ಖಾತೆ ತೆರೆಯಲು ಕ್ಯಾತೆ- ಸಿಗದ ಶಿಷ್ಯವೇತನ

7

ಖಾತೆ ತೆರೆಯಲು ಕ್ಯಾತೆ- ಸಿಗದ ಶಿಷ್ಯವೇತನ

Published:
Updated:

ಕೊಪ್ಪಳ: ಜಿಲ್ಲೆಯಲ್ಲಿ ಪದವಿಪೂರ್ವ ಹಂತದಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ತಮಗೆ ಮಂಜೂರಾದ ವಿದ್ಯಾರ್ಥಿ ವೇತನ ಪಡೆಯುವ ಭಾಗ್ಯವೇ ಇಲ್ಲದಂತಾಗಿದೆ.ವಿದ್ಯಾರ್ಥಿ ವೇತನ ವಿತರಣೆಗೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಒಂದೆಡೆಯಾದರೆ, ಆಡಳಿತಾತ್ಮಕ ಕಾರಣ ಮುಂದೊಡ್ಡಿ ಖಾತೆ ತೆರೆಯಲು ನಿರಾಕರಿಸುತ್ತಿರುವ ಬ್ಯಾಂಕ್‌ಗಳ ಧೋರಣೆ ಮತ್ತೊಂದೆಡೆ. ಈ ಎರಡು ಕಾರಣಗಳಿಂದ ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಇದ್ದೂ ಇಲ್ಲದಂತಾಗಿದೆ.ಆದರೆ, ಆ. 22ರಂದು ಈ ಸಂಬಂಧ `ಪ್ರಜಾವಾಣಿ~ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಅಂದು ನಗರಕ್ಕೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಸದರಿ ವರದಿಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.ಅಲ್ಲದೇ, ಖಾತೆ ತೆರೆಯುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪಂದಿಸದಿದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇಲಾಖೆ ಇಟ್ಟಿರುವ ಠೇವಣಿಯನ್ನು ಕೂಡಲೇ ವಾಪಸು ಪಡೆಯುವುದಾಗಿ ಸಹ ಪ್ರಕಟಿಸಿದ್ದರು. ಆದರೆ, ಇದುವರೆಗೆ ಈ ಸಂಬಂಧ ಯಾವುದೇ ಕ್ಛ್ರಮ ಕೈಗೊಂಡಿಲ್ಲ.ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಗಣಕೀಕರಣದ ಮೂಲಕವೇ ವಿತರಣೆ ಮಾಡಬೇಕು. ಇದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಸ್‌ಬಿಎಚ್), ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಶಾಖೆ ಇಲ್ಲವೇ ಯಾವುದೇ ಅಂಗೀಕೃತ ಗ್ರಾಮೀಣ ಬ್ಯಾಂಕ್‌ನ ಶಾಖೆಯೊಂದರಲ್ಲಿ ಖಾತೆ ತೆರೆಯುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು (ಶಿಕ್ಷಣ) ಆದೇಶ ಹೊರಡಿಸಿದ್ದಾರೆ.ಅಲ್ಲದೇ, ಶೂನ್ಯ ಬಾಕಿ ಖಾತೆ (ನೋ ಫ್ರಿಲ್ ಅಕೌಂಟ್) ತೆರೆಯಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಆದರೆ, ಜಿಲ್ಲೆಯಲ್ಲಿ ಮಾತ್ರ ಈ ಆದೇಶ ಜಾರಿಯಾಗುತ್ತಿಲ್ಲ. ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಶಾಖೆಯೊಂದು, `ಹೊಸದಾಗಿ ಸಿಬಿಎಸ್ ಆದದ್ದರಿಂದ ಖಾತೆಗಳನ್ನು ತೆರೆಯುವುದು ಆಗುವುದಿಲ್ಲ~ ಎಂಬ ಉತ್ತರ ನೀಡಿ ಕೈ ತೊಳೆದುಕೊಂಡಿದ್ದು ಸಚಿವರ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಂಡಿಲ್ಲ!ವಿದ್ಯಾರ್ಥಿಗಳು ಒಂದೇ ಬಾರಿಗೆ ವಿದ್ಯಾರ್ಥಿ ವೇತನದ ಮೊತ್ತವಾದ 1600 ರೂಪಾಯಿಗಳನ್ನು ತೆಗೆದುಕೊಂಡ ನಂತರ ಖಾತೆ ಬರಿದಾಗುತ್ತದೆ. ಯಾವುದೇ ತರಹದ ವ್ಯವಹಾರದ ಇಂತಹ ಖಾತೆಗಳನ್ನು ನಿರ್ವಹಿಸುವುದು ಕಷ್ಟ. ಹೀಗಾಗಿ ವಿದ್ಯಾರ್ಥಿ ವೇತನ ಬಟವಾಡೆಗಾಗಿ ಇಂತಹ ಖಾತೆಗಳನ್ನು ತೆರೆಯದಿರುವ ನಿರ್ಧಾರಕ್ಕೆ ಬರಲಾಗಿದೆ ಎಂಬುದು ಹೆಸರು ಹೇಳಲು ಇಚ್ಛಿಸದ ಬ್ಯಾಂಕ್ ಅಧಿಕಾರಿಯೊಬ್ಬರ ಸಮಜಾಯಿಷಿ.ಇನ್ನೊಂದೆಡೆ ಜಿಲ್ಲೆಯಲ್ಲಿ ಹಲವಾರು ದಲಿತ ಪರ ಸಂಘಟನೆಗಳಿವೆ. ಪರಿಶಿಷ್ಟ ಸಮುದಾಯಕ್ಕೆ ಸೇರಿದ 10ಕ್ಕೂ ಅಧಿಕ ಸಂಖ್ಯೆಯ ಜಿಲ್ಲಾ ಪಂಚಾಯಿತಿ ಸದಸ್ಯರಿದ್ದಾರೆ. ಇವರಾರೂ ಈ ಬಗ್ಗೆ ಯೋಚಿಸಿದಿರುವುದು ಶೋಚನೀಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry