ಬುಧವಾರ, ಡಿಸೆಂಬರ್ 11, 2019
27 °C
ಡಾಲರ್ ಎದುರು ರೂಪಾಯಿ ಕುಸಿತದ ನೆಪ

ಖಾದ್ಯತೈಲ ಬೆಲೆ: ಗ್ರಾಹಕ ಕಂಗಾಲು

Published:
Updated:
ಖಾದ್ಯತೈಲ ಬೆಲೆ: ಗ್ರಾಹಕ ಕಂಗಾಲು

ಹುಬ್ಬಳ್ಳಿ: ಇಲ್ಲಿನ ಚಿಲ್ಲರೆ ಮಾರುಕಟ್ಟೆಯಲ್ಲಿ 10 ದಿನಗಳಿಂದ ಅಡುಗೆ ಎಣ್ಣೆ ಬೆಲೆ ಗಗನಕ್ಕೇರುತ್ತಿರುವುದು ಗ್ರಾಹಕರನ್ನು ಕಂಗಾಲಾಗಿಸಿದೆ.ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಆಗಸ್ಟ್ ಕೊನೆಯ ವಾರದಲ್ಲಿ ಅಡುಗೆ ಎಣ್ಣೆ ಲೀಟರ್‌ಗೆ ರೂ 25ರಿಂದ ರೂ30 ಹೆಚ್ಚಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಬಳಕೆ ಮಾಡುವ ಕುಸುಬೆ ಎಣ್ಣೆ ಬೆಲೆ ಲೀಟರ್‌ಗೆ ರೂ40 ಏರಿದ್ದು, ಶ್ರಾವಣ, ಭಾದ್ರಪದದ ಸಾಲು ಹಬ್ಬಗಳ ಸಂಭ್ರಮವನ್ನು ಕಳೆಗುಂದಿಸಿದೆ.`ಅಡುಗೆ ಎಣ್ಣೆ ಗಗನಮುಖಿಯಾಗಲು ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಿನೇ ದಿನೇ ಕುಸಿಯುತ್ತಿರುವುದೇ ಕಾರಣ. ರೂಪಾಯಿ ಮೌಲ್ಯ ಹೆಚ್ಚಾದರೆ ಬೆಲೆ ಕಡಿಮೆಯಾಗಲಿದೆ' ಎನ್ನುತ್ತಾರೆ ವರ್ತಕರು.`ಮಾರುಕಟ್ಟೆ ಏರುಪೇರು, ಅಡುಗೆ ಎಣ್ಣೆ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ' ಎಂಬುದು ಹುಬ್ಬಳ್ಳಿಯ ಚೆನ್ನಬಸವೇಶ್ವರ ಆಯಿಲ್ ಮಿಲ್‌ನ ಪ್ರಕಾಶ್ ಅನಿಸಿಕೆ. `ಕುಸುಬೆ ಎಣ್ಣೆಯ ಸಗಟು ಮಾರಾಟ ದರವೇ ಲೀಟರ್‌ಗೆ ರೂ120 ಇದೆ. ಇದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಸಹಜವಾಗಿಯೇ ಏರಿಕೆಯಾಗಿದೆ. ರೂಪಾಯಿ ಒಂದೂವರೆ ತಿಂಗಳ ಹಿಂದೆ ಇದ್ದ ದರಕ್ಕೆ ಸ್ಥಿರಗೊಳ್ಳುವವರೆಗೆ ಅಡುಗೆ ಎಣ್ಣೆ ಬೆಲೆ ಹೆಚ್ಚಳವನ್ನು ಗ್ರಾಹಕರು ಎದುರಿಸಲೇಬೇಕಿದೆ' ಎನ್ನುತ್ತಾರೆ ಅವರು.`ಕೇವಲ ನೆಪ'

`ಅಡುಗೆ ಎಣ್ಣೆ ಬೆಲೆ ಹೆಚ್ಚಳಕ್ಕೆ, ರೂಪಾಯಿ ಅಪಮೌಲ್ಯ ಕಾರಣ ಎಂದು ವರ್ತಕರು ಹೇಳುತ್ತಿರುವುದು ಕೇವಲ ನೆಪ' ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಇಲ್ಲಿನ ಮಾರುಕಟ್ಟೆ ತಜ್ಞ ರಘುವೀರ ದೇಸಾಯಿ.ಥಾಯ್ಲೆಂಡ್, ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತದೆ.  ರೂಪಾಯಿ ಕುಸಿದರೆ ದೇಸಿ ಮಾರುಕಟ್ಟೆಯಲ್ಲಿ ಕೇವಲ ತಾಳೆ ಎಣ್ಣೆಯ ಬೆಲೆ ಮಾತ್ರ ಹೆಚ್ಚಳವಾಗಬೇಕು. ಉಳಿದ ಖಾದ್ಯ ತೈಲ ಬೆಲೆ ಹೇಗೆ ಹೆಚ್ಚುತ್ತದೆ ಎಂದು ಪ್ರಶ್ನಿಸುತ್ತಾರೆ ಅವರು.

ಪ್ರತಿಕ್ರಿಯಿಸಿ (+)