ಖಾತೆ ಹಂಚಿಕೆ ಇಂದು

ಸೋಮವಾರ, ಜೂಲೈ 22, 2019
27 °C

ಖಾತೆ ಹಂಚಿಕೆ ಇಂದು

Published:
Updated:

ಬೆಂಗಳೂರು: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಮ್ಮ ಸಚಿವ ಸಂಪುಟದ ಸದಸ್ಯರ ಖಾತೆಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಹಿಂದಿನ ಸಂಪುಟದಲ್ಲಿದ್ದ ಎಲ್ಲ ಸಚಿವರಿಗೂ ಅದೇ ಖಾತೆಗಳನ್ನು ನೀಡಲು ನಿರ್ಧರಿಸಲಾಗಿದೆ. ಸಚಿವರ ಖಾತೆಗಳ ಪಟ್ಟಿ ಭಾನುವಾರ ಪ್ರಕಟವಾಗಲಿದೆ. ಹೊಸದಾಗಿ ಸಂಪುಟಕ್ಕೆ ಸೇರಿದವರಿಗೆ ಹಿಂದಿನ ಮುಖ್ಯಮಂತ್ರಿಯವರ ಬಳಿ ಇದ್ದ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.ಖಾತೆ ಹಂಚಿಕೆ ಸಂಬಂಧ ಪಕ್ಷದ ಪ್ರಮುಖರು ಮೂರು ದಿನಗಳಿಂದ ಸರಣಿ ಸಭೆಗಳನ್ನು ನಡೆಸಿ ಚರ್ಚಿಸಿದರೂ ಒಮ್ಮತಕ್ಕೆ ಬರಲು ಆಗಿರಲಿಲ್ಲ. ಶನಿವಾರ ಶೆಟ್ಟರ್ ಅವರು ದಿಢೀರನೆ ದೆಹಲಿಗೆ ತೆರಳಿ ವರಿಷ್ಠರ ಜೊತೆ ಸಮಾಲೋಚನೆ ನಡೆಸಿ ಖಾತೆಗಳ ಹಂಚಿಕೆಗೆ ಒಪ್ಪಿಗೆ ಪಡೆದಿದ್ದಾರೆ. ಅಧಿವೇಶನದ ಬಳಿಕ ಎಲ್ಲ ಸಚಿವರ ಖಾತೆಗಳನ್ನೂ ಮರು ಹಂಚಿಕೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಮುಖ್ಯಮಂತ್ರಿಯವರ    ಆಪ್ತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಮೂಲಗಳ ಪ್ರಕಾರ, ಹಣಕಾಸು, ಗಣಿ ಮತ್ತು ಭೂ ವಿಜ್ಞಾನದಂತಹ ಸೂಕ್ಷ್ಮ ಖಾತೆಗಳನ್ನು ಮುಖ್ಯಮಂತ್ರಿಯವರು ತಮ್ಮ ಬಳಿಯೇ ಉಳಿಸಿಕೊಳ್ಳಲಿದ್ದಾರೆ. ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ ಅವರಿಗೆ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ, ಆರ್.ಅಶೋಕ ಅವರಿಗೆ ಅವರು ಈ ಹಿಂದೆ ಅವರು ಹೊಂದಿದ್ದ ಗೃಹ ಮತ್ತು ಸಾರಿಗೆ ಖಾತೆಗಳನ್ನೇ ನೀಡಲಾಗಿದೆ.ಮೊದಲ ಬಾರಿಗೆ ಸಚಿವರಾಗಿರುವ ಸಿ.ಟಿ.ರವಿ ಅವರಿಗೆ ಉನ್ನತ ಶಿಕ್ಷಣ, ಡಿ.ಎನ್.ಜೀವರಾಜ್‌ಗೆ ಆಹಾರ ಮತ್ತು ನಾಗರಿಕ ಸರಬರಾಜು, ಸುನೀಲ್ ವಲ್ಯಾಪುರೆ ಅವರಿಗೆ ಮೂಲ ಸೌಕರ್ಯ ಖಾತೆಗಳನ್ನು ನೀಡಲಾಗಿದೆ. ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಬಳಿ ಇದ್ದ ರೇಷ್ಮೆ ಖಾತೆಯನ್ನು ಅವರಿಂದ ಹಿಂದಕ್ಕೆ ಪಡೆದು ಸೊಗಡು ಶಿವಣ್ಣ ಅವರಿಗೆ ಹಂಚಿಕೆ ಮಾಡಲಾಗಿದೆ. ಅದೇ ರೀತಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಹೆಚ್ಚುವರಿಯಾಗಿ ಹೊಂದಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ಜೀವರಾಜ್ ಅವರಿಗೆ ನೀಡಲಾಗಿದೆ. ಉಳಿದಂತೆ ಹಳೆಯ ಸಚಿವರ ಖಾತೆಗಳಲ್ಲಿ ಬದಲಾವಣೆ ಮಾಡಿಲ್ಲ ಎಂದು ಗೊತ್ತಾಗಿದೆ.ಉಭಯ ಬಣಗಳ ಹಲವು ಸಚಿವರು ಪ್ರಮುಖ ಖಾತೆಗಳನ್ನು ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲ ಖಾತೆಗಳನ್ನೂ ಹೊಸದಾಗಿ ಹಂಚಿಕೆ ಮಾಡಲು ಮುಂದಾದರೆ ಮತ್ತೊಂದು ರೀತಿಯ ಸಮಸ್ಯೆ ಸೃಷ್ಟಿಯಾಗಬಹುದು ಎಂಬ ಆತಂಕದಿಂದ ಹಿಂದಿನ ಮುಖ್ಯಮಂತ್ರಿಯವರ ಬಳಿ ಇದ್ದ ಖಾತೆಗಳನ್ನು ಮಾತ್ರವೇ ಹೊಸ ಸಚಿವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.ಸಂಪುಟದಲ್ಲಿ ಸ್ಥಾನ ದೊರೆಯದ ಶಾಸಕರು ಅಸಮಾಧಾನ ಹೊರಹಾಕಿರುವ ವಿಷಯವನ್ನೂ ಶೆಟ್ಟರ್ ಅವರು, ವರಿಷ್ಠರ ಗಮನಕ್ಕೆ ತಂದಿದ್ದಾರೆ. ಸಮಸ್ಯೆಗೆ ಸುಸೂತ್ರವಾಗಿ ಪರಿಹಾರ ಕಂಡುಕೊಳ್ಳುವಂತೆ ವರಿಷ್ಠರು ನೂತನ ಮುಖ್ಯಮಂತ್ರಿಗೆ ಸೂಚಿಸಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಿಟ್ಟಾಗಿರುವ ಕೆಲವು ಶಾಸಕರನ್ನು ಸಂಪರ್ಕಿಸಿ ಸಮಾಧಾನಪಡಿಸಲು ಶೆಟ್ಟರ್ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.ಖಾತೆ ಹಂಚಿಕೆ ಸಂಬಂಧ ಉಭಯ ಬಣಗಳ ಪ್ರಮುಖರೊಂದಿಗೆ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಸಭೆ ಫಲಪ್ರದವಾಗಲಿಲ್ಲ. ಶೆಟ್ಟರ್ ಅವರು ಶನಿವಾರ ಬೆಳಿಗ್ಗೆ ಸದಾನಂದ ಗೌಡ, ಈಶ್ವರಪ್ಪ, ಅಶೋಕ ಸೇರಿದಂತೆ ಕೆಲವು ಸಚಿವರೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿದರು.ಆದರೆ, ಉಭಯ ಬಣಗಳ ನಡುವೆ ಪ್ರಮುಖ ಖಾತೆಗಳಿಗಾಗಿ ಹಗ್ಗ-ಜಗ್ಗಾಟ ಮುಂದುವರಿದ ಕಾರಣ ಯಾವುದೇ ತೀರ್ಮಾನಕ್ಕೆ ಬರಲು ಆಗಲಿಲ್ಲ. ಹೀಗಾಗಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಂಜೆ ಅಶೋಕ ಅವರೊಂದಿಗೆ ಶೆಟ್ಟರ್ ದೆಹಲಿಗೆ ತೆರಳಿದರು.`ಇದೇ 19ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದೆ. ಆದಕಾರಣ ಖಾತೆಗಳ ಹಂಚಿಕೆಯಲ್ಲಿ ಸಮಗ್ರ ಬದಲಾವಣೆ ಮಾಡುವುದು ಬೇಡ. ಸದಾನಂದ ಗೌಡರ ಸಂಪುಟದಲ್ಲಿದ್ದ ಸಚಿವರು ಹೊಂದಿದ್ದ ಖಾತೆಗಳನ್ನೇ ಅವರಿಗೆ ನೀಡುವುದು ಹಾಗೂ ಹೊಸಬರಿಗೆ ಮುಖ್ಯಮಂತ್ರಿಗಳ ಬಳಿ ಇದ್ದ ಖಾತೆಗಳನ್ನು ಹಂಚಿಕೆ ಮಾಡುವುದು ಒಳ್ಳೆಯದು~ ಎಂದು ಕೆಲವರು ಸಲಹೆ ಮಾಡಿದರು. ಆದರೆ ಗೌಡರ ಬಣ ಇದಕ್ಕೆ ಒಪ್ಪಲಿಲ್ಲ. ಯಡಿಯೂರಪ್ಪ ಬಣದ ಸಚಿವರು ಹಿಂದೆ ಪ್ರಮುಖ ಖಾತೆಗಳನ್ನು ಹೊಂದಿದ್ದರು. ಈಗ ಮುಖ್ಯಮಂತ್ರಿ ಸ್ಥಾನ ಅವರ ಬಣಕ್ಕೆ ಹೋಗಿದೆ. ಆದ್ದರಿಂದ ಪ್ರಮುಖ ಖಾತೆಗಳನ್ನು ತಮ್ಮ ಕಡೆಯವರಿಗೆ ನೀಡಬೇಕು. ಅಧಿವೇಶನದ ನೆಪದಲ್ಲಿ ಹಳಬರ ಖಾತೆಗಳನ್ನು ಯಥಾವತ್ತಾಗಿ ಮುಂದುವರಿಸುವುದು ಸರಿಯಲ್ಲ. ಬದಲಾವಣೆ ಆಗಲೇಬೇಕು ಎಂದು ಪಟ್ಟು ಹಿಡಿದರು ಎಂದು ಗೊತ್ತಾಗಿದೆ.ಖಾತೆ ಹಂಚಿಕೆ ಗೊಂದಲವನ್ನು ಹೆಚ್ಚು ದಿನ ಮುಂದುವರಿಸುವುದು ಸರಿಯಲ್ಲ. ಅಧಿವೇಶನಕ್ಕೆ ಮೊದಲೇ ಖಾತೆಗಳ ಹಂಚಿಕೆಯಾಗಬೇಕು ಮತ್ತು ಅದು ಸಾಮಾಜಿಕ ನ್ಯಾಯ ಸೂತ್ರ ಒಳಗೊಂಡಿರಬೇಕು. ಒಬ್ಬ ವ್ಯಕ್ತಿಯ ಮೂಗಿನ ನೇರಕ್ಕೆ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ. ಪಕ್ಷದ ಹಿತದೃಷ್ಟಿಯಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಖಾತೆಗಳನ್ನು ಹಂಚಿಕೆ ಮಾಡಬೇಕು ಎಂದು ಸದಾನಂದ ಗೌಡ ಒತ್ತಾಯಿಸಿದರು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry