ಶುಕ್ರವಾರ, ಜೂನ್ 25, 2021
29 °C

ಖಾತ್ರಿ ಹಣಕ್ಕೆ ಒತ್ತಾಯಿಸಿ ಕೂಲಿಕಾರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 2010-11ನೇ ಸಾಲಿನಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿದ ಕೂಲಿಕಾರರರಿಗೆ ಹಣ ಬಿಡುಗಡೆ ಮಾಡದೆ ಇರುವುದನ್ನು ಖಂಡಿಸಿ ಕೂಲಿಕಾರರು ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯ್ತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಕಚೇರಿ ವೇಳೆಗೆ ಸರಿಯಾಗಿ ಪ್ರತಿಭಟನೆ ಪ್ರಾರಂಭಿಸಿದ ಕೂಲಿಕಾರರನ್ನು ಯಾವೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಬಂದು ಅಹವಾಲು ಸ್ವೀಕರಿಸದೇ ಇರುವುದರಿಂದ ರೊಚ್ಚಿಗೆದ್ದ ಕೂಲಿಕಾರರು ಮಧ್ಯಾಹ್ನದ ಹೊತ್ತಿಗೆ ಚಿತ್ರದುರ್ಗ ರಸ್ತೆಯಲ್ಲಿ ಕೆಲಕಾಲ ರಸ್ತೆತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಇದರಿಂದಾಗಿ ವಾಹನಗಳು ತ್ಯಾಗರಾಜ ನಗರದ ಮೂಲಕ ಸಂಚರಿಸಿದವು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ರಸ್ತೆ ತಡೆ ನಡೆಸುತ್ತಿದ್ದ ಕೂಲಿಕಾರರನ್ನು ಮನವೊಲಿಸಿ ರಸ್ತೆ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.ನಂತರ ಪ್ರತಿಭಟನೆ ಮುಂದುವರಿಸಿದ ಕೂಲಿಕಾರರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಾಲ್ಲೂಕು ಪಂಚಾಯ್ತಿ ಇಒ ಪ್ರತಿಭಟನಾನಿರತರ ಸ್ಥಳಕ್ಕೆ ಬಂದು ನಿಮ್ಮ ಬೇಡಿಕೆ ಈಡೇರಿಸುವ ಕುರಿತು ಯಾವುದೇ ಭರವಸೆ ನೀಡುವುದಿಲ್ಲ. ಇದು ಮೇಲಧಿಕಾರಿಗಳ ಆದೇಶದ ಮೇರೆಗೆ ನಾನು ಮಾಡಬಹುದಾದ ಕೆಲಸ ಎಂದು ಸ್ಪಷ್ಟಪಡಿಸಿದರು.ಇವರ ಮಾತಿನಿಂದ ಮತ್ತಷ್ಟು ಆಕ್ರೋಶಗೊಂಡ ಕೂಲಿಕಾರರು ಜಿಲ್ಲಾ ಪಂಚಾಯ್ತಿ ಸಿಇಒ ಸ್ಥಳಕ್ಕೆ ಬರುವವರೆಗೂ ನೀವೂ ಕೂಡ ನಮ್ಮ ಜತೆಯಲ್ಲಿಯೇ ಕೂರಬೇಕು ಎಂದು ಒತ್ತಾಯಿಸಿದರು.ಕೂಲಿಕಾರರ ಜತೆಗೆ ಕೆಲಹೊತ್ತು ಕುಳಿತಿದ್ದ ಇಒ ತಿಪ್ಪೇಸ್ವಾಮಿ ಅವರನ್ನು ಉಪಾಧ್ಯಕ್ಷ ಜೆ. ತಿಪ್ಪೇಶ್‌ಕುಮಾರ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ಸಂಪರ್ಕಿಸಿ ಸಮಸ್ಯೆ ನಿವಾರಿಸುವ ಭರವಸೆ ನೀಡಿದರು.ಮುಂದುವರಿದ ಪ್ರತಿಭಟನೆ: ಜಿಲ್ಲಾ ಪಂಚಾಯ್ತಿ ಸಿಇಒ ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಭಟನಾ ನಿರತರು ತಿಳಿಸಿದರು.ಮಂಗಳವಾರ ಕೂಲಿಕಾರರು ನೇಣಿಗೆ ಶರಣು ಎಂಬ ಅಣಕು ಪ್ರದರ್ಶನ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಲಾಗುವುದು ಎಂದು ಪ್ರಕಟಿಸಿದರು.ಈ ಸಂದರ್ಭದಲ್ಲಿ ಕರೀಕೆರೆ ರಾಜು, ಮೀರಾಸಾಬಿಹಳ್ಳಿ ಮೋಹನ್, ಚನ್ನಗಾನಹಳ್ಳಿ ರುದ್ರಮುನಿ, ಮಾಜಿ ಪುರಸಭೆ ಸದಸ್ಯ ಎಸ್.ಎಚ್. ಸೈಯ್ಯದ್ ಸೇರಿದಂತೆ ಮೀರಾಸಾಬಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಲಿಕಾರರು ಪಾಲ್ಗೊಂಡಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.