ಶನಿವಾರ, ಮೇ 21, 2022
25 °C

ಖರ್ಚಿಲ್ಲದ ಕಾರ್ಚಿಕಾಯಿ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಅನೇಕ ಕಾಯಿಲೆಗಳನ್ನು ವಾಸಿಮಾಡಬಲ್ಲ ದಿವ್ಯ ಔಷಧ ಎಂದೇ ಹೆಸರಾಗಿರುವ, ಹಾಗಲಕಾಯಿ ಜಾತಿಗೆ ಸೇರಿದ ಚಿಕ್ಕ ಗಾತ್ರದ ಕಾರ್ಚಿಕಾಯಿಯು ಎರೆ ಭೂಮಿಯನ್ನೇ ಅಧಿಕವಾಗಿ ಹೊಂದಿರುವ ಉತ್ತರ ಕರ್ನಾಟಕದ ಬಯಲು ಸೀಮೆಯಲ್ಲಿ ನೈಸರ್ಗಿಕವಾಗಿಯೇ ಬೆಳೆಯುತ್ತ ಬರಗಾಲದಲ್ಲೂ ರೈತರ ಪಾಲಿಗೆ ಆಸರೆಯಾಗಿದೆ.ಮಧುಮೇಹ, ರಕ್ತದ ಒತ್ತಡ, ಹೃದ್ರೋಗ ಸೇರಿದಂತೆ ಹತ್ತು ಹಲವು ಕಾಯಿಲೆಗಳಿಗೆ ಚಿಕಿತ್ಸಕ ಗುಣಗಳನ್ನು ಹೊಂದಿರುವ ಕಾರ್ಚಿಕಾಯಿಯಲ್ಲಿ ಆಯುರ್ವೇದ ಗುಣಗಳಿವೆ.ಉತ್ತರ ಕರ್ನಾಟಕದ ಬಳ್ಳಾರಿ, ಕೊಪ್ಪಳ, ರಾಯಚೂರು, ಗದಗ, ಧಾರವಾಡ, ಗುಲ್ಬರ್ಗ, ಯಾದಗಿರಿ, ವಿಜಾಪುರ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲಿನ  ಮಳೆಯಾಶ್ರಿತ ಕಪ್ಪು ಭೂಮಿಯಲ್ಲಿ ಕಳೆಯಂತೆ ಕಾರ್ಚಿಕಾಯಿ ನೈಸರ್ಗಿಕವಾಗಿಯೇ ಬೆಳೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡಿದೆ.ಬೇಸಿಗೆಯಲ್ಲಿ ಭೂಮಿ ಹದಗೊಳಿಸುವ ರೈತರು ನಿರೀಕ್ಷಿತ ಪ್ರಮಾಣದ ಮಳೆ ಸುರಿಯದ್ದರಿಂದ ಬಿತ್ತನೆ ಮಾಡದೆ ಭೂಮಿ ಖಾಲಿ ಬಿಟ್ಟಾಗ, ಕಾರ್ಚಿಕಾಯಿ ಬೆಳೆ ಹುಲುಸಾಗಿ ಬೆಳೆಯುತ್ತದೆ. ಕೆಲವು ರೈತರು ಮಳೆ ಸುರಿದ ನಂತರ ಬಿತ್ತನೆಯ ವೇಳೆ ಜಮೀನನ್ನು ಸ್ವಚ್ಛಗೊಳಿಸುವ ಮೂಲಕ ಈ ಬೆಳೆಯನ್ನು ಕಿತ್ತೆಸೆಯುತ್ತ ನಿರ್ಲಕ್ಷಿಸುತ್ತಿದ್ದಾರೆ. ಇನ್ನು ಕೆಲವರು, ಇದರ ಮಹತ್ವವನ್ನು ಅರಿತು ನಗರ ಪ್ರದೇಶಗಳಲ್ಲಿ ಮಾರಾಟ ಮಾಡಿ ಅಷ್ಟಿಷ್ಟು ಹಣ ಸಂಪಾದಿಸುತ್ತಿದ್ದಾರೆ.ತನ್ನಲ್ಲಿನ ಆಯುರ್ವೇದ ಗುಣಗಳಿಂದಾಗಿ ಪಟ್ಟಣ ಮತ್ತು ನಗರ ಪ್ರದೇಶಗಳ ಜನತೆಗೂ ಪ್ರಿಯವಾಗುತ್ತಿರುವ ಕಾರ್ಚಿಕಾಯಿಗೆ ಇತ್ತೀಚಿನ ವರ್ಷಗಳಲ್ಲಿ ಭಾರಿ ಬೇಡಿಕೆ ಬಂದಿದ್ದು, ಜೂನ್ ಮತ್ತು ಜುಲೈ ತಿಂಗಳಲ್ಲಿ ಪ್ರತಿ ಕೆ.ಜಿಗೆ ರೂ 100ರಿಂದ 120 ಬೆಲೆ ಪಡೆದು ದಾಖಲೆ ನಿರ್ಮಿಸಿದೆ.ಪ್ರಮುಖವಾಗಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಕೂಡ್ಲಿಗಿ, ಹಗರ ಬೊಮ್ಮನಹಳ್ಳಿ, ಹೂವಿನ ಹಡಗಲಿ ಭಾಗದಲ್ಲಿನ ಮಳೆಯಾಶ್ರಿತ ಕಪ್ಪುಭೂಮಿಯಲ್ಲಿ ಬೆಳೆಯುವ ಕಾರ್ಚಿಕಾಯಿ ಕೊಪ್ಪಳ, ರಾಯಚೂರು, ಗದಗ, ಆಂಧ್ರದ ಅನಂತಪುರ ಹಾಗೂ ಕರ್ನೂಲು ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಆದರೆ, ಈ ತರಕಾರಿಯಲ್ಲಿನ ಔಷಧೀಯ ಗುಣಗಳ ಕುರಿತು ಸಾಕಷ್ಟು ಸಂಶೋಧನೆಗಳು ನಡೆಯದ್ದರಿಂದ ಇದರ ಬಳಕೆ ಮತ್ತು ಅವಲಂಬನೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ.ಔಷಧೀಯ ಗುಣಗಳ ಆಗರ

ರಕ್ತನಾಳಗಳಲ್ಲಿ ತುಂಬಿರುವ ಕೊಬ್ಬಿನ ಅಂಶವನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತ, ಹೃದಯಾಘಾತವನ್ನು ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸುವ ಕಾರ್ಚಿಕಾಯಿ, ಮಲೇರಿಯಾದಿಂದ ಎದುರಾಗುವ ತೊಂದರೆಗಳ ನಿವಾರಣೆಯಲ್ಲೂ ಚಿಕಿತ್ಸಕ ರೀತಿಯ ಕೆಲಸ ಮಾಡುತ್ತದೆ. ಕೆಂಪು ರಕ್ತಕಣಗಳ ಉತ್ಪತ್ತಿಗೆ ಸಹಕರಿಸಿ ಉತ್ತೇಜನ ನೀಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಈ ಕಾಯಿ ದೇಹದಲ್ಲಿ ಚೈತನ್ಯ ತುಂಬುವುದಲ್ಲದೆ, ಕೀಲು, ಸಂಧು ನೋವುಗಳ ನಿವಾರಣೆಗೂ, ಯಕೃತ್ ಸಂರಕ್ಷಕವಾಗಿಯೂ, ಮೂತ್ರಪಿಂಡದ ಹರಳುಗಳನ್ನು ಕರಗಿಸಲೂ ಬಳಕೆಯಾಗುತ್ತದೆ.ಮೂತ್ರಪಿಂಡದ ಊತವನ್ನು ಹೋಗಲಾಡಿಸುವುದಲ್ಲದೆ ಮೂತ್ರಪಿಂಡದ ಉತ್ತಮ ಕಾರ್ಯಕ್ಕೂ ನೆರವು ನೀಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಕಾರ್ಚಿಕಾಯಿ ಗಿಡದ ಬೊಡ್ಡೆಯಲ್ಲಿನ ಗಡ್ಡೆಯನ್ನು ನೀರಲ್ಲಿ ಕಲಕಿದರೆ ನೊರೆ ಬರುವುದರಿಂದ, ಸಾಬೂನುಗಳ ಬಳಕೆ ಅತಿ ಕಡಿಮೆ ಇದ್ದ ಪುರಾತನ ಕಾಲದಲ್ಲಿ ಈ ಗಿಡದ ಬೊಡ್ಡೆಯಲ್ಲಿನ ಗಡ್ಡೆಯನ್ನು ಮಾರ್ಜಕವಾಗಿ ಬಳಸಲಾಗುತ್ತಿತ್ತು ಎಂದು ಅವರು ತಿಳಿಸುತ್ತಾರೆ.ಒತ್ತಡದ ಜೀವನ ನಡೆಸುವವರಿಗೆ ಸಿದ್ಧ ಔಷಧಿಯಾಗಿ ನೆರವಾಗುತ್ತಿರುವ ಕಾರ್ಚಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ. ಇದನ್ನು ಹೆಚ್ಚು ಸೇವಿಸಿದರೆ ಗರ್ಭಪಾತ ಆಗುವ ಸಾಧ್ಯತೆ ಇರುವುದರಿಂದ ಗರ್ಭಿಣಿಯರು ಬಳಸದಿರುವುದೇ ಉತ್ತಮ ಎಂಬುದು ಅವರು ಸಲಹೆ ನೀಡುತ್ತಾರೆ.ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಬಿಸಿಲ ನಾಡಿನಲ್ಲಿ ಯಥೇಚ್ಛವಾಗಿ, ಅದರಲ್ಲೂ ಮುಖ್ಯವಾಗಿ ಖರ್ಚಿಲ್ಲದೇ ತನ್ನಿಂದ ತಾನೆ ಬೆಳೆಯುವ ಕಾರ್ಚಿಕಾಯಿಯ ಕುರಿತು ಅಗತ್ಯ ಸಂಶೋಧನೆಗಳನ್ನು ನಡೆಸಬೇಕಿದೆ. ಅಲ್ಲದೆ, ಕೃಷಿಕರೂ ಇದನ್ನು ಬೆಳೆದು ಹಣ ಸಂಪಾದಿಸುವ ನಿಟ್ಟಿನಲ್ಲಿ ಅಷ್ಟಾಗಿ ನೆಚ್ಚಿಕೊಂಡಿಲ್ಲ.ಆಯುರ್ವೇದ ಮಾತ್ರವಲ್ಲದೆ, ಅಲೋಪತಿ ಔಷಧೀಯ ಪದ್ಧತಿಯಲ್ಲಿ ಬಳಕೆಯಾಗುವ ಅನೇಕ ಗಿಡಮೂಲಿಕೆಗಳಲ್ಲಿನ ವಿಶಿಷ್ಟ ಗುಣಗಳನ್ನೇ ಹೊಂದಿರುವ ಕಾರ್ಚಿಕಾಯಿಯ ಬಗ್ಗೆ ಸರ್ಕಾರ ಹಾಗೂ ವೈದ್ಯಕೀಯ ಕ್ಷೇತ್ರದ ಸಂಶೋಧಕರು ಆಸಕ್ತಿ ತಾಳಬೇಕಿದೆ.ಸೇವನೆ ವಿಧಾನ

ಹಸಿರು ಬಣ್ಣದ ಕಡಲೆ ಕಾಯಿಗಿಂತ ಕೊಂಚ ದೊಡ್ಡ ಗಾತ್ರದಲ್ಲಿರುವ ಕಾರ್ಚಿಕಾಯಿಯಲ್ಲಿ ಬಿಳಿ ಬಣ್ಣದ ಬೀಜಗಳು ಕಂಡುಬರುತ್ತವೆ. ಈ ಕಾಯಿಯನ್ನು ಎಣ್ಣೆಯಲ್ಲಿ ಹುರಿದು, ನೀರು ಬೆರೆಸದೆ ಪಲ್ಯ ಸಿದ್ಧಪಡಿಸಿ, ರೊಟ್ಟಿಯ ಜತೆ ಸೇವಿಸಲಾಗುತ್ತದೆ. ಒಂದೆರಡು ದಿನಗಳ ಕಾಲ ಮಾತ್ರ ತೇವಾಂಶ ಹೊಂದಿ, ನಂತರ ಬಾಡಿಹೋಗುವ ಕಾರ್ಚಿಕಾಯಿಯನ್ನು ತಕ್ಷಣಕ್ಕೆ ಪಲ್ಯ ಮಾಡಿ ಸೇವಿಸಬೇಕು. ಹಾಗಲಕಾಯಿ ಜಾತಿಗೆ ಸೇರಿದ್ದರೂ ಅದರಷ್ಟು ಕಹಿ ಇರದ ಈ ಕಾಯಿಯನ್ನು ಕಂಡೊಡನೆಯೇ ಬಾಯಲ್ಲಿ ನೀರೂರುವವರ ಸಂಖ್ಯೆಯೂ ಅಪಾರ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.