ಖಾತರಿ ಕಾಮಗಾರಿ ಪರಿಶೀಲನೆ ತಂಡ ರಚನೆ

ಭಾನುವಾರ, ಜೂಲೈ 21, 2019
23 °C

ಖಾತರಿ ಕಾಮಗಾರಿ ಪರಿಶೀಲನೆ ತಂಡ ರಚನೆ

Published:
Updated:

ಸುರಪುರ: ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಕೃಷ್ಣಮ್ಮ ಬಡಿಗೇರ್ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಮಾನ್ಯ ಸಭೆಯಲ್ಲಿ ಬಲವಾಗಿ ಆರೋಪಿಸಿದರು. ಕಾರಣ ಅವ್ಯವಹಾರದ ಸುಳಿವು ದೊರೆತ ಕಾಮಗಾರಿಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದರು.ಗುಳೆ ತಪ್ಪಿಸಲು ಮತ್ತು ಎಲ್ಲಾ ಕಾರ್ಮಿಕರಿಗೆ ಉದ್ಯೋಗ ನೀಡಲು ಜಾರಿಗೆ ತಂದಿರುವ ಈ ಖಾತ್ರಿ ಯೋಜನೆ ತಾಲ್ಲೂಕಿನಲ್ಲಿ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕೂಲಿ ಹಣ ಕಾರ್ಮಿಕರಗೆ ತಲುಪದೆ ಗುತ್ತಿಗೆದಾರರ ಮತ್ತು ಅಧಿಕಾರಿಗಳ ಜೇಬು ಸೇರುತ್ತಿದೆ ಎಂದು ಕೃಷ್ಣಮ್ಮ ಕಿಡಿಕಾರಿದರು.ಇದಕ್ಕೆ ಎಲ್ಲಾ ಸದಸ್ಯರು ಪಕ್ಷಭೇದ ಮರೆತು ದನಿಗೂಡಿಸಿದರು. ಈ ನಿಟ್ಟಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳನ್ನು ಹದ್ದುಬಸ್ತಿನಲ್ಲಿಡುವಂತೆ ಸದಸ್ಯರು ಒತ್ತಾಯಿಸಿದರು. ಗ್ರಾಮ ಪಂಚಾಯಿತಿಗಳ ಕ್ರಿಯಾ ಯೋಜನೆಯನ್ನು ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತರದೆ ಸಿದ್ಧಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.ಇ.ಓ. ಚನ್ನಬಸಪ್ಪ ಮೆಕಾಲೆ ಇದಕ್ಕೆ ಉತ್ತರಿಸಿ ಖಾತ್ರಿ ಯೋಜನೆಯ ಅವ್ಯವಹಾರ ಪರಿಶೀಲನೆಗೆ ತಾಲ್ಲೂಕು ಪಂಚಾಯಿತಿ ಸದಸ್ಯರು ಒಪ್ಪಿಗೆ ನಿಡಿದರೆ ಪರಿಶೀಲನೆಗೆ ತಂಡಗಳನ್ನು ರಚಿಸಲಾಗುವುದು ಎಂದರು.ಭಾಗ್ಯಲಕ್ಷ್ಮಿ ಬಾಂಡ್ ನೀಡುವ ವೇಳೆ ಅಂಗನವಾಡಿ ಕಾರ್ಯಕರ್ತೆಯರು ದುಡ್ಡು ಕೇಳುತ್ತಿದ್ದಾರೆ ಎಂಬ ವಿಷಯ ಸಭೆಯಲ್ಲಿ ತೀವ್ರ ವಾಗ್ವಾದ ಸೃಷ್ಟಿಸಿತು. ಮಹಿಳಾ ಸದಸ್ಯರು ಈ ಬಗ್ಗೆ ಸಿಡಿಪಿಓ ಟಿ. ಪಿ. ದೊಡ್ಡಮನಿ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಹಣ ಕೇಳಿದಲ್ಲಿ ತಮ್ಮನ್ನು ಸಂಪರ್ಕಿಸಿ ಅಂತಹವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಿಡಿಪಿಓ ಭರವಸೆ ನೀಡಿದರು.ಮಡಿಲು ಕಿಟ್‌ಗೆ ಹಣ ಕೇಳಲಾಗುತ್ತಿದೆ. ಕೊಡೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ ಇಲ್ಲ. ಕೆಂಭಾವಿಯಲ್ಲಿ ವೈದ್ಯರ ಕೊರತೆ ಇದೆ ಎಂದು ಸದಸ್ಯರಾದ ಸಂಗಮ್ಮ ಹಾವೇರಿ, ಖಾಜಾ ಪಟೇಲ ಸಭೆಗೆ ತಿಳಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್. ವಿ. ನಾಯಕ್ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಜೂನ್ 26 ರಂದು ತಾಲ್ಲೂಕು ಆಸ್ಪತ್ರೆಯಲ್ಲಿ ಉಚಿತ ನೇತ್ರ ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ ಎಂದು ನಾಯಕ್ ತಿಳಿಸಿದರು.ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜಿ. ಎನ್. ರೋಡಲಬಂಡಿ ಮಾತನಾಡಿ, 940 ಬಿಸಿಯೂಟ ಕೇಂದ್ರಗಳಲ್ಲಿ 942 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 50,500 ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ. 3 ಸರ್ಕಾರೇತರ ಸಂಸ್ಥೆಗಳು ಬಿಸಿಯೂಟದ ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಿದರು.ಸಹಾಯಕ ಕೃಷಿ ನಿರ್ದೇಶಕ ಡಾ. ಬಾಲರಾಜ್ ರಂಗರಾವ್, ಜೂನ್ ತಿಂಗಳಲ್ಲಿ ನಿರೀಕ್ಷೆಯ ಮಟ್ಟದಲ್ಲಿ ಮೆಳೆ ಬಿದ್ದಿಲ್ಲ. ಬಿತ್ತನೆ ಆರಂಭಗೊಂಡಿದೆ. ಸುವರ್ಣಭೂಮಿ ಯೋಜನೆಯಡಿ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಸಮಾಜ ಕಲ್ಯಾಣಾಧಿಕಾರಿ ಸಂಜೀವ ದರಬಾರಿ, ಶಿಕ್ಷಣ ಇಲಾಖೆಯ ಸುಧಾಕರ ಕಟ್ಟಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀಶೈಲ ವಾಗಮೊರೆ, ಇತರ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry