ಖಾತರಿ ಹಣ: ಕೂಲಿಕಾರರ ಧರಣಿ

7

ಖಾತರಿ ಹಣ: ಕೂಲಿಕಾರರ ಧರಣಿ

Published:
Updated:

ಕುಷ್ಟಗಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನಿರ್ವಹಿಸಿದವರಿಗೆ ಕೂಲಿಹಣ ಪಾವತಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಶಾಖಾಪೂರ ಗ್ರಾಮದ ಕೃಷಿ ಕೂಲಿಕಾರರು ಗುರುವಾರ ಇಲ್ಲಿ ದಿಢೀರ್ ಧರಣಿ ನಡೆಸಿದರು.ಮಹಿಳೆಯರು ಸೇರಿದಂತೆ ಅನೇಕ ಕೃಷಿ ಕೂಲಿಕಾರರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಚೇಂಬರ್ ಮುಂದೆ ಕೆಲ ಸಮಯದವರೆಗೂ ಧರಣಿ ನಡೆಸಿದ್ದು ಕಂಡುಬಂದಿತು. ಸಾಮಾಜಿಕ ಅರಣ್ಯ ಇಲಾಖೆಗೆ ಸಂಬಂಧಿಸಿದ ಗುಂಡಿ ತೆಗೆಯುವ ಮತ್ತು ಸಸಿ ನೆಡುವ ಕಾಮಗಾರಿಯಲ್ಲಿ ಸುಮಾರು 70ಕ್ಕೂ ಅಧಿಕ ಕೂಲಿಕಾರರು ಕೆಲಸ ಮಾಡಿದ್ದರು. ಆದರೆ ಆರು ತಿಂಗಳು ಕಳೆದರೂ ಕೂಲಿಹಣ ಪಾವತಿಯಾಗಿಲ್ಲ. ಈ ಬಗ್ಗೆ ವಿಚಾರಿಸಿದರೆ ಅರಣ್ಯ ಇಲಾಖೆ ಮತ್ತು ತಾಲ್ಲೂಕು ಪಂಚಾಯತಿ ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ ಎಂದು ಕೂಲಿಕಾರ್ಮಿಕ ಬಸವರಾಜ, ರೈತ ಸಂಘದ ಧುರೀಣ ಆರ್.ಕೆ.ದೇಸಾಯಿ ಮತ್ತಿತರರು ದೂರಿದರು. ದುಡಿದವರಿಗೆ ಸರಿಯಾಗಿ ಹಣ ಪಾವತಿಯಾಗುತ್ತಿಲ್ಲ, ಗ್ರಾಮ ಪಂಚಾಯತಿಗಳಲ್ಲಿ ಸಿಬ್ಬಂದಿ ಇರುವುದಿಲ್ಲ, ಫಾರ್ಮ್ ನಂ 6 ಕೊಡುವವರಿಲ್ಲ ಅಷ್ಟೇ ಏಕೆ ಕೆಲಸದ ಆದೇಶಕ್ಕೆ ಫಾರ್ಮ್ ನಂ 9 ನೀಡುವವರೂ ಇಲ್ಲ ಹಾಗಾಗಿ ಯೋಜನೆ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಹೇಳಿದರು.ನಂತರ ಈ ಕೂಲಿಕಾರರೊಂದಿಗೆ ಚರ್ಚಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಯರಾಮ ಚವ್ಹಾಣ ಸಂಬಂಧಿಸಿದ ಇಲಾಖೆ ಸಿಬ್ಬಂದಿಯೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಹಣ ಪಾವತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಕೂಲಿಕಾರರು ಧರಣಿ ಹಿಂತೆಗೆದುಕೊಂಡರು.ಆತಂಕ: ಆದರೆ ಕಳೆದ ವರ್ಷ ಕೂಲಿಕಾರರ ಹೆಸರಿನ ಅಂಚೆ ಖಾತೆಗಳಿಗೆ ಜಮೆಯಾಗಿದ್ದ ಕೂಲಿ ಹಣವನ್ನು ಗ್ರಾಮದ ಕೆಲ ಮಧ್ಯವರ್ತಿಗಳು ಗುಳುಂ ಮಾಡಿಕೊಂಡಿದ್ದರು. ಈ ಅವ್ಯವಹಾರಕ್ಕೆ ಹಿರೇಅರಳಿಹಳ್ಳಿ ಅಂಚೆ ಸಿಬ್ಬಂದಿ ಮಧ್ಯವರ್ತಿಗಳು, ಬೇನಾಮಿ ವ್ಯಕ್ತಿಗಳೊಂದಿಗೆ ಕೈಜೋಡಿಸಿ ಲಕ್ಷಾಂತರ ರೂಪಾಯಿ ಹಣ ನುಂಗಿ ನೀರು ಕುಡಿದಿದ್ದಾರೆ ಎಂದು ರೈತ ಸಂಘದ ಧುರೀಣ ಆರ್.ಕೆ.ದೇಸಾಯಿ ಆರೋಪಿಸಿದರು.ಮತ್ತೆ ಈ ವರ್ಷವೂ ಅಂಚೆ ಸಿಬ್ಬಂದಿ ಮತ್ತು ಮಧ್ಯವರ್ತಿಗಳು ಹಣ ಲಪಟಾಯಿಸಲು ಸಂಚು ರೂಪಿಸಿರುವ ಸಾಧ್ಯತೆ ಇದೆ. ಹಾಗಾಗಿ ಕೂಲಿಕಾರ್ಮಿಕ ಅಂಚೆ ಖಾತೆಗಳ ಸಾಚಾತನವನ್ನು ಪರಿಶೀಲಿಸಿದ ನಂತರವಷ್ಟೆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ದೇಸಾಯಿ ಅಧಿಕಾರಿಗಳನ್ನು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry