`ಖಾತ್ರಿ' ಅನುಷ್ಠಾನಕ್ಕೆ ಆಗ್ರಹ

7
ಹರಪನಹಳ್ಳಿಯಲ್ಲಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

`ಖಾತ್ರಿ' ಅನುಷ್ಠಾನಕ್ಕೆ ಆಗ್ರಹ

Published:
Updated:

ಹರಪನಹಳ್ಳಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ವಲಸೆ ತಡೆಗಟ್ಟಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತರೈತ ಸಂಘ (ಕೆಪಿಆರ್‌ಎಸ್) ಕಾರ್ಯಕರ್ತರು ಬುಧವಾರ ತಾಲ್ಲೂಕಿನ ನಂದಿಬೇವೂರು ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯಸಮಿತಿ ಸದಸ್ಯ ಎಚ್. ವೆಂಕಟೇಶ್ ಮಾತನಾಡಿ, ತಾಲ್ಲೂಕಿನಾದ್ಯಂತ ಬರಗಾಲದ ಛಾಯೆ ಆವರಿಸಿರುವ ಪರಿಣಾಮ, ಬಡ ಹಾಗೂ ನಿರ್ಗತಿಕ ಕುಟುಂಬಗಳ ದೈನಂದಿನ ಜೀವನ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ. ಕೂಲಿಕಾರ್ಮಿಕ ಕುಟುಂಬ, ತುತ್ತು ಅನ್ನಕ್ಕಾಗಿ ಹಂಬಲಿಸಿ ಕಾಫಿಸೀಮೆ ಸೇರಿದಂತೆ ವಿವಿಧೆಡೆ ವಲಸೆ ಹೋಗುತ್ತಿದ್ದಾರೆ. ಯೋಜನೆ ಅಡಿ ಕೆಲಸ ಕೇಳಲು ಪಂಚಾಯ್ತಿ ಕಚೇರಿಗೆ ಹೋದರೆ, ಪ್ರಭಾರ ಅಭಿವೃದ್ಧಿ ಅಧಿಕಾರಿ ಹಿಟ್ಲರ್‌ನ ಪ್ರತಿರೂಪದಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಯೋಜನೆ ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ಆದರೆ, ಅಭಿವೃದ್ಧಿ ಅಧಿಕಾರಿ ಗುತ್ತಿಗೆದಾರರ ಜತೆ ಷಾಮೀಲಾಗಿ ಯಂತ್ರೋಪಕರಣಗಳ ಮೂಲಕ ರಾತ್ರೋರಾತ್ರಿ ಮಣ್ಣು ಹರಡಿ, ಕಾಮಗಾರಿ ಹೆಸರಿನಲ್ಲಿ ಸರ್ಕಾರಕ್ಕೆ ಮೂರು ನಾಮ ಬಳಿಯುತ್ತಿದ್ದಾರೆ. ಇನ್ನೊಂದೆಡೆ ಕಾರ್ಮಿಕರಿಗೂ ವಂಚಿಸುತ್ತಿದ್ದಾರೆ. ಕೂಡಲೇ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಕುಡಿಯುವ ನೀರು, ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ದೌರ್ಜನ್ಯಕ್ಕೆ ಯತ್ನ:  ಪ್ರತಿಭಟನೆ ನಡೆಸಲು ಮುಂದಾದ ಮುಖಂಡರ ಮೇಲೆ ಕೆಲ ಕಿಡಿಗೇಡಿಗಳು ದೌರ್ಜನ್ಯ ಎಸಗಲು ಮುಂದಾದರು. ಪ್ರತಿಭಟನೆ ಕೈಬಿಟ್ಟು, ವಾಪಾಸ್ ಹೋಗಬೇಕು; ಇಲ್ಲದಿದ್ದರೆ, ಪರಿಣಾಮ ನೆಟ್ಟಗಿರುವುದಿಲ್ಲ. ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತೇವೆ ಎಂದು ಮುಖಂಡರ ಮೇಲೆ ಕೊಲೆ ಬೆದರಿಕೆ ಹಾಕಿದ್ದಾರೆ. ಸಕಾಲದಲ್ಲಿ ಪೊಲೀಸರು ಮಧ್ಯ ಪ್ರವೇಶಿಸದಿದ್ದರೇ ದೊಡ್ಡ ಅನಾಹುತವೇ ನಡೆಯುತ್ತಿತ್ತು. ಇಂತಹ ಕಿಡಿಗೇಡಿಗಳನ್ನು ಅಭಿವೃದ್ಧಿ ಅಧಿಕಾರಿ ಸಾಕಿಕೊಂಡಿದ್ದಾರೆ. ದೌರ್ಜನ್ಯ ಎಸಗಲು ಮುಂದಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರತಿಭಟನೆಯ ನಂತರ, ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಎಚ್. ವೆಂಕಟೇಶ್ ಮನವಿ ಮಾಡಿದ್ದಾರೆ.ಸಂಘಟನೆಯ ಮುಖಂಡರಾದ ಜಿ. ಪ್ರಕಾಶ್, ಬಾಗಳಿ ಬಿ. ರಮೇಶ್, ಕೂಲಹಳ್ಳಿ ಚಂದ್ರಪ್ಪ, ಗಡ್ಡಿ ಬಸಣ್ಣ, ಲಲಿತಮ್ಮ, ಸಿದ್ದಮ್ಮ, ರತ್ನಮ್ಮ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry