ಖಾತೆ ಇಲ್ಲದಿದ್ದರೂ ಹಣ ನಗದು

7

ಖಾತೆ ಇಲ್ಲದಿದ್ದರೂ ಹಣ ನಗದು

Published:
Updated:
ಖಾತೆ ಇಲ್ಲದಿದ್ದರೂ ಹಣ ನಗದು

`ಅಲ್ಲಿ ನಿಂತಿದಾರಲ್ಲ, ಅವರ ಸಂಬಂಧಿಯೊಬ್ಬರಿಗೆ ಹಾರ್ಟ್ ಆಪರೇಷನ್. ಅವರಿಗೆ ಸರ್ಕಾರದಿಂದ ಚೆಕ್ ರೂಪದಲ್ಲಿ ಸಹಾಯ ಧನ ದೊರೆತಿದೆ. ಆದರೆ ಇಲ್ಲಿ ಅವರ ಹೆಸರನಲ್ಲೊಂದು ಅಕೌಂಟ್ ಇಲ್ಲ ನೋಡಿ. ಇದ್ರೂ ಈಗ ಟೈಂ ಬೇರೆ ಮೂರುವರೆ ಆಗೋಯ್ತು. ಚೆಕ್ಕೂ ಕರೆಕ್ಷನ್ ಆಗಲ್ಲ. ನಾಳೆ ಬೆಳಗ್ಗೆ ಆಪರೇಷನ್ ಅಂತೆ. ದುಡ್ಡು ಇವತ್ತು ಐದು ಗಂಟೆಯೊಳಗೆ ಕಟ್ಟಬೇಕು. ಹೀಗಾಗಿ ಇಲ್ಲಿಗೆ ಬಂದಿದ್ದಾರೆ. ಒಂದು ಪರ್ಸೆಂಟ್ ಕಮಿಷನ್‌ಗೆ ಅವರ ಚೆಕ್ ತಗೊಂಡು ಕ್ಯಾಷ್ ಕೊಡ್ತಾರೆ. ಅವರಿಗೂ ಅನುಕೂಲ ಆಯ್ತು, ನಮಗೂ ಒಂದಿಷ್ಟು ಕಾಸು ಸಿಗ್ತು. ಇಂಥ ಹತ್ತಾರು ಚೆಕ್ ಸಿಕ್ರೆ ಇವತ್ತಿನ ಜೀವನ ನಡೀತು. ನಾಳೆ ಮತ್ತೆ ಇದೇ ಕಥೆ~.

ಮಾತು ಮುಗಿಸಿದ ಆತ ನಿಟ್ಟುಸಿರುಬಿಟ್ಟರು. ಚೆಕ್ ಡಿಸ್ಕೌಂಟ್ ಮಾಡಿಕೊಡುವುದು ವ್ಯಕ್ತಿಯ ಕೆಲಸ.

ನಗರದ ಕಾರ್ಪೋರೇಷನ್ ಬಳಿಯ ಧರ್ಮರಾಯನ ಬೀದಿ, ಜಿಪಿಒ ಹಾಗೂ ನಗರದ ಹೃದಯ ಭಾಗದಲ್ಲಿ ಚೆಕ್ ಡಿಸ್ಕೌಂಟ್ ಮಾಡಿಕೊಡುವ ಇಂಥ ಅನೇಕ ವ್ಯಕ್ತಿಗಳು ಸಿಗುತ್ತಾರೆ. ತಮ್ಮ ಬಗಲ ಭಧ್ರಕೋಟೆಯಲ್ಲಿ ಸುರಕ್ಷಿತವಾಗಿರುವ ಹಣ ಹಾಗೂ ಕಡತಗಳ ಚೀಲ, ತಾವೇ ಮನೆಯಿಂದ ತಂದ ಒಂದು ಮಡಚಬಹುದಾದ ಕುರ್ಚಿಯೇ ಅವರ ಬಂಡವಾಳ. ಕಚೇರಿ ಕೆಲಸದಂತೆ ಬೆಳಿಗ್ಗೆ ನಿಗದಿತ ಹೊತ್ತಿಗೆ ನಿರ್ದಿಷ್ಟ ಸ್ಥಳಕ್ಕೆ ಬಂದು ಆಸೀನರಾದರೆ ಸಂಜೆವರೆಗೂ ಅವರ ಕೆಲಸ. ಬ್ಯಾಂಕ್‌ನಲ್ಲಿ ಖಾತೆ ಇಲ್ಲದವರು ತರುವ `ಅಕೌಂಟ್ ಪೇಯಿ~ ಚೆಕ್‌ಗಳನ್ನು ಪಡೆದು, ತಮ್ಮ ಕಮಿಷನ್ ಮುರಿದುಕೊಂಡು ಉಳಿದ ಕಾಸು ನೀಡುವುದೇ ಇವರ ವೃತ್ತಿ. ಇದನ್ನೇ `ಚೆಕ್ ಡಿಸ್ಕೌಂಟ್~ ಎನ್ನುತ್ತಾರೆ.

ಹೊರ ರಾಜ್ಯದಿಂದ ಬಂದ ಕೂಲಿ ಕಾರ್ಮಿಕರು, ಹಗಲಿರುಳೆನ್ನದೆ ದುಡಿಯುವ ಕ್ಯಾಬ್ ಡ್ರೈವರ್‌ಗಳು, ಮುಖ್ಯಮಂತ್ರಿ ಅಥವಾ ಮೇಯರ್ ಅವರಿಂದ ಚಿಕಿತ್ಸೆಗಾಗಿ ಪಡೆದ ಸಹಾಯ ಪಡೆದ ಫಲಾನುಭವಿಗಳು, ರಾಜ್ಯದ ಮೂಲೆಯೊಂದರಿಂದ ರಾಜಧಾನಿಗೆ ಬಂದು ಕಲಾಕೃತಿ ಪ್ರದರ್ಶಿಸುವ ಕಲಾವಿದರು, ಜನಪದ ಹಾಡು ಹಾಗೂ ನೃತ್ಯಗಾರರು, ವಿದ್ಯಾರ್ಥಿಗಳು- ಹೀಗೆ, ಚೆಕ್ ಡಿಸ್ಕೌಂಟ್ ಮಾಡಿಸಿಕೊಳ್ಳಲು ವಿಭಿನ್ನ ಹಿನ್ನೆಲೆಯವರು ಬರುತ್ತಾರೆ. ಬ್ಯಾಂಕ್ ಖಾತೆ ಹೊಂದಿರದ ಅಥವಾ ಇದ್ದರೂ ಆ ಕ್ಷಣಕ್ಕೆ ಪ್ರಯೋಜನಕ್ಕೆ ಬಾರದವರು ಚೆಕ್ ಡಿಸ್ಕೌಂಟ್ ಪ್ರಯೋಜನ ಪಡೆದುಕೊಳ್ಳುತ್ತಾರೆ.

ದಿನದ ಆರಂಭದಲ್ಲಿ ಕೊಂಚ ಆರಾಮಾಗಿ ಕೂತು ಕತ್ತು ಉದ್ದ ಮಾಡಿ ಬರುವ ಗಿರಾಕಿಗಳನ್ನು ಹುಡುಕುವ ಈ ಮಂದಿ, ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ಸ್ಪರ್ಧೆಗಿಳಿಯುತ್ತಾರೆ. ಸಮೀಪದಲ್ಲಿ ಹಾದುಹೋಗುವ ದ್ವಿಚಕ್ರ ವಾಹನಗಳು, ಕ್ಯಾಬ್‌ಗಳು ಹಾಗೂ ಇನ್ನಿತರ ವಾಹನಗಳನ್ನೇ ಗುರಿಯಾಗಿಟ್ಟುಕೊಂಡು ಕೈಯಲ್ಲೇ `ಚೆಕ್ ಕೆಲಸವೇ?~ ಎಂದು ಸನ್ನೆ ಮೂಲಕವೇ ಕೇಳುತ್ತಾರೆ. ಇದೇ ಕೆಲಸಕ್ಕಾಗಿ ಬರುವವರ ಗುಣಲಕ್ಷಣಗಳನ್ನು ಇವರು ಚೆನ್ನಾಗಿ ಬಲ್ಲರು. ಬರುವ ಅರ್ಧದಷ್ಟು ಮಂದಿಗೆ ಕಾಯಂ `ಚೆಕ್ ಡಿಸ್ಕೌಂಟರ್~ ಪರಿಚಯವಿದ್ದೇ ಇರುತ್ತದೆ. ಅಂಥವರು ನೇರವಾಗಿ ಅವರ ಬಳಿಯೇ ಹೋಗುತ್ತಾರೆ. ಉಳಿದವರು ಇದನ್ನು ಕಂಡು ಅಸೂಯೆಪಡದೆ, ಮತ್ತೊಬ್ಬ ಗ್ರಾಹಕನ ಹುಡುಕಾಟದಲ್ಲಿ ತೊಡಗುತ್ತಾರೆ.

ಚೆಕ್ ಡಿಸ್ಕೌಂಟ್‌ಗಾಗಿ ಆಗಮಿಸುವವರಿಂದ ಭಾವಚಿತ್ರ ಇರುವ ಗುರುತಿನ ಚೀಟಿ ಹಾಗೂ ವಿಳಾಸದ ಪ್ರತಿ ಪಡೆದು ಅರ್ಜಿಯೊಂದರ ಮೇಲೆ ಮೂರು ಸಹಿ ಪಡೆದು, ಚೆಕ್ ಮೊತ್ತದಲ್ಲಿ ತಮ್ಮ ಪಾಲು ಹಿಡಿದು ಉಳಿದ ಹಣವನ್ನು ಕ್ಷಣ ಮಾತ್ರದಲ್ಲಿ ನೀಡುತ್ತಾರೆ. ಬ್ಯಾಂಕ್‌ನಂತೆ ಇಲ್ಲಿ ಕೌಂಟರ್‌ಗಳ ಮುಂದೆ ನಿಲ್ಲುವ ಗೋಜಿಲ್ಲ. ಕಂಪ್ಯೂಟರೀಕರಣ ಆದರೂ ಹಣ ಕಟ್ಟುವವರ/ ಪಡೆಯುವವರ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿಯಿಲ್ಲ. ಸಮಯ ಮೀರಿದರೂ `ನಾಳೆ~ ಎಂಬ ಸಿದ್ಧ ಉತ್ತರವೂ ಇಲ್ಲಿಲ್ಲ.

ಬೆಳಿಗ್ಗೆ ತೀರಾ ಚಟುವಟಿಕೆಯಿಂದ ಕೂಡಿರುವ ಈ ಪರಿಸರದಲ್ಲಿ ಬಿಸಿಲು ಏರುತ್ತಿದ್ದಂತೆ ಪೈಪೋಟಿ ಹೆಚ್ಚಾಗುತ್ತದೆ. ಅದರ ನಡುವೆಯೂ ಇಲ್ಲಿ ವ್ಯವಹಾರ ನಡೆಸುವವರ ನಡುವಿನ ಸೌಹಾರ್ದತೆಗೇನೂ ಧಕ್ಕೆ ಇಲ್ಲ. ಮಧ್ಯಾಹ್ನದ ನಂತರ ಚೆಕ್ ಡಿಸ್ಕೌಂಟ್‌ಗಾಗಿ ಬರುವವರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಒಬ್ಬೊಬ್ಬರಾಗಿ ತಾವು ಮನೆಯಿಂದ ತಂದ ಬುತ್ತಿಯನ್ನು ತೆಗೆದು ಊಟ ಆರಂಭಿಸುತ್ತಾರೆ. ಈ ಸಂದರ್ಭದಲ್ಲಿ ತಮ್ಮಂದಿಗೆ ಇರುವ ಇತರರೊಂದಿಗೂ ಹಂಚಿಕೊಂಡು ತಿನ್ನುತ್ತಾರೆ.

ಅಂದಹಾಗೆ, ಇವರದ್ದೇನೂ ನೆಮ್ಮದಿಯ ಕೆಲಸವಲ್ಲ. `ನೆನ್ನೆ ನೆನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ~ ಎಂಬ ಗೀತೆಯ ಸಾಲಿನಂತೆ ಇವರ ಜೀವನ. ಪಡೆವ ಕೆಲವೊಂದು ಚೆಕ್‌ಗಳು ನಕಲಿ ಆದ ಉದಾಹರಣೆಗಳಿವೆ. ಕೆಲವೊಮ್ಮೆ ಗಿರಾಕಿಗಳು ಸಿಕ್ಕದೆ ಪರಿತಪಿಸುವುದೂ ಇದೆ. ಮಳೆ-ಬಿಸಿಲಿನ ಹೊಡೆತ ಇದ್ದೇಇದೆ. ಜಾಗತಿಕ ಆರ್ಥಿಕ ಹಿಂಜರಿತದ ಬಿಸಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾತ್ರವಲ್ಲದೆ, ಇವರಿಗೂ ತಟ್ಟಿದೆ. `ಆರ್ಥಿಕ ನಷ್ಟದಿಂದ ಮೂಲಸೌಕರ್ಯ ಕಡಿತ ಮಾಡಿದ ಕಂಪೆನಿಗಳು ನೌಕರರನ್ನು ಕರೆತರಲು ಕ್ಯಾಬ್‌ಗಳ ಬದಲು ಬಸ್‌ಗಳನ್ನು ಬಳಸಲು ಆರಂಭಿಸಿದವು. ಇದರಿಂದ ಚಾಲಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಯಿತು. ಅವರಿಂದ ಡಿಸ್ಕೌಂಟ್‌ಗೆಂದು ಬರುತ್ತಿದ್ದ ದೊಡ್ಡ ಸಂಖ್ಯೆಯ ಚೆಕ್‌ಗಳೂ ನಿಂತುಹೋದವು~ ಎಂದು ಚೆಕ್ ಡಿಸ್ಕೌಂಟ್ ನಡೆಸುವವರು ಅಳಲು ತೋಡಿಕೊಳ್ಳುತ್ತಾರೆ.

`ನಾವೇನೂ ಈ ವೃತ್ತಿಯನ್ನು ಬಯಸಿ ಆರಿಸಿಕೊಳ್ಳಲಿಲ್ಲ ಸಾರ್. ನನ್ನಂತೆ ಇಲ್ಲಿರೋ ಅನೇಕರು ನಿರುದ್ಯೋಗಿ ಪದವೀಧರರು. ಎಷ್ಟೇ ಹುಡುಕಿದರೂ ನೌಕರಿ ಸಿಗಲಿಲ್ಲ. ನಾವೂ ಬದುಕಬೇಕು. ಯಾರೋ ಪುಣ್ಯಾತ್ಮರು ಈ ಉದ್ಯೋಗ ಹೇಳಿಕೊಟ್ಟರು. ಇದರಲ್ಲೇ ನಮ್ಮ ನಿತ್ಯದ ಜೀವನ ಸಾಗಿಸುತ್ತಿದ್ದೇವೆ. ಎಲ್ಲಿಯವರೆಗೆ ನಡೆಯುತ್ತೋ ನೋಡಬೇಕು~ ಎಂದೊಬ್ಬ ಚೆಕ್ ಡಿಸ್ಕೌಂಟರ್ ತಮ್ಮ ಹೆಸರು ಹೇಳದೆಯೇ ಆತ್ಮಕಥೆಯ ತುಣುಕು ಹಂಚಿಕೊಳ್ಳುತ್ತಾರೆ.

ಹದಿನೆಂಟು ವರ್ಷ ದಾಟಿದ ಪ್ರತಿಯೊಬ್ಬ ಭಾರತೀಯನೂ ಮತದಾರರ ಗುರುತಿನ ಚೀಟಿ ಹೊಂದಿರಬೇಕು ಹಾಗೂ ಪ್ರತಿಯೊಬ್ಬ ಭಾರತೀಯನಿಗೂ ಒಂದು ಗುರುತಿನ ಚೀಟಿ ಇರಬೇಕು ಎಂಬ ನಿಯಮವಿದೆ. ಅದರಂತೆ ಪ್ರತಿಯೊಬ್ಬ ಭಾರತೀಯನೂ ಒಂದು ಬ್ಯಾಂಕ್ ಖಾತೆ ಹೊಂದಿರಬೇಕು ಎಂಬುದನ್ನೂ ಆರ್‌ಬಿಐ ಸೂಚನೆಯಲ್ಲಿ ತಿಳಿಸಲಾಗಿದೆ. ಒಂದೊಮ್ಮೆ ವ್ಯಕ್ತಿಯ ಬಳಿ ಠೇವಣಿ ಇಡಲು ಹಣ ಇಲ್ಲವೆಂದಾದಲ್ಲಿ ಆತನಿಗೆ ಶೂನ್ಯ ಠೇವಣಿಯ ಖಾತೆ ತೆರೆದು, ಆರಂಭದಲ್ಲಿ 500 ರೂಪಾಯಿಗಳ ಸಾಲವನ್ನೂ ನೀಡಬೇಕೆಂಬ ನಿಯಮವಿದೆ. ಹೀಗೆ ಸೌಲಭ್ಯಗಳಿದ್ದರೂ ಬ್ಯಾಂಕ್ ಖಾತೆ ಇಲ್ಲದ ಹಲವರು, ಖಾತೆ ಇದ್ದರೂ ಬ್ಯಾಂಕ್‌ಗೆ ಹೋಗಲಾಗದವರು ನಗರದಲ್ಲಿದ್ದಾರೆ. ಈ `ಇಲ್ಲ~ದ ಮಂದಿಯೇ ಚೆಕ್ ಡಿಸ್ಕೌಂಟ್ ಮಾಡಿಕೊಡುವವರ ಪಾಲಿಗೆ ಅನ್ನವಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry