ಬುಧವಾರ, ನವೆಂಬರ್ 20, 2019
20 °C

ಖಾತೆ ತೆರೆಯಲು ಬ್ಯಾಂಕ್ ಸಿಬ್ಬಂದಿ ಅಸಹಕಾರ

Published:
Updated:

ಕೊಪ್ಪಳ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೂಲಿ ಹಣವನ್ನು ಈ ವರ್ಷದಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಪಾವತಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನಿರ್ಣಯ ಕೈಗೊಂಡಿದ್ದರೂ, ಜಿಲ್ಲೆಯಲ್ಲಿ ಮಾತ್ರ ಜಾರಿಗೆ ಬರುತ್ತಿಲ್ಲ.ಒಂದೆಡೆ ಗ್ರಾಮ ಪಂಚಾಯಿತಿಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿಲ್ಲ. ಮತ್ತೊಂದೆಡೆ, ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿ ರೈತರಿಗೆ ಖಾತೆ ತೆರೆಯುವ ಕಾರ್ಯದಲ್ಲಿ ಸ್ಪಂದಿಸುತ್ತಿಲ್ಲ ಎಂಬ ಟೀಕೆಗಳು ಕೇಳಿ ಬರುತ್ತಿವೆ.ಆಯಾ ವ್ಯಾಪ್ತಿಯಲ್ಲಿನ ಬ್ಯಾಂಕುಗಳ ಶಾಖೆಗಳಲ್ಲಿ ಖಾತೆ ತೆರೆಯಲು ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡುವಂತೆ ಜಿಲ್ಲಾ ಲೀಡ್ ಬ್ಯಾಂಕ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಪತ್ರಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ.ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳು ಖಾಸಗಿ ವಲಯದ ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದು, ಈಗಾಗಲೇ ಸದರಿ ಬ್ಯಾಂಕ್‌ನಲ್ಲಿ ಆಯಾ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ತಲಾ 10 ಲಕ್ಷ ರೂಪಾಯಿ 5.3.2011ರಂದು ಜಮೆ ಆಗಿರುವುದು `ಪ್ರಜಾವಾಣಿ~ಗೆ ಲಭ್ಯವಾಗಿರುವ ದಾಖಲೆಗಳು ಸ್ಪಷ್ಟಪಡಿಸುತ್ತವೆ.ಆದರೆ, ಉದ್ಯೋಗ ಖಾತರಿ ಹಣ ಪಾವತಿಗೆ ಸಂಬಂಧಿಸಿದಂತೆ ಯಾವ ಹಂತದಲ್ಲಿಯೂ ಆ್ಯಕ್ಸಿಸ್ ಬ್ಯಾಂಕ್‌ನ ಪಾತ್ರ ಇಲ್ಲ. ರಾಜ್ಯ ಸರ್ಕಾರದಿಂದ ಹಣ ನೇರವಾಗಿ ಆಯಾ ಗ್ರಾಮ ಪಂಚಾಯಿತಿ ಖಾತೆಗೆ ಸಂದಾಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೆ.ತೊರವಿ ಹೇಳುತ್ತಾರೆ.ಈ ವರೆಗೆ ಜಿಲ್ಲೆಯಲ್ಲಿ ಮಾತ್ರ ಅಂಚೆ ಕಚೇರಿ ಮೂಲಕ ಯೋಜನೆಯ ಕೂಲಿ ಹಣ ಪಾವತಿ ಮಾಡಲಾಗುತ್ತಿತ್ತು. ಆದರೆ, ಕೂಲಿ ಹಣ ವಿತರಣೆಯಲ್ಲಿ ವಿಳಂಬ, ಅಂಚೆ ಇಲಾಖೆಯಲ್ಲಿಯೂ ಲೆಕ್ಕಪತ್ರದಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಈ ಹಣಕಾಸು ವರ್ಷದಿಂದ ರಾಜ್ಯ ಉಳಿದ ಜಿಲ್ಲೆಗಳಂತೆ ಇಲ್ಲಿ ಸಹ ಬ್ಯಾಂಕ್‌ಗಳ ಮೂಲಕ ಕೂಲಿ ಹಣ ಪಾವತಿಸಲು ಏ. 15ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ನಿರ್ದೇಶಕ ಪ್ರಸನ್ನಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆ ನಿರ್ಣಯಿಸಿದೆ.ಅಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಉಲ್ಲೇಖಿಸಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರು 30.4.2011ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದು, ತಮ್ಮ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಕೃತ ಬ್ಯಾಂಕ್‌ನ ಶಾಖೆಯಲ್ಲಿ ಖಾತೆ ತೆರೆಯುವಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಬೇಕು. ಇದರಿಂದ ಉದ್ಯೋಗ ಖಾತರಿ ಯೋಜನೆಯ ಕೂಲಿ ಹಣ ಪಾವತಿಸಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.ಆದರೆ, ಇತ್ತ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಗ್ರಾಮ ಪಂಚಾಯಿತಿಗಳು ಖಾತೆಯನ್ನು ತೆರೆಯದೇ ಖಾಸಗಿ ಬ್ಯಾಂಕ್‌ನತ್ತ ಒಲವು ತೋರಿಸಿವೆ. ಇನ್ನೊಂದೆಡೆ, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿ ರೈತರಿಗೆ ಸತಾಯಿಸುತ್ತಿದ್ದಾರೆ.ತಾವು ಪ್ರತಿನಿಧಿಸುವ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಂಕ್ ಅಧಿಕಾರಿಗಳು ಖಾತೆ ತೆರೆಯಲು ರೈತರಿಗೆ ಸಹಕರಿಸುತ್ತಿಲ್ಲ ಎಂಬ ದೂರು ಕೇಳಿ ಸಾಕಾಗಿ ಹೋಗಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪೂರ ಗುರುವಾರ `ಪ್ರಜಾವಾಣಿ~ ಜೊತೆ ತಮ್ಮ ನೋವನ್ನು ಹಂಚಿಕೊಂಡರು.ಬ್ಯಾಂಕ್ ಅಧಿಕಾರಿಗಳ ವರ್ತನೆಯಿಂದಾಗಿ ಪ್ರತಿ ದಿನ ಕನಿಷ್ಠ ನೂರು ಜನ ರೈತರು ಮೊಬೈಲ್ ಮೂಲಕ ಸಂಪರ್ಕಿಸಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ತಮ್ಮ ಸಹನೆಗೂ ಒಂದು ಮಿತಿ ಎಂದು ಅವರು ಹೇಳಿದರು.ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ನ ಬಳ್ಳಾರಿ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕರೊಂದಿಗೆ ಈ ಬಗ್ಗೆ ಚರ್ಚಿಸಿದ್ದರೂ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳ ಇಂತಹ ಧೋರಣೆ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ್ ಅವರಿಗೆ ಮಾತನಾಡುವುದು ಅನಿವಾರ್ಯವಾಗಿದೆ ಎಂದೂ ಅವರು ಹೇಳಿದರು.ಈಗಾಗಲೇ ಜೂನ್ ಅರ್ಧ ಕಳೆದಿದ್ದರೂ, ಇನ್ನೂ ಖಾತೆ ತೆರೆಯುವ ಪ್ರಕ್ರಿಯೆ ಮುಗಿದಿಲ್ಲ. ಈ ಬಾರಿಯೂ ಕೂಲಿ ಹಣ ಬಟವಾಡೆ ಸುಸೂತ್ರವಾಗಿ ನಡೆಯುವುದಿಲ್ಲ ಎಂಬ ಆತಂಕವನ್ನು ರೈತ ಮುಖಂಡರು ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)