ಶುಕ್ರವಾರ, ಆಗಸ್ಟ್ 23, 2019
22 °C

ಖಾನಾಪುರ: 3 ಸೇತುವೆ ಸಂಚಾರಕ್ಕೆ ಮುಕ್ತ

Published:
Updated:

ಖಾನಾಪುರ: ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಸುರಿದ ಮಳೆಯಿಂದಾಗಿ ಸಂಪರ್ಕ ಕಡಿತಗೊಂಡಿದ್ದ ತೋರಾಳಿ-ಹಬ್ಬನಹಟ್ಟಿ ಸೇತುವೆ, ಚಾಪಗಾವಿ-ಯಡೋಗಾ ಸೇತುವೆ, ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ ಸೇತುವೆಗಳ ಮೇಲೆ ಹರಿಯುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಈ ಸೇತುವೆಗಳು ಶನಿವಾರ ಸಂಚಾರಕ್ಕೆ ಮುಕ್ತಗೊಂಡಿವೆ.ಪಟ್ಟಣದ ಮಲಪ್ರಭಾ ನದಿಯ ಹಳೆಯ ಸೇತುವೆ, ಮೋದೆಕೊಪ್ಪ-ತೀರ್ಥಕುಂಡೆ ಮಧ್ಯದ ಮಂಗೇತ್ರಿ ನಾಲಾ ಸೇತುವೆ, ವಾಘವಡೆ-ದೇಸೂರ ಮಧ್ಯದ ಸೇತುವೆ, ಕೊಂಗಳಾ-ನೇರಸಾ ಮಧ್ಯದ ಎರಡು ಸೇತುವೆಗಳು, ತಟ್ಟೀ ಹಳ್ಳ ವ್ಯಾಪ್ತಿಯ ಮಾಸ್ಕೇನಟ್ಟಿ-ಗೌಳಿವಾಡಾಗಳ ನಡುವಿನ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಬೀಸುತ್ತಿದ್ದ ಬಿರುಗಾಳಿ ಶನಿವಾರ ಕಡಿಮೆಯಾಗಿದೆ. ಮಲಪ್ರಭಾ, ಪಾಂಡರಿ, ಮಹದಾಯಿ, ಪಂಚಶೀಲಾ ನದಿಗಳಲ್ಲಿ ನೀರಿನ ಹರಿವು ಕೊಂಚ ತಗ್ಗಿದೆ.ಶನಿವಾರ ಶುರುವಾದ ಆಶ್ಲೇಷಾ ಮಳೆ ತನ್ನ  ಮೊದಲ ದಿನ ಶಾಂತ ವಾತಾವರಣವನ್ನು ನಿರ್ಮಿಸಿದೆ. ಇದರಿಂದಾಗಿ ಕೆಲ ದಿನಗಳಿಂದ ಎಡೆಬಿಡದೇ ಸುರಿದ ಮಳೆಯಿಂದಾಗಿ ಕಂಗೆಟ್ಟಿದ್ದ ಜನ-ಜಾನುವಾರುಗಳಿಗೆ ನೆಮ್ಮದಿ ಲಭಿಸಿದೆ. ಶನಿವಾರದ ವರದಿಯಾದಂತೆ ಕಣಕುಂಬಿಯಲ್ಲಿ 90.6 ಮಿ.ಮೀ, ಜಾಂಬೋಟಿಯಲ್ಲಿ 52.3 ಮಿ.ಮೀ,  ಚಾಪೋಲಿಯಲ್ಲಿ 146.6 ಮಿ.ಮೀ,  ನಾಗರಗಾಳಿಯಲ್ಲಿ 58.6 ಮಿ.ಮೀ, ಲೋಂಡಾ ಆರ್‌ಎಸ್‌ದಲ್ಲಿ 95 ಮಿ.ಮೀ,  ಲೋಂಡಾ ಪಿಡಬ್ಲ್ಯೂಡಿಯಲ್ಲಿ 106.4 ಮಿ.ಮೀ,  ಗುಂಜಿಯಲ್ಲಿ 36.4 ಮಿ.ಮೀ,  ಖಾನಾಪುರ ಪಟ್ಟಣದಲ್ಲಿ 50.2 ಮಿ.ಮೀ,  ಅಸೋಗಾ 64.2 ಮಿ.ಮೀ, ಬೀಡಿಯಲ್ಲಿ 8.2 ಮಿ.ಮೀ,  ಹಾಗೂ ಕಕ್ಕೇರಿಯಲ್ಲಿ 29.2 ಮಿ.ಮೀ,  ಮಳೆ ಸುರಿದಿದೆ. ಮಳೆಯಿಂದ ಯಾವುದೇ ಹಾನಿಯಾಗಿಲ್ಲ ಎಂದು ತಾಲ್ಲೂಕು ಆಡಳಿತ ಸ್ಪಷ್ಟಪಡಿಸಿದೆ.ಮಳೆಗೆ ಮನೆ ಗೋಡೆ ಕುಸಿತ

ಚನ್ನಮ್ಮನ ಕಿತ್ತೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿಗೆ ಸಮೀಪದ ಬಸರಖೋಡ ಗ್ರಾಮದ ಜನತಾ ಕಾಲನಿಯಲ್ಲಿಯ ಮನೆಯ ಗೋಡೆಯೊಂದು ಕುಸಿದು ಬಿದ್ದಿದ್ದು, ಒಬ್ಬ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ.ಜನತಾ ಕಾಲೊನಿಯ ಮಮ್ತಾಜ್ ದಸ್ತಗೀರ ಹೊನ್ನಾಪುರ ಅವರು ವಾಸವಾಗಿದ್ದ ಮನೆಯ ಗೋಡೆ ಉರುಳಿದೆ. ಮನೆಯಲ್ಲಿದ್ದ ಅಡುಗೆ ಪಾತ್ರೆಗಳು ಸೇರಿದಂತೆ ಕೆಲವು ವಸ್ತುಗಳು ಜಖಂಗೊಂಡಿವೆ. ಗೋಡೆ ಕುಸಿತದಿಂದಾಗಿ ಮನೆಯೊಳಗೆ ಮಣ್ಣು ಹಾಗೂ ಇಟ್ಟಿಗೆಯ ಗುಡ್ಡೆ ಬಿದ್ದಿತ್ತು. ಹಗಲೊತ್ತಿನಲ್ಲಿ ಗೋಡೆ ಕುಸಿದಿರುವುದರಿಂದ ಅದೃಷ್ಟವಷಾತ್ ಮನೆಯವರಿಗೆ ಅಂತಹ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎಂದು ಮನೆಯೊಡತಿ ಮಮ್ತಾಜ್ ತಿಳಿಸಿದರು.ಇದೇ ಊರಿನ ಬಸವ್ವ ಸಿದ್ದಪ್ಪ ಕಾಮೋಜಿ ಅವರಿಗೆ ಸೇರಿದ ದನ ಕಟ್ಟುವ ದೊಡ್ಡಿಯ ಗೋಡೆಯೂ ಮಳೆಯಿಂದಾಗಿ ಕುಸಿದಿದೆ.  ಗ್ರಾಮ ಲೆಕ್ಕಿಗ ಎಂ. ಆರ್. ಕಿತ್ತೂರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ವಸ್ತುಗಳ ಪಂಚನಾಮೆ ನಡೆಸಿದರು.

Post Comments (+)