ಖಾತ್ರಿ ಯೋಜನೆ ಅವ್ಯವಹಾರ ಖಂಡಿಸಿ ಬೃಹತ್ ಪ್ರತಿಭಟನೆ

7

ಖಾತ್ರಿ ಯೋಜನೆ ಅವ್ಯವಹಾರ ಖಂಡಿಸಿ ಬೃಹತ್ ಪ್ರತಿಭಟನೆ

Published:
Updated:
ಖಾತ್ರಿ ಯೋಜನೆ ಅವ್ಯವಹಾರ ಖಂಡಿಸಿ ಬೃಹತ್ ಪ್ರತಿಭಟನೆ

ಹಾಸನ: ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಅವ್ಯವಹಾರ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯವೈಕರಿಯನ್ನು ಖಂಡಿಸಿ ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮತ್ತು ಅವರ ನೂರಾರು ಕಾರ್ಯಕರ್ತರು ಬುಧವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಅರಕಲಗೂಡು ತಾಲ್ಲೂಕಿನ ಬೈಲಹಳ್ಳಿ ಮಾಜಿ ಶಾಸಕ ರಾಮಸ್ವಾಮಿ ಅವರ ನಿವಾಸದಿಂದ ಬೈಕ್‌ಗಳ ಮೂಲಕ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟಿತು. ಸ್ವತಃ ಬೈಕ್ ಚಾಲನೆ ಮಾಡಿಕೊಂಡು ತಮ್ಮ ಕಾರ್ಯಕರ್ತರೊಂದಿಗೆ ಮುಖ್ಯ ರಸ್ತೆಯಲ್ಲಿ ಘೋಷಣೆ ಕೂಗುತ್ತಾ ಬೈಕ್ ರ್ಯಾಲಿ ಮೂಲಕ ನಗರದ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅರಕಲಗೂಡು ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಕಳೆದ ಹಲವು ದಿನಗಳಿಂದ ಜಿ.ಪಂ. ಸಿಇಓ ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಈ ಸಂಬಂಧ ಹಲವು ಭಾರಿ ಮಾಹಿತಿ ನೀಡಲಾಗಿದ್ದರೂ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಕೊಟ್ಯಂತರ ರೂಪಾಯಿ ಭ್ರಷ್ಟಾಚಾರದಲ್ಲಿ 17 ಮಂದಿ ಅಧಿಕಾರಿಗಳು ಶಾಮಿಲಾಗಿದ್ದರೂ ಸಹ ಕೇವಲ ಮೂರು ಮಂದಿ ಅಧಿಕಾರಿಗಳ ಮೇಲೆ ಮಾತ್ರ ಕ್ರಮ ಜರುಗಿಸಿ ಉಳಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಹಗರಣಗಳನ್ನು ಮುಚ್ಚಿ ಹಾಕುವ ತಂತ್ರವನ್ನು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ. ತಾಲ್ಲೂಕಿನ ಆಶ್ರಯ ಮನೆ ಯೋಜನೆಯಲ್ಲಿ ಅರ್ಹ ಬಡ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಆಡಳಿತ ವರ್ಗ ವಿಫಲವಾಗಿದ್ದು, ಇದರಿಂದ ಸೂರಿಲ್ಲದವರಿಗೆ ಸೂರನ್ನು ಒದಗಿಸುವ ಸರ್ಕಾರದ ಯೋಜನೆ ವಿಫಲವಾಗಿದೆ ಎಂದು ಆರೋಪಿಸಿದರು.ಜಿ.ಪಂ. ಸಿ.ಇ.ಓಗೆ ತರಾಟೆ:  ಜಿ.ಪಂ. ಸಿಇಓ ಎಸ್.ಟಿ ಅಂಜನ್ ಕುಮಾರ್ ವಿರುದ್ಧ ನೇರವಾಗಿ ಆರೋಪಿಸಿದ ಅವರು ಯೋಜನೆಯ ಅವ್ಯವಹಾರದ ಕುರಿತಂತೆ ಹಲವು ಭಾರಿ ಸಮಗ್ರ ಮಾಹಿತಿಯನ್ನು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಅಂಜನ್ ಕುಮಾರ್ ಅವರು ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.ಜಿಲ್ಲೆಯಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಯೋಜನೆಯ ಅವ್ಯವಹಾರದ ಪ್ರಮುಖ ವ್ಯಕ್ತಿಯಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜನ್ ಕುಮಾರ್ ಹಾಗೂ ಅರಕಲಗೂಡು ತಾಲ್ಲೂಕು ಪಂಚಾಯಿತಿ ಇ.ಓ ಸೇರಿದಂತೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಸರ್ಕಾರ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅರಕಲಗೂಡು ತಾಲ್ಲೂಕಿನಿಂದ ಹಾಸನ ಜಿ.ಪಂ. ಕಚೇರಿ ವರೆಗೆ ಪಾದಯಾತ್ರೆ ನಡೆಸುವ ಮೂಲಕ ಉಪವಾಸ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ನಡೆಸುವುದಾಗಿ ಎ.ಟಿ. ರಾಮಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಜಿ.ಪಂ. ಉಪಾಧ್ಯಕ್ಷರಾದ ಪಾರ್ವತಮ್ಮ ನಂಜುಂಡಚಾರ್, ಸದಸ್ಯ ಸಂಜುಂಡಸ್ವಾಮಿ, ಮಾಜಿ ಸದಸ್ಯ ಶಂಕರ್, ತಾಲ್ಲೂಕು ಜೆ.ಡಿ.ಎಸ್. ಅಧ್ಯಕ್ಷ ಮಗ್ಗೆ ರಂಗಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಂತೋಷಗೌಡ ಹಾಗೂ ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.   ವಿದ್ಯುತ್ ಅದಾಲತ್ ಸಭೆ ನಾಳೆ

ಹಾಸನ: ಹಾಸನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏ.15 ರಂದು ಬೆಳಗ್ಗೆ 10 ಗಂಟೆಗೆ ವಿದ್ಯುತ್ ಅದಾಲತ್ ಸಭೆ ನಡೆಯಲಿದೆ ಎಂದು ಕಾರ್ಯಪಾಲಕ ಅಭಿಯಂತರರು ಪ್ರಕಟಣೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್ ಸಭೆ ಅಧ್ಯಕ್ಷತೆ ವಹಿಸಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry