಟ್ಟ ಇವರ ‘ಶಾಕ್’ ಯಾಕೋ ಹೊಡೆಯಲೇ ಇಲ್ಲ. ಈಗ ‘ಖದೀಮರ’ ಬೆನ್ನು ಹತ್ತಿದ್ದಾರೆ ನಿರ್ದೇಶಕ ಹ.ಸು.ರಾಜಶೇಖರ್.‘ಕೆಲಸಕ್ಕಾಗಿ ಹಳ್ಳಿಯಿಂದ ಪಟ್ಟಣಕ್ಕೆ ಬರುವ ಹುಡುಗರು ಮತ್ತು ದಿನಪತ್ರಿಕೆಗಳಲ್ಲಿ ಬರುವ ಸುದ್ದಿಗಳೇ ಈ ಚಿತ್ರದ ಸ್ಫೂರ್ತಿ. ಕನಸು ಹೊತ್ತ ನಾಲ್ಕು ಹಳ್ಳಿ ಹುಡುಗರು ಸಿಟಿಗೆ ಬರ್ತಾರೆ. ಅಲ್ಲಿ ಡಾನ್ ಒಬ್ಬನ ಪರಿಚಯ ಆಗತ್ತೆ. ಆಗ ಕಥೆ ಬೇರೆ ತಿರುವು ಪಡೆದುಕೊಳ್ಳುತ್ತೆ’- ನಿರ್ದೇಶಕರು ‘ಖದೀಮರು’ ಚಿತ್ರದ ಅರ್ಧ ಔಟ್‌ಲೈನ್ ಎಳೆದಿಟ್ಟರು. ಅಂದಹಾಗೆ, ಅದು ಚಿತ್ರದ ಧ್ವನಿಸುರುಳಿ ಸಮಾರಂಭ.ನಿರ್ದೇಶಕರ ಮಾತಿನ ಎಳೆ ಮುಂದುವರಿಸಿದ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ವಿಜಯ್ ಸುರಾನಾ, ‘ಪಟ್ಟಣಕ್ಕೆ ಬಂದ ಹುಡುಗರು ತಾವು ಬದಲಾಗದೇ ಡಾನ್‌ನನ್ನೇ ಮನಪರಿವರ್ತಿಸಿ ಹಳ್ಳಿಗೆ ಕರೆದುಕೊಂಡು ಹೋಗ್ತಾರೆ, ಇದೇ ಈ ಚಿತ್ರದ ವಿಶೇಷ’ ಅಂದರು.‘ಗಂಡ ಹೆಂಡತಿ’ಯ ತಿಲಕ್- ‘ಹೀರೋ ಆಗೋ ಕನಸಿಟ್ಕೊಂಡು ಸಿಟಿಗೆ ಬರ್ತೀನಿ. ಆದ್ರೆ ಅದ್ಹೇಗೋ ಅಂಡರ್‌ವರ್ಲ್ಡ್‌ನಲ್ಲಿ ಸಿಕ್ಕಾಕ್ಕೊಂಬಿಡ್ತೀನಿ, ಹೀಗೆ ಕಥೆ ಸಾಗತ್ತೆ... ಈ ಚಿತ್ರದ ಮೂರು ಹಾಡುಗಳು ಚೆನ್ನಾಗಿವೆ. ಅನುಭವಿ ನಿರ್ದೇಶಕರೊಂದಿಗೆ ಕೆಲಸ ಮಾಡಬೇಕು ಅನ್ನೋ ಆಸೆ ಈಡೇರ್ತಾ ಇದೆ’ ಅನ್ನುತ್ತಾ ಚಿತ್ರದ ನಾಯಕಿ ಮಾಧುರಿಗೆ ಮೈಕ್ ಕೊಟ್ಟರು. ‘ತಿಲಕ್‌ಗೆ ಜೊತೆಯಾಗಿ ನಟಿಸ್ತಿದ್ದೇನೆ. ಗ್ಲಾಮರ್ ಜೊತೆ ಒಳ್ಳೇ ಆ್ಯಕ್ಟಿಂಗ್ ಕೂಡ ಇದೆ’ ಅಂದರು.‘ಟೆಂತ್ ಕ್ಲಾಸ್’ ನವೀನ್, ‘ನಾನೂ ಒಬ್ಬ ಖದೀಮ, ನನ್ನಪ್ಪ ಅಮ್ಮ ಬಡವರು. ಆದರೆ ಟಕ್ ಅಂತ ಸೆಟ್ಲ್ ಆಗ್ಬಿಡ್ಬೇಕು ಅಂತ ಸಿಟಿಗೆ ಬಂದ್ಬಿಡ್ತೀನಿ. ಆದ್ರೆ ದುಡ್ಡಿನ ವ್ಯಾಮೋಹ ಯಾವ್ಯಾವ್ ಲೆವಲ್‌ಗೆ ಕರ್ಕೊಂಡ್ ಹೋಗತ್ತೆ ಅನ್ನೋದನ್ನು ನನ್ನ ಪಾತ್ರದಲ್ಲಿ ಕಾಣಬಹುದು’ ಎಂದು ಮಾತು ಮುಗಿಸಿದರು.ಈ ಖದೀಮರಲ್ಲೊಬ್ಬ ಲವ್ವಲ್ ಬಿದ್ದು ಮಾನಸಿಕ್ ಮಾಹಾರಾಯ ಅನ್ನಿಸ್ಕೊಳ್ತಾನೆ. ಆ ಮಹಾರಾಯನೇ ಅಜಿತ್. ಅಜಿತ್‌ಗೆ ನಾಯಕಿ ಪ್ರಿಯಾಂಕಾ ಸಾಥ್ ಇದೆ. ಸ್ಟಿಲ್ ಒಂದರಲ್ಲಿ ಎಕ್ಸ್‌ಪೋಸ್ ಜಾಸ್ತಿ ಇದ್ದ ಹಾಗಿದೆಯಲ್ಲ. ಅದು ಚಿತ್ರಕ್ಕೆ ಅವಶ್ಯಕವಾ? ಅಂತ ಕೇಳಿದ್ದಕ್ಕೆ, ವೊದಮೊದಲು ಇಲ್ಲ ಇಲ್ಲ ಅಂದ ಪ್ರಿಯಾಂಕಾ ಮತ್ತು ಮಾಧುರಿ, ನಿಧಾನಕ್ಕೆ, ‘ಕನ್ನಡದ ಹುಡುಗಿಯರು ಯಾವುದಕ್ಕೂ ಕಮ್ಮೀ ಇಲ್ಲ ಅನ್ನೋದನ್ನ ಈ ಚಿತ್ರದ ಮೂಲಕ ತೋರಸ್ತಿದ್ದೀವಿ’ ಅಂತ ಒಕ್ಕೊರಲಿನಿಂದ ಹೇಳಿ ನಗೆ ಹರಡಿದರು. ಬೆಂಗಳೂರು ಮತ್ತು ಸುತ್ತಮುತ್ತ ಶೂಟ್ ಮಾಡಲಾಗಿದೆ. ಕೆಜಿಎಫ್‌ನಲ್ಲಿ ಹಾಡಿನ ಚಿತ್ರೀಕರಣ ನಡೆದಿದೆ. ದೀಪಕ್ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡ್ರೆ ತಿಲಕ್, ಅಜಿತ್, ನವೀನ್, ಅಮಿತ್ ನಾಲ್ಕೂ ಜನ ಖದೀಮರು ಮತ್ತು ಈ ಚಿತ್ರದ ನಾಯಕರು. ಡಿಟಿಎಸ್ ಹಂತದಲ್ಲಿರುವ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಿದ್ಧರಾಮಪ್ಪ ಚಿತ್ರದ ಆಡಿಯೋ ಸಿ.ಡಿ ಬಿಡುಗಡೆ ಮಾಡಿದರು. ನಿರ್ಮಾಪಕ ವಿಜಯ್ ಸುರಾನಾ ಇತರರು ಅಲ್ಲಿದ್ದರು. ಶೋಭರಾಜ್, ಆದಿ ಲೋಕೇಶ್ ಇತರರ ಅಭಿನಯ ಈ ಚಿತ್ರಕ್ಕಿದೆ. ಸಂಗೀತ ಎಂ.ಎಸ್. ಮಾರುತಿ, ಹಿನ್ನೆಲೆ ಸಂಗೀತ ರಾಜೇಶ್ ರಾಮನಾಥ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry