ಖಮರುಲ್ ಅಕ್ರಮ ಕಟ್ಟಡ ತೆರವಿಗೆ ಆಗ್ರಹ

7

ಖಮರುಲ್ ಅಕ್ರಮ ಕಟ್ಟಡ ತೆರವಿಗೆ ಆಗ್ರಹ

Published:
Updated:

ಗುಲ್ಬರ್ಗ: ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ಶಾಸಕ ಖಮರುಲ್ ಇಸ್ಲಾಂ ಒಡೆತನದ ಅಕ್ರಮ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದಅವರು, ಸರ್ದಾರ್ ವಲಭಭಾಯಿ ಪಟೇಲ್ ಚೌಕ ಮತ್ತು ರಾಷ್ಟ್ರಪತಿ ಚೌಕದ ಮಧ್ಯೆ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆದರೆ ಇಲ್ಲಿನ ಸರ್ಕಾರಿ ಮುದ್ರಣಾಲಯದ ಮುಂಭಾಗದಲ್ಲಿನ ಖಮರುಲ್ ಕಟ್ಟಡ ಕೆಡವದ ಪರಿಣಾಮ ಕಾಮಗಾರಿ ವಿಳಂಬವಾಗಿದೆ. ಇದನ್ನು ಕೆಡವಲು ಹಿರಿಯ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಏಕೆ? ಎಂದು  ಪ್ರಶ್ನಿಸಿದರು.ಅಕ್ರಮ ಕಟ್ಟಡ: ಈ ಕಟ್ಟಡವು ರಸ್ತೆಯ 4.5 ಅಡಿ ಹಾಗೂ ಸೆಟ್‌ಬ್ಯಾಕ್‌ನ 10 ಅಡಿಯನ್ನು ಅತಿಕ್ರಮಿಸಿಕೊಂಡಿದೆ ಎಂದು ಖಮರುಲ್ ಅವರೇ ಸ್ವತಃ ಅಫಿಡವಿಟ್ ಕೊಟ್ಟಿದ್ದಾರೆ. ಆದರೂ ಮನೆ ಕಡೆವಲು ಜಿಲ್ಲಾಧಿಕಾರಿ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಪರವಾನಗಿ ಪಡೆಯದ ಲೇಔಟ್ ಹಾಗೂ ಕಟ್ಟಡಗಳಿಗೆ  ಮೂಲಸೌಕರ್ಯ ನೀಡಬಾರದು ಎಂದು ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಖಮರುಲ್ ಅವರ ವಶದಲ್ಲಿರುವ ಈ (ಸರ್ವೇ ನಂ. 57/1) ಜಾಗವು ಪರವಾನಗಿ ಪಡೆದಿಲ್ಲ. ಇನ್ನೊಂದೆಡೆ ಸರ್ವೇ ನಂ. 57/1ರ 5ಎಕರೆ 2 ಗುಂಟೆ ಜಾಗವು ಸರ್ಕಾರಿ ವಸತಿ ನಿಲಯಕ್ಕೆ ಸೇರಿದೆ ಎಂಬ ದಾಖಲೆ ಇದೆ. ಆದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.ಸರ್ಕಾರಿ ಜಮೀನು ಕಬಳಿಕೆ, ಪರವಾನಗಿ ರಹಿತ- ಅಕ್ರಮ ಕಟ್ಟಡ, ರಸ್ತೆಯ ಜಾಗ ಒತ್ತುವರಿ, ಗುಲ್ಬರ್ಗ ಅಭಿವೃದ್ಧಿಗೆ ಪೂರಕವಾದ ಪ್ರಮುಖ ರಸ್ತೆ ನಿರ್ಮಾಣಕ್ಕೆ ಅಡ್ಡಿ... ಹೀಗೆ ಸಂಪೂರ್ಣವಾಗಿ ಅಕ್ರಮಗಳ ಆಗರವಾಗಿರುವ ಕಟ್ಟಡದ ತೆರವಿಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದು ಅಧಿಕಾರಿಗಳನ್ನು ಜನತೆ ಸಂಶಯದಿಂದ ನೋಡುವಂತೆ ಮಾಡಿದೆ.  ಈ ಕಟ್ಟಡವನ್ನು ತೆರವು ಮಾಡಿದಲ್ಲಿ ಜನತೆಗೆ ಆಡಳಿತದ ಬಗ್ಗೆ ವಿಶ್ವಾಸ ಬರುತ್ತದೆ ಎಂದರು.ಮಾಜಿ ಸಚಿವರಾಗಿ, ಶಾಸಕರಾಗಿ ಸಮಾಜಕ್ಕೆ ಮಾರ್ಗದರ್ಶಕರಾಗಬೇಕಾದ ಖಮರುಲ್ ಅಕ್ರಮ ಅವರೇ ಮಾಡಿದ್ದಾರೆ. ಅಭಿವೃದ್ಧಿಗೆ ಅಡ್ಡಗಾಲು ಹಾಕಿದ್ದಾರೆ. ಅದನ್ನು ಹಿರಿಯ ಅಧಿಕಾರಿಗಳೇ ಪ್ರಶ್ನಿಸುತ್ತಿಲ್ಲ. ಇದು ಭ್ರಷ್ಟಾಚಾರದ ಪರಕಾಷ್ಟೆ. ಹೀಗಾದಲ್ಲಿ ಸಮಾಜದಲ್ಲಿ ನೈತಿಕತೆ ಎಲ್ಲಿ ಉಳಿಯಲು ಸಾಧ್ಯ ಎಂದು ಖೇದ ವ್ಯಕ್ತಪಡಿಸಿದರು.ಸರ್ವೇ ನಂ. 12: ಸರ್ವೇ ನಂ.12ರಲ್ಲಿ ಖಮರುಲ್ ಹಾಗೂ ಸಹೋದರರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿದ್ದಾರೆ. ಆ ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿಗೆ ಶಾಸಕರ ಅನುದಾನದಿಂದ ಹಣ ನೀಡಲಾಗಿದೆ. ಪರವಾನಗಿ ರಹಿತ ಲೇಔಟ್‌ಗಳಿಗೆ ಮೂಲಸೌಕರ್ಯ ನೀಡಬೇಡಿ ಎಂದು ಆದೇಶಿಸುವ ಜಿಲ್ಲಾಧಿಕಾರಿ ಅವರು ಇಲ್ಲಿ ಏಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಸವಾಲು ಹಾಕಿದರು. ಬಡವರು, ಕಾರ್ಮಿಕರು, ಕೊಳಚೆ ಪ್ರದೇಶ ನಿವಾಸಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜಿಲ್ಲಾಡಳಿತ ಹಾಗೂ ಪಾಲಿಕೆಯ ಅಧಿಕಾರಿಗಳು ಪ್ರಭಾವಿಗಳ ಅಕ್ರಮಗಳ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ. ಇದು ಯಾವ ನ್ಯಾಯ? ಎಂದು ಲೇವಡಿ ಮಾಡಿದರು.250 ಎಕರೆ ಕಬಳಿಕೆ: ಗುಲ್ಬರ್ಗದಲ್ಲಿ 1962ರಿಂದ 250 ಎಕರೆಗೂ ಅಧಿಕ ಭೂ ಕಬಳಿಕೆ ನಡೆದಿದೆ. ಈ ಬಗ್ಗೆ ಸರ್ಕಾರಿ/ಸಾರ್ವಜನಿಕ ಜಮೀನು ಒತ್ತುವರಿ ತೆರವು ಹಾಗೂ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷ ಬಾಲ ಸುಬ್ರಹ್ಮಣ್ಯಂ ನೇತೃತ್ವದ ಸಮಿತಿಗೆ ದೂರು ನೀಡಿದ್ದೇನೆ. ಪ್ರಾದೇಶಿಕ ಆಯುಕ್ತರು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.ರಾಜ್ಯ ಮಟ್ಟದಲ್ಲಿ ಸಮಾನಮನಸ್ಕರು ಸೇರಿಕೊಂಡು ಜಯಪ್ರಕಾಶ ನಾರಾಯಣ ಸಮಿತಿ ರಚಿಸಿದ್ದೇವೆ. ಹಂತ ಹಂತವಾಗಿ ಭ್ರಷ್ಟಾಚಾರ ಪ್ರಕರಣಗಳನ್ನು ಹೊರಹಾಕುತ್ತೇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry