ಖರೀದಿಯಾಗದ 20 ಸಾವಿರ ಕ್ವಿಂಟಲ್ ಮೆಕ್ಕೆಜೋಳ

7

ಖರೀದಿಯಾಗದ 20 ಸಾವಿರ ಕ್ವಿಂಟಲ್ ಮೆಕ್ಕೆಜೋಳ

Published:
Updated:

ಚನ್ನಗಿರಿ: ರಾಜ್ಯ ಉಗ್ರಾಣ ನಿಗಮದವರ ನಿರ್ಲಕ್ಷ್ಯದಿಂದಾಗಿ ತಾಲ್ಲೂಕಿನ ರೈತರ 20 ಸಾವಿರ ಕ್ವಿಂಟಲ್‌ ಮೆಕ್ಕೆಜೋಳ ಎಪಿಎಂಸಿ ಪ್ರಾಂಗಣದಲ್ಲಿ ಖರೀದಿಯಾಗದೇ ವ್ಯರ್ಥವಾಗಿ ಬಿದ್ದಿದೆ.ರಾಜ್ಯ ಉಗ್ರಾಣ ನಿಗಮದವರು ಪಟ್ಟಣದ ಎಪಿಎಂಸಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ ಒಂದು ತಿಂಗಳಲ್ಲಿ ಇದುವರೆಗೆ ಕೇವಲ 25 ಸಾವಿರ ಕ್ವಿಂಟಲ್‌ ಮೆಕ್ಕೆಜೋಳ ಖರೀದಿಸಿದ್ದಾರೆ. ಉಳಿದ 20 ಸಾವಿರ ಕ್ವಿಂಟಲ್‌ ಮೆಕ್ಕೆಜೋಳ ಖರೀದಿಯಾಗದೇ ರೈತರು ಆತಂಕದಲ್ಲಿದ್ದಾರೆ. ಈಗಾಗಲೇ ಖರೀದಿಯಾದ ಮೆಕ್ಕೆಜೋಳ ಸಾಗಾಣೆಗೆ ಲಾರಿಗಳ ಕೊರತೆ ಹಾಗೂ ದಾಸ್ತಾನು ಮಾಡಲು ಗೋದಾಮು ಕೊರತೆ ಎದುರಾಗಿದೆ.ಕೆಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಾಡಾಳ್‌ ವಿರೂಪಾಕ್ಷಪ್ಪ ಭಾನುವಾರ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿ, ‘ತಾಲ್ಲೂಕಿನಲ್ಲಿ ಈ ಬಾರಿ 32 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದು, ಸುಮಾರು 3 ಲಕ್ಷ  ಕ್ವಿಂಟಲ್‌ ಇಳುವರಿ ಬಂದಿದೆ.ರೈತರು ಖರೀದಿಗಾಗಿ ಹದಿನೈದು ದಿನಗಳಿಂದ ಕಾಯುತ್ತಿದ್ದಾರೆ. ಇಲ್ಲಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ, ಉಗ್ರಾಣ ನಿಗಮದ ಅಧಿಕಾರಿ ಹಾಗೂ ಸಾಗಣೆ ಅಧಿಕಾರಿಗಳೊಂದಿಗೆ ದೂರವಾಣಿಯ ಮೂಲಕ ಮಾತನಾಡಲಾಗಿದ್ದು, ಖರೀದಿ ಪ್ರಾರಂಭಿಸಿ, ಪ್ರತಿದಿನ 25 ಲಾರಿಗಳನ್ನು ಸಾಗಣೆಗೆ ಕಳುಹಿಸಿಕೊಡಲು ಜಿಲ್ಲಾಧಿಕಾರಿ ಒಪ್ಪಿಕೊಂಡಿದ್ದಾರೆ. ಜ. 11ರಂದು ಲಾರಿ ಮುಷ್ಕರ ಆರಂಭವಾಗಲಿದ್ದು, ಅಷ್ಟರೊಳಗೆ ಮೆಕ್ಕೆಜೋಳ ಖರೀದಿಸಿ ರೈತರಿಗೆ ಅನುಕೂಲ ಮಾಡಿಕೊಡದಿದ್ದರೆ, ರೈತರೊಂದಿಗೆ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.‘ಹದಿನೈದು ದಿನಗಳಿಂದ ಮೆಕ್ಕೆಜೋಳ ಚೀಲಗಳನ್ನು ಹಾಕಿಕೊಂಡು ಖರೀದಿಗಾಗಿ ಕಾಯುತ್ತಿದ್ದೇವೆ. ಎಪಿಎಂಸಿಯವರು ಹರಾಜುಕಟ್ಟೆ, ಕುಡಿಯುವ ನೀರು, ವಿದ್ಯುತ್‌ ದೀಪ ಹಾಗೂ ಭದ್ರತೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಸಾಗಣೆಗೆ ಪ್ರತಿದಿನ 25 ಲಾರಿಗಳನ್ನು ಕಳುಹಿಸಿದರೆ ಮಾತ್ರ ಮೆಕ್ಕೆಜೋಳ ಚೀಲಗಳು ಖಾಲಿಯಾಗಲಿವೆ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು’ ಎನ್ನುತ್ತಾರೆ ಪಟ್ಟಣದ ರೈತರಾದ ಸಿ.ಎಚ್‌.ನಾಗರಾಜ್‌ ಹಾಗೂ ತಿಪ್ಪಗೊಂಡನಹಳ್ಳಿಯ ರುದ್ರೇಶ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry