ಖಾರ ಹೆಚ್ಚಿಸಲು ತಯಾರಿ!

7

ಖಾರ ಹೆಚ್ಚಿಸಲು ತಯಾರಿ!

Published:
Updated:

ಅಂತರರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿಯ `ಖಾರ~ ಕಡಿಮೆಯಾಗುತ್ತಿದೆ. ವಿಪರೀತವಾಗಿ ಬೆಳೆದ ಪರಿಣಾಮ ಇಳುವರಿ ಕುಂಠಿತಗೊಂಡಿದೆ. ಆದರೆ ಇದಕ್ಕೆ ಪರ್ಯಾಯವಾಗಿ ಹೊಸ ತಳಿಗಳನ್ನು ರೂಪಿಸುತ್ತಿರುವ ಸಂಶೋಧನಾ ಕೇಂದ್ರಗಳು ರೈತರ ನೆರವಿಗೆ ಬರಲಿವೆ.ಧಾರವಾಡದ ಹೆದ್ದಾರಿ-4ರ ಟೋಲ್ ಪ್ಲಾಜಾ ಹತ್ತಿರ ಇರುವ ಸರ್ಪನ್ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ  ಮೆಣಸಿನಕಾಯಿಯ 13 ಸಾವಿರ ತಳಿಗಳ ಅಧ್ಯಯನ ನಡೆಸಲಾಗಿದೆ. ತಳಿಗಳ ಬ್ಯಾಂಕಿನಲ್ಲಿ ಬೀಜೋತ್ಪಾದನೆಯೂ ನಡೆದಿದ್ದು, ಈಗಾಗಲೇ 47 ಹೊಸ ತಳಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.ಸಂಶೋಧನಾ ಕೇಂದ್ರದ ಸ್ಥಾಪಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎನ್.ಬಿ. ಗದ್ದಗಿಮಠ, ತಮ್ಮ ಸಂಶೋಧನಾ ಕೇಂದ್ರದಲ್ಲಿ ಅಲ್ಲದೇ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಸುರೇಶ ಗಂಗಾಯಿ ಹೊಲದಲ್ಲಿ ಹೊಸ ತಳಿಗಳನ್ನು ಬೆಳೆಯುತ್ತಿದ್ದಾರೆ.ಇದರ ಜೊತೆಗೆ ರೈತರಿಗೆ ಮಾಹಿತಿ ಮತ್ತು ತರಬೇತಿಯನ್ನೂ ನೀಡುತ್ತಿದ್ದಾರೆ. ಅಭಿವೃದ್ಧಿಪಡಿಸಿದ ಮೆಣಸಿನಕಾಯಿ ತಳಿಗಳ ಬೀಜಗಳನ್ನು ರಾಜ್ಯದಲ್ಲಿ ಅಲ್ಲದೇ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್, ರಾಜಸ್ತಾನ ಮೊದಲಾದ ರಾಜ್ಯಗಳಿಗೆ ಮಾರುತ್ತಿದ್ದಾರೆ.8 ವರ್ಷಗಳ ಹಿಂದೆ ಎಫ್-1 ಹೈಬ್ರಿಡ್ ತಳಿಗಳನ್ನು ಸುಧಾರಿಸಿ, `ಸರ್ಪನ್ 92 ಬ್ಯಾಡಗಿ ಡಬ್ಬಿ~ ಹಾಗೂ `ಸರ್ಪನ್ 83 ಬ್ಯಾಡಗಿ ಡಬ್ಬಿ~ ತಳಿಯನ್ನು ಅವರು ಅಭಿವೃದ್ಧಿಪಡಿಸಿದರು. ಬಣ್ಣಕ್ಕೆ ಬೇಕಾಗುವ ತಳಿ, ಖಾರಕ್ಕೆ ಬೇಕಾಗುವ ತಳಿ, ಔಷಧಕ್ಕೆ ಬೇಕಾಗುವ ತಳಿಗಳನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ ದೇಶದ ಅನೇಕ ಕಂಪೆನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಸಂಶೋಧಿಸಿದ ತಳಿಗಳನ್ನು ಅವರು ಮಾರುತ್ತಿದ್ದಾರೆ.`ಗುಣಮಟ್ಟದ ತಳಿ ಅಭಿವೃದ್ಧಿಗೆ ಕನಿಷ್ಠ 10-12 ವರ್ಷ ಬೇಕು. ನಂತರವೇ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತದೆ. ಧಾರವಾಡ-ಹುಬ್ಬಳ್ಳಿಯಲ್ಲಿ ಅಲ್ಲದೇ ಅನೇಕ ಕಡೆ ನಡೆಯುವ ಫಲ-ಪುಷ್ಪ ಪ್ರದರ್ಶನ ಹಾಗೂ ಕೃಷಿ ಮೇಳದಲ್ಲಿ ನಮ್ಮ ಅಪರೂಪದ ತಳಿಗಳ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಂಡಿರುತ್ತೇವೆ~ ಎನ್ನುತ್ತಾರೆ ಗದ್ದಗಿಮಠ.`ಸದ್ಯಕ್ಕೆ ಬ್ಯಾಡಗಿ ಕಡ್ಡಿ ತಳಿಗಳನ್ನು ಸಂಶೋಧಿಸಿದ್ದು, ಈ ವರ್ಷದ ಅಂತ್ಯಕ್ಕೆ ರೈತರಿಗೆ ಪರಿಚಯಿಸುತ್ತೇವೆ. ಬ್ಯಾಡಗಿ ಡಬ್ಬಿ ಎಂದರೆ ದಪ್ಪ ಮೆಣಸಿನಕಾಯಿ. ಕಡ್ಡಿ ಎಂದರೆ ಸಣ್ಣ ಮೆಣಸಿನಕಾಯಿ. ದಪ್ಪ ಕಾಯಿಗೆ ಬಣ್ಣವೂ ಹೆಚ್ಚು. ಒಣಪ್ರದೇಶದಲ್ಲಿ ದಪ್ಪ ಮೆಣಸಿನಕಾಯಿಯನ್ನು ಒಣಗಿಸುವುದು ಸುಲಭ.ಆದರೆ ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಕಡ್ಡಿ ಮೆಣಸಿನಕಾಯಿ ಬೆಳೆದರೆ ಒಣಗಿಸುವುದು ಸುಲಭ. ಅದರಲ್ಲೂ ದಪ್ಪ ಮೆಣಸಿನಕಾಯಿಯಿಂದ ಎಣ್ಣೆ  ತೆಗೆದು ಸೌಂದರ್ಯವರ್ಧಕ, ಔಷಧಿಗಳಲ್ಲಿ ಹಾಗೂ ಚಿಕನ್‌ಗೆ ಬಣ್ಣ ಬರಲು ಬಳಸುತ್ತಾರೆ. ಇದನ್ನು ಬಹಳ ದಿನಗಳವರೆಗೆ ಸಂಗ್ರಹಿಸಬಹುದು. ಹೀಗಾಗಿ ಒಣಮೆಣಸಿನಕಾಯಿಗೆ ಬೇಡಿಕೆ ನಿರಂತರವಾಗಿರುತ್ತದೆ~ ಎಂದು ಅವರು ವಿವರಿಸುತ್ತಾರೆ.`ಸಂಶೋಧಿಸಿದ ತಳಿಗಳನ್ನು ಹೊಲಗಳಲ್ಲಿ ಅಲ್ಲದೇ ತಾರಸಿ ತೋಟದಲ್ಲೂ ಬೆಳೆಯಬಹುದು. ಹೆಚ್ಚಿನ ಇಳುವರಿಗೆ ಗುಣಮಟ್ಟದ, ರೋಗನಿರೋಧಕ ಶಕ್ತಿಯುಳ್ಳ ಮೆಣಸಿನಕಾಯಿಯನ್ನು ಕಾಯಿಪಲ್ಲೆಯೊಂದಿಗೆ ಬೆಳೆಸಬಹುದು~ ಎನ್ನುವುದು ಗದ್ದಗಿಮಠ ಅವರ ಸಲಹೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry