ಶುಕ್ರವಾರ, ಏಪ್ರಿಲ್ 16, 2021
21 °C

ಖರ ನಾಮ ಸಂವತ್ಸರ ಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರ 04 ಏಪ್ರಿಲ್ 2011

ಶ್ರೀ ಖರ ಸಂವತ್ಸರ  ಉತ್ತರಾಯಣ  ವಸಂತ ಋತು  ಮೀನ ಮಾಸದ 21 ನೇ ದಿನ - ತಿಥಿ: ಚೈತ್ರ ಶುಕ್ಲ ಪ್ರತಿಪತ್ ಗಂ. 22-24 ನಕ್ಷತ್ರ: ರೇವತಿ ಗಂ. 17-15 ಯೋಗ: ಇಂದ್ರ ಗಂ. 10-25 ಕರಣ: ಕಿಂಷ್ಟುಘ್ನ ಗಂ. 09-14 ನಂತರ ಭವ ಗಂ. 22-24.

29 ರಬಿಯುಸ್ಸಾನಿ.

ಕಲಿದಿನ  1867190.  ರಾಹುಕಾಲ ಗಂ. 07-30 ರಿಂದ 09-00. ಯಮಗಂಡ ಕಾಲ ಗಂ.  10-30 ರಿಂದ 12-00.

ಬೆಂಗಳೂರು: ಸೂರ್ಯೋದಯ ಗಂ. 6-14. ಸೂರ್ಯಾಸ್ತ: ಗಂ. 18-31.

ಚೈತ್ರ ಶುಕ್ಲಾದಿ (ಗುಡಿ ಪಾಡವ, ಯುಗಾದಿ), ಚೇತಿ ಚಾಂದ್ (ಸಿಂಧಿ ಹೊಸ ವರ್ಷ ದಿನ) ವಸಂತ ನವರಾತ್ರಾರಂಭ, ಚಾಂದ್ರಮಾನ ಯುಗಾದಿ.ಈ ಶ್ವೇತವರಾಹ ಕಲ್ಪದಲ್ಲಿ ಸ್ವಾಯಂಭುವ, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷವೆಂಬ ಆರು ಮನ್ವಂತರಗಳು ಕಳೆದು 7 ನೇ ಈ ವೈವಸ್ವತ ಮನ್ವಂತರದಲ್ಲಿ 27 ಚತುರ್ಯುಗಗಳು ಕಳೆದು 28ನೇ ಚತುರ್ಯುಗದಲ್ಲಿ ಕೃತ, ತ್ರೇತಾ, ದ್ವಾಪರಗಳೆಂಬ ಮೂರು ಯುಗಗಳು ಸಂದು ನಾಲ್ಕನೇ ಈ ಕಲಿಯುಗದಲ್ಲಿ 5112 ವರ್ಷಗಳು ಸಂದವು. ಈ ಯುಗದಲ್ಲಿ ಯುಧಿಷ್ಠಿರ, ವಿಕ್ರಮಗಳೆಂಬ ಎರಡು ಶಕಗಳು ಸಂದು ಮೂರನೇ ಈ ಶಾಲಿವಾಹನಶಕದಲ್ಲಿ 1933 ವರ್ಷಗಳು ಸಂದು 1934ನೇ ಖರ ಸಂವತ್ಸರದಲ್ಲಿ ಚಾಂದ್ರಮಾನ ರೀತ್ಯಾ ಚಂದ್ರನು ರಾಜನಾಗಿ, ಗುರುವು ಮಂತ್ರಿಯಾಗಿ, ಬುಧನು ಮೇಘಾಧಿಪತಿಯಾಗಿ, ರವಿಯು ಸಸ್ಯಾಧಿಪತಿಯಾಗಿ, ಕುಜನು ರಸಾಧಿಪತಿಯಾಗಿ, ಶುಕ್ರನು ಧಾನ್ಯಾಧಿಪತಿಯಾಗಿ, ಬುಧನು ಸೇನಾಧಿಪತಿಯಾಗಿ, ಶನಿಯು ನೀರಸಾಧಿಪತಿಯಾಗಿ, ಬುಧನು ಅರ್ಘಾಧಿಪತಿಯಾಗಿರುವರು. ಈ ನವನಾಯಕರಲ್ಲಿ  ಬಹು ಮಟ್ಟಿಗೆ ಶುಭ ಗ್ರಹದಲ್ಲಿ ಅಧಿಕಾರ ಪ್ರಾಪ್ತವಾಗಿರುತ್ತದೆ.ಈ ಖರ ಸಂವತ್ಸರದಲ್ಲಿ ಶುಭ ಗ್ರಹರ ಪ್ರಭಾವವು ಅಧಿಕವಾಗಿರುವುದರಿಂದ ಪ್ರಪಂಚದಲ್ಲಿ ಮಳೆ ಬೆಳೆಗಳು ಚೆನ್ನಾಗಿ ಆಗಿ ಸಸ್ಯ ಸಮೃದ್ಧಿಯೂ, ಧಾನ್ಯ ಸಮೃದ್ಧಿಯೂ ಉಂಟಾಗುತ್ತದೆ. ಜನಜೀವನದಲ್ಲಿ ಸಾಮಾನ್ಯವಾಗಿ ಸಂತೃಪ್ತಿಯೂ ನೆಲೆಸುವುದು. ದೇಶ ಭೇದದಿಂದ ಅಲ್ಲಲ್ಲಿ ಮಳೆ ಬೆಳೆಗಳು ಉತ್ತಮವಾಗಿ ಕಂಡು ಬಂದರೂ ರಸ ಪದಾರ್ಥ ವಸ್ತುಗಳ ಬೆಳೆಯು ತುಂಬಾ ಹಾನಿಗೊಳ್ಳಬಹುದು. ದೇಶದ ಜನಾಂಗದಲ್ಲಿ  ನಿರುತ್ಸಾಹ ಪರಿಸ್ಥಿತಿಯು ದಿನೇ ದಿನೇ ಹೆಚ್ಚುತ್ತಾ ಯಾವಾಗಲೂ ಅಸಹಕಾರ ಅಶಾಂತಿ ಹೆಚ್ಚುತ್ತಾ ಹೋಗುವುದು.

 

ಜನಾಂಗೀಯ ಘರ್ಷಣೆಗಳಿಂದ ಮತೀಯ ಗಲಭೆಗಳಿಂದ ತಲೆದೋರಿ ಬರುವ ಕ್ಲೇಶ ತಾಪತ್ರಯಗಳು ಹೆಚ್ಚುತ್ತಾ ದೇಶದಲ್ಲಿ ವಿಧ್ವಂಸಕ ಕೃತ್ಯಗಳು ಹೆಚ್ಚುವುದು. ರಾಜಕೀಯವಾಗಿ ಬೆಳೆಯುತ್ತಿರುವ ಪರಸ್ಪರ ವಿರೋಧ ಮನೋಭಾವದ ನಾಯಕರುಗಳು ಮತಭೇದದಿಂದ, ಪರ ರಾಷ್ಟ್ರದ ಆಕ್ರಮಣದಿಂದ ದೇಶದಲ್ಲಿ ಸಾವು-ನೋವುಗಳು ಸಂಭವಿಸುವುದು.ಬೃಹಸ್ಪತಿಯು ಮಂತ್ರಿಯಾಗಿರುವುದರಿಂದ (ಶುಭಗ್ರಹ) ರಾಜಕೀಯ ವ್ಯಕ್ತಿಗಳು ಕೆಲವೊಂದು ಸಮಯೋಚಿತ ಪ್ರಜ್ಞೆಗಳಿಂದ ದೇಶಕ್ಕೆ ಬರುವ ಗಂಡಾಂತರವನ್ನು ತಪ್ಪಿಸಬಹುದು. ದೇಶದ ಆರ್ಥಿಕ ಸಂಪನ್ಮೂಲಗಳು ವೃದ್ಧಿ ಹೊಂದುವುದು. ರಕ್ಷಕ ವರ್ಗದ ಜನರಿಗೆ ಕಷ್ಟದ ಕೆಲಸಗಳು ಕಂಡು ಬರುವುದು. ಧರ್ಮದ ವಿಚಾರದಲ್ಲಿ ಅನಾವಶ್ಯಕ ಚರ್ಚೆಗಳು ಆರಂಭಗೊಂಡು ಅಲ್ಲಲ್ಲಿ ಘರ್ಷಣೆಗಳಿರಬಹುದು. ದೇಶದ ಆಂತರಿಕ ವಿಚಾರದಲ್ಲಿ  ಪಾಶ್ಚಾತ್ಯ ರಾಷ್ಟ್ರಗಳ ಸಂಬಂಧವೂ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಶಕ್ತಿ ಮೀರಿ ದುಡಿಯುವ ಕೆಲವೊಂದು ಮಹಾನಾಯಕರ ಸದಾ ಜಾಗೃತೆಯಿಂದ ಹೆಚ್ಚಿನ ಹಾನಿ ತಪ್ಪಿಸಬಹುದು. ಅಗತ್ಯ ವಸ್ತುಗಳ ಬೆಲೆಯು ಏರಿಕೆಯಾಗುವುದು. ಭೂಕಂಪ, ನೆರೆಹಾವಳಿಯು ದೇಶದ ದಕ್ಷಿಣ ಭಾಗದಲ್ಲಿ ಗೋಚರಿಸಬಹುದು. ರಾಷ್ಟ್ರಮಟ್ಟದ ರಾಜಕೀಯದಲ್ಲಿ ಸ್ಥಿರವಾದ ಭದ್ರತೆ ಇರುವುದು.ಚಾಂದ್ರಮಾನ ರೀತ್ಯಾ ಚಂದ್ರನು ರಾಜನಾದ್ದರಿಂದ ದೇಶದ ಸಕಲ ಭಾಗಗಳಲ್ಲಿ  ಸಕಾಲಕ್ಕೆ ಮಳೆಯಾಗಿ ಧನಧಾನ್ಯಾದಿಗಳ ಸಂವೃದ್ಧಿಯಾಗುತ್ತದೆ. ಶುಭ ಶೋಭನಾದಿ ಮಂಗಳ ಕಾರ್ಯಗಳು ಜರುಗುತ್ತದೆ. ರೋಗಾದಿ ಉಪದ್ರವಗಳು ಜನರಿಗೆ ಉಂಟಾಗಲಾರದು. ದೇಶದ ಸಾಂಪತ್ತಿಕ ಸ್ಥಿತಿ ಸುಧಾರಿಸುವುದಲ್ಲದೇ ರಾಜ್ಯಾಧಿಕಾರಿಗಳು ದೇಶೋನ್ನತಿಯ ಕಾರ್ಯವನ್ನು ಕೈಗೊಳ್ಳುತ್ತಾರೆ.ಸೌರಮಾನ ರೀತ್ಯಾ ಗುರುವು ರಾಜನಾದ್ದರಿಂದ ಭೂತಲದಲ್ಲಿ ಸಸ್ಯಾನುಕೂಲವಾದ ಸುವೃಷ್ಟಿಯಾಗುವುದರಿಂದ ಬೆಳೆಗಳು ಬೇಕಾದಷ್ಟು ಫಲಿಸುತ್ತದೆ. ಗೋಮಹಿಷ್ಯಾದಿಗಳು ವಿಶೇಷವಾಗಿ ಹಾಲನ್ನು ಸುರಿಸುತ್ತವೆ. ಜನರು ಸನ್ಮಾರ್ಗಿಗಳಾಗಿ ಹೋಮ ಹವನಾದಿ ಧರ್ಮಕಾರ್ಯದಲ್ಲಿ ಆಸಕ್ತರಾಗಿ ಪಾಪವನ್ನು ಕಳೆದುಕೊಳ್ಳುತ್ತಾರೆ. ಗುರುವರ್ಗದವರು ಸದಾಚಾರ ಶೀಲರಾಗಿ ಶಿಷ್ಯೋದ್ಧಾರ ಕಾರ್ಯ ತತ್ಪರರಾಗುವರು.ವೃಷ್ಟಿ ವಿಚಾರ: ಬುಧನು ಮೇಘಾಧಿಪತಿಯಾದ್ದರಿಂದ ಸರ್ವತ್ರ ಸುವೃಷ್ಟಿಯಾಗುತ್ತದೆ. ಅಕ್ಕಿ, ರಾಗಿ, ಗೋಧಿ, ಜೋಳ ಇತ್ಯಾದಿ ಆಹಾರ ವಸ್ತುಗಳು ಸಮೃದ್ಧಿಯಾಗಿ ಬೆಳೆಯುವುದು.ಉದ್ದು, ಹುರುಳಿ, ಹೆಸರು, ತೊಗರಿ, ಕಡಲೆ, ಎಳ್ಳು, ಸಾಸಿವೆ, ಬೆಲ್ಲ, ಸಕ್ಕರೆ, ಎಣ್ಣೆ ಪದಾರ್ಥಗಳ ಬೆಲೆಯು ವಿಶೇಷವಾಗಿ ಏರುವುದು. ಆಹಾರ ಪದಾರ್ಥ ಮತ್ತು ರಸ ಪದಾರ್ಥಗಳು ಸಹ ಏರಿಕೆಗೊಳ್ಳುವುದು. ಮೇರು ಪರ್ವತದ ಉತ್ತರ ದಿಕ್ಕಿನಲ್ಲಿ ಹುಟ್ಟಿ ಹರಡುವ ಸಂವರ್ತ ಎನ್ನುವ ಮೇಘವು ವಾಯುಪೂರಿತವಾಗಿ ಸರ್ವದಿಕ್ಕುಗಳಲ್ಲಿ  ಚೆನ್ನಾಗಿ ಮಳೆಯನ್ನು ಸುರಿಸುತ್ತದೆ.ಈ ಸಂವತ್ಸರದಲ್ಲಿ  3 ಕೊಳಗ ಮಳೆ ಬರುತ್ತದೆ. ಕೊಳಗ ಅಂದರೆ ನೂರು ಯೋಜನ ವಿಸ್ತೀರ್ಣ. ಸಾವಿರ ಯೋಜನ ಎತ್ತರ. ಮಳೆಯು ಒಟ್ಟು ಇಪ್ಪತ್ತು ಭಾಗದಲ್ಲಿ  ಹತ್ತು ಭಾಗ ಸಮುದ್ರದಲ್ಲಿ  ಆರು ಭಾಗ ಪರ್ವತ ಪ್ರದೇಶದಲ್ಲಿ, ನಾಲ್ಕು ಭಾಗ ಸಮಭೂಮಿಯಲ್ಲೂ ಬೀಳುತ್ತದೆ. ಮಳೆಯ ಮಹಾ ನಕ್ಷತ್ರಗಳ (ಸೂರ್ಯ) ಪೈಕಿ ಅಶ್ವಿನಿ, ಕೃತ್ತಿಕಾ, ಮೃಗಶಿರ, ಅರ್ದ್ರಾ, ಪುಷ್ಯ, ಮಘಾ, ಉತ್ತರ, ಚಿತ್ತಾ ನಕ್ಷತ್ರಗಳಲ್ಲಿ ಸುವೃಷ್ಟಿಯು, ವಿಶಾಖಾ, ರೋಹಿಣಿ, ಭರಣಿಯಲ್ಲಿ ವೃಷ್ಟಿ ಶೂನ್ಯವು, ಸ್ವಾತಿ, ಹಸ್ತ, ಹುಬ್ಬಾ, ಆಶ್ಲೇಷ, ಪುನರ್ವಸು ನಕ್ಷತ್ರಗಳಲ್ಲಿ ವೃಥಾ ಮೇಘಾಡಂಬರವು ದೇಶ ಭೇದದಿಂದ ಉಂಟಾಗುತ್ತದೆ.

 

ರವಿಯು ಸಸ್ಯಾಧಿಪತಿಯಾಗಿರುವುದರಿಂದ ಮುಂಗಾರಿನ ಬೆಳೆಗಳು ಮಧ್ಯಮವಾಗಿ, ಹಿಂಗಾರಿನ ಬೆಳೆಗಳು ಅಲ್ಪವಾಗುವುವು. ಗೋಧಿ, ಜೋಳ, ಅಕ್ಕಿ, ರಾಗಿ, ನವಧಾನ್ಯಗಳ ಮಾರಾಟ ಮಧ್ಯಮವಾಗಿರುತ್ತದೆ. ಶುಕ್ರನು ಧಾನ್ಯಾಧಿಪತಿಯಾದ್ದರಿಂದ ಹಿಂಗಾರಿನ ಬೆಳೆಗಳಿಗಿಂತ ಮುಂಗಾರಿನ ಬೆಳೆ ಹೆಚ್ಚು ಫಲಿಸುತ್ತದೆ. ರಸಾಧಿಪತಿಯು ಕುಜನಾದ್ದರಿಂದ ಆಹಾರ ಧಾನ್ಯಾದಿಗಳು ಸಮೃದ್ಧಿಯಿಂದ ಜನರಿಗೆ ಸೌಖ್ಯ ಉಂಟಾಗುತ್ತದೆ. ಬುಧನು ಅರ್ಘಾಧಿಪತಿಯಾದ್ದರಿಂದ ಮಳೆ, ಬೆಳೆ ಉತ್ತಮವಾಗಿದ್ದರೂ ಎಲ್ಲಾ ವಸ್ತುಗಳು ತುಟ್ಟಿಯಾಗಿಯೇ ಇರುತ್ತದೆ.ಬುಧನು ಸೇನಾಧಿಪತಿಯಾದ್ದರಿಂದ ದೇಶದ ಸೈನ್ಯಬಲ ಅಧಿಕವಾದರೂ, ಸೈನಿಕರು ವಿಷಯಾಸಕ್ತರಾಗುತ್ತಾರೆ. ಶನಿಯು ನೀರಸಾಧಿಪತಿಯಾದ್ದರಿಂದ ಕಬ್ಬಿಣ, ಉಕ್ಕು, ತಾಮ್ರ, ಸೀಸ ಮುಂತಾದ ಲೋಹಗಳು, ಕಪ್ಪು ವಸ್ತುಗಳು ವೃದ್ಧಿಯಾಗುತ್ತದೆ. ಏಲಕ್ಕಿ, ಅಡಿಕೆ, ತೆಂಗು, ಮೆಣಸು ವಗೈರೆ ಪದಾರ್ಥಗಳು ಯಥಾ ಸ್ಥಿತಿಯಲ್ಲೇ ಮುಂದುವರಿಯುವುದು. ರೇಷ್ಮೆ ಬಟ್ಟೆ, ಉಣ್ಣೆ ವಸ್ತು ಧಾರಣಾ ಬಟ್ಟೆಗಳು, ಸುಗಂಧ ವಸ್ತುಗಳು ಇದ್ದಂತೆಯೇ ಇರುವುದು. ಚಿನ್ನ, ಬೆಳ್ಳಿ, ತಾಮ್ರ, ಕಂಚು, ಸೀಸ, ತವರ, ಕಬ್ಬಿಣದ ಧಾರಣೆಯು ಏರುತ್ತಿರುವುದು. ಷೇರು ಪೇಟೆಯ ವ್ಯವಹಾರವು ಮಧ್ಯಮವಾಗಿರುವುದು. ದಿನ ನಿತ್ಯದ ಪದಾರ್ಥಗಳು ತುಷ್ಟಿಗೊಳ್ಳುವುದು. ಗುರುವು ಮೀನ ರಾಶಿಯಲ್ಲಿ ಇರುವುದರಿಂದ ಪ್ರಜೆಗಳು ರಾಜರು ಸುಖಿಗಳಾಗಿರುತ್ತಾರೆ.

 

ನಂತರ ಮೇಷವನ್ನು ಪ್ರವೇಶಿಸುವ ಗುರುವಿನಿಂದಾಗಿ ಮೇಷ ವಿನಾಶವೂ, ಸಸ್ಯ ಸಮೃದ್ಧಿ, ರಾಜ ಕಲಹವು, ಪ್ರಜಾಕ್ಷೋಭೆಯೂ ಉಂಟಾಗಲಿದೆ. ವಾರುಣವೆಂಬ ವಾಯುಮಂಡಲದ ಪರಿಣಾಮವಾಗಿ ಭೂಮಿಯಲ್ಲಿ ಸಸ್ಯಗಳು ಚೆನ್ನಾಗಿ ಫಲಪ್ರದವಾಗುತ್ತವೆ. ಹೆಂಗಸರಿಗೆ ಪುತ್ರ  ಸಂತತಿಯಾಗುತ್ತದೆ. ಮಳೆಯಿಂದಾಗಿ ಫಲಪುಷ್ಪ ಸಮೃದ್ಧವಾಗುತ್ತದೆ. ಜ್ಯೇಷ್ಠ ಮಾರ್ಗಶಿರ ಪೂರ್ಣಿಮೆಗಳಲ್ಲಿ  ಬರುವ ಚಂದ್ರ ಗ್ರಹಣಗಳ ಪರಿಣಾಮವಾಗಿ ಗಿಡಗಳು ಮೊಳಕೆಯಲ್ಲಿ ನಾಶವಾಗುತ್ತದೆ. ಯಜ್ಞ ಯಾಗಾದಿಗಳನ್ನು ನಡೆಸದ ವಿಪ್ರರು ನಾಶವಾಗುತ್ತಾರೆ.ಸಂಕ್ರಾಂತಿ ಪುರುಷ ಲಕ್ಷಣ: ಈ ವರ್ಷ ಮಂದಾಕಿನೀ ಎಂಬ ಸಂಕ್ರಾಂತಿಯ ಕಾಲಪುರುಷನು ಮೃಗಜಾತಿ ವಿಶಿಷ್ಟನಾಗಿ ಲಾಕ್ಷಾ ತೈಲವನ್ನು (ಅರಗು) ಹಚ್ಚಿಕೊಂಡು ನರ್ಮದಾ ನದಿಯಲ್ಲಿ ಬಿಲ್ವೋದಕದಿಂದ ಸ್ನಾನ ಮಾಡಿ, ಶ್ಯಾಮ ವಸ್ತ್ರವನ್ನು, ಕಂಬಳವನ್ನು ಧರಿಸಿ, ಕುಳಿತ ಸ್ಥಿತಿಯಲ್ಲಿ ಪ್ರಗಲ್ಭವಯಸ್ಕನಾಗಿ ಜ್ವರಾರ್ತನೂ ಆಗಿ ಕಥೀರ ಪಾತ್ರೆಯಲ್ಲಿ ಮೊಸರನ್ನು ತಿಂದು ತೋಮರವೆಂಬ ಆಯುಧವನ್ನು ಧರಿಸಿ, ಒಂಟೆಯನ್ನು ಉಪವಾಹನವನ್ನಾಗಿಸಿಕೊಂಡು, ಕೋಣವನ್ನು ಪ್ರಧಾನ ವಾಹನವನ್ನಾಗಿಸಿಕೊಂಡು ಆಗ್ನೇಯಕ್ಕೆ ದೃಷ್ಟಿಯನ್ನಿಟ್ಟುಕೊಂಡು ಪೂರ್ವದಿಕ್ಕಿಗೆ ಅಭಿಮುಖವಾಗಿ ಗಮಿಸುವನು. ಈ ಕಾಲಪುರುಷನು ಉಪಯೋಗಿಸಿದ ಪದಾರ್ಥಗಳು ಹಾನಿ ಹೊಂದುವುವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.